ನನ್ನ ಸೋಲು ಅಭಿವೃದ್ಧಿಗಾದ ಸೋಲು: ಡಾ.ಸುಧಾಕರ್‌

ನನ್ನ ಸೋಲು ಅಭಿವೃದ್ಧಿಗಾದ ಸೋಲು. ನನ್ನ ಸೋಲಿಗೆ ಕ್ಷೇತ್ರದಲ್ಲಿ ಕೊನೆ ಕ್ಷಣದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ನಡೆಸಿದ ರಾಜಕೀಯ ಷಡ್ಯಂತ್ರವೇ ಕಾರಣ. ಜೆಡಿಎಸ್‌ ಮತಗಳು ಕಾಂಗ್ರೆಸ್‌ಗೆ ಹೋದ ಕಾರಣ ನಾನು ಸೋಲಬೇಕಾಯಿತು ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್‌ ತಮ್ಮ ಸೋಲಿನ ಬಗ್ಗೆ ವಿಶ್ಲೇಷಿಸಿದರು.

Karnataka assembly election Dr K  Sudhakar statement abot defeat  chikkaballapur constituency rav

ಚಿಕ್ಕಬಳ್ಳಾಪುರ (ಮೇ.15) : ನನ್ನ ಸೋಲು ಅಭಿವೃದ್ಧಿಗಾದ ಸೋಲು. ನನ್ನ ಸೋಲಿಗೆ ಕ್ಷೇತ್ರದಲ್ಲಿ ಕೊನೆ ಕ್ಷಣದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ನಡೆಸಿದ ರಾಜಕೀಯ ಷಡ್ಯಂತ್ರವೇ ಕಾರಣ. ಜೆಡಿಎಸ್‌ ಮತಗಳು ಕಾಂಗ್ರೆಸ್‌ಗೆ ಹೋದ ಕಾರಣ ನಾನು ಸೋಲಬೇಕಾಯಿತು ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್‌ ತಮ್ಮ ಸೋಲಿನ ಬಗ್ಗೆ ವಿಶ್ಲೇಷಿಸಿದರು.

ನಗರದ ತಮ್ಮ ನಿವಾಸದಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಗೆಲುವು ಶಾಶ್ವತವಲ್ಲ. ಸೋಲು ಕೂಡ ಅಂತಿಮವಲ್ಲ. ಕ್ಷೇತ್ರದಲ್ಲಿ ಅನಿರ್ವಾಯವಾಗಿ ಸೋಲು ಅನುಭವಿಸಿದ್ದೇನೆ. ಜೆಡಿಎಸ್‌ ತನ್ನ ಸಾಂಪ್ರದಾಯಿಕ ಮತಗಳ ಗಳಿಕೆಯಲ್ಲಿ ವಿಫಲವಾಗಿ ಕೊನೆ ಕ್ಷಣದಲ್ಲಿ ಜೆಡಿಎಸ್‌ ನಾಯಕರು ಕಾಂಗ್ರೆಸ್‌ಗೆ ಅಡ್ಡ ಮತದಾನ ಮಾಡಿಸಿದ್ದರಿಂದ ನಾನು ಸೋಲು ಬೇಕಾಯಿತು ಎಂದರು.

Chikkaballapur Constituency: ಅಭಿವೃದ್ಧಿಯ ಹರಿಕಾರ ಡಾ.ಸುಧಾಕರ್‌ ಸೋಲಿಗೆ ಕಾರಣವೇನು?

ಬಚ್ಚೇಗೌಡರಿಂದ ಆತ್ಮವಂಚನೆ

ಚುನಾವಣೆಯಲ್ಲಿ ವೈಯಕ್ತಿಕ ನಿರ್ಧಾರ ತೆಗೆದುಕೊಂಡು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡರು(KP Bachchegowda) ಆತ್ಮವಂಚನೆ ಮಾಡಿಕೊಂಡಿದ್ದಾರೆ. ಇದು ಕ್ಷಮಿಸಲಾರದ ಅಪರಾಧ, ಅವರಿಂದ ಈ ರೀತಿಯ ನಿರ್ಧಾರ ನಾನು ನಿರೀಕ್ಷೆ ಮಾಡಿರಲಿಲ್ಲ. ಬಚ್ಚೇಗೌಡರು ನನ್ನ ವಿರುದ್ದ 3 ಬಾರಿ ಸೋತಿದ್ದಕ್ಕೆ ಹುನ್ನಾರ ನಡೆಸಿ ನನ್ನ ಸೋಲಿಗೆ ಕಾಂಗ್ರೆಸ್‌ ಜೊತೆ ಕೈ ಜೋಡಿಸಿದರು. ಸದ್ಯ ನಾನು ಸೋಲಿನಿಂದ ಹೊರ ಬಂದಿಲ್ಲ. ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆಗೆ ನಿಲ್ಲುವ ಬಗ್ಗೆ ಯೋಚಿಸಿಲ್ಲ ಎಂದರು.

ಮಾಜಿ ಶಾಸಕರಾಗಿ, ಕೆ.ಬಿ.ಪಿಳ್ಳಪ್ಪನವರ ಮಗನಾಗಿ 19 ಸಾವಿರ ಮತ ಪಡೆಯಲು ಸಾಧ್ಯವೇ, ಬಚ್ಚೇಗೌಡರಿಂದ ಇಂತಹ ತೀರ್ಮಾನ ನಿರೀಕ್ಷೆ ಮಾಡಿರಲಿಲ್ಲ. ಆ ಕುಟುಂಬ ಉತ್ತಮ ರಾಜಕಾರಣ ಮಾಡಿತ್ತು, ಪಿಳ್ಳಪ್ಪನವರ ಆತ್ಮಕ್ಕೆ ನೋವು ತಂದ ತೀರ್ಮಾನ ಇದು. ಮುಂದಿನ ದಿನಗಳಲ್ಲಿ ಜೆಡಿಎಸ್‌ ಪಕ್ಷ ಅಸ್ತಿತ್ವದಲ್ಲಿಯೆ ಇರುವುದಿಲ್ಲ ಎಂದು ಸುಧಾಕರ್‌ ಭವಿಷ್ಯ ನುಡಿದರು.

ಸೋಲಿಗೆ ಜೆಡಿಎಸ್‌ ಕುತಂತ್ರ ಕಾರಣ

ಇದೇ ತರಹ ಜೆಡಿಎಸ್‌ ನ ಷಡ್ಯಂತ್ರಕ್ಕೆ ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ(CT Ravi)ಯೂ ಬಲಿಯಾದರು. ಮಂಡ್ಯ ಜಿಲ್ಲೆಯಲ್ಲಿಯೂ ಇದೇ ರೀತಿ ಜೆಡಿಎಸ್‌ ಮತಗಳು ಕಾಂಗ್ರೆಸ್‌ನತ್ತ ಹೋಗಿವೆ. ಇವರ ಕುತಂತ್ರಗಳಿಂದಲೇ ಇಂದು ಜೆಡಿಎಸ್‌ ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಂಡಿದೆ. ಇವರ ಕುತಂತ್ರ ಮತ್ತು ಹುನ್ನಾರವೇ ನನಗೂ ಇಲ್ಲಿ ಮುಳುವಾಗಿದೆ. ಜೆಡಿಎಸ್‌ ಕುತಂತ್ರದ ಬಗ್ಗೆ ನಮಗೆ ಯಾವುದೇ ಸುಳಿವು ಇರಲಿಲ್ಲ. ಇದ್ದರೂ ಕೆ.ಪಿ.ಬಚ್ಚೇಗೌಡರು ಈರೀತಿಯ ಕೃತ್ಯಕ್ಕೆ ಇಳಿಯುತ್ತಾರೆ ಎಂದು ಭಾವಿಸಿರಲಿಲ್ಲ. ಇದರಿಂದಾಗಿಯೇ ನಾನು ಸೋಲುವಂತಾಗಿದೆ ಎಂದರು.

ಅಭಿವೃದ್ಧಿ ವಿಷಯದಲ್ಲಿ ರಾಜಿ ಇಲ್ಲ

ರಾಜ್ಯದಲ್ಲಿ ಮುಂದೆ ಬಿಜೆಪಿ ಮತ್ತು ಕಾಂಗ್ರೆಸ್‌ ಅಸ್ತಿತ್ವದಲ್ಲಿ ಉಳಿಯಲಿವೆ. ಇವೆರಡೇ ಪಕ್ಷಗಳ ಅಭ್ಯರ್ಥಿಗಳ ನಡುವೆ ಚುನಾವಣಾ ಪೈಪೋಟಿ ನಡೆಯಲಿದೆ. ಅಭಿವೃದ್ಧಿಯ ವಿಚಾರದಲ್ಲಿ ನಾನು ಜಿಲ್ಲೆಯಲ್ಲಿನ ಎಲ್ಲಾ ಶಾಸಕರಿಗೂ ಸಹಕಾರ ನೀಡುತ್ತೇನೆ. ನಾನು ಈಗ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಅವರು ಮುಂದುವರೆಸಿಕೊಂಡು ಹೋಗಲಿ. ಇನ್ನಷ್ಟುಹೆಚ್ಚಿನ ಸೇವಾ ಕಾರ್ಯಗಳ ಮೂಲಕ ಜಿಲ್ಲೆಯ ಜನರ ಕಷ್ಟಗಳಿಗೆ ನೆರವಾಗಲಿ. ಅಧಿಕಾರವಿಲ್ಲದಿದ್ದರೂ ಅಭಿವೃದ್ಧಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದರು.

ನನ್ನ ಸೋಲಿಗೆ ಕಾರಣವೇನು ಎಂಬುದನ್ನು ಜನಗಳಿಂದ ತಿಳಿದುಕೊಳ್ಳುವ ಇರಾದೆ ನನಗೆ ಇದೆ. ನನಗೆ ಗೊತ್ತಿಲ್ಲದೇ ಎಲ್ಲಿ ನನ್ನಿಂದ ತಪ್ಪಾಗಿದೆ ಎಂಬ ಬಗ್ಗೆ ನನಗೆ ಇರುವ ಅನುಮಾನಗಳನ್ನು ಜನರಿಂದಲೇ ಪರಿಹರಿಸಿಕೊಳ್ಳುವೆ. ಈ ನಿಟ್ಟಿನಲ್ಲಿ ಮುಂದಿನ ತಿಂಗಳು ಪ್ರತಿ ಹಳ್ಳಿ ಹಳ್ಳಿಗೂ ಆತ್ಮಾವಲೋಕ ಯಾತ್ರೆ ಮೂಲಕ ಜನ ಬಳಿಗೆ ಹೋಗುವೆ. ನನ್ನ ಲೋಪಗಳ ಬಗ್ಗೆ ಕೇಳಿ ತಿಳಿದುಕೊಳ್ಳುವೆ. ನಂತರ ನಾನು ಮಾಡಿರುವ ತಪ್ಪುಗಳನ್ನು ತಿದ್ದಿಕೊಂಡು ಜನರ ನಡುವೆ ವಿಶ್ವಾಸ ಗಳಿಸಿಕೊಳ್ಳುವೆ. ಮುಂದಿನ ಎಲ್ಲಾ ಚುನಾವಣೆಗಳಿಗೆ ಇದು ಪಾಠವಾಗಲಿದೆ ಎಂದರು.

ಕಾರ್ಯಕರ್ತರ ಮೇಲೆ ದೌರ್ಜನ್ಯ

ಚುನಾವಣಾ ಫಲಿತಾಂಶ ಬಂದು ಇನ್ನೂ 3 ದಿನ ಕಳೆದಿಲ್ಲ. ಈಗಾಗಲೇ ನಮ್ಮ ಕಾರ್ಯಕರ್ತರ ಮೇಲೆ 2-3 ಕಡೆ ದೌರ್ಜನ್ಯ ನಡೆದಿದೆ. ಈ ರೀತಿಯ ದ್ವೇಶದ ರಾಜಕಾರಣ ಸಲ್ಲದು. ನಮ್ಮ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆದಲ್ಲಿ ನಾನು ಸುಮ್ಮನಿರುವುದಿಲ್ಲ. ಉಗ್ರ ಪ್ರತಿಭಟನೆ ಮಾಡುವೆ ಎಂದು ಎಚ್ಚರಿಕೆ ನೀಡಿದರು.

ಕರ ಹಿಡಿದ ಪ್ರದೀಪನ ಮುಂದೆ ಸೋತ ಡಾ. ಸುಧಾಕರ್!

ಒಕ್ಕಲಿಗರಿಗೆ ಸಿಎಂ ಸ್ಥಾನ ನೀಡಲಿ

ಎಸ್‌.ಎಂ. ಕೃಷ್ಣ ಅವರ ನಂತರ ರಾಜ್ಯದಲ್ಲಿ ಒಕ್ಕಲಿಗರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿಲ್ಲ, ಹಾಗಾಗಿ ಒಕ್ಕಲಿಗರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದರೆ ಉತ್ತಮ ಎಂದು ವೈಯಕ್ತಿಕವಾಗಿ ಹೇಳಿದ್ದೇನೆ. ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಕಾರಣಕ್ಕೆ ಹಳೇ ಮೈಸೂರು ಪ್ರದೇಶದ ಜೆಡಿಎಸ್‌ ಮತಗಳು ಕಾಂಗ್ರೆಸ್‌ಗೆ ವರ್ಗಾವಣೆಯಾಗಿವೆ. ಅಂಬೇಡ್ಕರ್‌ ಅವರ ಫೊಟೋ ಹಾಕಿಕೊಂಡ ಮಾತ್ರಕ್ಕೆ ಸಂವಿಧಾನ ಉಳಿಯಲ್ಲ, ಅವರ ಆಶಯ ಈಡೇರಿದಾಗ ಮಾತ್ರ ಸಂವಿಧಾನ ಉಳಿಯಲಿದೆ. ಜನರು ನಾಟಕಕ್ಕೆ ಬಲಿಯಾಗಿದ್ದಾರೆ, ಮುಂದಿನ ದಿನಗಳಲ್ಲಿ ಅವರಿಗೆ ಅರಿವಾಗಲಿದೆ, ತುಂಬಾ ದಿನ ನಾಟಕ ಮಾಡಲು ಸಾಧ್ಯವಿಲ್ಲ, ಹೃದಯದ ತುಡಿತ ಇದ್ದಾಗ ಮಾತ್ರ ಶಾಶ್ವತವಾಗಿ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಹೇಳಿದರು.

Latest Videos
Follow Us:
Download App:
  • android
  • ios