ಬೆಂಗಳೂರು(ಅ.24): ಉಪ ಚುನಾವಣೆ ಅಕ್ರಮದಲ್ಲಿ ಪಾಲ್ಗೊಂಡಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ನಾವು ಸಲ್ಲಿಸಿದ್ದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಲು ಚುನಾವಣಾ ಆಯೋಗ ಹಾಗೂ ನ್ಯಾಯಾಲಯ ಸೂಚಿಸಿದ್ದರೂ ಪೊಲೀಸರು ಎಫ್‌ಐಆರ್‌ ದಾಖಲಿಸುತ್ತಿಲ್ಲ ಎಂದು ಕಾಂಗ್ರೆಸ್‌ ನಾಯಕರು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಪೊಲೀಸ್‌ ವ್ಯವಸ್ಥೆಯು ಸರ್ಕಾರದ ಕೈಗೊಂಬೆಯಂತಾಗಿದ್ದು, ಪಾರದರ್ಶಕ ಚುನಾವಣೆಗೆ ಚುನಾವಣಾ ಆಯೋಗ ಮಧ್ಯಪ್ರವೇಶ ಮಾಡಬೇಕು. ಚುನಾವಣಾ ಆಯೋಗ ಹಾಗೂ ಪೊಲೀಸ್‌ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ನಾಯಕರಾದ ವಿ.ಎಸ್‌. ಉಗ್ರಪ್ಪ, ಪ್ರಿಯಾಂಕ್‌ ಖರ್ಗೆ ಶುಕ್ರವಾರ ಜಂಟಿ ಸುದ್ದಿಗೋಷ್ಠಿ ನಡೆಸಿ ಮುನಿರತ್ನ ವಿರುದ್ಧ ಹರಿಹಾಯ್ದರು.

ವಿ.ಎಸ್‌. ಉಗ್ರಪ್ಪ ಮಾತನಾಡಿ, ಆರ್‌.ಆರ್‌.ನಗರದಲ್ಲಿ ಅರೆಸೇನಾ ಪಡೆ ನಿಯೋಜಿಸುವಂತೆ ಮುನಿರತ್ನ ಹೇಳಿದ್ದಾರೆ. ಇದನ್ನು ನಾವೂ ಸ್ವಾಗತಿಸುತ್ತೇವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ರಾಜ್ಯ ಸರ್ಕಾರ ಅಸಮರ್ಥವಾಗಿದೆ ಎಂದು ಒಪ್ಪಿಕೊಳ್ಳಲಿ ಎಂದು ಹೇಳಿದರು.

ದಳದಲ್ಲಿದ್ದಾಗ ನಾನು ಸಿಎಂ ಆಗೋದನ್ನ ತಡೆದವರು ಯಾರು? ಮಾಜಿ ಸಿಎಂ ಹೇಳಿದ ಇತಿಹಾಸ

ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿ, ಬಿಜೆಪಿ ನಾಯಕರು ಮತದಾರರನ್ನು ಭಯಬೀತರನ್ನಾಗಿ ಮಾಡುತ್ತಿದ್ದಾರೆ. ಹಕ್ಕುಪತ್ರ ಹಿಂಪಡೆಯುತ್ತೇವೆ, ನೀರಿನ ಸಂಪರ್ಕ ನೀಡಲ್ಲ, ಮನೆ ನೀಡುವುದಿಲ್ಲ, ನಮ್ಮ ಸರ್ಕಾರ ಇರುವುದರಿಂದ ಯಾವುದೇ ಕೆಲಸ ಮಾಡಿಕೊಡುವುದಿಲ್ಲ ಎಂದು ಹೆದರಿಸುತ್ತಿದ್ದಾರೆ. ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ದೂರಿದರು.

ರಾಜರಾಜೇಶ್ವರಿನಗರದಲ್ಲಿನ ಚುನಾವಣಾ ಅಕ್ರಮ ಹಾಗೂ ಮುನಿರತ್ನ ಬೆಂಬಲಿಗರಿಂದ ನಡೆದ ಹಲ್ಲೆ ಕುರಿತು ಅ.20 ರಂದು ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದೆವು. ಚುನಾವಣಾ ಆಯೋಗ ಹಾಗೂ ನ್ಯಾಯಾಲಯವು ಮುನಿರತ್ನ ಹಾಗೂ ಬೆಂಬಲಿಗರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಸೂಚನೆ ನೀಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ತಿಳಿಸಿದ್ದಾರೆ.