Karnataka election results 2023: ಬಿಜೆಪಿಗೆ ಮುಖಭಂಗದ ಜತೆ ತೀವ್ರ ಮುಜುಗರ !

Kವಿಧಾನಸಭಾ ಚುನಾವಣೆಯ ಫಲಿತಾಂಶ ಆಡಳಿತಾರೂಢ ಬಿಜೆಪಿಗೆ ಮುಖಭಂಗ ಉಂಟು ಮಾಡಿದ್ದಷ್ಟೇ ಅಲ್ಲದೆ ತೀವ್ರ ಮುಜುಗರವನ್ನೂ ಅನುಭವಿಸುವಂತೆ ಮಾಡಿದೆ.

Karnataka election results The BJP party has lost miserably and is embarrassed rav

ಬೆಂಗಳೂರು (ಮೇ.14) : ವಿಧಾನಸಭಾ ಚುನಾವಣೆಯ ಫಲಿತಾಂಶ ಆಡಳಿತಾರೂಢ ಬಿಜೆಪಿಗೆ ಮುಖಭಂಗ ಉಂಟು ಮಾಡಿದ್ದಷ್ಟೇ ಅಲ್ಲದೆ ತೀವ್ರ ಮುಜುಗರವನ್ನೂ ಅನುಭವಿಸುವಂತೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತಿತರರು ಸೇರಿದಂತೆ ರಾಷ್ಟ್ರ ಹಾಗೂ ರಾಜ್ಯದ ನೂರಾರು ಮಂದಿ ನಾಯಕರು ಅಬ್ಬರದ ಪ್ರಚಾರ ನಡೆಸಿದರೂ ಅಂತಿಮವಾಗಿ ಗಳಿಸಲು ಸಾಧ್ಯವಾಗಿದ್ದು ಕೇವಲ 65 ಸ್ಥಾನ ಮಾತ್ರ.

ಬಿಜೆಪಿಗೆ ಭ್ರಷ್ಟಪಕ್ಷದ ಪಟ್ಟಕಟ್ಟಿಗೆದ್ದ ಕಾಂಗ್ರೆಸ್‌ !

ಎಲ್ಲ ನಾಯಕರೂ ಈ ಬಾರಿ ಸರಳ ಬಹುಮತಕ್ಕೆ ಬೇಕಾದ ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ ಎಂದು ಮೇಜು ಕುಟ್ಟಿಹೇಳುತ್ತಿದ್ದರು. ಅಮಿತ್‌ ಶಾ ಅವರಂತೂ ಬಿಜೆಪಿ ಈ ಸಲ 120ರಿಂದ 130 ಸ್ಥಾನ ಬರಲಿದೆ. ಬರೆದಿಟ್ಟುಕೊಳ್ಳಿ ಎಂದೇ ಹೋದಲ್ಲಿ ಬಂದಲ್ಲಿ ಆತ್ಮ ವಿಶ್ವಾಸದಿಂದ ಮತ್ತು ಏರಿದ ಧ್ವನಿಯಲ್ಲಿ ಪ್ರತಿಪಾದಿಸುತ್ತಿದ್ದರು. ನ ಭೂತೋ, ನ ಭವಿಷ್ಯತಿ ಎಂಬಂತೆ ಭರ್ಜರಿ ಪ್ರಚಾರ ನಡೆಸಿದರು. ಭಾಷಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಗಳನ್ನು ಅಂಕಿ ಅಂಶಗಳ ಸಮೇತ ಮುಂದಿಡುವ ಪ್ರಯತ್ನ ಮಾಡಿದರು. ಆದರೆ, ಇದ್ಯಾವುದೂ ಮತದಾರರ ಮೇಲೆ ಪರಿಣಾಮ ಬೀರಲಿಲ್ಲ.

ಕನಿಷ್ಠ 100ರ ಸಮೀಪವಾದರೂ ಬಂದು ನಿಂತಿದ್ದರೆ ಇಷ್ಟೊಂದು ಅಬ್ಬರದ ಪ್ರಚಾರ ನಡೆಸಿದ್ದು ಸಾರ್ಥಕವಾಗುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ಏಳು ದಿನಗಳ ಕಾಲ 19 ಜಿಲ್ಲೆಗಳಲ್ಲಿ ಸಂಚರಿಸಿ ಸಮಾವೇಶಗಳು ಹಾಗೂ ದಾಖಲೆ ಎನ್ನುವಂಥ ಆರು ರೋಡ್‌ ಶೋಗಳನ್ನು ನಡೆಸಿದರೂ ಹೆಚ್ಚು ಸ್ಥಾನ ಗಳಿಸಲು ಸಾಧ್ಯವಾಗದೇ ಇರುವುದು ಬಿಜೆಪಿ ಪಾಳೆಯದಲ್ಲಿ ನೀರಸ ಮೌನಕ್ಕೆ ಕಾರಣವಾಗಿದೆ.

ಬಿಜೆಪಿಯ ಈ ಸೋಲಿಗೆ ಹಲವು ಕಾರಣಗಳನ್ನು ವಿಶ್ಲೇಷಿಸಲಾಗುತ್ತಿದೆ.

1.ಎರಡು ವರ್ಷಗಳ ಹಿಂದೆ ಸಕಾರಣವಿಲ್ಲದೆ ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದ್ದು. ಯಡಿಯೂರಪ್ಪ ಅವರ ಬದಲಾವಣೆಯನ್ನು ಸಮರ್ಥಿಸಿಕೊಳ್ಳುವ ಸ್ಥಿತಿಯಲ್ಲೂ ಪಕ್ಷದ ಮುಖಂಡರಾಗಲಿ ಅಥವಾ ಕಾರ್ಯಕರ್ತರಾಗಲಿ ಇರಲಿಲ್ಲ. ಇದು ಸಹಜವಾಗಿಯೇ ಪಕ್ಷದ ಹಿಂದೆ ಗಟ್ಟಿಯಾಗಿ ನಿಂತಿದ್ದ ಲಿಂಗಾಯತ ಸಮುದಾಯಕ್ಕೆ ಕೆಟ್ಟಸಂದೇಶ ರವಾನಿಸಿತು.

2.ಹಲಾಲ್‌ ಕಟ್‌, ಹಿಜಾಬ್‌ ಮೊದಲಾದ ಧಾರ್ಮಿಕ ಸೂಕ್ಷ್ಮ ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಟ ಆರಂಭಿಸಿದ ಹಿಂದೂ ಪರ ಸಂಘಟನೆಗಳ ಬೆಂಬಲಕ್ಕೆ ಬಿಜೆಪಿ ನಿಂತಿದ್ದು ಜನರಿಗೆ ಹಿಡಿಸಿದಂತೆ ಕಾಣಲಿಲ್ಲ.

3.ಕನ್ನಡ ನಾಡು ನುಡಿಯ ಅಸ್ಮಿತೆಗೆ ಧಕ್ಕೆ ತರಬಹುದು ಎಂಬ ಭೀತಿ ಹುಟ್ಟಿಸಿದ ಹಿಂದಿ ಹೇರಿಕೆ, ಗುಜರಾತಿನ ಅಮೂಲ್‌ ಕಂಪನಿಯ ಜತೆ ನಂದಿನಿ ವಿಲೀನಗೊಳಿಸಬಹುದು ಎಂಬ ವದಂತಿ ಮತ್ತಿತರ ಬೆಳವಣಿಗೆಗಳನ್ನು ನಿಭಾಯಿಸುವಲ್ಲಿ ಬಿಜೆಪಿ ನಾಯಕರು ವಿಫಲರಾದರು.

4.ಲಿಂಗಾಯತ ಮತ್ತು ಒಕ್ಕಲಿಗರಿಗೆ ಮೀಸಲಾತಿ ಏರಿಕೆ, ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಗಳಿಗೆ ಮೀಸಲಾತಿ ಪ್ರಮಾಣ ಏರಿಕೆ ಮಾಡಿದರೂ ಈ ವಿಷಯದಲ್ಲಿ ಕೊನೆಯ ಕ್ಷಣದವರೆಗೆ ಸುಮ್ಮನಿದ್ದು ಚುನಾವಣೆ ಘೋಷಣೆ ವೇಳೆ ಮೀಸಲಾತಿ ಪ್ರಕಟಿಸಿದ್ದು ಆಯಾ ಸಮುದಾಯಗಳ ವಿಶ್ವಾಸ ಗಳಿಸುವಲ್ಲಿ ಸೋಲುಂಟಾಯಿತು. ಜತೆಗೆ ಒಳಮೀಸಲಾತಿ ನೀಡಿದ್ದು, ಅದರಿಂದ ಇತರ ಕೆಲವು ಜಾತಿಗಳ ಮೀಸಲಾತಿ ಕಡಿತವಾಗುವುದು ಎಂಬ ವದಂತಿ ಹಬ್ಬಿದ್ದು ಪಕ್ಷಕ್ಕೂ ಒಳಏಟು ಬಿತ್ತು.

5.ಟಿಕೆಟ್‌ ಹಂಚಿಕೆಯಲ್ಲಿ ಹೊಸ ಪ್ರಯೋಗ ನಡೆಸುವ ಹೆಸರಿನಲ್ಲಿ ಗೆಲ್ಲಬಲ್ಲ ಸಾಮರ್ಥ್ಯವಿದ್ದವರಿಗೂ ಟಿಕೆಟ್‌ ನಿರಾಕರಿಸಿದ್ದು ಹೆಚ್ಚು ಗೊಂದಲಕ್ಕೆ ಕಾರಣವಾಯಿತು. ಅದರಲ್ಲೂ ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿ ಅವರಿಗೆ ಟಿಕೆಟ್‌ ನಿರಾಕರಿಸುವಾಗ ನಡೆಸಿಕೊಂಡ ರೀತಿಗೆ ಲಿಂಗಾಯತ ಸಮುದಾಯದಲ್ಲಿ ಅಸಮಾಧಾನ ಹೊಗೆಯಾಡಿತು.

6.ಹಿಂದೆ ಪ್ರವಾಹದಂತ ಅನೇಕ ಸಂಕಷ್ಟದ ಸಂದರ್ಭಗಳಲ್ಲಿ ರಾಜ್ಯಕ್ಕೆ ಭೇಟಿ ನೀಡದ ಪ್ರಧಾನಿ ಮೋದಿ ಅವರು ಚುನಾವಣಾ ಪ್ರಚಾರಕ್ಕಾಗಿ ಏಳು ದಿನಗಳ ಕಾಲ ಮತ್ತು ಚುನಾವಣೆ ಘೋಷಣೆಗೂ ಮೊದಲು ಹಲವು ಬಾರಿ ರಾಜ್ಯಕ್ಕೆ ಆಗಮಿಸಿದ್ದು ಜನರಲ್ಲಿ ಸಾತ್ವಿಕ ಕೋಪ ಹುಟ್ಟುಹಾಕಿತು.

7.ಕೊನೆಯ ಹಂತದಲ್ಲಿ ಬಜರಂಗ ದಳ ನಿಷೇಧಿಸುವ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿನ ಅಂಶ ಮುಂದಿಟ್ಟುಕೊಂಡು ಹಿಂದುತ್ವವನ್ನು ಜಾಗೃತಗೊಳಿಸುವ ಬಿಜೆಪಿ ನಾಯಕರ ಪ್ರಯತ್ನವನ್ನು ಜನರು ಪೂರ್ಣವಾಗಿ ಒಪ್ಪಲಿಲ್ಲ.

Karnataka election results 2023: ಬೆಂಗಳೂರು ಭಾಗದಲ್ಲಿ ಬಿಜೆಪಿ-ಕಾಂಗ್ರೆಸ್‌ ಮಿಶ್ರಫಲ!

ಬಿಜೆಪಿ ಸೋಲು: ಮುಂದೇನು?

- ಸಮರ್ಥ ಪ್ರತಿಪಕ್ಷವಾಗಿ ಪಾತ್ರ ನಿಭಾಯಿಸಿ ನೂತನ ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡಲು ಪ್ರಯತ್ನಿಸಬಹುದು

- ಈಗಿನ ಸೋಲಿನ ಕಹಿಯಿಂದ ಹೊರಬಂದು ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸಬಹುದು

- ಮುಂಬರುವ ಬಿಬಿಎಂಪಿ, ಜಿ.ಪಂ-ತಾ.ಪಂ. ಚುನಾವಣೆಯಲ್ಲಿ ಪಕ್ಷದ ಸಾಧನೆ ವೃದ್ಧಿಸಲು ಈಗಿನಿಂದಲೇ ಕ್ರಮ ಕೈಗೊ ಳ್ಳಬಹುದು

- ಸಮುದಾಯಗಳ ಮೇಲೆ ಹಿಡಿತ ಹೊಂದಿರುವ ನಾಯಕರಿಗೆ ಪಕ್ಷದಲ್ಲಿ ಪ್ರಮುಖ ಸ್ಥಾನ ನೀಡಬಹುದು

Latest Videos
Follow Us:
Download App:
  • android
  • ios