Asianet Suvarna News Asianet Suvarna News

ಪ್ರತಿನಿತ್ಯ ಬೈದರೆ ಮೋದಿ ಏಕೆ ಸಿದ್ದು ಭೇಟಿ ಆಗ್ತಾರೆ?: ಬಿ.ಎಸ್‌.ಯಡಿಯೂರಪ್ಪ

ದಿನ ಬೆಳಗಾದರೆ ಪ್ರಧಾನಿ ಮೋದಿ ಅವರನ್ನು ಬೈಯುತ್ತಿದ್ದರೆ ಯಾರು ಅವರನ್ನು ಒಳಗೆ ಬಿಟ್ಟುಕೊಳ್ಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

Former CM BS Yediyurappa Slams On CM Siddaramaiah gvd
Author
First Published Nov 3, 2023, 5:23 AM IST

ಬೆಂಗಳೂರು (ನ.03): ದಿನ ಬೆಳಗಾದರೆ ಪ್ರಧಾನಿ ಮೋದಿ ಅವರನ್ನು ಬೈಯುತ್ತಿದ್ದರೆ ಯಾರು ಅವರನ್ನು ಒಳಗೆ ಬಿಟ್ಟುಕೊಳ್ಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಭೇಟಿಗೆ ಪ್ರಧಾನಿ ಸಮಯ ಕೊಡುತ್ತಿಲ್ಲ. ಬಿಜೆಪಿ ನಾಯಕರೇ ಭೇಟಿಗೆ ಸಮಯ ಕೊಡಿಸಲಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದರು. ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. 

ಪ್ರತಿ ನಿತ್ಯ ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡಿದರೆ ಯಾರು ಅವರನ್ನು ಹತ್ತಿರ ಸೇರಿಸುತ್ತಾರೆ ಹೇಳಿ. ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾದಂತೆ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಎಂದರು. ಜಗತ್ತೇ ಮೆಚ್ಚಿರುವ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಸಿದ್ದರಾಮಯ್ಯ ಗೌರವದಿಂದ ನಡೆದುಕೊಳ್ಳಬೇಕು. ಜವಾಬ್ದಾರಿಯಿಂದ ಮಾತನಾಡಬೇಕು. ಎರಡು ದಿನ ದೆಹಲಿಗೆ ತೆರಳಿ ಕುಳಿತು ಸಮಸ್ಯೆ ಹೇಳಿದರೆ ಪ್ರಧಾನಿ ಮೋದಿ ನಿಶ್ಚಿತವಾಗಿ ಪರಿಹಾರ ಕೊಡುತ್ತಾರೆ ಎಂದು ಹೇಳಿದರು.

ಹಿಂದೆ ಮನಬಂದಂತೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿತ್ತು, ಆದರೆ ಈಗಿಲ್ಲ: ಸಿದ್ದರಾಮಯ್ಯ

ಮೋದಿಯಿಂದ ಅಭಿವೃದ್ಧಿ ಮಹಾಪೂರ: ಕೇಂದ್ರ ಸರ್ಕಾರ ಬರ ಪರಿಹಾರದ ಹಣ ಬಿಡುಗಡೆ ಮಾಡುವುದು ನಿಶ್ಚಿತ. ಈ ಹಿಂದೆ ಬರ ಪರಿಸ್ಥಿತಿ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಪರಿಹಾರಕ್ಕಾಗಿ ಕಾಯುತ್ತಿರಲಿಲ್ಲ. ಸಿಎಂ ಸಿದ್ದರಾಮಯ್ಯ ಸಂಪನ್ಮೂಲ ಕ್ರೋಢೀಕರಿಸಲು ಸಾಧ್ಯವಾಗದೆ ಎಲ್ಲದಕ್ಕೂ ಕೇಂದ್ರ ಸರ್ಕಾರದತ್ತ ಬೆರಳು ತೋರಿಸುತ್ತಿದ್ದಾರೆ. ಅನಗತ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವುದು ಚಾಳಿಯಾಗಿದೆ. ಕೇಂದ್ರ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿಯ ಮಹಾಪೂರವನ್ನೇ ಹರಿಸಿದೆ. ಸಿದ್ದರಾಮಯ್ಯ ಅವರಿಗೆ ಮಾಹಿತಿ ಕೊರತೆ ಇರಬಹುದು ಎಂದು ಯಡಿಯೂರಪ್ಪ ಹರಿಹಾಯ್ದರು.

ಸರ್ಕಾರಿ ಶಾಲೆಗಳಿಗಿನ್ನು ಉಚಿತ ವಿದ್ಯುತ್‌, ನೀರು: ಸಿದ್ದರಾಮಯ್ಯ ಘೋಷಣೆ

ಕೇಂದ್ರ ಸರ್ಕಾರ ಕಳೆದ 9 ವರ್ಷಗಳಲ್ಲಿ ಎನ್‌ಡಿಆರ್‌ಎಫ್‌ನಿಂದ 12,784 ಕೋಟಿ ರು. ಹಾಗೂ ಎಸ್‌ಡಿಆರ್‌ಎಫ್‌ನಿಂದ 3,377 ಕೋಟಿ ರು. ಬಿಡುಗಡೆ ಮಾಡಿದೆ. 2015ರಿಂದ 23ರ ವರೆಗೆ 5.23 ಲಕ್ಷ ಕೋಟಿ ರು. ನೇರ ಅನುದಾನ ನೀಡಿದೆ. ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಯೋಜನೆಗೆ 37,510 ಕೋಟಿ ರು. ವೆಚ್ಚ ಮಾಡುತ್ತಿದೆ. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಮುಂದಿನ ಮಾರ್ಚ್‌ಗೆ ಸೇವೆಗೆ ಮುಕ್ತವಾಗಲಿದೆ. ರಾಜ್ಯದಲ್ಲಿ 42,266 ಕೋಟಿ ರು. ವೆಚ್ಚದ 2,431 ಕಿ.ಮೀ. ಉದ್ದದ 54 ಹೆದ್ದಾರಿ ಯೋಜನೆಗಳ ಕಾಮಗಾರಿ ಚಾಲ್ತಿಯಲ್ಲಿದೆ. ಬೆಂಗಳೂರು ಉಪನಗರ ರೈಲು ಯೋಜನೆಗೆ 450 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಹೀಗೆ ಹಲವು ಯೋಜನೆಗಳಡಿ ರಾಜ್ಯಕ್ಕೆ ಸಾವಿರಾರು ಕೋಟಿ ರು. ಅನುದಾನ ನೀಡಿದ್ದಾರೆ. ಪ್ರಧಾನಿ ಮೋದಿ ತಾರತಮ್ಯ ಮಾಡದೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

Follow Us:
Download App:
  • android
  • ios