Asianet Suvarna News Asianet Suvarna News

ಗುಜರಾತ್‌ ಬಳಿಕ ಕರುನಾಡಿನತ್ತ ಚಿತ್ತ: ಕರ್ನಾಟಕ ಗೆಲ್ಲಲು ಪ್ರಧಾನಿ ಮೋದಿಯಿಂದ ರಣತಂತ್ರ ಸಭೆ

ದೆಹಲಿಯಲ್ಲಿ ಸೋಮವಾರದಿಂದ 2 ದಿನ ಕಾಲ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ನಡೆಯಲಿದ್ದು, ಈ  ವೇಳೆ ಕರ್ನಾಟಕ ಸೇರಿ 5 ರಾಜ್ಯಗಳ ವಿಧಾನಸಭೆ ಚುನಾವಣೆ ಕುರಿತು ಮಹತ್ವದ ಚರ್ಚೆ ನಡೆಯಲಿದೆ. ಇನ್ನು 5 ತಿಂಗಳಲ್ಲಿ ಕರ್ನಾಟಕ ಸಾರ್ವತ್ರಿಕ ವಿಧಾನಸಭೆ ಚುನಾವಣೆ ನಡೆಯಬೇಕಿದೆ. 

karnataka and other states elections to get priority in 2 days bjp meet after gujarat assembly elections ash
Author
First Published Dec 4, 2022, 11:31 PM IST

ನವದೆಹಲಿ: ಮಹತ್ವದ ಗುಜರಾತ್‌ ವಿಧಾನಸಭಾ ಚುನಾವಣೆ ಮುಕ್ತಾಯದ ಹಂತ ತಲುಪಿದ ಬೆನ್ನಲ್ಲೇ, ಕರ್ನಾಟಕ ಸೇರಿದಂತೆ 5 ರಾಜ್ಯಗಳ ವಿಧಾನಸಭೆ ಮತ್ತು 2024ರ ಲೋಕಸಭಾ ಚುನಾವಣೆಗೆ ರಣತಂತ್ರ ಹೆಣೆಯಲು ಬಿಜೆಪಿ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಸೋಮವಾರದಿಂದ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ 2 ದಿನಗಳ ಸಭೆ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಪಕ್ಷದ ಹಿರಿಯರು, ರಾಜ್ಯ ಘಟಕಗಳ ಅಧ್ಯಕ್ಷರು, ಸಂಘಟನಾ ಪ್ರಧಾನ ಕಾರ್ಯದರ್ಶಿಗಳು ಭಾಗಿಯಾಗಲಿದ್ದಾರೆ.

ಸೋಮವಾರ ಬೆಳಗ್ಗೆ ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲಿರುವ ಪ್ರಧಾನಿ ನರೇಂದ್ರ ಮೋದಿ, ಬಳಿಕ ದೆಹಲಿಗೆ ಆಗಮಿಸಿ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಲಿದ್ದಾರೆ. ಈ ಸಭೆಯು ಕರ್ನಾಟಕ, ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶ, ತ್ರಿಪುರಾ ವಿಧಾನಸಭಾ ಚುನಾವಣೆ ಮತ್ತು ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷದ ರಾಜಕೀಯ ಕಾರ್ಯಸೂಚಿ ಅನಾವರಣಗೊಳಿಸುವ ಜೊತೆಗೆ, ಪಕ್ಷದ ಸಿದ್ಧತೆಯನ್ನು ಪರಿಶೀಲಿಸಲಿದೆ.

ಇದನ್ನು ಓದಿ: ಗುಜರಾತ್ ಚುನಾವಣೆ, ಸಬರಮತಿ ವಿಧಾನಸಭಾ ಕ್ಷೇತ್ರದಲ್ಲಿ ಮೋದಿ ಮತದಾನ!

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಮುಂದಿನ ಚುನಾವಣೆಯಲ್ಲಿ ಪಕ್ಷದ ಕಾರ್ಯತಂತ್ರದ ಬಗ್ಗೆ ಪ್ರಸ್ತಾಪಿಸಲಿದ್ದಾರೆ ಮತ್ತು ಚುನಾವಣೆ ಎದುರಿಸಲು ಪಕ್ಷ ನಡೆಸಿರುವ ಸಿದ್ಧತೆಗಳನ್ನು ಪರಿಶೀಲಿಸಲಿದ್ದಾರೆ ಎಂದು ಪಕ್ಷ ಹೇಳಿಕೆಯಲ್ಲಿ ತಿಳಿಸಿದೆ. ಈ ಸಭೆಯಲ್ಲಿ ಎಲ್ಲಾ ರಾಜ್ಯಗಳ ರಾಜ್ಯಾಧ್ಯಕ್ಷರು, ಸಂಘಟನಾ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗಿಯಾಗಲಿದ್ದು, ಕರ್ನಾಟಕದ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಸಂಘಟನಾ ಕಾರ್ಯದರ್ಶಿ ರಾಜೇಶ್ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದೂ ತಿಳಿದುಬಂದಿದೆ. 

ವಿವಿಧ ರಾಜ್ಯಗಳಲ್ಲಿ ಚುನಾವಣೆ ಕುರಿತು ಹಾಗೂ ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಯಲಿದ್ದು, ಮುಂಬರುವ ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ, ಪಕ್ಷದ ಸಂಘಟನೆ ಕುರಿತು ನಳಿನ್‌ ಕುಮಾರ್‌ ಕಟೀಲ್‌ ಮಾಹಿತಿ ನೀಡಲಿದ್ದಾರೆ. ಒಟ್ಟಾರೆ, ಗುಜರಾತ್ ಚುನಾವಣೆ ಮುಗಿದ ಕೂಡಲೇ ಕರ್ನಾಟಕ ಚುನಾವಣೆ ಬಗ್ಗೆ ಬಿಜೆಪಿ ಗಮನ ಹರಿಸಲಿದೆ ಎಂದು ತಿಳಿದುಬಂದಿದೆ. 
2024ರ ಲೋಕಸಭಾ ಚುನಾವಣೆಯ ಗೆಲ್ಲಲು ಪಕ್ಷ ಬಹಳ ಹಿಂದೆಯೇ ಕಾರ್ಯತಂತ್ರ ರೂಪಿಸಿದ್ದು, ಅದರ ಭಾಗವಾಗಿ ಪಕ್ಷದ ಹಿರಿಯ ನಾಯಕರು, ಕೇಂದ್ರ ಸಚಿವರನ್ನು ವಿವಿಧ ರೀತಿಯ ಕಾರ್ಯಗಳಿಗೆ ನಿಯೋಜಿಸಿದೆ. ಜೊತೆಗೆ 2019ರ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋತ ಕ್ಷೇತ್ರಗಳನ್ನು ಗೆಲ್ಲಲು ವಿಶೇಷ ಮಹತ್ವ ನೀಡಿದೆ. ಹೀಗಾಗಿ ಅವರೆಲ್ಲಾ ನೀಡಿರುವ ಸಲಹೆ, ಶಿಫಾರಸುಗಳನ್ನು ಸೋಮವಾರದಿಂದ ಆರಂಭವಾಗಲಿರುವ ಸಭೆಯಲ್ಲಿ ಮಂಡಿಸಿ ಚರ್ಚಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಚುನಾವಣೆಗೆ ಬಿಜೆಪಿ ಮಹಾಪ್ಲ್ಯಾನ್, ಪರಾಜಿತ ಅಭ್ಯರ್ಥಿಗಳಿಗೆ ಶುರುವಾಯ್ತು ಟೆನ್ಶನ್, ಇಲ್ಲಿದೆ ಸಭೆಯ ಇನ್ಫಾರ್ಮೆಶನ್

ಗುಜರಾತ್‌ ಚುನಾವಣೆಗೆ ನಾಳೆ ಕೊನೆಯ ಹಂತದ ಮತದಾನ

ಇಡೀ ದೇಶದ ಗಮನ ಸೆಳೆದಿರುವ ಗುಜರಾತ್‌ ವಿಧಾನಸಭೆಗೆ 2ನೇ ಹಾಗೂ ಕೊನೆ ಹಂತದ ಚುನಾವಣೆ ಸೋಮವಾರ ನಡೆಯಲಿದೆ. ಒಟ್ಟು 14 ಜಿಲ್ಲೆಗಳ 93 ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಏರ್ಪಾಡಾಗಿದೆ. ಇನ್ನೊಂದೆಡೆ ದೇಶದ ವಿವಿಧ ಭಾಗಗಳಲ್ಲಿ 1 ಲೋಕಸಭೆ ಹಾಗೂ 7 ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಕೂಡ ನಡೆಯಲಿವೆ. ಈ ಎಲ್ಲ ಚುನಾವಣೆಗಳ ಫಲಿತಾಂಶ ಡಿಸೆಂಬರ್ 8 ರಂದು ಪ್ರಕಟವಾಗಲಿದೆ.

2017ರ ಚುನಾವಣೆಯಲ್ಲಿ ಬಿಜೆಪಿ ಈ 93 ಸೀಟುಗಳ ಪೈಕಿ 51 ಸೀಟುಗಳನ್ನು ಗೆದ್ದಿತ್ತು. ಅದೇ ಕಾಂಗ್ರೆಸ್‌ 39 ಹಾಗೂ ಉಳಿದ 3 ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದರು. ಈ ಬಾರಿ ಮೊದಲ ಸಲ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷವೂ ಕಣಕ್ಕಿಳಿದಿದೆ. ಇದರಿಂದ ಬಿಜೆಪಿ, ಕಾಂಗ್ರೆಸ್‌ ಹಾಗೂ ಆಪ್‌ ನಡುವಿನ ತ್ರಿಕೋನ ಕದನ ಭಾರಿ ಕುತೂಹಲ ಸೃಷ್ಟಿಸಿದೆ.

93 ಸ್ಥಾನಗಳಲ್ಲಿ ಬಿಜೆಪಿ, ಕಾಂಗ್ರೆಸ್‌, ಆಮ್‌ ಆದ್ಮಿ ಪಕ್ಷ ಸೇರಿ ಒಟ್ಟು 61 ಪಕ್ಷಗಳ 833 ಅಭ್ಯರ್ಥಿಗಳು ಚುನಾವಣಾ ಕಣಕ್ಕಿಳಿದಿದ್ದಾರೆ. 285 ಸ್ವತಂತ್ರ ಅಭ್ಯರ್ಥಿಗಳು ಕೂಡಾ ಸ್ಪರ್ಧಿಸಲಿದ್ದಾರೆ.

Follow Us:
Download App:
  • android
  • ios