ಬೆಂಗಳೂರು [ಅ.07]:  ಅನರ್ಹ ಶಾಸಕರು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ಕುತೂಹಲ ಮೂಡಿಸಿದ್ದು, ಇದು ಪಕ್ಷದಲ್ಲಿ ತರಹೇವಾರಿ ವಿಶ್ಲೇಷಣೆಗೆ ಮತ್ತು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಶನಿವಾರ ಬೆಳ್ಳಂಬೆಳಗ್ಗೆ ಮಲ್ಲೇಶ್ವರದಲ್ಲಿರುವ ಕಚೇರಿಗೆ ಆಗಮಿಸಿದ್ದ ಬೆಂಗಳೂರಿನ ಅನರ್ಹ ಶಾಸಕರಾದ ಮುನಿರತ್ನ, ಬೈರತಿ ಬಸವರಾಜು ಮತ್ತು ಎಸ್‌.ಟಿ.ಸೋಮಶೇಖರ್‌ ಅವರು ಗೌಪ್ಯತೆಯಿಂದ ಸಂತೋಷ್‌ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರೂ ಉಪಸ್ಥಿತರಿದ್ದರು ಎಂದು ತಿಳಿದುಬಂದಿದೆ.

ಸಂತೋಷ್‌ ಅವರೇ ಅನರ್ಹ ಶಾಸಕರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ ಎಂಬ ವಾದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಣದಿಂದ ಕೇಳಿಬಂದಿದ್ದರೆ, ಅನರ್ಹ ಶಾಸಕರೇ ಸ್ವಇಚ್ಛೆಯಿಂದ ಭೇಟಿಗೆ ಆಗಮಿಸಿದ್ದರು ಎಂಬ ಪ್ರತಿವಾದ ಸಂತೋಷ್‌ ಬಣದಿಂದ ವ್ಯಕ್ತವಾಗಿದೆ.

ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉತ್ತರ ಕರ್ನಾಟಕದಲ್ಲಿ ಪ್ರವಾಸ ಕೈಗೊಂಡಿದ್ದ ವೇಳೆ ಈ ಬೆಳವಣಿಗೆ ನಡೆದಿರುವುದು ಅವರ ಬೆಂಬಲಿಗರಲ್ಲಿ ಅನುಮಾನ ಮೂಡಿಸಿದೆ. ಇದು ಮೇಲ್ನೋಟಕ್ಕೆ ಕಂಡುಬರುವಷ್ಟುಸರಳವಾಗಿಲ್ಲ. ಯಡಿಯೂರಪ್ಪ ಅವರನ್ನು ದೂರವಿಟ್ಟು ಅನರ್ಹ ಶಾಸಕರೊಂದಿಗೆ ಮಾತುಕತೆ ನಡೆಸುವ ಅಗತ್ಯವೇನಿತ್ತು ಎಂಬ ಪ್ರಶ್ನೆ ಅವರ ಬೆಂಬಲಿಗರಿಂದ ಕೇಳಿಬರುತ್ತಿದೆ.

ಸಂತೋಷ್‌ ಅವರು ಪಕ್ಷದ ರಾಷ್ಟ್ರೀಯ ನಾಯಕರಾಗಿರುವುದರಿಂದ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಆಪ್ತರಾಗಿರುವುದರಿಂದ ಉಪಚುನಾವಣೆಯಲ್ಲಿ ಅವರ ಸಹಕಾರ, ಸಹಾಯ ಬೇಕು ಎಂಬ ಕಾರಣಕ್ಕಾಗಿ ಅನರ್ಹ ಶಾಸಕರು ಭೇಟಿ ಮಾಡುವ ನಿರ್ಧಾರಕ್ಕೆ ಬಂದಿರಬಹುದು. ಆದರೆ, ಈ ಭೇಟಿ ವೇಳೆ ಯಡಿಯೂರಪ್ಪ ಪಾಳೆಯದ ಒಬ್ಬ ಮುಖಂಡರೂ ಇರದೇ ಇದ್ದುದು ಅನುಮಾನ ಮೂಡುವಂತೆ ಮಾಡಿದೆ.

ಭವಿಷ್ಯದಲ್ಲಿ ಯಡಿಯೂರಪ್ಪ ಅವರನ್ನು ನಿಯಂತ್ರಿಸುವ ತಂತ್ರಗಾರಿಕೆಯ ಭಾಗವಾಗಿ ಅನರ್ಹ ಶಾಸಕರನ್ನು ಈಗಲೇ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಇದಾಗಿರಬಹುದು ಎಂಬ ಆತಂಕದ ಮಾತೂ ಯಡಿಯೂರಪ್ಪ ಅವರ ಪಾಳೆಯದಲ್ಲಿ ವ್ಯಕ್ತವಾಗಿದೆ.

ಬಿಜೆಪಿ ಕಚೇರಿ ಜಗನ್ನಾಥ್‌ ಭವನದಲ್ಲಿ ತಳಮಹಡಿಯಿಂದ ಲಿಫ್ಟ್‌ ಮೂಲಕ ನೇರವಾಗಿ ಸಂತೋಷ್‌ ಅವರು ವಾಸ್ತವ್ಯ ಹೂಡುವ ನಾಲ್ಕನೇ ಮಹಡಿಗೆ ತೆರಳಿರುವ ಅನರ್ಹ ಶಾಸಕರು ನಂತರ ಅದೇ ಮಾರ್ಗವಾಗಿ ಕೆಳಗೆ ಬಂದು ತೆರಳಿದ್ದಾರೆ. ಬೆಳಗ್ಗೆಯಾಗಿದ್ದರಿಂದ ಪಕ್ಷದ ಕಚೇರಿಯಲ್ಲಿ ಹೆಚ್ಚಿನ ಸಿಬ್ಬಂದಿಯಾಗಲಿ ಅಥವಾ ಕಾರ್ಯಕರ್ತರಾಗಲಿ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ.