ವಿಧಾನಸಭಾ ಚುನಾವಣೆಗೆ ಕರ್ನಾಟಕದಲ್ಲಿ ಪಕ್ಷದ ಪ್ರಚಾರಕ್ಕೆ ಇನ್ನಷ್ಟು ವೇಗ ನೀಡುವ ದೃಷ್ಟಿಯಿಂದ ಯಡಿಯೂರಪ್ಪ ಅವರನ್ನು ರಾಜ್ಯ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸುವ ಬಗ್ಗೆ ದಿಲ್ಲಿ ಬಿಜೆಪಿ ನಾಯಕರು ಯೋಚಿಸುತ್ತಿದ್ದಾರೆ. 

ವಿಧಾನಸಭಾ ಚುನಾವಣೆಗೆ ಕರ್ನಾಟಕದಲ್ಲಿ ಪಕ್ಷದ ಪ್ರಚಾರಕ್ಕೆ ಇನ್ನಷ್ಟು ವೇಗ ನೀಡುವ ದೃಷ್ಟಿಯಿಂದ ಯಡಿಯೂರಪ್ಪ ಅವರನ್ನು ರಾಜ್ಯ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸುವ ಬಗ್ಗೆ ದಿಲ್ಲಿ ಬಿಜೆಪಿ ನಾಯಕರು ಯೋಚಿಸುತ್ತಿದ್ದಾರೆ. ಬಹುತೇಕ ಇನ್ನು ಕೆಲವು ದಿನಗಳಲ್ಲಿ ಈ ಬಗ್ಗೆ ವರಿಷ್ಠರು ನಿರ್ಣಯ ತೆಗೆದುಕೊಳ್ಳಲಿದ್ದಾರೆ. ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ ಸೇರಿದಂತೆ ನಾನಾ ಹೆಸರುಗಳು ಪರಿಗಣನೆಯಲ್ಲಿ ಇವೆಯಾದರೂ, ಲಿಂಗಾಯತ ಮತಗಳು ಚದುರಿ ಹೋಗದಂತೆ ತಡೆಯುವ ಶಕ್ತಿ ಯಡಿಯೂರಪ್ಪನವರಿಗೆ ಇದೆ ಮತ್ತು ಪ್ರಚಾರಕ್ಕೂ ಇನ್ನಷ್ಟು ವೇಗ ಸಿಗಬಹುದು ಎಂಬ ನಿರೀಕ್ಷೆಯೊಡನೆ ವರಿಷ್ಠರು ಅವರ ನೇಮಕದ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಈಗ ಯಡಿಯೂರಪ್ಪ ಬಿಜೆಪಿ ಕೇಂದ್ರ ಪಾರ್ಲಿಮೆಂಟರಿ ಬೋರ್ಡ್‌ ಸದಸ್ಯರಾಗಿದ್ದರೂ ಕೂಡ ಆ ಪದವಿಗೆ ರಾಜ್ಯದ ದೈನಂದಿನ ರಾಜಕಾರಣದಲ್ಲಿ ತುಂಬಾ ಮಹತ್ವ ಇಲ್ಲ. ಹೀಗಾಗಿ ಸಂಸದೀಯ ಮಂಡಳಿ ಸ್ಥಾನದ ಜೊತೆಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಕೂಡ ಕೊಟ್ಟರೆ ಯಡಿಯೂರಪ್ಪಗೆ ಇನ್ನಷ್ಟು ಮಹತ್ವ ಕೊಟ್ಟ ಸಂದೇಶ ಮತದಾರರಿಗೆ ಹೋಗುತ್ತದೆ. ಇದರಿಂದ ಬಿಜೆಪಿ ಯಡಿಯೂರಪ್ಪನವರನ್ನು ಕಡೆಗಣಿಸುತ್ತಿದೆ ಎನ್ನುವ ಆರೋಪಕ್ಕೆ ಉತ್ತರ ಕೊಡುವುದರ ಜೊತೆಗೆ ಕೆಲ ಕ್ಷೇತ್ರಗಳಲ್ಲಿ ಬಿಟ್ಟು ಹೋಗಬಹುದಾದ ಲಿಂಗಾಯತ ಮತಗಳನ್ನು ಕೂಡ ಹಿಡಿದಿಟ್ಟುಕೊಳ್ಳಬಹುದು ಎಂದು ಬಿಜೆಪಿ ವರಿಷ್ಠರಿಗೆ ಅನ್ನಿಸುತ್ತಿದೆ. ಆಶ್ಚರ್ಯವೆಂದರೆ ಯಡಿಯೂರಪ್ಪನವರಿಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಕೊಡುವ ಬಗ್ಗೆ ಈವರೆಗೂ ರಾಜ್ಯದ ಯಾವುದೇ ನಾಯಕರೊಂದಿಗೆ ಚರ್ಚೆ ನಡೆದಿಲ್ಲ.

ಲಿಂಗಾಯತ ಮತ ನಿರ್ಣಾಯಕ

ಹರ್ಯಾಣದಲ್ಲಿ ಜಾಟರ ವಿರುದ್ಧ ಮತ ಕ್ರೋಢೀಕರಣ, ಉತ್ತರಪ್ರದೇಶ, ಬಿಹಾರದಲ್ಲಿ ಯಾದವರ ವಿರುದ್ಧ ಕ್ರೋಢೀಕರಣ, ಗುಜರಾತ್‌ನಲ್ಲಿ ಪಟೇಲರ ವಿರುದ್ಧ ಮತ ಕ್ರೋಢೀಕರಣ ಮತ್ತು ಮಹಾರಾಷ್ಟ್ರದಲ್ಲಿ ಮರಾಠರ ವಿರುದ್ಧ ಮತ ಕ್ರೋಢೀಕರಣ ಮಾಡಿ ಕೂಡ ಗೆದ್ದಿರುವ ಬಿಜೆಪಿಗೆ, ಕರ್ನಾಟಕದಲ್ಲಿ ಲಿಂಗಾಯತರ ವಿರುದ್ಧ ಹೋಗಿ ಗೆಲ್ಲುವ ಶಕ್ತಿ ಸಾಮರ್ಥ್ಯ ಇಲ್ಲ. ಇದಕ್ಕೆ ಪ್ರಮುಖ ಕಾರಣ ಸಂಖ್ಯೆಯಿಂದ ಹೆಚ್ಚಾಗಿರುವ ಒಕ್ಕಲಿಗರು ಹೆಚ್ಚಾನುಹೆಚ್ಚು ದೇವೇಗೌಡರ ಕುಟುಂಬದ ಜೊತೆ ಇದ್ದರೆ, ನಂತರದ ಸ್ಥಾನದಲ್ಲಿರುವ ಕುರುಬರು ಗಟ್ಟಿಯಾಗಿ ಸಿದ್ದರಾಮಯ್ಯ ಜೊತೆಗೆ ಇದ್ದಾರೆ. ದಲಿತರ ಬಲಗೈ ಕಾಂಗ್ರೆಸ್‌ ಜೊತೆಗಿದ್ದರೆ, ದಲಿತ ಎಡಗೈ ಬಿಜೆಪಿ ಜೊತೆಗೆ ಬರುತ್ತಿದೆ. ಹೀಗಿರುವಾಗ ತನ್ನದೇ ಸಮುದಾಯದ 80 ಅಭ್ಯರ್ಥಿಗಳ ಜೊತೆಗೆ ಉಳಿದ ಸಮುದಾಯದ 40 ಅಭ್ಯರ್ಥಿಗಳ ಗೆಲುವನ್ನು ಸೋಲಾಗಿ ಮತ್ತು ಸೋಲನ್ನು ಗೆಲುವಾಗಿ ಪರಿವರ್ತಿಸುವ ಶಕ್ತಿ ಇರುವ ಲಿಂಗಾಯತ ಸಮುದಾಯ ಬಿಜೆಪಿಯಿಂದ ಸ್ವಲ್ಪ ಮಟ್ಟಿಗೆ ದೂರ ಹೋದರೂ ಪಕ್ಷ ಅತಿಹೆಚ್ಚು ಸೀಟು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಹೀಗಾಗಿ ಎಲ್ಲೆಡೆ ಅಭಿವೃದ್ಧಿ ಅಥವಾ ಹಿಂದುತ್ವದ ಬಗ್ಗೆ ಮಾತ್ರ ಮಾತಾಡುವ ಪ್ರಧಾನಿ ಮೋದಿ ಕರ್ನಾಟಕದಲ್ಲಿ ಮೊದಲ ಬಾರಿಗೆ ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲ…ರ ಬಗ್ಗೆ ಮಾತಾಡಿ ಜಾತಿ ಉಲ್ಲೇಖ ಮಾಡಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ದೇವರಾಜ ಅರಸರಿಗೂ ಅವಮಾನ ಮಾಡಿತ್ತು. ಆದರೆ ಅವರ ಹೆಸರನ್ನು ಪ್ರಸ್ತಾಪಿಸದೆ ಬರೀ ಲಿಂಗಾಯತರನ್ನು ಮಾತ್ರ ಉದ್ದೇಶಿಸಿ ಮಾತನಾಡಿರುವುದು ಬಿಜೆಪಿಗೆ ಲಿಂಗಾಯತ ವೋಟ್‌ಬ್ಯಾಂಕ್‌ ಎಷ್ಟುಅನಿವಾರ್ಯ ಎಂಬುದನ್ನು ತೋರಿಸುತ್ತದೆ. ಒಂದು ಅಂದಾಜಿನ ಪ್ರಕಾರ ಒಕ್ಕಲಿಗರು ಗಟ್ಟಿಯಾಗಿ ಜೆಡಿಎಸ್‌ ಜೊತೆಗೆ ಮತ್ತು ಲಿಂಗಾಯತರು ಪೂರ್ತಿಯಾಗಿ ಬಿಜೆಪಿ ಜೊತೆಗೆ ನಿಂತರೆ, ಬಿಜೆಪಿ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತದೋ ಇಲ್ಲವೋ ಕಾಂಗ್ರೆಸ್‌ ಏಕಾಂಗಿಯಾಗಿ ಬರುವ ಸಾಧ್ಯತೆಗಳು ಕ್ಷೀಣಿಸುತ್ತವೆ.

ಶಿಗ್ಗಾವಿಯಲ್ಲಿ ಬೊಮ್ಮಾಯಿ ವಿರುದ್ಧ ವಿನಯ್ ಕುಲಕರ್ಣಿ ನಿಲ್ಲಿಸಲು ಸುರ್ಜೇವಾಲಾ ಯತ್ನಿಸುತ್ತಿರೋದೇಕೆ?

ಕಾಂಗ್ರೆಸ್ಸಿಗೆ ಸಾಮಾಜಿಕ ನ್ಯಾಯ ಸಂಕಟ!

ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ಗೆಲ್ಲಬೇಕಾದರೆ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆಯಲ್ಲಿ ಅತಿ ಹೆಚ್ಚಾಗಿ ಬಳಸುವ ಸಾಮಾಜಿಕ ನ್ಯಾಯವನ್ನು ಕೆಲ ಕ್ಷೇತ್ರಗಳಲ್ಲಿ ಪಕ್ಕಕ್ಕೆ ಇಟ್ಟು ಗೆಲ್ಲುವ ಅಭ್ಯರ್ಥಿಗೆ ಟಿಕೆಟ್‌ ಕೊಡಬೇಕು ಎಂದು ಸ್ಪಷ್ಟನಿಲುವಿಗೆ ಬಂದಿದೆ. ಡಿ.ಕೆ.ಶಿವಕುಮಾರ್‌ ದಿಲ್ಲಿಯಲ್ಲಿ ಖರ್ಗೆ ಸಾಹೇಬರು ನಡೆಸಿದ್ದ ಸಭೆಯಲ್ಲಿಯೇ ‘ಗೆಲ್ಲೋದು ಮುಖ್ಯ, ಅದೇ ರೀತಿ ಟಿಕೆಟ್‌ ಕೊಡಬೇಕು. ಸಾಮಾಜಿಕ ನ್ಯಾಯವನ್ನು ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿಗೆ ಟಿಕೆಟ್‌ ಕೊಡುವಾಗ ನೋಡಬಹುದು’ ಎಂದು ಹೇಳಿದ್ದರು. ಹೀಗಾಗಿ ಸುನೀಲ… ಕುನ್ನುಗೋಲು ಪ್ರತಿ ಚುನಾವಣೆಯಲ್ಲಿ ಎಷ್ಟುಕ್ಷೇತ್ರದಲ್ಲಿ ಕಾಂಗ್ರೆಸ್‌ ತಪ್ಪು ಟಿಕೆಟ್‌ ಹಂಚಿಕೆ ಮಾಡಿ ಕ್ಷೇತ್ರಗಳನ್ನು ಪೈಪೋಟಿಯಿಲ್ಲದೆ ವಿರೋಧಿಗಳಿಗೆ ಬಿಟ್ಟುಕೊಟ್ಟಿದೆ ಎಂಬ ಪಟ್ಟಿಯನ್ನೇ ತಯಾರಿಸಿ, ಸಿದ್ದು, ಡಿಕೆಶಿ ಮತ್ತು ಸುರ್ಜೆವಾಲಾರಿಗೆ ಕೊಟ್ಟಿದ್ದಾರೆ. ಉದಾಹರಣೆಗೆ ರಾಯಚೂರಿನಲ್ಲಿ ಮುಸ್ಲಿಂ ಅಭ್ಯರ್ಥಿಗೆ ಬದಲಾಗಿ ಬೋಸರಾಜುಗೆ ಟಿಕೆಟ್‌ ಕೊಟ್ಟರೆ ಹೇಗೆ ಎಂಬ ಬಗ್ಗೆ ಕಾಂಗ್ರೆಸ್‌ ಚಿಂತನೆ ನಡೆಸುತ್ತಿದೆ. ಧಾರವಾಡದಲ್ಲಿ ಅರವಿಂದ ಬೆಲ್ಲದ ವಿರುದ್ಧ ಕಳೆದ ಬಾರಿ ಇಸ್ಮಾಯಿಲ… ತಮಟಗಾರಗೆ ಟಿಕೆಟ್‌ ಕೊಟ್ಟಿದ್ದರಿಂದ ಬೆಲ್ಲದ ಸುಲಭವಾಗಿ ಗೆದ್ದಿದ್ದರು. ಹೀಗಾಗಿ ಈ ಬಾರಿ ಅಲ್ಲಿ ಪಂಚಮಸಾಲಿ ಅಥವಾ ಮರಾಠ ಸಮುದಾಯಕ್ಕೆ ಟಿಕೆಟ್‌ ನೀಡುವ ಬಗ್ಗೆ ಯೋಚನೆ ಇದೆ. ಶಿಗ್ಗಾವಿಯಲ್ಲಿ ಕೂಡ ಪಂಚಮಸಾಲಿಗಳಿಗೆ ಟಿಕೆಟ್‌ ನೀಡುವ ಯೋಚನೆ ಇದ್ದರೆ, ನವಲಗುಂದದಲ್ಲಿ ಹಿಂದೆ ಕುರುಬರಿಗೆ ಕೊಡಲೇಬೇಕು ಎಂದು ಕಾಂಗ್ರೆಸ್‌ ವಿನೋದ್‌ ಅಸೂಟಿಗೆ ಟಿಕೆಟ್‌ ಕೊಟ್ಟಿತ್ತು. ಈ ಬಾರಿ ಜೆಡಿಎಸ್‌ನಿಂದ ಬಂದಿರುವ ಕೋನರೆಡ್ಡಿಗೆ ಟಿಕೆಟ್‌ ಕೊಡುವ ಬಗ್ಗೆ ಒಲವಿದೆ. ಇನ್ನು ತುಮಕೂರು ನಗರದಲ್ಲಿ ಜ್ಯೋತಿ ಗಣೇಶ ವಿರುದ್ಧ ಮುಸ್ಲಿಂ ಅಭ್ಯರ್ಥಿ ಬದಲಿಗೆ ಹಿಂದೂ ಅಭ್ಯರ್ಥಿಗೆ ಕೊಟ್ಟರೆ ಹೇಗೆ ಎಂಬ ಆಲೋಚನೆಯೂ ಇದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೇದವ್ಯಾಸ ಕಾಮತ್‌ ಎದುರಿಗೆ ಅಥವಾ ಭರತ್‌ ಶೆಟ್ಟಿಎದುರಿಗೆ ಯಾವುದಾದರೂ ಒಂದು ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿ ಬದಲಿಗೆ ಹಿಂದೂ ಅದರಲ್ಲೂ ಬಿಲ್ಲವ ಅಭ್ಯರ್ಥಿಗೆ ಟಿಕೆಟ್‌ ಕೊಟ್ಟರೆ ಹೇಗೆ ಎಂಬ ಆಲೋಚನೆಯೂ ನಡೆದಿದೆ. ಅಂದಹಾಗೆ 2018ರಲ್ಲಿ ಕಾಂಗ್ರೆಸ್‌ 17 ಮುಸ್ಲಿಮರಿಗೆ ಟಿಕೆಟ್‌ ಕೊಟ್ಟಿತ್ತು. ಅದರಲ್ಲಿ ಗೆದ್ದವರು 7. ಕ್ರಿಶ್ಚಿಯನ್‌ರಿಗೆ 2 ಟಿಕೆಟ್‌ ಕೊಟ್ಟಿತ್ತು, ಒಬ್ಬರು ಮಾತ್ರ ಗೆದ್ದಿದ್ದರು.

From The India Gate: ಸಂಸತ್ತಿನಲ್ಲೂ ಶ್ರೀಅನ್ನದ ಪವರ್,‌ ಬಂಗಾಳಕ್ಕೆ ಬೋಸ್‌ ಕಾರ್ಯತಂತ್ರ!

ಮೂರು ವಾರ್‌ ರೂಮ್ + ಒಂದು

ಯಾವುದೇ ದೇಶ ಯುದ್ಧಕ್ಕೆ ಹೋದಾಗ ಆ ದೇಶದ ಸೇನಾಧಿಕಾರಿಗಳು ನಕಾಶೆ ಇಟ್ಟು ರಣತಂತ್ರ ರೂಪಿಸುವ ಕೋಣೆಗೆ ವಾರ್‌ ರೂಮ್ ಎಂದು ಹೆಸರು. ಆದರೆ ಈ ರಣತಂತ್ರದ ಕೋಣೆಯನ್ನು ಚುನಾವಣೆಗೆ ತಂದಿದ್ದು ಅಮೆರಿಕದ ರಿಪಬ್ಲಿಕನ್‌ ಮತ್ತು ಡೆಮಾಕ್ರಟಿಕ್‌ ಪಾರ್ಟಿಗಳು. ಭಾರತದಲ್ಲಂತೂ 1999ರವರೆಗೂ ಚುನಾವಣೆಗಳನ್ನು ಪರಂಪರಾಗತವಾಗಿ ಪಾರ್ಟಿ ಕಾರ್ಯಾಲಯದಿಂದ ಆಯಾ ಕಾರ್ಯಕರ್ತರು ನಡೆಸುತ್ತಿದ್ದರು. ಆದರೆ ಭಾರತದ ಚುನಾವಣೆಯಲ್ಲಿ ಮೊದಲ ಬಾರಿಗೆ ವಾರ್‌ ರೂಮ್‌ ಹೆಸರು ಬಂದಿದ್ದು ಪ್ರಮೋದ್‌ ಮಹಾಜನ್‌ 2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಹೆಸರಿನಲ್ಲಿ ಭಾರತ ಪ್ರಕಾಶಿಸುತ್ತಿದೆ ಎಂಬ ಪ್ರಚಾರ ರೂಪಿಸಿದಾಗ. ಆ ಅಭಿಯಾನ ವಿಫಲವಾಗಿ ಬಿಜೆಪಿ ಸೋತಿತು. ಆದರೆ ಚುನಾವಣೆ ಕೆಲಸಕ್ಕೆ ವೃತ್ತಿಪರರು, ರಣತಂತ್ರಗಾರರ ಪ್ರವೇಶ ಭಾರತದಲ್ಲಿ ಆಗಿದ್ದು 2004ರಲ್ಲಿ. ಅದನ್ನು 2014ರಲ್ಲಿ ಮೋದಿ ಇನ್ನೊಂದು ಹೆಜ್ಜೆ ಮುಂದೆ ತೆಗೆದುಕೊಂಡು ಹೋಗಿ ಪ್ರಶಾಂತ್‌ ಕಿಶೋರ್‌ರನ್ನು ನೇಮಿಸಿ 500 ಜನರ ತಂಡ ಮಾಡಿ ಅಮೆರಿಕದ ಮಾದರಿಯಲ್ಲಿ ಚುನಾವಣಾ ಪ್ರಚಾರ ಮಾಡಬಹುದು, ಗೆಲುವು ಸಾಧಿಸಬಹುದು ಎಂದು ತೋರಿಸಿಕೊಟ್ಟರು.

ಈಗ ನೋಡಿ ಅದೇ ಪ್ರಶಾಂತ್‌ ಕಿಶೋರ್‌ ತಂಡದಲ್ಲಿದ್ದ ಸುನೀಲ ಕುನ್ನುಗೋಲು ಕಾಂಗ್ರೆಸ್‌ಗಾಗಿ ವಾರ್‌ ರೂಮ್ ಸ್ಥಾಪಿಸಿ 200ಕ್ಕೂ ಹೆಚ್ಚು ಯುವಕರನ್ನು ಕೆಲಸಕ್ಕೆ ಹಚ್ಚಿದ್ದಾರೆ. ಬಿಜೆಪಿ ಕೂಡ ವಾರಾಹಿ ಎಂಬ ಸಂಸ್ಥೆಗೆ ರಣತಂತ್ರದ ಜವಾಬ್ದಾರಿ ಕೊಟ್ಟಿದ್ದು, ನೂರಾರು ಯುವಕರು ಮತದಾರರ ಭಾಷೆಯಿಂದ ಹಿಡಿದು ಜಾತಿವರೆಗೆ ಡೇಟಾ ಬೇಸ್‌ ತಯಾರು ಮಾಡಿ ರಣತಂತ್ರ ರೂಪಿಸುತ್ತಿದ್ದಾರೆ. ಇನ್ನು ಜೆಡಿಎಸ್‌ ಕೂಡ ಅಮಿತ್‌ ಶಾ ಅವರ ಬಿಲಿಯನ್‌ ಮೈಂಡ್ಸ್‌ನಲ್ಲಿ ಇದ್ದ ಅನಿಲ್ ಗೌಡ ಎಂಬ ಯುವಕನನ್ನು ಸೆಳೆದುಕೊಂಡು ಜೆ.ಪಿ.ನಗರದಲ್ಲಿ 70 ಯುವಕರ ವಾರ್‌ ರೂಮ್ ಮಾಡಿಕೊಂಡಿದೆ. ಕೋಲಾರದಲ್ಲಿ ಸಿದ್ದರಾಮಯ್ಯ ಕೂಡ ಬರೀ ಕ್ಷೇತ್ರಕ್ಕೋಸ್ಕರ ಪ್ರತ್ಯೇಕ ವಾರ್‌ ರೂಮ್ ಮಾಡಿಕೊಂಡಿದ್ದಾರೆ.

ಚುನಾವಣೆಗೆ ಎಷ್ಟು ಹಣ ಬೇಕು?

2004ರಲ್ಲಿ ಒಂದು ರಾಷ್ಟ್ರೀಯ ಪಕ್ಷದ ಚುನಾವಣಾ ಪ್ರಬಂಧನಕ್ಕೆ 100ರಿಂದ 150 ಕೋಟಿ ಖರ್ಚಾಗುತ್ತಿತ್ತಂತೆ. ಆಗ ಕರ್ನಾಟಕದ ಉಸ್ತುವಾರಿ ವಹಿಸಿಕೊಂಡಿದ್ದ ಬಿಜೆಪಿ ನಾಯಕರೊಬ್ಬರು ನನಗೆ ಖಾಸಗಿಯಾಗಿ ಹೇಳಿದ್ದ ಪ್ರಕಾರ ಆಗ ರಾಜ್ಯ ಬಿಜೆಪಿ 38 ಕೋಟಿ ಹಣ ಸಂಗ್ರಹ ಮಾಡಿತ್ತಂತೆ. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಎಸ್‌.ಎಂ.ಕೃಷ್ಣ ಆಪ್ತರು ಹೇಳುವ ಪ್ರಕಾರ ಕಾಂಗ್ರೆಸ್‌ 150 ಕೋಟಿವರೆಗೆ ಸಂಗ್ರಹ ಮಾಡಿತ್ತು. ಅಭ್ಯರ್ಥಿಗಳು ಮಾಡುವ ಖರ್ಚುವೆಚ್ಚ ಬಿಟ್ಟು ಜಾಹೀರಾತು, ಓಡಾಟ, ಪಾರ್ಟಿ ಫಂಡು ಎಲ್ಲವೂ ಇದರಲ್ಲಿ ಮುಗಿದು ಹೋಗುತ್ತಿತ್ತು. ಅದಾಗಿ ಸರಿಯಾಗಿ 19 ವರ್ಷಗಳ ನಂತರ ನೋಡಿದರೆ ಬೆಂಗಳೂರಿನ ಕ್ಷೇತ್ರವೊಂದರಲ್ಲಿ ಸ್ಪರ್ಧಿಸಲು 30ರಿಂದ 40 ಕೋಟಿ ಬೇಕಾದರೆ, ಉತ್ತರ ಕರ್ನಾಟಕದಲ್ಲಿ ಎಷ್ಟೇ ಕೆಲಸ ಮಾಡಿದರೂ ಕೂಡ ಚುನಾವಣೆ ಅಂದರೆ ಒಬ್ಬ ಅಭ್ಯರ್ಥಿಯ ಖರ್ಚು ಹತ್ತು ಕೋಟಿಯೊಳಗೆ ಮುಗಿಯುವುದಿಲ್ಲ. ನನಗೊಬ್ಬ ಸಂಸದರು ಹೇಳಿದ ಪ್ರಕಾರ 2004ರಲ್ಲಿ ಅವರಿಗೆ ಇಡೀ ಲೋಕಸಭಾ ಕ್ಷೇತ್ರಕ್ಕೆ 58 ಲಕ್ಷ ರು. ಖರ್ಚಾಗಿತ್ತು. ಈಗ 2019ರಲ್ಲಿ ಗೆದ್ದಾಗ ಮಾಡಿದ ಖರ್ಚು 25 ಕೋಟಿ. ಒಂದು ಅಂದಾಜಿನ ಪ್ರಕಾರ ಇವತ್ತಿನ ಸ್ಥಿತಿಯಲ್ಲಿ ಒಂದು ರಾಷ್ಟ್ರೀಯ ಪಾರ್ಟಿಗೆ ಬರೀ ಚುನಾವಣಾ ಮೇಲುಸ್ತುವಾರಿಗೆ 800ರಿಂದ 1000 ಕೋಟಿ ಹಣ ಬೇಕು. ಒಂದೊಂದು ಗೆಲ್ಲುವ ಕ್ಷೇತ್ರಕ್ಕೆ ಕನಿಷ್ಠ 3ರಿಂದ 5 ಕೋಟಿ ಪಾರ್ಟಿ ಫಂಡ್‌ ಕೊಡಬೇಕು. ಇವತ್ತಿಗೂ ಬಿಹಾರ, ಯು.ಪಿ., ಮಧ್ಯಪ್ರದೇಶದಲ್ಲಿ 50ರಿಂದ 75 ಲಕ್ಷದಲ್ಲಿ ಒಂದು ಕ್ಷೇತ್ರದ ಚುನಾವಣಾ ಖರ್ಚು ಮುಗಿದು ಹೋಗುತ್ತದೆ. ಚುನಾವಣೆ ಪಕ್ಕಾ ಬಿಸಿನೆಸ್‌ ಆಗಿದೆ ಬಿಡಿ.