ಆಕ್ರೋಶಗೊಂಡ ಕಾರ್ಯಕರ್ತರಿಗೆ ರಾಜೀನಾಮೆ ಹಿಂದಿನ ಅಸಲಿ ಸತ್ಯ ವಿವರಿಸಿದ ಈಶ್ವರಪ್ಪ!
ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ರಾಜೀನಾಮೆ ಘೋಷಣೆ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ರಾಜೀನಾಮೆ ಬೆನ್ನಲ್ಲೇ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಇತ್ತ ಸುದ್ದಿಗೋಷ್ಠಿ ಬಳಿಕ ಕಾರ್ಯಕರ್ತರ ಜೊತೆ ಮಾತನಾಡಿದ ಈಶ್ವರಪ್ಪ, ರಾಜೀನಾಮೆ ನಿರ್ಧಾರ ಹಿಂದಿನ ಅಸಲಿ ಸತ್ಯವಿವರಿಸಿದ್ದಾರೆ.
ಶಿವಮೊಗ್ಗ(ಏ.11): ಬಿಜೆಪಿ ಹೈಕಮಾಂಡ್ ಸೂಚನೆಯಂತೆ ಹಲವು ಹಿರಿಯ ನಾಯಕರಿಗೆ ಈ ಬಾರಿ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಇದು ಭಾರಿ ಸಂಚಲನ ಸೃಷ್ಟಿಸಿತು. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಈಶ್ವರಪ್ಪ ತಮ್ಮ ನಿರ್ಧಾರ ಬಹಿರಂಗ ಪಡಿಸಿದ್ದರು. ಆದರೆ ಈಶ್ವರಪ್ಪ ರಾಜೀನಾಮೆಯಿಂದ ಬೆಂಬಲಿಗರು ಆಕ್ರೋಶಗೊಂಡಿದ್ದಾರೆ. ಟೈಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಈಶ್ವರಪ್ಪ ಮನೆ ಮುಂದೆ ಜಮಾಯಿಸಿ ಘೋಷಣೆ ಕೂಗಿದ್ದಾರೆ. ಇತ್ತ ಸುದ್ದಿಗೋಷ್ಠಿ ಬಳಿಕ ಬೆಂಬಲಿಗರ ಜೊತೆ ಮಾತನಾಡಿದ ಈಶ್ವರಪ್ಪ ಆಕ್ರೋಶಿತ ಕಾರ್ಯಕರ್ತರನ್ನು ಸಮಾಧಾನ ಪಡಿಸಿದ್ದಾರೆ. ಇದೇ ವೇಳೆ ರಾಜೀನಾಮೆ ನಿರ್ಧಾರದ ಹಿಂದಿನ ಅಸಲಿ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ.
ಚುನಾವಣಾಗೆ ಸ್ಪರ್ಧಿಸುವುದಿಲ್ಲ ಅನ್ನೋ ನಿರ್ಧಾರ ದಿಢೀರ್ ತೆಗೆದುಕೊಂಡಿಲ್ಲ. 6 ತಿಂಗಳ ಹಿಂದೆ ನಿರ್ದಾರ ತೆಗೆದುಕೊಂಡಿದ್ದೇನೆ. ಚುನಾವಣಾ ಸಮಿತಿಯ ಮುಂದೆಯೂ ಹೇಳಿದ್ದ. ಆದರೆ ಸಮಿತಿ ಸ್ಪರ್ಧಿಸುವಂತೆ ಸೂಚಿಸಿತ್ತು. ಆದರೆ ನನಗೆ ಈಗ 75 ವರ್ಷ. ಚುನಾವಣೆಗೆ ನಿಂತರೆ 80 ವರ್ಷದವರೆಗೂ ಕೆಲಸ ಮಾಡಬೇಕು. ಇತ್ತ ನನ್ನ ಪತ್ನಿಯ ಆರೋಗ್ಯ ಕುರಿತು ಗಮನಹರಿಸಬೇಕು. ನನ್ನ ಪತ್ನಿಗೆ ಆರೋಗ್ಯ ಸರಿಯಿಲ್ಲದ ಹಿನ್ನೆಲೆ ಆಸ್ಪತ್ರೆಯಿಂದ ಮರಳಿದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದೇನೆ ಎಂದು ಈಶ್ವರಪ್ಪ ಬೆಂಬಲಿಗರು, ಕಾರ್ಯಕರ್ತರಿಗೆ ವಿವರಿಸಿದ್ದಾರೆ.
ರಾತ್ರಿಯೊಳಗೆ 170ಕ್ಕೂ ಅಧಿಕ ಕ್ಷೇತ್ರಗಳ ಪಟ್ಟಿ ಬಿಡುಗಡೆ: ಸಿಎಂ ಬೊಮ್ಮಾಯಿ ಮಾಹಿತಿ
ಬೂತ್ ಮಟ್ಟದಿಂದ ಉಪಮುಖ್ಯಮಂತ್ರಿ ಸ್ಥಾನದವರೆಗೂ ನನ್ನನ್ನು ಬೆಂಬಲಿಸಿದ್ದೀರಿ. ನನ್ನ ಯಾವುದೇ ಸ್ಥಾನಕ್ಕೆ ಪರಿಗಣಿಸಬೇಡಿ ಎಂದು ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದೇನೆ. ನೀವು ಬೇಸರಗೊಂಡಿರುವುದು ನೋಡಿ ನನಗೂ ಬೇಸರವಾಗಿದೆ. ಸುಮಾರು 35 ಶಾಸಕರನ್ನು ಈ ಬಾರಿ ಪಟ್ಟಿಯಲ್ಲಿ ಕೈಬಿಡುತ್ತಿದ್ದಾರೆ ಅನ್ನೋ ಮಾಹಿತಿ ಇದೆ. ನನ್ನನ್ನು ತೆಗೆದು ಹಾಕಿದರೆ ಚೆನ್ನಾಗಿತ್ತು ಅನ್ನೋ ಅಭಿಪ್ರಾಯ ರಾಷ್ಟ್ರೀಯ ಅಧ್ಯಕ್ಷರು ಹೇಳುವ ಮೊದಲು ರಾಜೀನಾಮೆ ನೀಡಿ ಮಾರ್ಯದೆ ಉಳಿಸಿಕೊಂಡಿದ್ದೇನೆ. ಮೂಲೆಯಲ್ಲಿ ಬಿದ್ದಂತ ನನ್ನನ್ನು ಬೆಳಕಿಗೆ ತಂದಿದ್ದು ಪಕ್ಷ. ಪಕ್ಷ ತೆಗೆದುಕೊಂಡ ತೀರ್ಮಾನಕ್ಕೆ ವಿರುದ್ಧವಾಗಿ ನಡೆದುಕೊಂಡರೆ ತಂದೆ-ತಾಯಿಗೆ ದ್ರೋಹ ಬಗೆದಂತೆ. ಪಕ್ಷದ ಮಾತು ತಾಯಿಗೆ ಸಮಾನ. ಅದನ್ನು ಮೀರುತ್ತೀರಾ ಎಂದು ಈಶ್ವರಪ್ಪ ಕಾರ್ಯಕರ್ತರನ್ನು ಪ್ರಶ್ನಿಸಿದ್ದಾರೆ.
ಚುನಾವಣೆಯಲ್ಲಿ ಸೋತಾಗ ಪಕ್ಷ ನನ್ನನ್ನು ರೇಷ್ಣೆ ಮಂಡಳಿ ಅಧ್ಯಕ್ಷನನ್ನಾಗಿ ಮಾಡಿತು. ಕನಕಪುರ ಉಪಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ಸ್ಪರ್ಧೆ ಮಾಡುವಂತೆ ಮಾಡಿತ್ತು. ರಾಜ್ಯದಲ್ಲಿ ಬಿಜೆಪಿ ಎರಡು ಭಾಗಗಳಾಗಿ ಒಡೆದಾಗ, ಮಂತ್ರಿ ಸ್ಥಾನ ಬಿಟ್ಟು ಪಕ್ಷದ ಜವಾಬ್ದಾರಿ ವಹಿಸಿಕೊಂಡೆ. ಮತ್ತೊಮ್ಮೆ ನಾನು ಸೋತಾಗ ಪಕ್ಷ ನನ್ನನ್ನು ಎಂಎಲ್‌ಸಿ ಮಾಡಿ ವಿಪಕ್ಷ ನಾಯಕನನ್ನಾಗಿ ಮಾಡಿತು. ಆತುರ ನಿರ್ಧಾರದಲ್ಲಿ ನಾನು ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಬಹುದು. ಯಾವ ತಾಯಿ ನಮ್ಮನ್ನುಸಾಕಿ ಸಲಹಿದ್ದಾಳೆ. ಅವಳಿಗೆ ದ್ರೋಹ ಬಗೆಯಬಾರದು ಎಂದು ಈಶ್ವರಪ್ಪ ಹೇಳಿದ್ದಾರೆ.
ಟಿಕೆಟ್ ಘೋಷಣೆ ಮುನ್ನ ವಿಕೆಟ್ ಪತನ, ಆಲೌಟ್ ಲಕ್ಷಣ: ಈಶ್ವರಪ್ಪ ರಾಜೀನಾಮೆಗೆ ಬಿಜೆಪಿ ಕುಟುಕಿದ ಡಿಕೆಶಿ!
ಎಲ್‌ಕೆ ಅಡ್ವಾಣಿ , ಮುರುಳಿ ಮನೋಹರ್ ಜೋಶಿ ಅವರಿಗಿಂತ ನಾನು ದೊಡ್ಡವನೇ? ನನಗೂ ನೋವಾಗುತ್ತದೆ. ಆದರೆ ಪಕ್ಷ ತೆಗೆದುಕೊಂಡ ತೀರ್ಮಾನ. ಯಾವ ಸ್ಥಾನಕ್ಕೆ ಪರಿಗಣನೆಗೆ ತೆಗೆದುಕೊಳ್ಳಬೇಡಿ ಎಂದು ಕೋರಿದ್ದಾರೆ. ರಾಜೀನಾಮೆ ನೀಡಿಲ್ಲ ಎಂದಿದ್ದಾರೆ. ಇದೇ ವೇಳೆ ಜಗದೀಶ್ ಶೆಟ್ಟರ್ ಪಕ್ಷೇತರರಾಗಿ ನಿಲ್ಲುವ ಹೇಳಿಕೆ ನೀಡುವುದು ಸರಿಯಲ್ಲ. ಶೆಟ್ಟರ್ ಅವರನ್ನು ಪಕ್ಷ ಮುಖ್ಯಮಂತ್ರಿಯಾಗಿ ಮಾಡಿದೆ. ಶೆಟ್ಟರ್ ಪಕ್ಷದ ಜೊತೆ ನಿಲ್ಲಬೇಕು ಎಂದು ಸಲಹೆ ನೀಡಿದ್ದಾರೆ. ಕಾರ್ಯಕರ್ತರು ಎಷ್ಟೇ ಒತ್ತಡ ಹೇರಿದರೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.