ಭಟ್ಕಳದಲ್ಲಿ ಶುರುವಾಯ್ತು ತಳಮಳ, ಜೆಡಿಎಸ್‌ನಿಂದ ಹಿರಿಯ ವಕೀಲ ನಾಗೇಂದ್ರ ನಾಯ್ಕ್ ಅಭ್ಯರ್ಥಿ!
ಜೆಡಿಎಸ್‌ನಿಂದ ಈ ಬಾರಿ ಭಟ್ಕಳ-ಹೊನ್ನಾವರ ಕ್ಷೇತ್ರದ ಅಭ್ಯರ್ಥಿಯಾಗಿ ಹಿರಿಯ ವಕೀಲ ನಾಗೇಂದ್ರ ನಾಯ್ಕ್ ಅವರ ಹೆಸರನ್ನು ಘೋಷಣೆ ಮಾಡಿದೆ. ಅದರೊಂದಿಗೆ ಕಳೆದ ಬಾರಿ ಬರೀ 6 ಸಾವಿರ (5930 ಮತ) ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದ ಭಟ್ಕಳ-ಹೊನ್ನಾವರ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ್‌ಗೆ ತಳಮಳ ಆರಂಭವಾಗಿದೆ.
ಬೆಂಗಳೂರು (ಏ.12): ನಿರೀಕ್ಷೆಯಂತೆ ಈ ಬಾರಿ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಹಿರಿಯ ವಕೀಲ ನಾಗೇಂದ್ರ ನಾಯ್ಕ್ ಅವರ ಹೆಸರನ್ನು ಪಕ್ಷದ ವರಿಷ್ಠ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಬುಧವಾರ ಕುಮಟಾದಲ್ಲಿ ನಡೆದ ಜೆಡಿಎಸ್ ಪಂಚರತ್ನ ಯಾತ್ರೆಯ ವೇಳೆ ಎಚ್‌ಡಿ ಕುಮಾರಸ್ವಾಮಿ, ಭಟ್ಕಳ ಕ್ಷೇತ್ರಕ್ಕೆ ನಾಗೇಂದ್ರ ನಾಯ್ಕ್ ಅವರ ಹೆಸರನ್ನು ಘೋಷಣೆ ಮಾಡಿದ್ದಾರೆ. ಹೈಕೋರ್ಟ್‌ನ ಹಿರಿಯ ವಕೀಲರಾಗಿರುವ ನಾಗೇಂದ್ರ ನಾಯ್ಕ್ ಅವರನ್ನು ಇತ್ತೀಚೆಗೆ ಹೈಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೂ ಶಿಫಾರಸು ಮಾಡಲಾಗಿತ್ತು. ಈಗ ನಾಮಧಾರಿ ಸಮುದಾಯಕ್ಕೆ ಈ ವಲದಯಲ್ಲಿ ಆದ್ಯತೆ ನೀಡುವ ನಿಟ್ಟಿನಲ್ಲಿ ಕುಮಾರಸ್ವಾಮಿ ಭಟ್ಕಳ ಕ್ಷೇತ್ರಕ್ಕೆ ನಾಗೇಂದ್ರ ನಾಯ್ಕ್ ಅವರ ಹೆಸರನ್ನು ಘೋಷಣೆ ಮಾಡಿದೆ. ಅದರೊಂದಿಗೆ ಭಟ್ಕಳದ ಈ ಬಾರಿಯ ಚುನಾವಣಾ ಕಣ ಜಿದ್ದಾಜಿದ್ದಿಗೆ ಸಾಕ್ಷಿಯಾಗೋದರಲ್ಲಿ ಅನುಮಾನವೇವಿಲ್ಲ. ಅದಕ್ಕೆ ಕಾರಣ ಕೂಡ ಇದೆ. ಒಂದೆಡೆ ಹಿಂದಿನೆಲ್ಲಾ ಚುನಾವಣೆಗಳಿಗಿಂತ ಈ ಬಾರಿ ಹೆಚ್ಚಿನ ಶಕ್ತಿಯಲ್ಲಿ ಕಾಂಗ್ರೆಸ್‌ನ ಮಂಕಾಳ ವೈದ್ಯ ಗೆಲುವಿಗಾಗಿ ಪ್ರಯತ್ನ ಪಡುತ್ತಿದ್ದಾರೆ. ಕಳೆದ ಬಾರಿ ಎದುರಿಸಿದ ಸೋಲನ್ನು ಇನ್ನೂ ಅರಗಿಸಿಕೊಳ್ಳದ ಅವರು, ಇಡೀ ಕ್ಷೇತ್ರದಲ್ಲಿ ಒಂಟಿಸಲಗದಲ್ಲಿ ಓಡಾಡಿ ಜನ ಸಂಪರ್ಕ ಮಾಡಿದ್ದಾರೆ. ಮದುವೆ, ಮುಂಜಿ, ಹೋರಾಟ ಯಾವುದರಲ್ಲೂ ಅವರು ಹಿಂದೆ ಬಿದ್ದಿಲ್ಲ. ಇನ್ನೊಂದೆಡೆ ಹಾಲಿ ಶಾಸಕ ಬಿಜೆಪಿ ಸುನೀಲ್ ನಾಯ್ಕ್ ಕೂಡ ಅಷ್ಟೇ ಉತ್ಸಾಹದಲ್ಲಿ ಜನಸಂಪರ್ಕ ಮಾಡಿದ್ದಾರೆ.
ಭಟ್ಕಳ ಗ್ರಾಮಾಂತರ ಹಾಗೂ ಹೊನ್ನಾವರ ಭಾಗದಲ್ಲಿರುವ ಹಿಂದು ಮತಗಳನ್ನು ಕ್ರೋಢೀಕರಿಸಲು ಅವಿರತ ಶ್ರಮ ಪಟ್ಟಿದ್ದಾರೆ. ಇಲ್ಲಿಯವರೆಗೂ ಭಟ್ಕಳದಲ್ಲಿ ಶಾಸಕ ಸ್ಥಾನಕ್ಕೆ ಸುನೀಲ್ ನಾಯ್ಕ್ ಹಾಗೂ ಮಂಕಾಳ ವೈದ್ಯ ನಡುವೆ ಫೈಟ್ ಎನ್ನುತ್ತಿರುವಂತೆ, ಜೆಡಿಎಸ್‌ನಿಂದ ನಾಗೇಂದ್ರ ನಾಯ್ಕ್ ಅವರ ಹೆಸರು ಘೋಷಣೆ ಆಗಿರುವುದು ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿದೆ. ಅದಕ್ಕೆ ಪ್ರಮುಖ ಕಾರಣ ಜಾತೀವಾರು ಲೆಕ್ಕಾಚಾರ. ಕಳೆದ ಚುನಾವಣೆಯಲ್ಲಿ ಹಿಂದು ಮತಗಳೊಂದಿಗೆ ನಾಮಧಾರಿ ನಾಯ್ಕ್ ಮತಗಳು ಬಹುತೇಕವಾಗಿ ಸುನೀಲ್ ನಾಯ್ಕ್ ತೆಕ್ಕೆ ಸೇರಿದ್ದವು. ಮಂಕಾಳ ವೈದ್ಯರಿಗೆ ಮೊಗೇರ ಸಮುದಾಯದೊಂದಿಗೆ ಮುಸ್ಲಿಂ ಮತಗಳು ದಂಡಿಯಾಗಿದ್ದ ಸಿಕ್ಕಿದ್ದವು. ಇದರಿಂದಾಗಿ ಬಿಜೆಪಿಯ ಸುನೀಲ್ ನಾಯ್ಕ್ ಕಳೆದ ಬಾರಿ 83, 712 ಮತ ಸಂಪಾದನೆ ಮಾಡಿದ್ದರೆ, ಮಂಕಾಳ ವೈದ್ಯ 77242 ಮತ ಪಡೆದಿದ್ದರು.
ಆದರೆ, ಈ ಬಾರಿ ಹಾಗಾಗಲು ಸಾಧ್ಯವಿಲ್ಲ. ಯಾಕೆಂದರೆ, ನಾಮಧಾರಿ ಸಮುದಾಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ನಾಗೇಂದ್ರ ನಾಯ್ಕ್ ಅವರನ್ನು ಜೆಡಿಎಸ್ ಕಣಕ್ಕಿಳಿಸಿದೆ. ಇದರಿಂದಾಗಿ ಸುನೀಲ್ ನಾಯ್ಕ್ ಅವರ ಮತಬ್ಯಾಂಕ್‌ಗೆ ಏಟು ಬೀಳುವುದು ನಿಶ್ಚಿತ. ಅದರೊಂದಿಗೆ ಕ್ಷೇತ್ರದಲ್ಲಿ ಮುಸ್ಲಿಂ ಮತಗಳ ಈಡುಗಂಟು ಹೆಚ್ಚಾಗಿ ಅವರಿಗೆ ಸಿಗುವ ಸಾಧ್ಯತೆ ಇದೆ. ಇದೇ ಕಾರಣಕ್ಕಾಗಿ ಈ ಬಾರಿ ಜೆಡಿಎಸ್‌ನಿಂದ ಟಿಕೆಟ್ ಘೋಷಣೆಯಾಗುವ ಹಲವು ದಿನಗಳ ಮುನ್ನವೇ ಈ ಕ್ಷೇತ್ರದ ಮುಸ್ಲಿಂ ಮತಗಳ ಹೈಕಮಾಂಡ್ ಎನ್ನಲಾಗುವ ತಂಜೀಮ್, ಈ ಬಾರಿ ಯಾವುದೇ ಮುಸ್ಲಿಂ ಅಭ್ಯರ್ಥಿಗಳನ್ನು ತಾನು ಕಣಕ್ಕಿಳಿಸುವುದಿಲ್ಲ ಹಾಗೂ ಬೆಂಬಲಿಸೋದಿಲ್ಲ ಎಂದು ಹೇಳಿತ್ತು. ಕಳೆದ ಬಾರಿ ತಂಜೀಮ್ ಬೆಂಬಲ ಇಲ್ಲದ ಕಾರಣಕ್ಕಾಗಿಯೇ ಇನಾಯತುಲ್ಲಾ ಶಾಬಂದ್ರಿಗೆ ಈ ಕ್ಷೇತ್ರದ ಜೆಡಿಎಸ್ ಟಿಕೆಟ್ ತಪ್ಪಿತ್ತು. ಈ ಬಾರಿ ಕೂಡ ತಂಜೀಮ್ ಇದೇ ನಿರ್ಧಾರ ಮಾಡಿದ್ದರಿಂದ ಜೆಡಿಎಸ್‌ನಿಂದ ಶಾಬಂದ್ರಿ ಕಣಕ್ಕಿಳಿಯೋದಿಲ್ಲ ಎಂದೇ ನಿರ್ಣಯವಾಗಿತ್ತು. ಈಗ ತಂಜೀಮ್‌ನ ಈ ಮುಸ್ಲಿಂ ಮತಗಳ ಈಡುಗಂಟು ಬಹುತೇಕವಾಗಿ ನಾಗೇಂದ್ರ ನಾಯ್ಕ್ ಹಾಗೂ ಮುಸ್ಲಿಂ ಸಮುದಾಯದೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ಮಂಕಾಳ ವೈದ್ಯ ನಡುವೆ ಹಂಚಿಹೋಗುವ ಸಾಧ್ಯತೆ ಇದೆ. ಹಾಗೇನಾದರೂ, ಸುನೀಲ್ ನಾಯ್ಕ್ ಅವರಿಗೆ ಈ ಬಾರಿಯ ಚುನಾವಣೆಯಲ್ಲೂ ಗೆಲುವು ಸಾಧಿಸಬೇಕಾದಲ್ಲಿ ತಮ್ಮ ನಾಮಧಾರಿ ಸಮುದಾಯ ದೊಡ್ಡ ಮಟ್ಟದಲ್ಲಿ ಕೈಹಿಡಿಯಬೇಕಿದೆ. ಅದರೊಂದಿಗೆ ಭಟ್ಕಳ-ಹೊನ್ನಾವರ ಭಾಗದ ಹಿಂದೂ ಮತಗಳು ಆಚೀಚೇ ಆಗದಂತೆ ಎಚ್ಚರಿಕೆ ವಹಿಸಬೇಕಿದೆ.
ಇವುಗಳೊಂದಿಗೆ ಬಹಳ ಪ್ರಮುಖವಾಗಿ ಸುನೀಲ್ ನಾಯ್ಕ್‌ಗೆ ಈ ಬಾರಿ ಅವರ ಕ್ಷೇತ್ರದ ಬಿಜೆಪಿ ನಾಯಕರ ವಿಶ್ವಾಸ ಅಗತ್ಯವಾಗಿದೆ. ಒಂದು ಸಣ್ಣ ವತ್ಯಾಸವಾದರೂ ಫಲಿತಾಂಶ ಉಲ್ಟಾ ಆಗುವ ಸಾಧ್ಯತೆಗಳು ದಟ್ಟವಾಗಿ ಕಾಣುತ್ತಿರುವಾಗ, ಪಕ್ಷದಲ್ಲಿರುವ ತಮ್ಮ ವಿರೋಧಿ ಅಲೆಯನ್ನು ತಣಿಸಿ ಅವರೊಂದಿಗೆ ಮುನ್ನಡೆಯಬೇಕಾದ ಅಗತ್ಯ ಸುನೀಲ್ ನಾಯ್ಕ್ ಪಾಲಿಗೆ ಹಿಂದೆಂದಿಗಿಂತಲೂ ಹೆಚ್ಚಾಗಿ ಕಾಣುತ್ತಿದೆ.
Bhatkal Assembly Election: ಭಟ್ಕಳದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಬೆಂಬಲವಿಲ್ಲ, ತಂಜೀಮ್ ನಿರ್ಧಾರ!
2018ರ ಚುನಾವಣೆಯ ಲೆಕ್ಕಾಚಾರದಲ್ಲಿ ಹೇಳೋದಾದರೆ, ಈ ಕ್ಷೇತ್ರದಲ್ಲಿ ಒಟ್ಟು 2,12,646 ಮತದಾರರಿದ್ದು ಇದರಲ್ಲಿ 1,08,412 ಪುರುಷರು ಹಾಗೂ 1,04,177 ಮಹಿಳಾ ಮತದಾರರಿದ್ದಾರೆ. 2011ರ ಜನಗಣತಿ ಪ್ರಕಾರ, ಈ ಕ್ಷೇತ್ರದ ಒಟ್ಟೂ ಜನಸಂಖ್ಯೆ 1, 61,576 ಆಗಿದ್ದರೆ, ಇದರಲ್ಲಿ 80753 ಪುರುಷರ ಹಾಗೂ 80, 823 ಮಹಿಳೆಯರಿದ್ದಾರೆ. ಇದರಲ್ಲಿ ಶೇ. 64ರಷ್ಟು ಹಿಂದುಗಳು, ಶೇ. 33ರಷ್ಟು ಮುಸ್ಲಿಮರು ಹಾಗೂ ಶೇ. 2.05ರಷ್ಟು ಕ್ರಿಶ್ಚಿಯನ್ ಮತದಾರರಿದ್ದಾರೆ.
ಭಟ್ಕಳ: ಬಿಜೆಪಿ ಹಾಲಿ ಎಂಎಲ್‌ಎ- ಮಾಜಿ ಶಾಸಕರ ನಡುವೆ ಬಹಿರಂಗ ಫೈಟ್..!
ಇನ್ನೂ 2000ದಿಂದೀಚೆಗೆ ನಡೆದ ನಾಲ್ಕು ಚುನಾವಣೆಯಲ್ಲಿ ಎರಡು ಬಾರಿ ಬಿಜೆಪಿ, ಒಮ್ಮೆ ಕಾಂಗ್ರೆಸ್ ಹಾಗೂ ಒಮ್ಮೆ ಪಕ್ಷೇತರ ಶಾಸಕ ಗೆಲುವು ಸಾಧಿಸಿದ್ದಾರೆ. 2013ರ ಚುನಾವಣೆಯಲ್ಲಿ ಇನಾಯತುಲ್ಲಾ ಶಾಬಂದ್ರಿ 2ನೇ ಸ್ಥಾನ ಪಡೆದಿದ್ದೇ ಜೆಡಿಎಸ್‌ನ ಈವರೆಗಿನ ಅತೀದೊಡ್ಡ ಸಾಧನೆಯಾಗಿದೆ.