ಬೆಂಗಳೂರು(ಜೂ.22): ವಿಧಾನಪರಿಷತ್‌ ಚುನಾವಣೆಯ ಅಭ್ಯರ್ಥಿಗಳ ಅವಿರೋಧ ಆಯ್ಕೆ ಸೋಮವಾರ ಘೋಷಣೆಯಾಗಲಿದ್ದು, ಅದರ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿ ಪಾಳೆಯದಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತ ಚರ್ಚೆ ಆರಂಭವಾಗಿದೆ.

ಎಂ.ಟಿ.ಬಿ.ನಾಗರಾಜ್‌ ಮತ್ತು ಆರ್‌.ಶಂಕರ್‌ ಅವರು ಪರಿಷತ್ತಿಗೆ ಆಯ್ಕೆಯಾಗುವ ಹಿನ್ನೆಲೆಯಲ್ಲಿ ಅವರಿಗೆ ಹಿಂದೆ ನೀಡಿರುವ ಭರವಸೆಯಂತೆ ಸಚಿವ ಸ್ಥಾನ ನೀಡಬೇಕಾಗಿರುವುದರಿಂದ ಸಂಪುಟ ವಿಸ್ತರಣೆ ಕೈಗೊಳ್ಳಬಹುದು ಎಂಬ ಸಹಜ ಮಾತು ಕೇಳಿಬರುತ್ತಿದೆ.

ಮುಂದಿನ ತಿಂಗಳು ಜು.26ಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮೊದಲ ಒಂದು ವರ್ಷ ಪೂರೈಸುತ್ತಿರುವುದರಿಂದ ಆದಾದ ಬಳಿಕವೇ ಸಂಪುಟ ಕಸರತ್ತು ಕೈಗೆತ್ತಿಕೊಳ್ಳುವ ಸಾಧ್ಯತೆ ಕಂಡುಬರುತ್ತಿದೆ. ಎಲ್ಲವೂ ಕೋವಿಡ್‌​-19 ಬೆಳವಣಿಗೆಯ ಮೇಲೆ ಅವಲಂಬಿತವಾಗಿದೆ.

ಡೇಂಜರ್ ಬೆಂಗಳೂರು; ಮೂರು ಹೊಸ ಕೋವಿಡ್ ಕೇರ್ ಸೆಂಟರ್, ಎಲ್ಲೆಲ್ಲಿ?

ಆದರೆ, ಸರ್ಕಾರ ಒಂದು ವರ್ಷ ಮುಗಿಸಿದ ಬಳಿಕ ಸಂಪುಟ ವಿಸ್ತರಣೆ ಮಾಡಬೇಕೋ ಅಥವಾ ಪುನಾರಚನೆ ಮಾಡಬೇಕೋ ಎಂಬುದು ಮೊದಲು ಇತ್ಯರ್ಥವಾಗಬೇಕಾಗಿದೆ. ಒಂದು ವರ್ಷದ ನಂತರ ಸಂಪುಟಕ್ಕೆ ಒಂದಿಷ್ಟುಚುರುಕು ಮುಟ್ಟಿಸುವ ಮೂಲಕ ಹೊಸತನ ಮೂಡಿಸುವ ಉದ್ದೇಶದಿಂದ ಸಂಪುಟ ಪುನಾರಚನೆ ನಡೆಸುವ ಬಗ್ಗೆ ಮುಖ್ಯಮಂತ್ರಿಗಳು ಒಲವು ಹೊಂದಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಅಂದರೆ, ಕನಿಷ್ಠ ಇಬ್ಬರು ಅಥವಾ ಮೂವರನ್ನು ಸಂಪುಟದಿಂದ ಕೈಬಿಟ್ಟು ಅನ್ಯ ಪಕ್ಷಗಳಿಂದ ವಲಸೆ ಬಂದವರೂ ಸೇರಿದಂತೆ ಪಕ್ಷದ ಹೊಸಬರಿಗೆ ಅವಕಾಶ ಕಲ್ಪಿಸುವ ಉದ್ದೇಶವಿದೆ. ಜತೆಗೆ ಕೆಲವರ ಖಾತೆಗಳಲ್ಲಿ ಬದಲಾವಣೆ ಮಾಡುವ ಬಗ್ಗೆಯೂ ತಮ್ಮ ಆಪ್ತರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಈ ಬಾರಿ ಯಡಿಯೂರಪ್ಪ ಅವರು ಪಕ್ಷದ ಹೈಕಮಾಂಡ್‌ ಜೊತೆಗೆ ಮುಕ್ತವಾಗಿ ಚರ್ಚೆ ನಡೆಸಿಯೇ ಮುಂದಿನ ಹೆಜ್ಜೆ ಇಡಲು ನಿರ್ಧರಿಸಿದ್ದು, ವರಿಷ್ಠರು ಸೂಚಿಸಿದರೆ ಮಾತ್ರ ಸಂಪುಟ ಪುನಾರಚನೆಯ ಗೂಡಿಗೆ ಕೈಹಾಕಲಿದ್ದಾರೆ. ಇಲ್ಲದಿದ್ದರೆ ಕೇವಲ ಸಂಪುಟ ವಿಸ್ತರಣೆ ಮಾಡಿ ಮುಗಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಬೆಳವಣಿಗೆಗಳನ್ನ ಎಲ್ಲಿಗೆ ಮುಟ್ಟಿಸ್ಬೇಕೋ ಅಲ್ಲಿಗೆ ಮುಟ್ಟಿಸ್ತೇವೆ: ಬಿಎಸ್‌ವೈಗೆ ಯತ್ನಾಳ್ ಪರೋಕ್ಷ ಎಚ್ಚರಿಕೆ

ಸದ್ಯ ಸಂಪುಟದಲ್ಲಿ ಆರು ಸಚಿವ ಸ್ಥಾನಗಳು ಖಾಲಿ ಉಳಿದಿವೆ. ಈ ಪೈಕಿ ಎಂ.ಟಿ.ಬಿ.ನಾಗರಾಜ್‌ ಮತ್ತು ಶಂಕರ್‌ ಅವರಿಗೆ ಸಚಿವ ಸ್ಥಾನ ನೀಡಿದಲ್ಲಿ ಇನ್ನೂ ನಾಲ್ಕು ಸ್ಥಾನಗಳು ಉಳಿಯಲಿವೆ. ರಾಜರಾಜೇಶ್ವರಿನಗರ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬಾಕಿ ಇರುವುದರಿಂದ ಅದಕ್ಕಾಗಿ ಎರಡು ಸಚಿವ ಸ್ಥಾನಗಳನ್ನು ಮೀಸಲಿಡಬೇಕಾಗಬಹುದು. ನಂತರ ಉಳಿಯುವುದು ಎರಡು ಸಚಿವ ಸ್ಥಾನಗಳು ಮಾತ್ರ.

ಪಕ್ಷದ ಮೂಲ ಶಾಸಕರ ಪೈಕಿ ಅನೇಕರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಹೀಗಾಗಿ, ಸಮರ್ಥ ಸಂಪುಟ ತಂಡ ಕಟ್ಟುವ ಉದ್ದೇಶದಿಂದ ಈಗಿರುವ ಸಚಿವರ ಪೈಕಿ ಕೆಲವರನ್ನು ಕೈಬಿಟ್ಟು ಸಣ್ಣ ಮಟ್ಟದ ಪುನಾರಚನೆ ಕೈಗೆತ್ತಿಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಪಾಳೆಯದಲ್ಲಿ ಸಮಾಲೋಚನೆ ನಡೆದಿದೆ. ಆದರೆ, ವರಿಷ್ಠರ ಮನಸ್ಸಿನಲ್ಲಿ ಏನಿದೆಯೊ ಗೊತ್ತಿಲ್ಲ. ಕಾದು ನೋಡಬೇಕು ಎಂದು ಪಕ್ಷದ ಹಿರಿಯ ನಾಯಕರೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಬಿಎಸ್‌ವೈ ಲೆಕ್ಕಾಚಾರ

- ಶಾಸಕರಾಗಲಿರುವ ಎಂಟಿಬಿ, ಶಂಕರ್‌ಗೆ ನೀಡಿದ ಮಾತಿನಂತೆ ಸಚಿವ ಸ್ಥಾನ ನೀಡಬೇಕಿದೆ

- ಸಂಪುಟದಲ್ಲೀಗ 6 ಸ್ಥಾನ ಖಾಲಿ ಇದೆ. ಇಬ್ಬರಿಗೆ ನೀಡಿದರೆ ಮತ್ತೆ 4 ಬಾಕಿ ಉಳಿಯುತ್ತದೆ

- ಮುನಿರತ್ನ, ಪ್ರತಾಪ್‌ಗೌಡ ಪಾಟೀಲ್‌ಗೆ 2 ಸ್ಥಾನ ಮೀಸಲಿಟ್ಟರೆ ಇನ್ನಿಬ್ಬರಿಗೆ ಅವಕಾಶ ಸಾಧ್ಯ

- ಆದರೆ, ಪಕ್ಷದ ಮೂಲ ಶಾಸಕರಲ್ಲಿ ಅನೇಕರು ಸಚಿವ ಸ್ಥಾನ ಹೊಂದುವ ಆಕಾಂಕ್ಷಿಗಳಾಗಿದ್ದಾರೆ

- ಹಾಗಾಗಿ, ಸರ್ಕಾರಕ್ಕೆ 1 ವರ್ಷ ಆದಾಗ ಕೆಲವರ ಕೈಬಿಟ್ಟು ಸಂಪುಟ ಪುನಾರಚನೆಗೆ ಸಿಎಂ ಒಲವು

- ಇದಕ್ಕೆ, ಬಿಜೆಪಿ ಕೇಂದ್ರ ನಾಯಕರು ಏನನ್ನುತ್ತಾರೆ ಎಂಬುದು ಇನ್ನೂ ಗುಪ್ತ್ ಗುಪ್ತ್