ಬಿಜೆಪಿ ರಾಜ್ಯಾಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಹೋಗಲ್ಲವೆಂದ ಸಿ.ಟಿ. ರವಿ ಮುನಿಸು ತಣಿಸಿದ್ರಾ ವಿಜಯೇಂದ್ರ!
ರಾಜ್ಯದಲ್ಲಿ ನ.15ರಂದು ನಡೆಯುವ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಹೋಗಲು ಆಗುತ್ತಿಲ್ಲ.

ಬೆಂಗಳೂರು (ನ.14): ರಾಜ್ಯದಲ್ಲಿ ನ.15ರ ಸಂಜೆಯವರೆಗೂ ಮಧ್ಯಪ್ರದೇಶ ಚುನಾವಣಾ ಪ್ರಚಾರ ಇರುವ ಕಾರಣ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಹೋಗಲು ಆಗುತ್ತಿಲ್ಲ. ನಾನು ಯಾವತ್ತೂ ಪಕ್ಷದ ಲಕ್ಷ್ಮಣ ರೇಖೆ ದಾಟಿಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದ್ದರು. ಇದರ ಬೆನ್ನಲ್ಲಿಯೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸಿ.ಟಿ. ರವಿ ಅವರನ್ನು ಭೇಟಿ ರಾಜಕೀಯ ಮಾರ್ಗದರ್ಶನ ನೀಡುವಂತೆ ಮಾಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿ.ಟಿ. ರವಿ ಅವರು, ನ.15 ರಂದು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಜವಾಬ್ದಾರಿ ಸ್ವೀಕರಿಸಲಿದ್ದಾರೆ. ಈ ಸಂಬಂಧ ಅವರು ನನ್ನೊಂದಿಗೆ ಎರಡು ಬಾರಿ ಮಾತನಾಡಿ, ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಆದರೆ, ಮಧ್ಯಪ್ರದೇಶದ ಚುನಾವಣಾ ಜವಾಬ್ದಾರಿ ಇರುವುದರಿಂದ ಅಲ್ಲಿಗೆ ಹೊರಡುತ್ತಿದ್ದೇನೆ. ನ.15ರ ರಾತ್ರಿವರೆಗೂ ಪ್ರಚಾರಕ್ಕಾಗಿ ಅಲ್ಲಿಯೇ ಇರಬೇಕಾಗುತ್ತದೆ. ಹಾಗಾಗಿ, ನನಗೆ ಸಮಾರಂಭಕ್ಕೆ ಬರಲು ಆಗುವುದಿಲ್ಲ ಎಂದು ಅವರಿಗೆ ತಿಳಿಸಿದ್ದೇನೆ ಎಂದರು.
ರಾಜಕೀಯ ಬಿಟ್ಟು ಸುಮ್ಮನೆ ಕೂರುವೆ ಆದರೆ ಬೇರೆ ಪಕ್ಷ ಸೇರಲ್ಲ: ಸಿಟಿ ರವಿ
ಜೊತೆಗೆ, ಪಕ್ಷದ ವರಿಷ್ಠರು ವಿಜಯೇಂದ್ರ ಅವರಿಗೆ ಅಧ್ಯಕ್ಷ ಹುದ್ದೆ ನೀಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಏನು ಗೌರವ ಕೊಡಬೇಕೋ ಅದನ್ನು ಕೊಟ್ಟೇ ಕೊಡುತ್ತೇನೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು, ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬ ಒಂದೇ ಗುರಿ ಇಟ್ಟುಕೊಂಡು ನಾನು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದರು. ಇದರ ಬೆನ್ನಲ್ಲಿಯೇ ಮಾಜಿ ಸಚಿವ ಸಿ.ಟಿ. ರವಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸಿ.ಟಿ. ರವಿ ಅವರನ್ನು ಭೇಟಿ ಮಾಡಿದ್ದಾರೆ. ಜೊತೆಗೆ, ಸಾಧ್ಯವಾದಲ್ಲಿ ಪದಗ್ರಹಣ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ. ಮುಂದುವರೆದು ದೀಪಾವಳಿ ಹಬ್ಬದ ಶುಭಕೋರಿದರು. ಜೊತೆಗೆ, ರಾಜಕೀಯದ ಕುರಿತಾಗಿ ಸಲಹೆ ಹಾಗೂ ಮಾರ್ಗದರ್ಶನ ನೀಡುವಂತೆ ಕೋರಿದರು.
ಪಕ್ಷ ಬಿಡೊಲ್ಲವೆಂದ ಮಾಜಿ ಸಚಿವ ಸಿ.ಟಿ. ರವಿ: ನಾನು 20 ವರ್ಷ ಶಾಸಕನಾಗಿದ್ದೆನು. ಕಳೆದ 35 ವರ್ಷದಿಂದ ಪಕ್ಷದ ಕಾರ್ಯಕರ್ತನಾಗಿ ವಿವಿಧ ಜವಾಬ್ದಾರಿಗಳನ್ನು ಹೊತ್ತು ಕೆಲಸ ಮಾಡಿದ್ದೇನೆ. ಯಾರೊಂದಿಗೆ ಜಗಳವಾಡಿದರೂ ನಮ್ಮ ಮನೆಯೊಳಗೇ ಜಗಳ, ಹೊಸಿಲು ದಾಟಿ ಬೇರೆಯವರ ಮನೆಗೆ ಹೋಗಿ ನಮ್ಮ ಮನೆಯ ಸಮಸ್ಯೆಯನ್ನು ಬಗೆಹರಿಸುವಂತೆ ಕೇಳಿಲ್ಲ. ಪಕ್ಷ ಏನೂ ಜವಾಬ್ದಾರಿ ಕೊಟ್ಟಿಲ್ಲ ಎಂದರೂ ಬಿಜೆಪಿಗೆ ಮತ ಕೊಡಿ ಎಂದೇ ಕೇಳುತ್ತೇನೆ. ಬೇರೆ ಪಕ್ಷಕ್ಕೆ ಮತ ಕೊಡಿ ಎಂದು ಕೇಳಲಿಕ್ಕೆ ಆಗುವುದಿಲ್ಲ ಎಂದು ಮಾಜಿ ಶಾಸಕ ಸಿ.ಟಿ. ರವಿ ಹೇಳಿದರು.
ನನಗೆ ಬುದ್ಧಿ ಬಂದಾಗಿನಿಂದ, ಬಿಜೆಪಿಗೆ ಸೇರಿದಾಗಿನಿಂದ ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಮತ ಕೇಳಿಲ್ಲ, ಬೇರೆ ಪಕ್ಷಕ್ಕೆ ಮತ ಹಾಕಿಲ್ಲ. ನನಗಿರುವುದು ಒಂದೇ ಪಕ್ಷ ಅದು ಬಿಜೆಪಿ. ಅಕಸ್ಮಾತ್ ರಾಜಕೀಯ ಬೇಡ ಎನಿಸಿದರೆ ರಾಜಕೀಯ ಬಿಟ್ಟು ಸುಮ್ಮನೆ ಕುಳಿತುಕೊಳ್ಳುತ್ತೇನೆ. ಬಿಜೆಪಿಯನ್ನು ಬಿಟ್ಟು ಮತ್ತೊಂದು ಪಕ್ಷಕ್ಕೆ ಹೋಗಿ ರಾಜಕಾರಣ ಮಾಡುವುದಿಲ್ಲ. ಒಂದು ವೇಳೆ, ಬೇಡ ಎನಿಸಿದರೆ ರಾಜಕೀಯ ಬಿಟ್ಟು ಸುಮ್ಮನೆ ಕುಳಿತುಕೊಳ್ಳುತ್ತೇನೆ. ಆದರೆ, ಬೇರೆ ಪಕ್ಷಕ್ಕೆ ಹೋಗಿ ರಾಜಕೀಯ ಮಾಡಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಸ್ಪಷ್ಟಪಡಿಸಿದರು.