ಟಿಕೆಟ್ ಘೋಷಣೆ ಮುನ್ನ ವಿಕೆಟ್ ಪತನ, ಆಲೌಟ್ ಲಕ್ಷಣ: ಈಶ್ವರಪ್ಪ ರಾಜೀನಾಮೆಗೆ ಬಿಜೆಪಿ ಕುಟುಕಿದ ಡಿಕೆಶಿ!
ಚುನಾವಣೆಗೂ ಮೊದಲು ಕೆಎಸ್ ಈಶ್ವರಪ್ಪ ರಾಜಕೀಯ ನಿವೃತ್ತಿ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಇದನ್ನೇ ಕಾಂಗ್ರೆಸ್ ಅಸ್ತ್ರವಾಗಿ ಬಳಸಿಕೊಂಡಿದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇನ್ನೂ ಘೋಷಣೆಯಾಗಿಲ್ಲ. ಅದಕ್ಕೂ ಮುನ್ನವೇ ವಿಕೆಟ್ ಪತನಗೊಂಡಿದೆ. ರನ್ ಬಾರಿಸುವ ಮೊದಲೇ ಬಿಜೆಪಿ ಆಲೌಟ್ ಆಗಲಿದೆ ಎಂದು ಕಾಂಗ್ರೆಸ್ ಕುಟುಕಿದೆ.
ಬೆಂಗಳೂರು(ಏ.11): ಕರ್ನಾಟಕ ವಿಧಾನಸಭಾ ಚುನಾವಣೆಗೆ ತಯಾರಿ ಜೋರಾಗಿದೆ. ಕಾಂಗ್ರೆಸ್ ಈಗಾಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಇನ್ನೂ ಘೋಷಣೆಯಾಗಿಲ್ಲ. ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಯುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಈ ಬೆಳವಣಿಗೆ ಭಾರಿ ಸಂಚಲನ ಸೃಷ್ಟಿಸಿದೆ. ಸ್ವಯಂ ನಿವೃತ್ತಿ ತೆಗೆದುಕೊಂಡಿರುವುದಾಗಿ ಈಶ್ವರಪ್ಪ ಘೋಷಿಸಿದ್ದರೂ, ಟಿಕೆಟ್ ಕೈತಪ್ಪುವ ಕಾರಣದಿಂದ ರಾಜೀನಾಮೆ ನೀಡಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ. ಇದರ ನಡುವೆ ಕಾಂಗ್ರೆಸ್, ಬಿಜೆಪಿ ಪಕ್ಷವನ್ನು ಕುಟುಕಿದೆ. ಟಿಕೆಟ್ ಘೋಷಣೆ ಮುನ್ನವೇ ವಿಕೆಟ್ ಪತನ ಆರಂಭಗೊಂಡಿದೆ. ಬಿಜೆಪಿ ರನ್ ಬಾರಿಸದೇ ಆಲೌಟ್ ಆಗುವ ಎಲ್ಲಾ ಲಕ್ಷಣ ಕಾಣುತ್ತಿದೆ ಎಂದಿದೆ.
ಕೆಎಸ್ ಈಶ್ವರಪ್ಪ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ ಟ್ವೀಟ್ ಇದೀಗ ವೈರಲ್ ಆಗಿದೆ. ಒಂದೆಡೆ ಐಪಿಎಲ್ ಜ್ವರ ಹೆಚ್ಚಾಗುತ್ತಿದ್ದರೆ, ಇತ್ತ ಚುನಾವಣಾ ಕಾವು ಜೋರಾಗಿದೆ. ಇದರ ನಡುವೆ ಈಶ್ವರಪ್ಪ ರಾಜೀನಾಮೆ ಘೋಷಣೆಯನ್ನು ಕಾಂಗ್ರೆಸ್ ಅಸ್ತ್ರವಾಗಿ ಬಳಸಿಕೊಂಡಿದೆ. ಟಿಕೆಟ್ ಘೋಷಣೆ ಮುನ್ನವೇ ವಿಕೆಟ್ ಪತನ ಶುರುವಾಗಿದೆ.ರನ್ ಬಾರಿಸದೆಯೇ ಆಲ್ ಔಟ್ ಆಗುವ ಎಲ್ಲಾ ಲಕ್ಷಣಗಳೂ ಬಿಜೆಪಿಯಲ್ಲಿ ಕಾಣುತ್ತಿವೆ. ಬಿಜೆಪಿ ಈಗ ಸುಧಾರಿಸಿಕೊಂಡು, ಸಾವರಿಸಿಕೊಂಡು 5 ವರ್ಷ ಕಳೆದ ಮೇಲೆ ಚುನಾವಣೆ ಬನ್ನಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಕೆ.ಎಸ್. ಈಶ್ವರಪ್ಪ: ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೂ ಟಿಕೆಟ್ ಮಿಸ್
ಇತ್ತ ಡಿಕೆ ಶಿವಕುಮಾರ್ ಕೂಡ ಈಶ್ವರಪ್ಪ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಈಶ್ವರಪ್ಪ ಈಗಾಗಲೇ ಲವ್ ಲೆಟರ್ ಕಳುಹಿಸಿದ್ದಾರೆ. ಈಶ್ವರಪ್ಪ ಮಾತ್ರವಲ್ಲ, ಇನ್ನೂ ಬಹಳ ಬಿಜೆಪಿ ನಾಯರು ಕೊಡಲಿದ್ದಾರೆ. ಬಿಜೆಪಿ ರಾಜೀನಾಮೆ ಪರ್ವ ಆರಂಭಗೊಂಡಿದೆ. ಇದೇ ವೇಳೆ ಕಾಂಗ್ರೆಸ್ ಅಂತಿಮ ಪಟ್ಟಿ ಶೀಘ್ರವೇ ಘೋಷಣೆ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದೇ ವೇಳೆ ಈಶ್ವರಪ್ಪನವರಿಗೆ ಒಳ್ಳೆಯದಾಗಲಿ ಎಂದು ಡಿಕೆಶಿ ಹೇಳಿದ್ದಾರೆ.
ಲಕ್ಷಣ ಸವದಿ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ ಅನ್ನೋ ವರದಿ ಸುಳ್ಳು. ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಬಾಕ್ಸಿಂಗ್ ಕುಸ್ತಿ ಗಲಾಟೆ ಜೋರಾಗಿ ನಡೆಯುತ್ತಿದೆ. ನಾವು ಈಗಾಗಲೇ ಶೇಕಡ 75ರಷ್ಟು ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡಿದ್ದೇವೆ. ಉಳಿದ ಅಭ್ಯರ್ಥಿಗಳ ಪಟ್ಟಿ ಶುಭ ಮುಹೂರ್ತದಲ್ಲಿ ಬಿಡುಗಡೆ ಮಾಡುತ್ತೇವೆ. ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಡಿಕೆ ಶಿವಕುಮಾರ್ ಮಾಧ್ಯಮಕ್ಕೆ ಪ್ರತಿಕ್ರೆಯ ನೀಡಿದ್ದಾರೆ. ನಮ್ಮ ಮುಂದೆ ಯಾವ ಬಿಜೆಪಿ ನಾಯಕರ ಪ್ರಸ್ತಾಪವು ಇಲ್ಲ. ಒಂದು ವೇಳೆ ಬಿಜೆಪಿಗೆ ರಾಜೀನಾಮೆ ಕೊಟ್ಟು ಬಂದರೆ ನಾವು ಸೇರಿಸಿಕೊಳ್ಳುತ್ತೇವೆ ಎಂದಿದ್ದಾರೆ. ಆದರೆ ಖಾಲಿ ಇದ್ದರೆ ಕೂರಿಸಬಹುದು. ನಮ್ಮಲ್ಲೇ ಕುರ್ಚಿ ಭರ್ತಿಯಾಗಿದ್ದಾರೆ ಹೇಗೆ? ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಇತ್ತ ಹಾಸನದಿಂದ ಭವಾನಿ ರೇವಣ್ಣ ಸ್ಪರ್ಧೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಇದು ಜೆಡಿಎಸ್ ಪಕ್ಷದ ವಿಚಾರ. ಅವರ ಆಂತರಿಕ ಸಮಸ್ಯೆ ತಿಳಿದಿಲ್ಲ. ಕಾಂಗ್ರೆಸ್‌ಗೆ ಅವರು ಎದುರಾಳಿ ಅಷ್ಟೇ ಎಂದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ದಿನಾಂಕವನ್ನು ಇವತ್ತು ಅಜ್ಜಯ್ಯನ ಭೇಟಿ ಮಾಡಿದ ಬಳಿಕ ನಿರ್ಧಾರ ಮಾಡುತ್ತೇವೆ ಎಂದರು.
ಹೈಕಮಾಂಡ್ ನಿರ್ಧಾರ ಒಪ್ಪಲ್ಲ: ಟಿಕೆಟ್‌ಗಾಗಿ ಜಗದೀಶ್ ಶೆಟ್ಟರ್ ಪಟ್ಟು
ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ ಬಳಿಕ ಬಂಡಾಯದ ಬಿಸಿ ಹೆಚ್ಚಾಗಿದೆ. ಹಲವು ಕ್ಷೇತ್ರಗಳಲ್ಲಿನ ನಾಯಕರು ಪಕ್ಷ ತೊರೆದಿದ್ದಾರೆ. ಹಲವರು ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾಗಿದ್ದರೆ, ಮತ್ತೆ ಕೆಲವರು ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಎಂಎಲ್‌ಸಿ ಆಗಿದ್ದ ರಘು ಆಚಾರ್ ಜೆಡಿಎಸ್ ಸೇರಿಕೊಂಡಿದ್ದಾರೆ. ಯಲ್ಲಾಪುರ ಮುಂಡಗೋಡ ತಾಲೂಕಿನ ಹುನಗುಂದ ಗ್ರಾಪಂ ವ್ಯಾಪ್ತಿಯ ಅಗಡಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.