Asianet Suvarna News Asianet Suvarna News

ನಿಜವಾಗಿಯೂ ಕರ್ನಾಟಕದಲ್ಲಿ ಗೆದ್ದಿರುವುದು ಕಾಂಗ್ರೆಸ್ ಪಕ್ಷವಲ್ಲ; ಮತದಾರ!

ಇವತ್ತು ಕರ್ನಾಟಕದಲ್ಲಿ ಗೆದ್ದಿರುವುದು ಕಾಂಗ್ರೆಸ್ ಪಕ್ಷವೂ ಅಲ್ಲ. ಅವರು ಕೊಟ್ಟಿರುವ ವಿವಿಧ ಯೋಜನೆಗಳ ಆಶ್ವಾಸನೆಯೂ ಅಲ್ಲ. ಬದಲಿಗೆ ಜನರಿಗಿದ್ದ ಆಡಳಿತ ಪಕ್ಷದ ಬಗೆಗಿನ ಅಸಹನೆ. ಹಾಗಾಗಿ ಪ್ರಜಾಪ್ರಭುತ್ವದ ಧರ್ಮದಂತೆ ಜನರು ತಮಗೆ ಬೇಕಾದ ಪಕ್ಷವನ್ನು ಗೆಲ್ಲಿಸಿದ್ದಾರೆ. ಹಾಗಾಗಿ ನಿಜವಾಗಿ ಗೆದ್ದಿರುವುದು ಮತದಾರರೇ ಹೊರತು ಕಾಂಗ್ರೆಸ್ ಪಕ್ಷವಲ್ಲ.

Karnataka assembly election result 2023 Voter who gave majority victory to Congress party rav
Author
First Published May 13, 2023, 8:39 PM IST

- ಸಂತೋಷ ಕುಮಾರ್ ಎಲ್‌ಎಂ

ಭಾರತದ ಒಂದೊಂದು ರಾಜ್ಯದ ಒಂದೊಂದು ಭಾಗದ ಜನರ ಆಚರಣೆ, ಸಂಸ್ಕೃತಿ, ಭಾಷೆ ಎಲ್ಲದರಲ್ಲೂ ವೈವಿಧ್ಯತೆಯಿದೆ. ಅದನ್ನು ಅರ್ಥ ಮಾಡಿಕೊಳ್ಳದೆೆ ಯಾವುದೋ ಒಂದು ರಾಜ್ಯದಲ್ಲಿ ವರ್ಕೌಟ್ ಆದ ಮಾದರಿಯನ್ನೇ ಎಲ್ಲ ಕಡೆ ತಂದು implement ಮಾಡಿ ಗೆದ್ದುಬಿಡಬಲ್ಲೆ ಅಂದುಕೊಂಡಿದ್ದ ಬಿಜೆಪಿ ಪಕ್ಷದ ಲೆಕ್ಕಾಚಾರ ಸಂಪೂರ್ಣ ತಲೆಕೆಳಗಾಗಿದೆ.

ಇಲ್ಲಿ ಆ ಮಾದರಿಯನ್ನು ಇಲ್ಲೂ ಕೂಡ implement ಮಾಡಲು ತಮ್ಮೆಲ್ಲ ಶಕ್ತಿ-ಯುಕ್ತಿ ಪ್ರಯೋಗಿಸಿದ ಆ ಪಕ್ಷದ ಕಾರ್ಯಕರ್ತರದೂ ಅಷ್ಟೇ ಸಮ ಪಾಲಿದೆ. ಬೇರೆಯ ದೇಶವೊಂದರಲ್ಲಿ ಇಂಡಿಯನ್ ರೆಸ್ಟೋರೆಂಟ್ ಎಂದು ಹೊಸದಾಗಿ ತೆರೆದರೂ ಅಲ್ಲಿಯ ಸ್ಥಳೀಯ ಜನರ ರುಚಿಯನ್ನು ಅರಿತುಕೊಂಡೇ ಭಾರತೀಯ ಖಾದ್ಯಗಳನ್ನು ತಯಾರಿಸಬೇಖಾಗುತ್ತದೆ. ಇಲ್ಲದಿದ್ದರೆ ಖಾರವನ್ನು ಜಾಸ್ತಿ ಇಷ್ಟಪಡದ ಜಾಗವೊಂದರಲ್ಲಿ "ಭಾರತೀಯ ಡಿಶ್ ಅಂದ್ರೆ ಖಾರ ಜಾಸ್ತಿ ಇರಬೇಕು" ಅಂತ ಹಾಗೇ ಮಾಡಿದರೆ ಅದು ಕೆಲವರಿಗಷ್ಟೇ ಇಷ್ಟವಾಗಬಹುದು. ಅದರಿಂದ ಆ ಬ್ಯುಸಿನೆಸ್‍ಗೆ ನಷ್ಟವೇ ಹೊರತು ಲಾಭವಿಲ್ಲ. ಇಲ್ಲಾಗಿದ್ದೂ ಅದೇ.
ಉದಾಹರಣೆಗೆ, ಧರ್ಮದ ರಕ್ಷಣೆ ಮಾಡುತ್ತೇವೆ ಅನ್ನುವ ವಿಷಯವನ್ನಿಟ್ಟುಕೊಂಡು ಮತದಾರರನ್ನು ಸೆಳೆಯುವ ವಿಷಯ ಎಲ್ಲೆಲ್ಲಿ ಆ ಬಗೆಯ ಮತೀಯ ಗಲಭೆಗಳಾಗುತ್ತಿವೆಯೋ ಅಲ್ಲಿ ಮಾತ್ರ ಕೆಲಸ ಮಾಡಬಹುದು. ಆದರೆ ಅಂತಹ ಜಗಳವೇ ಇಲ್ಲದೆ ನೆಮ್ಮದಿಯಿಂದ ಬದುಕುತ್ತಿರುವ ಜಾಗಗಳಲ್ಲಿ ಅದು ಕೆಲಸ ಮಾಡುವುದಿಲ್ಲ. ಬದಲಿಗೆ, ಅದೇ ಥರದ ರಾಜಕೀಯವನ್ನು ಅಲ್ಲಿ ಮಾಡಲು ಶುರುಮಾಡಿದಾಗ ಜನರಲ್ಲಿ ಅಸಹನೆ ಶುರುವಾಗುತ್ತದೆ. ರಾಮಮಂದಿರ, ಕಾಶಿ, ಅಯೋಧ್ಯೆ ಯಾವುದೇ ವಿಷಯಗಳನ್ನು ಒಂದು ಮಟ್ಟಕ್ಕಷ್ಟೇ ಬಳಸಿಕೊಳ್ಳಲು ಸಾಧ್ಯ. ಅವುಗಳು ಆ ನಿರ್ದಿಷ್ಟ ಜನಸಮೂಹಕ್ಕೆ ಇನ್ನಷ್ಟು ನಂಬಿಕೆ ಮೂಡಿಸಬಹುದು.

ಉಳಿದವರಿಗೆ? Nothing. At the end of the day ಏನು ಕೆಲಸ ಮಾಡಿದ್ದೀವಿ ಅನ್ನುವುದಷ್ಟೇ ಮುಖ್ಯವಾಗುತ್ತದೆ. ಅಂಥವರನ್ನು Anti-Hindu, Anti-National ಅಂತ ಕರೆದು ವಿರೋಧ ಕಟ್ಟಿಕೊಂಡಿತೇ ಹೊರತು ಹೊಸ ಮತದಾರರನ್ನು ಸೆಳೆಯುವಲ್ಲಿ ಬೇಕಾದ ಕೆಲಸವನ್ನು ಮಾಡಲಿಲ್ಲ.

Gangavati Janardhana Reddy Election Results 2023: ರಾಷ್ಟ್ರೀಯ ಪಕ್ಷಗಳ ಫುಟ್‌ಬಾಲ್‌ ಆಡಿದ ಜನಾರ್ಧನ ರೆಡ್ಡಿ!

ಜನರ ಭಾವನೆಗಳನ್ನು ಅರಿತುಕೊಂಡು ಹಿಂದಿ-ಹೇರಿಕೆಯಂತಹ ವಿಷಯಗಳು ಬಂದಾಗ ಇಲ್ಲಿನ ಜನರ ಭಾವನೆಗಳನ್ನು ಗೌರವಿಸುವ ಬದಲು "ನಾಳೆಯಿಂದ ದಹೀ-ಪೂರಿ ಅನ್ನುವ ಬದಲಾಗಿ ಮೊಸರು-ಪೂರಿ ಅಂತ ಕೇಳ್ತೀರ?" ಅನ್ನೋ ಥರ ಅವರನ್ನೇ ಕಿಚಾಯಿಸಲಾಯಿತು. ಇದೇ ರೀತಿ ನಂದಿನಿ ಹಾಲಿನ ವಿಚಾರ ಬಂದಾಗಲೂ ಆಯ್ತು. ಹಿಜಾಬ್ ವಿಚಾರ ಮಾಡಿದ ಡ್ಯಾಮೇಜ್ ಅನ್ನು ಬಿಜೆಪಿ ಒಪ್ಪಿಕೊಳ್ಳುವುದಿಲ್ಲ.

ಅದೇ ರೀತಿ ಕನ್ನಡ ಪರ ಮಾತನಾಡುವ ಜನರನ್ನು ಒಟ್ಟಾಗಿ "ಓಲಾಟಗಾರರು" ಅಂತ ಹೀಯಾಳಿಸಲಾಯಿತು. ರೈತರ ಪರ ಹೋರಾಟಕ್ಕಿಳಿಯುವವರನ್ನು "ಇವನ್ಯಾವ ಸೀಮೆ ರೈತ?" ಅಂತ ಕಾಮಿಡಿ ಮಾಡಲಾಯಿತು. ಬೆಲೆ ಏರಿಕೆ ಬಗ್ಗೆ ಪ್ರಶ್ನೆ ಕೇಳಿದರೆ "ಸಂಬಳ ಜಾಸ್ತಿಯಾಗಲಿಲ್ವಾ?" ಅಂತ ಮರುಪ್ರಶ್ನೆ ಹಾಕಲಾಯಿತು. ಪೆಟ್ರೋಲ್-ಡೀಸೆಲ್-ಗ್ಯಾಸ್ ಸಿಲಿಂಡರ್ ಬೆಲೆಯೇರಿಕೆಯ ಬಗ್ಗೆ ಜನರು ಸಮಸ್ಯೆಗಳನ್ನು ಹೇಳಿಕೊಂಡಾಗ ಸರಕಾರ ಜನರಿಗೆ ವಾಸ್ತವವನ್ನು ಅರಿವು ಮಾಡಿಸುವ ಬದಲು ಪಕ್ಷವನ್ನು ಬೆಂಬಲಿಸುವ ಹಲವರಿಂದ "ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾತೈಲವನ್ನು ಎಲ್ಲಿಂದ ತರಿಸ್ತೀವಿ ಗೊತ್ತಾ?" ಅನ್ನೋ ಥರದ ವಿವರಣೆ ಕೊಡಿಸಲಾಯಿತು. ಇದು ಜನರಲ್ಲಿ ಇನ್ನಷ್ಟು ಅಸಹನೆ ಉಂಟುಮಾಡಿತೇ ವಿನಹ ಅವರ ನೋವಿಗೆ ಮದ್ದಾಗಲಿಲ್ಲ. ಗಮನವಿರಲಿ, ಬೆಲೆ ಇಳಿಸುವಿಕೆ ಅಸಾಧ್ಯ ಅಂದಾಗ ಜನರಿಗೆ ಅದನ್ನು ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಹೇಳಿ ಅರ್ಥ ಮಾಡಿಸಬೇಕೇ ವಿನಹ "ತನ್ನ ಸರಕಾರ, ತಾನು ಏನು ಹೇಳಿದರೂ ಕೇಳಲು ಜನರಿದ್ದಾರೆ. ಬೆಂಬಲಿಸಲು ಜನರಿದ್ದಾರೆ" ಅನ್ನುವ ಗತ್ತಿನಲ್ಲಿ ಮಾತುಗಳಿಂದ ತಪ್ಪಿಸಿಕೊಳ್ಳುವುದಲ್ಲ.

ಇಂದು ಕಾಂಗ್ರೆಸ್‍ಗೆ ಮತ ಹಾಕಿರುವವರಲ್ಲಿ ಹಿಂದೂಗಳಿಲ್ಲವೇ? ಪೂಜೆ ಮಾಡುವವರಿಲ್ಲವೇ? ಸಸ್ಯಾಹಾರಿಗಳಿಲ್ಲವೇ? ದೇಶ ಅಂದರೆ ಮನಸಾರೆ ನಮಿಸುವವರಿಲ್ಲವೇ? ಎಲ್ಲ ವೈವಿಧ್ಯತೆಯ ಜನರು ಹಿಂದೆಯೂ ಇದ್ದರು, ಮುಂದೆಯೂ ಇರುತ್ತಾರೆ. ಯಾವ ವಿಷಯವನ್ನೂ ಬಿಜೆಪಿಯೋ ಅಥವ ಕಾಂಗ್ರೆಸ್ಸೋ ಬಂದು ಯಾರಿಗೂ ಹೇಳಿಕೊಡುವಂಥದ್ದಲ್ಲ. ಆದರೆ ತನ್ನ ಪಕ್ಷದ ಮತದಾರರನ್ನು ಓಲೈಸಲು, ಇತರರನ್ನು ಸೆಳೆಯಲು ಕಾಂಗ್ರೆಸ್‍ಗೆ ಓಟು ಹಾಕುವವರನ್ನು ಏಕಾಏಕಿ ದೇಶದ್ರೋಹಿಗಳು ಅಂದರೆ ಅದು ಡ್ಯಾಮೇಜ್ ಮಾಡುವ ಸಂಭವ ನೂರಕ್ಕೆ ನೂರು. ಇದು ಬಿಜೆಪಿಗೆ ಅರಿವಾಗಲೇ ಇಲ್ಲ.

ಬಿಜೆಪಿಗೆ ಸಾಧ್ಯವಾದಷ್ಟು ಉತ್ತರದಲ್ಲಿ ಕೂತು ದೇಶದ ಎಲ್ಲ ರಾಜ್ಯಗಳನ್ನು ರಿಮೋಟ್ ಕಂಟ್ರೋಲ್ ಮಾಡುವ ನಾಯಕರೇ ಬೇಕು. ಒಬ್ಬ ನಾಯಕ ತನ್ನ ಹೆಸರಿಂದಲೇ ಗುರುತಿಸಿಕೊಳ್ಳುತ್ತಿದ್ದಾನೆ ಅಂತ ಅರಿವಾಗುವಷ್ಟರಲ್ಲಿ ಅವನನ್ನು ಬದಲಾಯಿಸಲು ಬೇರೊಬ್ಬನನ್ನು ಹುಡುಕುತ್ತಿರುತ್ತದೆ. ಕರ್ನಾಟಕದಲ್ಲಿ ಯೆಡಿಯೂರಪ್ಪ ಅವರಂಥ ನಾಯಕನನ್ನು ಇಳಿಸಿದ್ದೇ ಅದಕ್ಕೆ ಮುಖ್ಯ ಕಾರಣವಾಯ್ತು. ಮೊನ್ನೆ ಮೊನ್ನೆ ಅಮಿತ್ ಶಾ ಟಿವಿಯ ಸಂದರ್ಶನವೊಂದರಲ್ಲಿ ಮಾತನಾಡಿದ್ದನ್ನು ಕೇಳಿಸಿಕೊಂಡಾಗ ಅರ್ಥವಾಗಿದ್ದು ಅಲ್ಲಿಯವರಿಗಿರುವ ವಿಪರೀತ ಆತ್ಮವಿಶ್ವಾಸ. ಆದರೆ ಇಲ್ಲಿಯ ಜನರಿಗೆ ಇಲ್ಲಾಗುತ್ತಿರುವ ವಿಷಯಗಳ ಬಗ್ಗೆ ಹೆಚ್ಚಿನ ಅರಿವಿರುತ್ತದೆ. ಚುನಾವಣೆಗೆ ಓಡಾಡುತ್ತಿರುವ ತಳಮಟ್ಟದ ಕಾರ್ಯಕರ್ತನೊಬ್ಬನನ್ನು ಕೇಳಿದರೆ ಆ ಕ್ಷೇತ್ರದ ಬಗ್ಗೆ ಆತ ಸ್ಪಷ್ಟ ಚಿತ್ರಣ ಕೊಡಬಲ್ಲ. ಗೆಲ್ಲಬಹುದಾಗಿದ್ದ ಕೆಲ ನಾಯಕರನ್ನು ಬಲಿಷ್ಟ ಅಭ್ಯರ್ಥಿಗಳಿರುವ ಅವರಿಗೆ ಬೇಡದ ಕ್ಷೇತ್ರಗಳಲ್ಲಿ ನಿಲ್ಲಿಸಿ ಸೋಲಲು ನೇರವಾಗಿಯೇ ಕಾರಣರಾದರು.

ಇವತ್ತು ಕರ್ನಾಟಕದಲ್ಲಿ ಗೆದ್ದಿರುವುದು ಕಾಂಗ್ರೆಸ್ ಪಕ್ಷವೂ ಅಲ್ಲ. ಅವರು ಕೊಟ್ಟಿರುವ ವಿವಿಧ ಯೋಜನೆಗಳ ಆಶ್ವಾಸನೆಯೂ ಅಲ್ಲ. ಬದಲಿಗೆ ಜನರಿಗಿದ್ದ ಆಡಳಿತ ಪಕ್ಷದ ಬಗೆಗಿನ ಅಸಹನೆ. ಹಾಗಾಗಿ ಪ್ರಜಾಪ್ರಭುತ್ವದ ಧರ್ಮದಂತೆ ಜನರು ತಮಗೆ ಬೇಕಾದ ಪಕ್ಷವನ್ನು ಗೆಲ್ಲಿಸಿದ್ದಾರೆ. ಹಾಗಾಗಿ ನಿಜವಾಗಿ ಗೆದ್ದಿರುವುದು ಮತದಾರರೇ ಹೊರತು ಕಾಂಗ್ರೆಸ್ ಪಕ್ಷವಲ್ಲ. ಅಂಥ ಮತದಾರರನ್ನು "ಬಿಟ್ಟಿಭಾಗ್ಯಗಳಿಗಾಗಿ ಮತ ಹಾಕಿದ್ದಾರೆ" ಅಂತ ಅವಹೇಳನ ಮಾಡಿದರೆ ಬಿಜೆಪಿ ಮತ್ತೆ ಇನ್ನೂ ಹೆಚ್ಚಿನ ಬೆಲೆತೆರಬೇಕಾದೀತು.

ಬಿಜೆಪಿ-ಕಾಂಗ್ರೆಸ್ ಪಕ್ಷಗಳ ಮೂಲ ಸಿದ್ಧಾಂತಗಳಾಚೆಗೂ ಅವರಿಗೆ ಮತ ನೀಡುವ ಲಕ್ಷ-ಲಕ್ಷ ಜನರಿದ್ದಾರೆ. ಅದು ಮುಂದಿನ ದಿನಗಳಲ್ಲಿ ಕೋಟಿಗಳಾಗಲಿ. ಆ ಮತದಾರರ ಮತಗಳು ಕೇವಲ-ಕೇವಲ ಅಭಿವೃದ್ಧಿಗಷ್ಟೇ. ಅವರಿಗೆ ಅಭಿವೃದ್ಧಿ ಬೇಕು. ಮೂಲ ಸೌಕರ್ಯಗಳು ಬೇಕು. ನೆಮ್ಮದಿಯ ಬದುಕು ಬೇಕು. ಅವರ ಭಾಷೆ-ಸಂಸ್ಕೃತಿಯನ್ನು ಕಾಪಾಡಬಲ್ಲ ನಾಯಕರು ಬೇಕು. ಈ ಬಗೆಯ ಮತದಾರರಿಗೆ ಯಾವ ಪಕ್ಷದ ಹಂಗೂ ಇಲ್ಲ. ಅವರಿಗೆ ಬೇಡವೆನಿಸಿದ ದಿನ ಇವೆರಡೂ ಪಕ್ಷಗಳನ್ನು ಬಿಟ್ಟು ಜೆಡಿಎಸ್ಸಿಗೋ, ಪ್ರಜಾಕೀಯಕ್ಕೋ , ಆಪ್‍ಗೋ ಮತ ಹಾಕುತ್ತಾರೆ. ನಿಜವಾಗಿ ಇಂದು ಒಂದು ಪಕ್ಷ ಹೋಗಿ ಮತ್ತೊಂದು ಪಕ್ಷ ಬರಲು ಕಾರಣವಾಗುತ್ತಿರುವವರು ಇವರೇ. ಇವರನ್ನು ಕಡೆಗಣಿಸಿದರೆ ಇಂದು ಬಿಜೆಪಿ ಪಕ್ಷಕ್ಕಾದ ಗತಿಯೇ ಮುಂದಿನ ಐದು ವರ್ಷಗಳಲ್ಲಿ ಕಾಂಗ್ರೆಸ್‍ಗೂ ಆದೀತು.
ಜನರೂ ಅಷ್ಟೇ. ಅವರು ತಮ್ಮ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕಾಳಜಿಯಿರುವವರಿಗೆ ಮತ ನೀಡುವ ಮನಸ್ಸು ಮಾಡಲಿ. ಒಂದೇ ಪಕ್ಷಕ್ಕೆ ಅಂಟಿಕೊಂಡರೆ ಆ ಪಕ್ಷವೂ ಮತದಾರರನ್ನು Granted ಆಗಿ ತೆಗೆದುಕೊಳ್ಳುತ್ತದೆ. ಕರ್ನಾಟಕದ ಬಿಜೆಪಿ ಸರ್ಕಾರಕ್ಕೆ ತನ್ನ ಮತದಾರರನ್ನು ಕಳೆದುಕೊಳ್ಳುವ ಭೀತಿಯಿದ್ದಿದ್ದರೆ ಹೀಗೆಲ್ಲ ಆಗುತ್ತಿರಲಿಲ್ಲ. ಅದು ಬೇರೆ ಬೇರೆ ವಿಷಯಗಳ ಬಗ್ಗೆ ಗಮನ ಕೊಡುತ್ತಿತ್ತು. ಆದರೆ ಅತಿಯಾದ ಆತ್ಮವಿಶ್ವಾಸ ಎಂಥವರನ್ನೂ ಗುಂಡಿಗೆ ತಳ್ಳುತ್ತದೆ. ಇಂದಿನ ಬಿಜೆಪಿ ಸ್ಥಿತಿಗೆ ಇದೂ ಮುಖ್ಯ ಕಾರಣ.

ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅನುಸರಿಸಿದ ನೀತಿಯನ್ನು ಗಮನಿಸಿ ನೋಡಿ. ಇಂದಿನ ಬಿಜೆಪಿಯಂತೆ ಅಂದಿನ ಕಾಂಗ್ರೆಸ್ ಕೂಡ ಜನರನ್ನು Granted ಆಗಿಯೇ ತೆಗೆದುಕೊಂಡಿತ್ತು. ಹಾಗಾಗಿ ಸೋತು ಸುಣ್ಣವಾಗಿತ್ತು. ಈ ಚುನಾವಣೆಯಲ್ಲಿ ಅದು ಕೆಲಸ ಮಾಡಿದ ರೀತಿ ನಿಜಕ್ಕೂ ಮೆಚ್ಚುವಂಥದ್ದು. ಅದರ ಫಲ ಈಗ ಸಿಕ್ಕಿದೆ. ಈ ಸಲ ಸರ್ಕಾರ ನಡೆಸುವಾಗ ಮತ್ತೆ ಮತದಾರರನ್ನು ಕಡೆಗಣಿಸಿದರೆ ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಹಳೇ ರೀತಿಯ ಸೋಲು ಗ್ಯಾರಂಟಿ. ಬಿಜೆಪಿಯನ್ನು 40% ಸರ್ಕಾರ ಅಂತ ಟೀಕಿಸಿದ್ದು ಜನರು ಮರೆಯುವುದಿಲ್ಲ. ಈಗ ಪ್ರಾಮಾಣಿಕವಾಗಿ ಕೆಲಸ ಮಾಡುವುದು ಕಾಂಗ್ರೆಸ್‍ಗಿರುವ ಅತಿದೊಡ್ಡ ಸವಾಲು. ಚುನಾವಣೆಯಲ್ಲಿ ಕೊಟ್ಟ ಭರವಸೆಗಳನ್ನು ಆದಷ್ಟು ಬೇಗನೆ ಈಡೇರಿಸಿ ಈಗ ಗೆಲ್ಲಿಸಿದ ಮತದಾರರ ಮನಸ್ಸು ಗೆಲ್ಲುವುದು ಈ ಅವಧಿಯ ತುರ್ತು.

Karnataka Election Result 2023: ಪೇಸಿಎಂ, ಸರ್ವೇ, ಡಿಜಿಟಲ್‌ ಐಡಿಯಾ.. ಕಾಂಗ್ರೆಸ್‌ ಮಾಸ್ಟರ್‌ ಮೈಂಡ್‌ ಸುನೀಲ್‌ ಕುನಗೋಳು!

ಬಿಜೆಪಿ ಮತ್ತೆ ಪುಟಿದೇಳಲಿ. ರಿಮೋಟ್ ಕಂಟ್ರೋಲ್ ವ್ಯವಸ್ಥೆ, ಉತ್ತರ ಭಾರತದ ಶೈಲಿಯ ಜನಸೆಳೆಯುವ ತಂತ್ರಗಳನ್ನು ಅಲ್ಲಿಯೇ ಬಿಟ್ಟು ರಾಜ್ಯಕ್ಕೆ ಮತ್ತು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಸರಿಹೊಂದುವಂಥ ಕಾರ್ಯತಂತ್ರ, ರೂಪುರೇಷೆ ಹಾಕಿಕೊಂಡು ಮತ್ತೆ ಬರಲಿ. ಸದ್ಯಕ್ಕೆ ವಿರೋಧ ಪಕ್ಷದಲ್ಲಿದ್ದುಕೊಂಡು ಕಾಂಗ್ರೆಸ್ ಎಲ್ಲೆಲ್ಲಿ ಅಭಿವೃದ್ಧಿ ಕಾರ್ಯದಲ್ಲಿ ಎಡವುತ್ತದೋ ಅಲ್ಲಿ ಟೀಕಿಸಲಿ, ತಿದ್ದಲಿ, ಜನರ ಗಮನಕ್ಕೆ ತರಲಿ. ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ಡಮ್ಮಿ ಅನ್ನಿಸಿದರೆ ಮುಗೀತು. ಮುಂದಿನ ಚುನಾವಣೆಯ ಮತಯಾಚನೆಗೆ ಮೋದಿ, ಅಮಿತ್ ಶಾ, ಯೋಗಿ ಯಾರೇ ಬರಲಿ, ಬರದಿರಲಿ. ಜನರೇ ಮತ್ತೆ ಬಿಜೆಪಿ ಸರಕಾರವನ್ನು ಸಂಪೂರ್ಣ ಬಹುಮತದಲ್ಲಿ ಗೆಲ್ಲಿಸಲು ಮನಸ್ಸು ಮಾಡುತ್ತಾರೆ. ಆಗ ಉರೀಗೌಡ-ನಂಜೇಗೌಡರ ಅವಶ್ಯಕತೆಯೇ ಬರುವುದಿಲ್ಲ.

Follow Us:
Download App:
  • android
  • ios