‘ಎಐಸಿಸಿ ನಾಯಕರಿಗೆ ಕರ್ನಾಟಕ ಎಟಿಎಂ ಆಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್‌ ಮತ್ತು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಕರ್ನಾಟಕಕ್ಕೆ ಭೇಟಿ ನೀಡುವುದೇ ಕಲೆಕ್ಷನ್‌ ಟಾರ್ಗೆಟ್‌ ನೀಡಲು ಎಂಬುದು ರಾಜ್ಯದ ಜನತೆಗೆ ಮನವರಿಕೆಯಾಗಿದೆ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತೀಕ್ಷ್ಣವಾಗಿ ಹೇಳಿದ್ದಾರೆ.

ಬೆಂಗಳೂರು (ನ.03): ‘ಎಐಸಿಸಿ ನಾಯಕರಿಗೆ ಕರ್ನಾಟಕ ಎಟಿಎಂ ಆಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್‌ ಮತ್ತು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಕರ್ನಾಟಕಕ್ಕೆ ಭೇಟಿ ನೀಡುವುದೇ ಕಲೆಕ್ಷನ್‌ ಟಾರ್ಗೆಟ್‌ ನೀಡಲು ಎಂಬುದು ರಾಜ್ಯದ ಜನತೆಗೆ ಮನವರಿಕೆಯಾಗಿದೆ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತೀಕ್ಷ್ಣವಾಗಿ ಹೇಳಿದ್ದಾರೆ. ಬಹುದಿನಗಳ ನಂತರ ಗುರುವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಇತ್ತೀಚೆಗೆ ರಾಜ್ಯದಲ್ಲಿ ನಡೆದ ಐಟಿ ದಾಳಿಯಲ್ಲಿ ರಾಜ್ಯ ಸರ್ಕಾರದ ಭ್ರಷ್ಟಾಚಾರ ಬಯಲಾಗಿದೆ. 

ಈ ಸರ್ಕಾರ ಲೂಟಿ ಸರ್ಕಾರ ಎಂಬುದು ಸಾಬೀತಾಗಿದೆ. ಐಟಿ ದಾಳಿ ವೇಳೆ ನೂರು ಕೋಟಿಗೂ ಅಧಿಕ ಹಣ ಸಿಕ್ಕಿದ್ದು, ಸರ್ಕಾರದ ಬಣ್ಣ ಬಯಲಾಗಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬಣಗಳ ನಡುವೆ ನಾಯಕತ್ವದ ಹಗ್ಗಜಗ್ಗಾಟ ತಾರಕಕ್ಕೇರಿದೆ. ವರ್ಗಾವಣೆ ದಂಧೆ ಮೊದಲಿಗಿಂತ ಹೆಚ್ಚು ಮುಂದುವರೆದಿದೆ. ಉಪಮುಖ್ಯಮಂತ್ರಿಗಳ ಉಪಟಳಕ್ಕೆ ಕಡಿವಾಣ ಹಾಕಲು ಡಿನ್ನರ್‌ ಮೀಟಿಂಗ್‌ ಆರಂಭವಾಗಿದೆ ಎಂದು ವ್ಯಂಗ್ಯವಾಡಿದರು.

ಪ್ರತಿನಿತ್ಯ ಬೈದರೆ ಮೋದಿ ಏಕೆ ಸಿದ್ದು ಭೇಟಿ ಆಗ್ತಾರೆ?: ಬಿ.ಎಸ್‌.ಯಡಿಯೂರಪ್ಪ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ಸರ್ಕಾರ ಮುಂದೆ ಹೋಗುತ್ತಿಲ್ಲ. ಜನರಿಗೆ ಅಪಾರ ಭರವಸೆ ನೀಡಿ ಅಧಿಕಾರಕ್ಕೆ ಬಂದು ಈಗ ತಮ್ಮ ಆಶ್ವಾಸನೆ ಈಡೇರಿಸಲು ಪರದಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ಎರಡನೇ ಅವಧಿಯಲ್ಲಿ ಪಕ್ಷದ ಮೇಲೆ ಹಿಡಿತ ಇಲ್ಲ. ಸರ್ಕಾರದ ಮೇಲೆ ನಿಯಂತ್ರಣ ಇಲ್ಲದೆ ವಿಚಿತ್ರ ಪರಿಸ್ಥಿತಿಯಲ್ಲಿದ್ದಾರೆ. ಸರ್ಕಾರ ನೀಡಿದ್ದ ಐದು ಭರವಸೆಗಳ ಪೈಕಿ ಉಚಿತ ಪ್ರಯಾಣದ ಒಂದು ಭರವಸೆ ಹೊರತುಪಡಿಸಿ ಉಳಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ. ಗೃಹಲಕ್ಷ್ಮಿ ಯೋಜನೆ ಅರ್ಧ ಮಹಿಳೆಯರಿಗೆ ತಲುಪಿಲ್ಲ. ಈ ಉಚಿತ ಯೋಜನೆಗಳಿಗೆ ಸಂಪನ್ಮೂಲ ಕ್ರೋಢಿಕರಿಸಲು ಸರ್ಕಾರ ಕಸರತ್ತು ಮಾಡುತ್ತಿದೆ. ಇದರಿಂದ ರಾಜ್ಯದ ಎಲ್ಲಾ ಅಭಿವೃದ್ಧಿ ಯೋಜನೆಗಳು ಸಂಪೂರ್ಣ ಸ್ಥಗಿತವಾಗಿವೆ ಎಂದು ವಾಗ್ದಾಳಿ ನಡೆಸಿದರು.

ಉಚಿತ ವಿದ್ಯುತ್‌ ಎಂದು ಹೇಳಿ ವಿದ್ಯುತ್‌ ದರದಲ್ಲಿ ಭಾರೀ ಹೆಚ್ಚಳ ಮಾಡಿದ್ದಾರೆ. ರಾಜ್ಯದಲ್ಲಿ ಬರ ಆವರಿಸಿ ರೈತರು ಸಂಕಷ್ಟದಲ್ಲಿ ಇದ್ದರೂ ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ಒಬ್ಬ ಸಚಿವ ಸಹ ಬರಪ್ರದೇಶಗಳಿಗೆ ಪ್ರವಾಸ ಮಾಡಿ ವಾಸ್ತವ ಸ್ಥಿತಿ ತಿಳಿಯುವ ಪ್ರಯತ್ನ ಮಾಡಿಲ್ಲ. ಶಾಸಕರಿಗೆ ನೀಡಬೇಕಿರುವ ತಲಾ 2 ಕೋಟಿ ರು. ಅನುದಾನದ ಬದಲು ಕೇವಲ 50 ಲಕ್ಷ ರು. ಮಾತ್ರ ಬಿಡುಗಡೆ ಮಾಡಿದ್ದಾರೆ. ಇನ್ನು ಎಸ್ಸಿ-ಎಸ್ಟಿ, ಬೋವಿ, ತಾಂಡಾ, ಅಂಬೇಡ್ಕರ್‌, ವಾಲ್ಮೀಕಿ ಅಭಿವೃದ್ಧಿ ನಿಗಮಗಳಿಗೆ ಒಂದು ಪೈಸೆ ಹಣ ಬಿಡುಗಡೆ ಮಾಡಿಲ್ಲ. ಇದನ್ನು ನೋಡಿದರೆ, ಇದು ದಿವಾಳಿ ಸರ್ಕಾರ ಎಂಬುದು ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದಿನಂತೆ ವಿದ್ಯುತ್‌ ಸಂಪರ್ಕ ಕಲ್ಪಿಸಿ: ಬರದಿಂದ ರಾಜ್ಯದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕೃಷಿ ಪಂಪ್‌ ಸೆಟ್‌ಗಳಿಗೆ ಟ್ರಾನ್ಸ್‌ಫಾರ್ಮರ್‌, ವಿದ್ಯುತ್‌ ಸಂಪರ್ಕ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವ ಯೋಜನೆ ರದ್ದುಗೊಳಿಸಿದ್ದಾರೆ. ಕೃಷಿ ಪಂಪ್‌ ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಪಡೆಯಲು ರೈತರೇ 2 ಲಕ್ಷ ರು. ಖರ್ಚು-ವೆಚ್ಚ ಭರಿಸಬೇಕು ಎಂದು ಆದೇಶಿಸಿದ್ದಾರೆ. ಸರ್ಕಾರ ಕೂಡಲೇ ಇದನ್ನು ರದ್ದುಗೊಳಿಸಬೇಕು. ಮೊದಲಿನಂತೆ ರೈತರ ಕೃಷಿ ಪಂಪ್‌ ಸೆಟ್‌ಗಳಿಗೆ ವಿದ್ಯುತ್‌ ಹಾಗೂ ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸಚಿವ ಶೆಖಾವತ್‌ ಆತ್ಮವಿಮರ್ಶೆ ಮಾಡಿಕೊಳ್ಳಲಿ: ಸಿದ್ದರಾಮಯ್ಯ

ರಾಜ್ಯದಲ್ಲಿ ಮಳೆ ಬಾರದ ಬಹುತೇಕ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಸಮರೋಪಾದಿಯಲ್ಲಿ ಬರಪರಿಹಾರ ಕೈಗೊಳ್ಳುವ ಬದಲು ಕೇಂದ್ರ ಸರ್ಕಾರದ ಕೈ ತೋರಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಆಡಳಿತ ಪಕ್ಷವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಮರೆತು ವಿರೋಧ ಪಕ್ಷಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರ ನಡೆಯುತ್ತಿದೆ. ಅಸಂಬದ್ಧ ವಿಷಯಗಳನ್ನು ಪ್ರಸ್ತಾಪಿಸಿ ತಮ್ಮ ಸರ್ಕಾರದ ವೈಫಲ್ಯಗಳಿಗೆ ಪರದೆ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಟೀಕಿಸಿದರು.