Bhatkal Assembly Election: ಭಟ್ಕಳದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಬೆಂಬಲವಿಲ್ಲ, ತಂಜೀಮ್‌ ನಿರ್ಧಾರ!

ಅಚ್ಚರಿಯ ಬೆಳವಣಿಗೆಯಲ್ಲಿ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಬೆಂಬಲಿಸದೇ ಇರಲು ಜಮಾತ್‌ಗಳ ಸಾಮೂಹಿಕ ಮಂಡಳಿಯಾದ ಮಜ್ಲಿ ಇ ಇಶ್ಲಾ ವಾ ತಂಜೀಮ್‌ ನಿರ್ಧರಿಸಿದೆ. ಇದರ ನಡುವೆಯೇ ತಂಜೀಮ್‌ ವಿರುದ್ಧ ಸ್ಥಳೀಯ ಮಹಿಳೆಯರು ಪ್ರತಿಭಟನೆ ಆರಂಭಿಸಿದ್ದಾರೆ.
 

Bhatkal Majlis e Islah wa Tanzeem against fielding Muslim candidate in assembly elections san

ಭಟ್ಕಳ (ಮಾ.23): ಬಹಳ ಅಚ್ಚರಿಯ ಸಂಗತಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇರಲು ಹಾಗೂ ಮುಸ್ಲಿಂ ಅಭ್ಯರ್ಥಿಗೆ ಬೆಂಬಲಿಸದೇ ಇರಲು ಜಮಾತ್‌ಗಳ ಸಾಮೂಹಿಕ ಮಂಡಳಿಯಾದ ಮಜ್ಲಿ ಇ ಇಶ್ಲಾ ವಾ ತಂಜೀಮ್‌ ನಿರ್ಧಾರ ಮಾಡಿದೆ. ಸೋಮವಾರ ಸಂಜೆ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಮಾಡಲಾಗಿದ್ದು, ಇದರ ವಿರುದ್ಧ ಮುಸ್ಲಿಂ ಮಹಿಳೆಯರೇ ಕಿಡಿಕಾರಲು ಆರಂಭಿಸಿದ್ದಾರೆ. ಈ ನಿರ್ಧಾರವು ಭಟ್ಕಳದ ಪ್ರಬಲ ಆಕಾಂಕ್ಷಿ ಎಂದು ಪರಿಗಣಿಸಲಾದ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಅವರ ಗೆಲುವಿಗೆ ದೊಡ್ಡ ಹಿನ್ನಡೆ ಆಗುವ ಸಾಧ್ಯತೆ ಇದೆ. ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಬಿಸಿ ಬಿಸಿ ಚರ್ಚೆಗಳು ನಡೆದಿದ್ದವು. ಇಲ್ಲಿ ಸುಮಾರು 60,000 ಮತದಾರರನ್ನು ಹೊಂದಿರುವ ಮುಸ್ಲಿಮರು ಮುಸ್ಲಿಂ ಅಭ್ಯರ್ಥಿಯನ್ನು ತಪ್ಪದೇ ಬೆಂಬಲಿಸಬೇಕು ಎಂಬ ಒತ್ತಾಯವೂ ಕೇಳಿಬಂದಿತ್ತು. ಇದರೊಂದಿಗೆ ಈ ಬಾರಿ ಭಟ್ಕಳ ಹೊನ್ನಾವರ ಕ್ಷೇತ್ರದಲ್ಲಿ ಹಾಲಿ ಶಾಸಕ ಬಿಜೆಪಿಯ ಸುನೀಲ್‌ ನಾಯ್ಕ್‌ ಹಾಗೂ ಕಾಂಗ್ರೆಸ್‌ನ ಮಂಕಾಳ ವೈದ್ಯ ನಡುವಿನ ನೇರ ಹಣಾಹಣಿಯಾಗಿ ಮಾರ್ಪಡಲಿದೆ. 

ಭಟ್ಕಳ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೇ ಅಥವಾ ಮುಸ್ಲಿಂ ಅಭ್ಯರ್ಥಿಗೆ ಬೆಂಬಲ ನೀಡಬೇಕೇ ಎನ್ನುವ ಕುರಿತು  ಭಟ್ಕಳದ ಮುಸ್ಲಿಮರ ಸಾಮಾಜಿಕ ರಾಜಕೀಯ ಸಂಘಟನೆಯಾದ ತಂಝೀಮ್, ಸ್ಥಳೀಯ ಜಮಾತ್‌ ಪ್ರತಿನಿಧಿಗಳ ಸಾಮೂಹಿಕ ಸಭೆಯನ್ನು ಕರೆದಿತ್ತು. ಇದರಲ್ಲಿ ಭಟ್ಕಳ, ಶಿರಾಲಿ, ಮಂಕಿ, ಮುರುಡೇಶ್ವರ, ಉಪ್ಪಣ, ಸಂಶಿ, ಹೊನ್ನಾವರ ಸೇರಿದಂತೆ ವಿವಿಧ ಜಮಾತ್ ಗಳ 48 ಪ್ರತಿನಿಧಿಗಳು ಭಾಗವಹಿಸಿದ್ದರು.

ಸಾಕಷ್ಟು ಚರ್ಚೆ ಹಾಗೂ ಆ ಬಳಿಕ ನಡೆದ ಆಂತರಿಕ ಮತದಾನದ ಬಳಿಕ, ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರವನ್ನು ಕೈಬಿಡಲಾಗಿದೆ. ಭಟ್ಕಳದ ಬಹುತೇಕ ಪ್ರತಿನಿಧಿಗಳು ಯೋಜನೆಗೆ ಬೆಂಬಲ ನೀಡಿದ್ದರು. ಆದರೆ ಅಕ್ಕಪಕ್ಕದ ಜಮಾತ್‌ಗಳ ಬಹುಪಾಲು ಪ್ರತಿನಿಧಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಪರಿಣಾಮವಾಗಿ ಮುಸ್ಲಿಂ ಸ್ಪರ್ಧಿಗೆ ಬೆಂಬಲ ನೀಡದಿರಲು ನಿರ್ಧರಿಸಲಾಯಿತು.

ಈ ಹಿಂದೆ ನಡೆದ ತಂಝೀಮ್‌ನ ರಾಜಕೀಯ ವ್ಯವಹಾರಗಳ ಸಮಿತಿ ಮತ್ತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ ಎಂದು ತಿಳಿದುಬಂದಿತ್ತು. ಸರ್ವ ಜಮಾತ್ ಮುಂದೆ ಇಟ್ಟಾಗ, ತಂಝೀಮ್ ಸಭೆಯಲ್ಲಿ ತೆಗೆದುಕೊಂಡ ನಿರ್ಣಯ ಸೋಲು ಕಂಡಿದೆ.

ಭಟ್ಕಳ ಶಾಸಕನಾಗುವ ಯಾವುದೇ ಯೋಗ್ಯತೆ ಸುನೀಲ್ ನಾಯ್ಕ್‌ಗೆ ಇಲ್ಲವೆಂದ ಸ್ವಪಕ್ಷೀಯರು!

2013 ರ ಚುನಾವಣೆಯಲ್ಲಿ ತಂಝೀಮ್ ಬೆಂಬಲದೊಂದಿಗೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಇನಾಯತುಲ್ಲಾ ಶಾಬಂದ್ರಿ ಅವರು 27 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದರೂ ಸ್ವತಂತ್ರ ಅಭ್ಯರ್ಥಿ ಮಂಕಾಳು ವೈದ್ಯ ವಿರುದ್ಧ ಸೋತಿದ್ದರು. ಅವರು ಗಳಿಸಿದ ಹೆಚ್ಚಿನ ಮತಗಳು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಯೋಜನೆಗೆ ಉತ್ತೇಜನ ನೀಡಿದ್ದವು. 2018 ರಲ್ಲಿ, ತಂಜೀಮ್ ಬೆಂಬಲ ನಿರಾಕರಿಸಿದ್ದರಿಂದ ಜೆಡಿಎಸ್‌ ಶಾಬಂದ್ರಿಗೆ ಟಿಕೆಟ್ ನಿರಾಕರಿಸಿತು. ಈ ವರ್ಷ ಸ್ಪರ್ಧಿಸುವ ನಿರೀಕ್ಷೆ ಇಟ್ಟುಕೊಂಡು ಹೋರಾಟಕ್ಕೂ ಸಿದ್ಧವಾಗಿದ್ದ ಶಾಬಂದ್ರಿ ಅವರಿಗೆ ತಂಝೀಮ್ ನಿರ್ಧಾರದಿಂದ ಮತ್ತೊಮ್ಮೆ ನಿರಾಸೆಯಾಗಿದೆ. ತಂಝೀಮ್‌ನ ಅಧ್ಯಕ್ಷರಾಗಿದ್ದರೂ, ಶಾಬಂದ್ರಿ ಅವರು ಸಂಘಟನೆಯ ನಿರ್ಧಾರವನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಭಟ್ಕಳದಲ್ಲಿ ಮುಸ್ಲಿಂ ಅಭ್ಯರ್ಥಿ ಗೆಲುವು ಸಾಧಿಸುವ ದೊಡ್ಡ ಅವಕಾಶ ಇದೆ ಎಂದು ತಂಜೀಮ್‌ ಬೆಂಬಲಿಗರು ವಾದಿಸಿದ್ದರು. ಬಿಜೆಪಿ ಶಾಸಕ ಸುನೀಲ್‌ ನಾಯ್ಕ್‌ ಅವರಿಗೆ ಪಕ್ಷದ ಆಂತರಿಕ ವಲಯದಲ್ಲಿಯೇ ವಿರೋಧಗಳಿದ್ದರೆ, ಕಾಂಗ್ರೆಸ್‌ನಲ್ಲಿ ಎರಡು ಬಣಗಳಾಗಿವೆ. ಇಂಥ ಸಮಯದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ತಂಜೀಮ್‌ ಬೆಂಬಲಿಸಿದರೆ ಗೆಲುವು ಸಾಧ್ಯವಾಗುತ್ತದೆ ಎಂದು ಹೇಳಲಾಗಿತ್ತು.  ಈ ನಿರ್ಧಾರದ ಬಳಿಕ ಮುಂದಿನ ಚುನಾವಣೆಯಲ್ಲಿ ತಂಜೀಮ್‌ ಯಾರನ್ನು ಬೆಂಬಲಿಸಲಿದೆ ಅನ್ನೋದು ಕುತೂಹಲವಾಗಿದೆ.

ಭಟ್ಕಳ: ಬಿಜೆಪಿ ಹಾಲಿ ಎಂಎಲ್‌ಎ- ಮಾಜಿ ಶಾಸಕರ ನಡುವೆ ಬಹಿರಂಗ ಫೈಟ್..!

ಮಹಿಳೆಯರ ವಿರೋಧ: ಇನ್ನು ಭಟ್ಕಳದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಕಣಕ್ಕಿಳಿಸದೇ ಇರಲು ತಂಜೀಮ್‌ ಮಾಡಿದ ನಿರ್ಧಾರಕ್ಕೆ ಮುಸ್ಲಿಂ ಮಹಿಳೆಯರಿಂದಲೇ ವಿರೋಧ ವ್ಯಕ್ತವಾಗಿದೆ. ಬುಧವಾರ ಬೆಳಗ್ಗೆ ತಂಜೀಮ್‌ ಎದುರು ಈ ಕುರಿತಾಗಿ ಪ್ರತಿಭಟನೆಯನ್ನೂ ಮಾಡಲಾಗಿದೆ. ಭಟ್ಕಳದಲ್ಲಿ ಗೆಲುವು ಸಾಧಿಸಿದ ಯಾರೊಬ್ಬರೂ ಮುಸ್ಲಿಂ ಸಮುದಾಯಕ್ಕಾಗಿ ಕೆಲಸ ಮಾಡಿಲ್ಲ. ಕೋವಿಡ್‌ ಸಮಯದಲ್ಲಿ ಸಮ್ಮ ಸಮುದಾಯಕ್ಕೆ ಸಹಾಯ ಸಿಕ್ಕಿಲ್ಲ. ಹಾಗಾಗಿ ಈ ಬಾರಿ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು. ಸೋತರೂ ಚಿಂತೆಯಿಲ್ಲ, ನಾವು ಅಭ್ಯರ್ಥಿಯನ್ನು ನಿಲ್ಲಿಸಬೇಕು ಎಂದಿದ್ದಾರೆ. ಇಲ್ಲದೇ ಇದ್ದಲ್ಲಿ ನಾವೆಲ್ಲರೂ ನೋಟಾಕ್ಕೆ ಮತ ಹಾಕುವುದಾಗಿ ಎಚ್ಚರಿಸಿದ್ದಾರೆ.

Latest Videos
Follow Us:
Download App:
  • android
  • ios