Asianet Suvarna News Asianet Suvarna News

ಜೆಡಿಎಸ್‌ ಮತ ಆಧರಿಸಿ RR ನಗರ ಫಲಿತಾಂಶ; ಒಕ್ಕಲಿಗ ಮತದಾರರೇ ನಿರ್ಣಾಯಕ

ಜೆಡಿಎಸ್‌ ಮತ ಆಧರಿಸಿ ಆರ್‌.ಆರ್‌. ನಗರ ಫಲಿತಾಂಶ | ಮೇಲ್ನೋಟಕ್ಕೆ ಕಾಂಗ್ರೆಸ್‌-ಬಿಜೆಪಿ ನೇರ ಹಣಾಹಣಿ | ಜೆಡಿಎಸ್‌ ಯಾರ ಮತದ ಬುಟ್ಟಿಗೆ ಕೈ ಹಾಕಲಿದೆ ಎಂಬುದು ಕುತೂಹಲ | ಇದರ ಆಧಾರದ ಮೇರೆಗೇ ಫಲಿತಾಂಶ ಸಂಭವ |ಮುನಿರತ್ನ, ಕುಸುಮಾ, ಕೃಷ್ಣಮೂರ್ತಿ ಫೈಟ್‌

 

JDS voters will Decide RR Nagar Result hls
Author
Bengaluru, First Published Oct 24, 2020, 2:50 PM IST

ಬೆಂಗಳೂರು (ಅ. 24): ಪ್ರಸಕ್ತ ಉಪಚುನಾವಣೆ ನಡೆಯುತ್ತಿರುವ ಎರಡು ವಿಧಾನಸಭಾ ಕ್ಷೇತ್ರಗಳ ಪೈಕಿ ತೀವ್ರ ಕುತೂಹಲ ಮೂಡಿಸಿರುವುದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ. ಇದುವರೆಗಿನ ಮೇಲ್ನೋಟಕ್ಕೆ ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಹಣಾಹಣಿ ಏರ್ಪಟ್ಟಿದ್ದು, ಜೆಡಿಎಸ್‌ ಯಾರ ಮತ ಬುಟ್ಟಿಗೆ ಕೈಹಾಕುತ್ತದೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.

ಮೂರು ಬಾರಿ ಚುನಾವಣೆಯನ್ನು ಕಂಡ ರಾಜರಾಜೇಶ್ವರಿ ನಗರ (ಆರ್‌ಆರ್‌ ನಗರ) ವಿಧಾನಸಭಾ ಕ್ಷೇತ್ರವು ಇದೇ ಮೊದಲ ಬಾರಿಗೆ ಉಪಚುನಾವಣೆಯನ್ನು ಎದುರಿಸಲು ಸಜ್ಜಾಗಿದೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕ್ಷೇತ್ರದ ಕಾಂಗ್ರೆಸ್‌ ಶಾಸಕರಾಗಿ ಆಯ್ಕೆಯಾಗಿದ್ದ ಮುನಿರತ್ನ ಅವರು ಆ ಪಕ್ಷದಿಂದ ಹೊರಬಂದು ಬಿಜೆಪಿಗೆ ಸೇರ್ಪಡೆಯಾಗಿದ್ದರಿಂದ ಈಗ ಉಪಚುನಾವಣೆ ಎದುರಾಗಿದೆ.

ಬೆಂಗಳೂರಿಗೆ ಪರ ಊರು ಎನ್ನಿಸಿದ್ದ ಆರ್‌.ಆರ್‌.ನಗರ ಇದೀಗ ನಗರದ ಪ್ರಮುಖ ಭಾಗವಾಗಿದೆ. ಭೌಗೋಳಿಕವಾಗಿ ಬೆಂಗಳೂರಿನ ಮಟ್ಟಿಗೆ ಅತಿದೊಡ್ಡ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆ ಇದೆ. ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಪ್ರಥಮ ಬಾರಿಗೆ ಕ್ಷೇತ್ರದಲ್ಲಿ ಕಮಲ ಅರಳಿದರೂ ನಂತರ ‘ಕೈ’ ಮೇಲಾಯಿತು. ನಾಲ್ಕನೇ ಬಾರಿ ಚುನಾವಣೆ ಎದುರಿಸುತ್ತಿರುವ ಆರ್‌.ಆರ್‌.ನಗರ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳಿಸಿ ಮತ್ತೊಮ್ಮೆ ತನ್ನ ಹಿಡಿತ ಸಾಧಿಸಲು ಬಿಜೆಪಿ ಸನ್ನದ್ಧವಾಗಿದೆ.

ಮುನಿರತ್ನ ಕುರುಕ್ಷೇತ್ರ RR ನಗರಕ್ಕೆ ಮಿಲಿಟರಿ ಎಂಟ್ರಿ ಕೊಟ್ಟಿದ್ಯಾಕೆ?

ಎರಡು ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕ್ಷೇತ್ರವನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡಿದ್ದ ನಿರ್ಮಾಪಕ ಮುನಿರತ್ನ ಮೂರನೇ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದು, ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಜೆಡಿಎಸ್‌-ಕಾಂಗ್ರೆಸ್‌ ಸರ್ಕಾರ ಪತನಗೊಳಿಸಲು ಉಭಯ ಪಕ್ಷದ 17 ಶಾಸಕರು ರಾಜೀನಾಮೆ ನೀಡಿದ್ದರು. 15 ಕ್ಷೇತ್ರಗಳಿಗೆ ಕಳೆದ ವರ್ಷ ನವೆಂಬರ್‌-ಡಿಸೆಂಬರ್‌ ತಿಂಗಳಲ್ಲಿ ಉಪಚುನಾವಣೆ ನಡೆದಿತ್ತು. ಆದರೆ, ಆರ್‌.ಆರ್‌.ನಗರ ಕ್ಷೇತ್ರದಲ್ಲಿ ಅಕ್ರಮ ಗುರುತಿನ ಚೀಟಿ ಪತ್ತೆಯಾದ ಪ್ರಕರಣ ನ್ಯಾಯಾಲಯದಲ್ಲಿ ಇದ್ದ ಕಾರಣ ಈಗ ವಿಳಂಬವಾಗಿ ಉಪಚುನಾವಣೆ ನಡೆಯುತ್ತಿದೆ.

ಇನ್ನು ಚುನಾವಣಾ ಕಣವನ್ನು ಪ್ರತಿಷ್ಠೆಯಾಗಿರುವ ಪರಿಗಣಿಸಿರುವ ಕಾಂಗ್ರೆಸ್‌ ಪಕ್ಷವು ಐಎಎಸ್‌ ಅಧಿಕಾರಿ ದಿವಂಗತ ಡಿ.ಕೆ.ರವಿ ಪತ್ನಿ ಕುಸುಮಾ ಅವರನ್ನು ಕಣಕ್ಕಿಳಿಸಿದೆ. ರಾಜಕೀಯಕ್ಕೆ ಕುಸುಮಾ ಹೊಸಬರಾದರೂ ಅವರ ತಂದೆ ಹನುಮಂತರಾಯಪ್ಪ ಹಳಬರು. ತಂದೆಯ ಮಾರ್ಗದರ್ಶನದಲ್ಲಿ ಕುಸುಮಾ ರಾಜಕೀಯ ಏಣಿ ಹತ್ತುವ ಪ್ರಯತ್ನದಲ್ಲಿದ್ದಾರೆ.

ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದ್ದರೂ ನೇರ ಹಣಾಹಣಿ ಇರುವುದು ಕಾಂಗ್ರೆಸ್‌-ಬಿಜೆಪಿಗೆ ಮಾತ್ರ. ಮುನಿರತ್ನ ಬಿಜೆಪಿಗೆ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್‌ ಪಣತೊಟ್ಟಿದೆ. ಕೈ ಪಾಳೆಯಕ್ಕೆ ತಾನೇನು ಎಂಬುದನ್ನು ತೋರಿಸಬೇಕಾದರೆ ಮುನಿರತ್ನ ಗೆಲ್ಲಲೇಬೇಕು. ಮುನಿರತ್ನ ಅವರನ್ನು ಗೆಲ್ಲಿಸುವ ಹೊಣೆ ಬಿಜೆಪಿಗಿದೆ. ಹೀಗಾಗಿ ಬಿಜೆಪಿಗೆ ಪ್ರತಿಷ್ಠೆ ಕಣವಾಗಿದೆ. ಇನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಾದೇಶಿಕ ಪಕ್ಷದ ಅಸ್ತಿತ್ವದ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ. ಚುನಾವಣಾ ಕಣದಲ್ಲಿ ಅಂತಿಮವಾಗಿ ತಾಯಿ ರಾಜರಾಜೇಶ್ವರಿ ಯಾರಿಗೆ ಒಲಿಯುತ್ತಾಳೆ ಎನ್ನುವುದೇ ಕೌತುಕದ ಪ್ರಶ್ನೆ.

ಕ್ಷೇತ್ರದಲ್ಲಿ ಎಲ್ಲಾ ವರ್ಗದ ಜನರನ್ನೊಳಗೊಂಡಿರುವ ಕಾಸ್ಮೋಪಾಲಿಟಿನ್‌ ಸಂಸ್ಕೃತಿ ಹೊಂದಿದೆ. ಉತ್ತಮ ರಸ್ತೆ, ಉದ್ಯಾನವನಗಳಿದ್ದರೂ ಕ್ಷೇತ್ರ ಅಭಿವೃದ್ಧಿಯಾಗಿದೆ ಎಂದು ಹೇಳುವಂತಿಲ್ಲ. ಕ್ಷೇತ್ರದಲ್ಲಿ ಕೊಳಗೇರಿಗಳೂ ಇವೆ. ಕುಡಿಯುವ ನೀರು ಪೂರೈಕೆ, ಒಳಚರಂಡಿ ವ್ಯವಸ್ಥೆ ಇನ್ನು ಸುಧಾರಿಸಬೇಕಾಗಿದೆ. ಶ್ರೀಮಂತರು ಇದ್ದರೂ ಬಡವರು ಸಹ ಕಾಣುತ್ತಾರೆ. ಇತ್ತೀಚೆಗಿನ ದಿನದಲ್ಲಿ ಸಿನಿಮಾ ತಾರೆಯರ ಮೊದಲ ಆಯ್ಕೆ ಆರ್‌.ಆರ್‌.ನಗರ ಎನ್ನುವುದಕ್ಕೆ ಇಲ್ಲಿರುವ ಚಿತ್ರತಾರೆಯರ ಸಂಖ್ಯೆಯೇ ಸಾಕ್ಷಿಯಾಗಿದೆ. ತುಮಕೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿಯಿಂದ ಮೈಸೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿವರೆಗೆ ಹರಡಿಕೊಂಡಿರುವ ಕ್ಷೇತ್ರದಲ್ಲಿ ನೈಸ್‌ರಸ್ತೆ, ಅತ್ಯುತ್ತಮ ಗುಣಮಟ್ಟದ ಆಸ್ಪತ್ರೆಗಳಿವೆ. ರಿಯಲ್‌ಎಸ್ಟೇಟ್‌ ಪ್ರಭಾವದಿಂದ ಕ್ಷೇತ್ರಕ್ಕೆ ಬಂದು ನೆಲೆಸುವವರ ಸಂಖ್ಯೆ ಹೆಚ್ಚಾಗಿದೆ. ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಾರ್ಮೆಂಟ್ಸ್‌ ಫ್ಯಾಕ್ಟರಿಗಳಿರುವ ಕಾರಣ ಅಂದಿನ ದುಡಿಮೆಯನ್ನು ಗಳಿಸುವ ಮಂದಿಯೂ ಹೆಚ್ಚಿದ್ದಾರೆ.

ಅಕ್ರಮದಲ್ಲಿ ಪಾಲ್ಗೊಂಡ ಮುನಿರತ್ನ : ಕೋರ್ಟ್ ಸೂಚಿಸಿದ್ರು FIR ಹಾಕ್ತಿಲ್ಲ: ಕಾಂಗ್ರೆಸ್

ಒಕ್ಕಲಿಗ ಮತದಾರರೇ ನಿರ್ಣಾಯಕ:

ಕ್ಷೇತ್ರದಲ್ಲಿನ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅವರೇ ನಿರ್ಣಾಯಕರಾಗಿದ್ದಾರೆ. ಇತರೆ ಸಮುದಾಯದವರು ಸಹ ಪೈಪೋಟಿ ನೀಡುವ ಮತದಾರರು ಇದ್ದಾರೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಭ್ಯರ್ಥಿಗಳಿಬ್ಬರೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಕಾಂಗ್ರೆಸ್‌ ನಾಯಕರು ಒಕ್ಕಲಿಗ ಮತಗಳನ್ನು ಕ್ರೋಢೀಕರಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಇದೇ ವೇಳೆ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರೂ ಒಕ್ಕಲಿಗ ಮತದಾರರನ್ನೇ ಗುರಿಯಾಗಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ, ಒಕ್ಕಲಿಗ ಮತದಾರರು ಹರಿದು ಹಂಚಿಹೋಗುತ್ತಾರಾ ಅಥವಾ ಒಂದು ಪಕ್ಷದ ಕಡೆ ವಾಲುತ್ತಾರಾ ಎಂಬುದು ಕುತೂಹಲವಾಗಿದೆ.

ಒಟ್ಟು 4.60 ಲಕ್ಷ ಮತದಾರರಿದ್ದು, ಈ ಪೈಕಿ 2.40 ಲಕ್ಷ ಪುರುಷರು, 2.20 ಲಕ್ಷ ಮಹಿಳೆಯರು ಮತ್ತು 79 ಇತರರು ಇದ್ದಾರೆ. 18ರಿಂದ 19ರ ವಯೋಮಾನದವರು 3092 ಮತದಾರರಿದ್ದಾರೆ. ಒಕ್ಕಲಿಗ ಸಮುದಾಯದವರು ಅಂದಾಜು 2 ಲಕ್ಷ ಇದ್ದರೆ, ಪರಿಶಿಷ್ಟರು 80 ಸಾವಿರದಷ್ಟುಇದ್ದಾರೆ. ಲಿಂಗಾಯತ 35 ಸಾವಿರಕ್ಕಿಂತ ಹೆಚ್ಚಿದ್ದರೆ, ಬ್ರಾಹ್ಮಣ ಸಮುದಾಯದವರು 25 ಸಾವಿರಕ್ಕಿಂತ ಹೆಚ್ಚಿದ್ದಾರೆ. ಮುಸ್ಲಿಂ ಜನಾಂಗದವರು 45 ಸಾವಿರ, ಕುರುಬ 35 ಸಾವಿರ ಮಂದಿ ಇದ್ದಾರೆ ಎಂದು ಅಂದಾಜಿಸಲಾಗಿದೆ.

9 ವಾರ್ಡ್‌ಗಳು ವ್ಯಾಪ್ತಿಗೆ:

ಬಿಬಿಎಂಪಿ ವಿಷಯಕ್ಕೆ ಬಂದರೆ 9 ವಾರ್ಡ್‌ಗಳು ಆರ್‌.ಆರ್‌.ನಗರ ವ್ಯಾಪ್ತಿಗೆ ಬರುತ್ತವೆ. ಲಕ್ಷ್ಮೇದೇವಿ ನಗರ, ಎಚ್‌.ಎಂ.ಟಿ.ವಾರ್ಡ್‌, ಕೊಟ್ಟಿಗೆಪಾಳ್ಯ, ಜಾಲಹಳ್ಳಿ, ಯಶವಂತಪುರ, ಜ್ಞಾನಭಾರತಿ, ಜೆ.ಪಿ.ಪಾರ್ಕ್, ಆರ್‌.ಆರ್‌.ನಗರ, ಲಗ್ಗೆರೆ ವಾರ್ಡ್‌ಗಳು ಸೇರಿವೆ. ಮುನಿರತ್ನ ವಿರುದ್ಧ ಪಾಲಿಕೆ ಸದಸ್ಯೆಯಾಗಿದ್ದ ಜೆಡಿಎಸ್‌ನ ಮಂಜುಳಾ ನಾರಾಯಣಸ್ವಾಮಿ, ಆಶಾ ಸುರೇಶ್‌ ತಿರುಗಿ ಬಿದ್ದರು. ಕಾಂಗ್ರೆಸ್‌ನವರೇ ಆದ ಆಶಾ ಸುರೇಶ್‌ ಅವರು ಮುನಿರತ್ನ ವಿರುದ್ಧ ತಿರುಗಿಬಿದ್ದಿದ್ದರೂ ಈಗ ಅವರ ಪರವಾಗಿಯೇ ಕೆಲಸ ಮಾಡಲಾರಂಭಿಸಿದ್ದಾರೆ.

ಏಳೇಳು ಜನ್ಮದಲ್ಲೂ ಡಿಕೆಶಿಗೆ ನಾನು ಸರಿಸಾಟಿ ಆಗಲು ಸಾಧ್ಯವೇ ಇಲ್ಲ ಎಂದ ಬಿಜೆಪಿ ನಾಯಕ

ಕಳೆದ ಬಾರಿ ಕಾಂಗ್ರೆಸ್‌, ಈ ಬಾರಿ ಬಿಜೆಪಿ:

ಮುನಿರತ್ನ ಅವರು ಕಳೆದ ಎರಡು ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕೆಲವು ಸಾಧಿಸಿದ್ದರೆ, ಈ ಬಾರಿ ಬಿಜೆಪಿ ಹುರಿಯಾಳು. 2018ರ ಚುನಾವಣೆಯಲ್ಲಿ ಮುನಿರತ್ನಕ್ಕೆ ಪೈಪೋಟಿ ನೀಡಿದ್ದ ತುಳಸಿ ಮುನಿರಾಜುಗೌಡ ಅವರಿಗೆ ಕ್ಷೇತ್ರದಲ್ಲಿ ಪ್ರಾಬಲ್ಯ ಇದ್ದರೂ ರಾಜಕೀಯ ಕಾರಣಕ್ಕಾಗಿ ಸುಮ್ಮನಿರಬೇಕಾಗಿರುವುದು ವಿಪರ್ಯಾಸ. ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಜಿ.ಎಚ್‌.ರಾಮಚಂದ್ರ ಬಿಜೆಪಿಗೆ ಸೇರ್ಪಡೆಯಾಗಿ ಮುನಿರತ್ನ ಪರ ಕೆಲಸ ಮಾಡಲು ಮುಂದಾಗಿದ್ದಾರೆ. ಧನ ಸಹಾಯ ಮಾಡುವವರಿಗೆ ಮಣೆಹಾಕುತ್ತಿದ್ದ ಜೆಡಿಎಸ್‌ ಈಗ ತನ್ನ ಕಾರ್ಯಕರ್ತನಿಗೆ ಟಿಕೆಟ್‌ ನೀಡಿದೆ. ಕೃಷ್ಣಮೂರ್ತಿ ಅವರನ್ನು ಕಣಕ್ಕಿಳಿಸಿದೆ.

ಕಳೆದ ಚುನಾವಣೆಯಲ್ಲಿ ಮುನಿರತ್ನ ಅವರಿಗೆ ತುಳಸಿ ಮುನಿರಾಜುಗೌಡ ಎದುರಾಳಿಯಾಗಿದ್ದರೆ, ಈ ಬಾರಿ ಕಾಂಗ್ರೆಸ್‌ನ ಕುಸುಮಾ ಪ್ರಬಲ ಎದುರಾಳಿಯಾಗಲಿದ್ದಾರೆ. ಎರಡು ಬಾರಿ ಗೆಲುವು ಸಾಧಿಸಿರುವ ಮುನಿರತ್ನ ಮೂರನೇ ಬಾರಿ ಜಯಗಳಿಸಿ ಹ್ಯಾಟ್ರಿಕ್‌ ಮಾಡುವ ವಿಶ್ವಾಸದಲ್ಲಿದ್ದಾರೆ. ರಾಜಕೀಯ ಕುಟುಂಬ ಹಿನ್ನೆಲೆ ಹೊಂದಿದ್ದರೂ ಮೊದಲ ಬಾರಿಗೆ ರಾಜಕೀಯಕ್ಕೆ ಪ್ರವೇಶಿಸಿರುವ ಕುಸುಮಾ ಅವರು ಸಹ ವಿಧಾನಸಭೆಗೆ ಪ್ರವೇಶಿಸಲು ಹಾತೊರೆಯುತ್ತಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಕೃಷ್ಣಮೂರ್ತಿ ಸಹ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಕಸರತ್ತು ನಡೆಸಿದ್ದಾರೆ. ಯಾರಿಗೆ ವಿಧಾನಸಭೆ ಪ್ರವೇಶದ ಅದೃಷ್ಟಕಾದಿದೆಯೋ ಫಲಿತಾಂಶವೇ ಉತ್ತರ ಹೇಳಲಿದೆ.

ಡಿ.ಕೆ.ಸಹೋದರರನ್ನು ಎದುರಿಸುತ್ತಾರಾ ಮುನಿರತ್ನ?

ಬಿಜೆಪಿಯ ಮುನಿರತ್ನ ಅವರ ವೇಗಕ್ಕೆ ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತವರ ಸಂಸದ ಸಹೋದರ ಡಿ.ಕೆ.ಸುರೇಶ್‌ ಅವರೇ ಪ್ರಬಲ ಸವಾಲೊಡ್ಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯರಾಗಿರುವ ಸುರೇಶ್‌ ಅವರ ವ್ಯಾಪ್ತಿಗೆ ಬರುವ ಕ್ಷೇತ್ರ ಈ ಆರ್‌.ಆರ್‌.ನಗರ. ಹೀಗಾಗಿ, ತಮ್ಮ ವ್ಯಾಪ್ತಿಯ ಕ್ಷೇತ್ರದಲ್ಲಿ ಪಕ್ಷಕ್ಕೆ ಸೋಲುಂಟಾಗಬಾರದು ಎಂಬ ಉದ್ದೇಶದಿಂದ ಬಿರುಸಿನ ಪ್ರಚಾರ ತಂತ್ರ ರೂಪಿಸುತ್ತಿದ್ದಾರೆ.

ಆದರೆ, ಮುನಿರತ್ನ ಅವರೂ ಈ ಸಹೋದರರಿಂದ ಹಿಂಜರಿದಂತೆ ಕಂಡು ಬರುತ್ತಿಲ್ಲ. ಕಾಂಗ್ರೆಸ್‌ ಪಕ್ಷದ ತಳಮಟ್ಟದ ಕಾರ್ಯಕರ್ತರು ಹಾಗೂ ಮುಖಂಡರನ್ನು ತಮ್ಮತ್ತ ಸೆಳೆಯುವ ಮೂಲಕ ತಿರುಗೇಟು ನೀಡುತ್ತಿದ್ದಾರೆ.

ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು

ಬಿಜೆಪಿ - ಮುನಿರತ್ನ

ಕಾಂಗ್ರೆಸ್‌ - ಕುಸುಮಾ

ಜೆಡಿಎಸ್‌ - ಕೃಷ್ಣಮೂರ್ತಿ

-------------------------

ಕ್ಷೇತ್ರದ ಮತದಾರರು

ಒಟ್ಟು - 4.60 ಲಕ್ಷ

ಪುರುಷರು - 2.40 ಲಕ್ಷ

ಮಹಿಳೆಯರು - 2.20 ಲಕ್ಷ

ಇತರರು - 79

18ರಿಂದ 19ರ ವಯೋಮಾನದವರು - 3092

--------------

2018ರ ಫಲಿತಾಂಶ

ಮುನಿರತ್ನ (ಕಾಂಗ್ರೆಸ್‌) - 1,08,064

ತುಳಸಿ ಮುನಿರಾಜುಗೌಡ (ಬಿಜೆಪಿ) - 82,572

ಜಿ.ಎಚ್‌.ರಾಮಚಂದ್ರ (ಜೆಡಿಎಸ್‌) - 60,360

 

Follow Us:
Download App:
  • android
  • ios