Asianet Suvarna News Asianet Suvarna News

ಮಾಜಿ ಶಾಸಕ ರೇಣುಕಾಚಾರ್ಯಗೆ ನೋಟಿಸ್‌ ಜಾರಿ: ವಾರದೊಳಗೆ ಉತ್ತರಿಸಲು ಗಡುವು

ಮಾಜಿ ಶಾಸಕ ರೇಣುಕಾಚಾರ್ಯ ಸ್ವಪಕ್ಷೀಯರ ವಿರುದ್ಧವೇ ಮಾತನಾಡಿದ್ದರಿಂದ ಪಕ್ಷಕ್ಕೆ ಮುಜುಗರವಾಗಿದ್ದು, ಬಿಜೆಪಿ ಶಿಸ್ತು ಸಮಿತಿಯಿಂದ ಕಾರಣಕೇಳಿ ನೋಟಿಸ್‌ ಜಾರಿಗೊಳಿಸಿದೆ.

Karnataka BJP disciplinary committee issues notice to former MLA Renukacharya sat
Author
First Published Jun 29, 2023, 5:57 PM IST

ಬೆಂಗಳೂರು (ಜೂ.29): ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಸ್ವಪಕ್ಷೀಯರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಹಲವರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು. ಈಗ ರೇಣುಕಾಚಾರ್ಯ ಅವರಿಗೆ ಬಿಜೆಪಿ ಶಿಸ್ತುಪಾಲನಾ ಸಮಿತಿಯಿಂದ ಕಾರಣಕೇಳಿ ನೋಟಿಸ್‌ ಜಾರಿಗೊಳಿಸಲಾಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಾರೂಢ ಪಕ್ಷವಾಗಿದ್ದರೂ ಬಿಜೆಪಿ ಸೋಲು ಅನುಭವಿಸಿದೆ. ಈ ಸೋಲಿನ ಹೊಣೆಗಾರಿಕೆ ಹೊತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು. ಜೊತೆಗೆ, ಬಸವರಾಜ ಬೊಮ್ಮಾಯಿ ಅವರು ಸೋತ ಎಲ್ಲ ಶಾಸಕರು ಹಾಗೂ ಸಚಿವರ ಮನೆಗೆ ಹೋಗದೇ ಕೇವಲ ಮಾಜಿ ಸಚಿವ ಸುಧಾಕರ್‌ ಮನೆಗೆ ಮಾತ್ರ ತೆರಳಿದ್ದಾರೆ ಎಂದು ಹೇಳಿದ್ದರು. ಪಕ್ಷದ ಸೋಲಿಗೆ ಒಳೊಪ್ಪಂದವೇ ಕಾರಣವಾಗಿದೆ ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿಗೆ ಮುಜುಗರ ಆಗುವಂತೆ ಮಾಡಿದ್ದರು.

ಸೋತವರಲ್ಲಿ ಸುಧಾಕರ್ ಮಾತ್ರನಾ?, ನಾವು ಯಾರು ಕಂಡಿಲ್ವಾ!?: ರೇಣುಕಾಚಾರ್ಯ ಪ್ರಶ್ನೆ

ಹಲವು ಬಾರಿ ತಿಳಿ ಹೇಳಿದರೂ ಮಾತು ಕೇಳದ ಮಾಜಿ ಶಾಸಕ: ಇನ್ನು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡದಂತೆ ಹಲವು ಬಾರಿ ಸೂಚನೆ ನೀಡಲಾಗಿದ್ದರೂ, ಮತ್ತೆ ಪಕ್ಷ ವಿರೋಧಿ ಮಾತುಗಳನ್ನಾಡುತ್ತಾ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಶಿಸ್ತು ಸಮಿತಿ ವತಿಯಿಂದ ರೇಣುಕಾಚಾರ್ಯ ಅವರಿಗೆ ಕಾರಣ ಕೇಳಿ ನೋಟಿಸ್‌ ಜಾರಿಗೊಳಿಸಲಾಗಿದೆ. ಈ ಮೂಲಕ ಬಿಜೆಪಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ವಿರುದ್ಧ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ಉಂಟಾಗುವುದನ್ನು ತಡೆಯಲು ಮುಂದಾಗಿದೆ. ಇಲ್ಲದಿದ್ದರೆ ಲೋಕಸಭಾ ಚುನಾವಣೆ ವೇಳೆ ಪಕ್ಷಕ್ಕೆ ಡ್ಯಾಮೇಜ್‌ ಆಗುವ ಆತಂಕವನ್ನೂ ತಳ್ಳಿ ಹಾಕುವಂತಿಲ್ಲ.

ಕಾರಣಕೇಳಿ ನೋಟಿಸ್‌ನಲ್ಲೇನಿದೆ: ಇನ್ನು ನೋಟಿಸ್‌ನಲ್ಲಿ ಪಕ್ಷದ ಬಗ್ಗೆ ಮಾತನಾಡದಂತೆ ತಿಳಿ ಹೇಳಿದ್ದರೂ, ತಾವು ಪದೇ ಪದೇ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ವಿರುದ್ಧ ಮಾಧ್ಯಮಗಳ ಮುಂದೆ ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದೀರಿ. ಇದನ್ನು ರಾಜ್ಯ ಶಿಸ್ತು ಸಮಿತಿ ಗಂಭೀರವಾಗಿ ಪರಿಗಣಿಸಿ ತಮ್ಮ ಮೇಲೆ ಯಾಕೆ ಶಿಸ್ತು ಕ್ರಮ ಕೈಗೊಳ್ಳಬಾರದೆಂದು ಕಾರಣಕೇಳಿ ನೋಟಿಸ್‌ ಜಾರಿ ಮಾಡಲಾಗುತ್ತಿದೆ. ಈ ನೋಟಿಸ್‌ ನಿಮ್ಮ ಕೈ ತಲುಪಿದ ಒಂದು ವಾರದೊಳಗೆ ತಾವು ಉತ್ತರವನ್ನು ಲಿಖಿತ ರೂಪದಲ್ಲಿ ರಾಜ್ಯ ಶಿಸ್ತು ಸಮಿತಿಗೆ ನೀಡಬೇಕು.

ಬಿಜೆಪಿ ಸೋಲಿನ ಹೊಣೆಹೊತ್ತು ರಾಜ್ಯಾಧ್ಯಕ್ಷ ಕಟೀಲ್ ರಾಜಿನಾಮೆ ಕೊಡಲಿ: ದಾವಣಗೆರೆ (ಜೂ.28): ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಆದ್ದರಿಂದ ಬಿಜೆಪಿ ರಾಜ್ಯಾಧ್ಯಕ್ಷರು (ನಳೀನ್‌ ಕುಮಾರ್‌ ಕಟೀಲ್‌) ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಮಾಜಿ ಶಾಸಕ ರೇಣುಕಾಚಾರ್ಯ ಆಗ್ರಹಿಸಿದ್ದಾರೆ. ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಸೋತಿರುವ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸೋಲಿನ ಬೆನ್ನಲ್ಲೇ ಸ್ವಪಕ್ಷೀಯರ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಬುಧವಾರ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರು ಯಾರ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತಾರೆ. ಯಡಿಯೂರಪ್ಪನವರ ಪರವಾಗಿ ಮಾತನಾಡಿದರೆ ಅದು ಪಕ್ಷ ವಿರೋಧಿಯಾ? ಯಡಿಯೂರಪ್ಪ ನವರ ವಿರುದ್ಧವಾಗಿ ಮಾತನಾಡಿದರೆ ಅದು ಪಕ್ಷದ ಚಟುವಟಿಕೆಯಾ? ಎಂದು ಹೇಳಿದ್ದಾರೆ. 

ಬಿಜೆಪಿ ಸೋಲಿನ ಹೊಣೆಹೊತ್ತು ರಾಜ್ಯಾಧ್ಯಕ್ಷ ಕಟೀಲ್ ರಾಜಿನಾಮೆ ಕೊಡಲಿ: ರೇಣುಕಾಚಾರ್ಯ ಆಗ್ರಹ

ನನಗೆ 75 ಸಾವಿರ ಮತಗಳು ಬಂದಿವೆ: ಯಡಿಯೂರಪ್ಪ ಒಬ್ಬ ಹುಟ್ಟು ಹೋರಾಟಗಾರ. ನೂರಾರು ಹೋರಾಟಗಳನ್ನು ಮಾಡಿ ಜೈಲಿಗೆ ಹೋಗಿಬಂದವರು. ಅನೇಕ ಬಾರಿ ದೆಹಲಿಯಲ್ಲಿ ಹೇಳಿಬಂದೆ. ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪ್ರಸ್ತುತ ವಿದ್ಯಮಾನಗಳ ಹತ್ತಾರು ಬಾರಿ ಹೇಳಿದ್ದೆನೆ. ಬಸವರಾಜ್ ಬೊಮ್ಮಾಯಿ ಕೈಗಳನ್ನು ಕಟ್ಟಿ ಹಾಕಿ ಅಧಿಕಾರ ಮಾಡಿಸಿದ್ದೀರಿ. ರೇಣುಕಾಚಾರ್ಯ ಸೋತರು ಎಂಬ ಹತಾಶೆಯಿಂದ ಮಾತನಾಡುತ್ತಿಲ್ಲ. ನಾನು ಸೋತಿಲ್ಲ, ಜನ 75 ಸಾವಿರ ಮತಗಳನ್ನು ಹಾಕಿದ್ದಾರೆ. ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಮೋದಿಯವರು ಪ್ರಧಾನಿಯಾಗಬೇಕು. ಮತ್ತೊಮ್ಮೆ ಆತ್ಮವಲೋಕನ ನಡೆದು ಬಿಜೆಪಿ ಹೊಸ ಹುಟ್ಟು ಪಡೆಯಬೇಕು ಎಂದು ಹೇಳಿದರು.

 

Follow Us:
Download App:
  • android
  • ios