ಭಟ್ಕಳ: ಬಿಜೆಪಿ ಹಾಲಿ ಎಂಎಲ್‌ಎ- ಮಾಜಿ ಶಾಸಕರ ನಡುವೆ ಬಹಿರಂಗ ಫೈಟ್..!
ಸುನೀಲ್ ನಾಯ್ಕ್ ವಿರುದ್ಧ ಹೇಳಿಕೆ ನೀಡಿದವರು ಬಿಜೆಪಿಗರಲ್ಲ, ಉಚ್ಛಾಟನೆಯಾದವ್ರು ಎಂದ ನಳಿನ್, ಅರೋಪ ಮಾಡಿದವರ ಹಿಂದಿದೆ ಮಾಜಿ ಶಾಸಕ ಮಾಂಕಾಳು ವೈದ್ಯ ಅವರ ಕೈವಾಡ ಎಂದ ಶಾಸಕ ಸುನೀಲ್ ನಾಯ್ಕ್.
ಭರತ್ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರಕನ್ನಡ(ಮಾ.23): ಶಾಸಕ ಸುನೀಲ್ ನಾಯ್ಕಗೆ ಶಾಸಕನಾಗುವ ಯಾವುದೇ ಯೋಗ್ಯತೆ ಇಲ್ಲ. ಈ ಬಾರಿ ಚುನಾವಣೆಗೆ ಟಿಕೆಟ್ ನೀಡದಂತೆ ಒತ್ತಾಯಿಸಿದ್ದರು. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೌಂಟರ್ ನೀಡಿದ್ರೆ, ಶಾಸಕ ಸುನೀಲ್ ನಾಯ್ಕ್ ಮಾತ್ರ ಸೋಲಿನ ಭೀತಿಯಿಂದ ಇದು ಮಾಜಿ ಶಾಸಕ ಮಾಂಕಾಳು ವೈದ್ಯ ಅವರು ಮಾಡಿಸಿದ ಕೃತ್ಯ ಎಂದು ಆರೋಪಿಸಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ.
ಹೌದು, ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಇತ್ತೀಚೆಗೆ ಭಟ್ಕಳದ ಮಾಜಿ ಶಾಸಕ ಮಾಂಕಾಳು ವೈದ್ಯ ಅವರ ಅಭಿಮಾನಿಗಳು ಕೇಸರಿ ಶಾಲು ಹಾಕಿಕೊಂಡು ತಾವು ಬಿಜೆಪಿ ಕಾರ್ಯಕರ್ತರು ಎಂದು ಬಿಂಬಿಸಿಕೊಳ್ಳುತ್ತಾ ಹಾಲಿ ಶಾಸಕ ಸುನೀಲ್ ನಾಯ್ಕ್ ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದರು. ಶಾಸಕ ಸುನೀಲ್ ನಾಯ್ಕ್ ಭಟ್ಕಳ ಮುಸ್ಲಿಂ ಸಮುದಾಯದ ತಂಜೀಂ ಸಂಸ್ಥೆಯೊಂದಿಗೆ ಕೈಮಿಲಾಯಿಸಿ ಬಿಜೆಪಿ ವಿರುದ್ಧ ಕೆಲಸ ಮಾಡುತ್ತಿದ್ದಾರೆ.
ಖರ್ಗೆ, ಪರಮೇಶ್ವರರನ್ನು ಮುಗಿಸಿರುವ ಸಿದ್ಧರಾಮಯ್ಯ, ಡಿಕೆಶಿಯನ್ನು ಕೂಡಾ ಮುಗಿಸ್ತಾರೆ: ಕಟೀಲು
ಬಿಜೆಪಿಯ ಮೂಲ ಕಾರ್ಯಕರ್ತರನ್ನೇ ಪಕ್ಷದಲ್ಲಿ ಕಡೆಗಣಿಸುವುದಲ್ಲದೇ, ಅವರ ಸರ್ವಾಧಿಕಾರಿ ಧೋರಣೆ ವಿರೋಧಿಸುವ ಕಾರ್ಯಕರ್ತರ ತೇಜೋವಧೆ ಮಾಡಿ ಬೆದರಿಕೆ ಒಡ್ಡಲಾಗುತ್ತಿದೆ. ಅಲ್ಲದೇ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಭಟ್ಕಳಕ್ಕೆ ಬಂದ ಸಂದರ್ಭದಲ್ಲಿ ಹಲಾಲ್ ಮಾಂಸದ ಊಟ ಮಾಡಿಸಿ ಉದ್ದೇಶಪೂರ್ವಕವಾಗಿ ದೇವಸ್ಥಾನಕ್ಕೆ ಕರೆದೊಯ್ದಿದ್ದರು ಎಂದು ಆರೋಪ ಮಾಡಿದ್ದರು.
ಈ ವಿಚಾರ ಸಂಬಂಧಿಸಿ ಪ್ರತಿಕ್ರಿಯಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಭಟ್ಕಳ ಶಾಸಕ ಸುನೀಲ್ ನಾಯ್ಕ್ ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದವರೇ ಯೋಗ್ಯತೆಯನ್ನು ಕಳೆದುಕೊಂಡಿದ್ದಾರೆ. ಅವರು ಈಗಾಗಲೇ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹೊರಗೆ ನಡೆದಿದ್ದಾರೆ. ಬಿಜೆಪಿ ಮೋರ್ಚಾದಿಂದ ಅವರನ್ನು ಆಗಲೇ ಉಚ್ಛಾಟನೆ ಮಾಡಲಾಗಿದೆ. ಅವರು ಬಿಜೆಪಿಯ ಸಾಮಾನ್ಯ ಕಾರ್ಯಕರ್ತರು ಕೂಡಾ ಅಲ್ಲ ಎಂದು ತಿಳಿಸಿದ್ದಾರೆ.
ಇನ್ನು ಈ ವಿಚಾರಕ್ಕೆ ಸಂಬಂಧಿಸಿ ಹೇಳಿಕೆ ನೀಡಿರುವ ಭಟ್ಕಳ ಶಾಸಕ ಸುನೀಲ್ ನಾಯ್ಕ್, ತನ್ನ ಮೇಲೆ ಮಾಡಲಾಗಿರುವ ಆರೋಪದ ಹಿಂದೆ ಮಾಜಿ ಶಾಸಕ ಮಾಂಕಾಳು ವೈದ್ಯ ಅವರ ಕೈವಾಡವಿದೆ ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿದವರೆಲ್ಲಾ ಮಾಂಕಾಳು ವೈದ್ಯ ಅವರ ಬೆಂಬಲಿಗರು. ಕಾರ್ಯಕ್ರಮಗಳಲ್ಲಿ ಅವರೊಂದಿಗೆ ಗುರುತಿಸಿಕೊಂಡಿದ್ದು, ಇದಕ್ಕೆ ತನ್ನಲ್ಲಿ ಸಾಕ್ಷಿ ಕೂಡಾ ಇದೆ ಅಂತ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು: ಸಚಿವ ಮುರುಗೇಶ್ ನಿರಾಣಿ
ಸೋಲಿನ ಭೀತಿಯಿಂದ ಮಾಂಕಾಳು ವೈದ್ಯ ಅವರು ತನ್ನ ಬೆಂಬಲಿಗರ ಮೂಲಕ ಈ ರೀತಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಸುದ್ದಿಗೋಷ್ಠಿ ನಡೆಸಿದವರು ಯಾರೂ ಬಿಜೆಪಿ ಕಾರ್ಯಕರ್ತರಲ್ಲ. ಈ ಹಿಂದೆಯೇ ಅವರೆಲ್ಲಾ ಉಚ್ಛಾಟಿತರಾಗಿದ್ರು. ಬಿಜೆಪಿಯ ಕಾರ್ಯಕರ್ತರು ಯಾರೂ ಶಾಸಕರ ವಿರುದ್ಧ ಮಾತನಾಡುವುದಿಲ್ಲ. ಭಟ್ಕಳದಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಹೇಳಿಕೆ ನೀಡುತ್ತಿರುವ ಮಾಜಿ ಶಾಸಕರು ಅವಿವೇಕಿಯಾಗಿ ಉತ್ತರ ಕೊಡುವುದಲ್ಲ. ಮುಗ್ಧ ಮಹಿಳೆಯರಿಗೆ 2000ರೂ. ಕೊಡ್ತೇನೆ ಎಂದು ಕಾರ್ಯಕ್ರಮಕ್ಕೆ ಆಹ್ವಾನಿಸುವ ಮಾಜಿ ಶಾಸಕರು ಬಳಿಕ ಅವರಿಗೆ ಗ್ಯಾರಂಟಿ ಕಾರ್ಡ್ ನೀಡಿ ಚುನಾವಣೆ ಗೆದ್ದು ಬಂದ ಬಳಿಕ ಹಣ ನೀಡ್ತೇನೆ ಎಂದು ಹೇಳ್ತಾರೆ. ನನ್ನ ವಿರುದ್ಧ ಹೇಳಿಕೆ ನೀಡಿದವವರು ಬಿಜೆಪಿ ಕಾರ್ಯಕರ್ತರಲ್ಲ. ಕಾಂಗ್ರೆಸ್ ಕಾಂಚಾಣದ ಕಾರ್ಯಕರ್ತರು ಎಂದು ಸುನೀಲ್ ನಾಯ್ಕ್ ಟೀಕಿಸಿದ್ದಾರೆ.
ಒಟ್ಟಿನಲ್ಲಿ ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಹಾಗೂ ಮಾಜಿ ಶಾಸಕರ ನಡುವೆ ಬಹಿರಂಗ ಗುದ್ದಾಟ, ಕೆಸರೆರೆಚಾಟ ಪ್ರಾರಂಭಗೊಂಡಿದೆ. ಮಾಂಕಾಳು ವೈದ್ಯರ ಬೆಂಬಲಿಗರು ಬಿಜೆಪಿ ಕಾರ್ಯಕರ್ತರ ಸೋಗಿನಲ್ಲಿ ಹೇಳಿಕೆ ನೀಡುತ್ತಿದ್ದಾರೆ ಎನ್ನಲಾಗುತ್ತಿದ್ದು, ಇದಕ್ಕೆ ಪೂರಕ ಸಾಕ್ಷಿಗಳನ್ನು ಕೂಡಾ ಹಾಲಿ ಶಾಸಕರು ನೀಡಿದ್ದಾರೆ. ಅಲ್ಲದೇ, ಕೌಂಟರ್ ನೀಡಲು ಕೂಡಾ ಬಿಜೆಪಿಯಿಂದ ಸಿದ್ಧತೆಗಳು ನಡೆಯುತ್ತಿವೆ. ಹಾಲಿ ಹಾಗೂ ಮಾಜಿ ಶಾಸಕರ ಕೆಸರೆರೆಚಾಟ ಮುಂದಿನ ದಿನಗಳಲ್ಲಿ ಯಾವ ಮಟ್ಟ ತಲುಪಲಿದೆ ಎಂದು ಕಾದು ನೋಡಬೇಕಷ್ಟೇ.