ಜನ್‌ ಕೀ ಬಾತ್‌ ಹಾಗೂ ಸುವರ್ಣ ನ್ಯೂಸ್ ಮಹಾ ಸಮೀಕ್ಷೆಯ ಪ್ರಕಾರ, ಬಿಜೆಪಿ ಚುನಾವಣೆಯಲ್ಲಿ ಸಂಪೂರ್ಣ ಬಹುಮತದ ಬಳಿಕ ಬರೋದು ಖಚಿತ ಎಂದು ಹೇಳಿದೆ. ಇದಕ್ಕೆ ಬಹುತೇಕವಾಗಿ ಮೋದಿ ಪ್ರಭಾವವೇ ಕಾರಣವಾಗಲಿದೆ.

ಬೆಂಗಳೂರು (ಮೇ4): ಜನ್‌ ಕೀ ಬಾತ್‌ ಸುವರ್ಣನ್ಯೂಸ್‌ ಮಹಾ ಸಮೀಕ್ಷೆಯಲ್ಲಿ ಬಿಜೆಪಿ ಮ್ಯಾಜಿಕ್‌ ನಂಬರ್‌ ಪಡೆಯೋದು ಬಹುತೇಕ ಖಚಿತ. ತನ್ನ ಸ್ವಂತ ಬಲದಲ್ಲಿ ಬಿಜೆಪಿ ಅಧಿಕಾರ ಪಡೆಯಲಿದೆ ಎಂದು ಸಮೀಕ್ಷೆ ಸೂಚನೆ ನೀಡಿದೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಜನ್‌ ಕೀ ಬಾತ್‌ ಸಹಯೋಗದಲ್ಲಿ ನಡೆದ ಸಮೀಕ್ಷೆಯ 2ನೇ ಹಂತದಲ್ಲಿ ಬಿಜೆಪಿ ಪ್ರಚಂಡ ಅಲ್ಲದೇ ಇದ್ದರೂ, ಸ್ವಂತ ಬಲದಲ್ಲಿ ಅಧಿಕಾರ ಪಡೆಯಲಿದೆ. ಇಲ್ಲದೇ ಇದ್ದರೆ ಕನಿಷ್ ಅದರ ಸನಿಹ ಬರಲಿದೆ ಎಂದು ತಿಳಿಸಿದೆ. ಇದೇ ಸಮೀಕ್ಷೆಯ ಮೊದಲ ಹಂತದಲ್ಲಿ ಬಿಜೆಪಿ 98 ರಿಂದ 109 ಸೀಟ್‌ಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ತಿಳಿಸಲಾಗಿತ್ತು. ಆದರೆ, ಚುನಾವಣೆಯ ಸನಿಹದಲ್ಲಿರುವ ಸಮಯದಲ್ಲಿ ಬಿಜೆಪಿಯ ಬ್ರಹ್ಮಾಸ್ತ್ರವಾಗಿರುವ ಪ್ರಧಾನಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್‌, ಅಮಿತ್‌ ಶಾ ಸೇರಿದಂತೆ ಇನ್ನೂ ಕೆಲವು ನಾಯಕರು ಪ್ರತಿ ವಿಧಾನಸಭಾ ಕ್ಷೇತ್ರಗಳನ್ನು ತಲುಪುವ ಸಾಹಸ ಮಾಡಿದ್ದು ಚುನಾವಣೆಯ ಮೇಲೆ ಪರಿಣಾಮ ಬೀರೋದು ಖಚಿತವಾಗಿದೆ. ಇದರಿಂದಾಗಿ ಬಿಜೆಪಿ ತನ್ನ ಸ್ವಂತ ಬಲದಲ್ಲಿ ಬಹುಮತದ ಗಡಿ ದಾಟಲಿದೆ ಎಂದು ಅಂದಾಜು ಮಾಡಲಾಗಿದೆ.

ಜನ್‌ ಕೀ ಬಾತ್‌ ಸುವರ್ಣನ್ಯೂಸ್‌ ಮಹಾ ಸಮೀಕ್ಷೆಯ 2ನೇ ಹಂತದಲ್ಲಿ ಬಿಜೆಪಿ 100 ರಿಂದ 114 ಸೀಟ್‌ಗಳನ್ನು ಏಕಾಂಗಿಯಾಗಿ ಗೆಲ್ಲಲಿದೆ ಎಂದು ಭವಿಷ್ಯ ನುಡಿಸಿದೆ. ಕರ್ನಾಟಕದಲ್ಲಿ ಪಕ್ಷ ಅಧಿಕಾರ ಪಡೆಯಲು 113 ಸ್ಥಾನಗಳನ್ನು ಗೆಲ್ಲಬೇಕಿದೆ. ಇದೇ ಮ್ಯಾಜಿಕ್‌ ನಂಬರ್‌. ಅಧಿಕಾರದ ಆಸೆಯಲ್ಲಿರುವ ಹಾಗೂ ರಾಜ್ಯ ಸರ್ಕಾರದ ವಿರುದ್ಧ ನಿರಂತರವಾಗಿ ಭ್ರಷ್ಟಾಚಾರದ ಆರೋಪ ಮಾಡಿರುವ ಕಾಂಗ್ರೆಸ್‌ 86-98 ಸೀಟ್‌ಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ತಿಳಿಸಿದೆ. ಅದಲ್ಲದೆ, ಸರ್ವೇಯಲ್ಲಿ ಹಳೆ ಮೈಸೂರು ಭಾಗದ ಪ್ರಧಾನ ಪಕ್ಷ ಜೆಡಿಎಸ್‌ 20 ರಿಂದ 26 ಸೀಟ್‌ಗಳನ್ನು ಗೆಲ್ಲಬಹುದು ಎಂದು ಹೇಳಿದ್ದರೆ, ಪಕ್ಷೇತರರು ಗರಿಷ್ಠ 5 ಸೀಟ್‌ಗಳಲ್ಲಿ ಗೆಲ್ಲಬಹುದು ಎಂದು ಅಂದಾಜು ಮಾಡಿದೆ.

ಹೈದರಾಬಾದ್‌ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗ ಕಾಂಗ್ರೆಸ್‌ ಪಕ್ಷದ ಪರವಾಗಿ ಗಟ್ಟಿಯಾಗಿ ನಿಂತಿದ್ದರೆ, ಉಳಿದ ಭಾಗಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಟೈಟ್‌ ಫೈಟ್‌ ಇದೆ. ಕರಾವಳಿ ಕರ್ನಾಟಕ, ಮುಂಬೈ ಕರ್ನಾಟಕದಲ್ಲಿ ಬಹುತೇಕ ಬಿಜೆಪಿಯೇ ಪಾರಮ್ಯ ಮೆರೆದಿದೆ. ಮೊದಲ ಹಂತದ ಸಮೀಕ್ಷೆಯಲ್ಲಿ ಈಗ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಕೆಲ ಸೀಟ್‌ಗಳು ವ್ಯತ್ಯಯವಾಗುವ ಸೂಚನೆಗಳಿದ್ದವು.

Jan Ki Baat Suvarna News Survey: ಹೇಗೆ ನಡೆಯಿತು ಸಮೀಕ್ಷೆಯ ಮಹಾಸಮರ!

2ನೇ ಹಂತದ ಜನ್‌ ಕೀ ಬಾತ್‌ ಸುವರ್ಣ ನ್ಯೂಸ್‌ ಸಮೀಕ್ಷೆ ಏಪ್ರಿಲ್‌ 15 ರಿಂದ ಮೇ 1ರ ವರೆಗೆ ನಡೆದಿದೆ. ಒಟ್ಟಾರೆ 30 ಸಾವಿರ ಮಂದಿಯನ್ನು ಈ ಸಮೀಕ್ಷೆಗಾಗಿ ಒಳಪಡಿಸಲಾಗಿದೆ. 2018ರ ಕರ್ನಾಟಕ ಚುನಾವಣೆ, 2019ರ ಲೋಕಸಭೆ ಚುನಾವಣೆ ಸೇರಿದಂತೆ ದೇಶದಲ್ಲಿ 36 ಚುನಾವಣಾ ಸಮೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದ ಹಿನ್ನೆಲೆ ಜನ್ ಕಿ ಬಾತ್ ಸಂಸ್ಥೆಗೆ ಇದೆ.

Jan Ki Baat Suvarna Survey: ರಾಜ್ಯದ 6 ಪ್ರಾದೇಶಿಕ ವಿಭಾಗವಾರು ಪಕ್ಷಗಳ ಬಲಾಬಲವೆಷ್ಟು?