ಬೆಂಗಳೂರು, (ಅ.10): ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು,  ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ನಿಗಮ ಮಂಡಳಿ ಹುದ್ದೆ ನೀಡಿ ಬಂಡಾಯ ಶಮನದ ಪ್ಲಾನ್ ಮಾಡಿದ್ದಾರೆ.

ಈ ಮೂಲಕ ಅನರ್ಹ ಶಾಸಕರ ಸ್ಪರ್ಧೆಯ ಹಾದಿ ಸುಗಮೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವಷ್ಟರಲ್ಲೇ ಓರ್ವ ಬಿಜೆಪಿ ಟಿಕೆಟ್ ಆಕಾಂಕ್ಷಿ ನಿಗಮ ಮಂಡಳಿ ಹುದ್ದೆಯನ್ನು ಧಿಕ್ಕರಿಸಿದ್ದು, ಬೈ ಎಲೆಕ್ಷನ್‌ನಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಬಹಿರಂಗವಾಗಿ ಹೇಳಿದ್ದಾರೆ. 

ಶರತ್ ಬಚ್ಚೇಗೌಡ ಸೇರಿ ಟಿಕೆಟ್ ಕೇಳಿದವರಿಗೆಲ್ಲ ದೊಡ್ಡ ದೊಡ್ಡ ಹುದ್ದೆ ಗಿಫ್ಟ್ ಕೊಟ್ಟ BSY

ಉಪಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಬಹುತೇಕ ಅನರ್ಹ ಶಾಸಕರಿಗೆ ಟಿಕೆಟ್​ ಸಿಗುವ ಸುಳಿವು ಇರುವುದರಿಂದ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ವಿರುದ್ಧ ಮತ್ತೋರ್ವ ಬಿಜೆಪಿ ಮಾಜಿ ಶಾಸಕ ಬಹಿರಂಗವಾಗಿಯೇ ತೊಡೆ ತಟ್ಟಿದ್ದಾರೆ.

ಮೈತ್ರಿ ಸರ್ಕಾರ ಬೀಳಿಸಿ ಅನರ್ಹಗೊಂಡಿರುವ ಶಾಸಕರಲ್ಲಿ ಕಾಂಗ್ರೆಸ್​ನ ಕಾಗವಾಡ ಕ್ಷೇತ್ರದ ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಕೂಡ ಒಬ್ಬರಾಗಿದ್ದಾರೆ. ಹೀಗಾಗಿ ಉಪಚುನಾವಣೆಗೆ ಪಾಟೀಲ್ ಅವರಿಗೆ ಬಿಜೆಪಿ ಟಿಕೆಟ್‌ ನೀಡಲು  ಕಾಗವಾಡದ ಮಾಜಿ ಶಾಸಕ ರಾಜು ಕಾಗೆ ಅವರ ಅಸಮಾಧಾನಕ್ಕೆ ಕಾರಣವಾಗಿದೆ. 

ಹೀಗಾಗಿ ಕಾಗೆ ಅವರಿಗೆ ಬಿಎಸ್‌ವೈ ಘಟಪ್ರಭಾ-ಮಲಪ್ರಭಾ ಅಚ್ಚುಕಟ್ಟು ಪ್ರದೇಶ ಅಭಿವೃದ್ದಿ ನಿಗಮ ಮಂಡಳಿಯ ಅದ್ಯಕ್ಷ ಸ್ಥಾನ ನೀಡಿ ಬಂಡಾಯ ಶಮನಕ್ಕೆ ಮುಂದಾಗಿದ್ದರು. ಆದ್ರೆ, ಇದೀಗ ಅದನ್ನು ದಿಕ್ಕರಿಸಿರುವ ಕಾಗೆ  ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಬಹಿರಂಗವಾಗಿಯೇ ಸವಾಲು ಹಾಕಿದ್ದಾರೆ.

ಸಂತೋಷ್‌ ಜತೆ ಅನರ್ಹರ ರಹಸ್ಯ ಸಭೆ : ಬಿಎಸ್‌ವೈ ದೂರವಿಟ್ಟು ಭೇಟಿ

ನಾನು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನಿರಾಕರಣೆ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಉಪಚುನಾವಣೆಯ ಕಣದಿಂದ ಹಿಂದೆ ಸರಿಯುವುದಿಲ್ಲ ಎಂದು ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. 

ಸಿಎಂ ಬಿಎಸ್​ವೈ ಅವರು ರಾಜು ಕಾಗೆ ಅವರಿಗೆ ಘಟಪ್ರಭಾ-ಮಲಪ್ರಭಾ ಅಚ್ಚುಕಟ್ಟು ಪ್ರದೇಶ ಅಭಿವೃದ್ದಿ ನಿಗಮ ಮಂಡಳಿಯ ಅದ್ಯಕ್ಷ ಸ್ಥಾನ ನೀಡಿ, ಕಣ್ಣೋರೆಸುವ ತಂತ್ರ ಮಾಡಿದ್ದರು. ಆದರೆ, ಬಹಿರಂಗವಾಗಿಯೇ ಫೇಸ್​ಬುಕ್​ ಸ್ಟೇಟಸ್ ಹಾಕುವ ಮೂಲಕ ಸಿಎಂ ಬಿಎಸ್​ವೈಗೆ ಸೆಡ್ಡು ಹೊಡೆದಿದ್ದು, ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಮತ್ತೊಂದೆಡೆ ಹೊಸಕೋಟೆ ಕ್ಷೇತ್ರ ಬಿಜೆಪಿ ಟಿಕೆಟ್‌ ಪ್ರಬಲ ಆಕಾಂಕ್ಷಿಯಾಗಿರುವ ಶರತ್ ಬಚ್ಚೇಗೌಡ ಅವರಿಗೆ ಗೃಹ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಆದ್ರೆ, ಅವರು ಇದುವರೆಗೂ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.