ಕಾಂಗ್ರೆಸ್ ಸೇರ್ಪಡೆ ಬಗ್ಗೆ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಹೇಳಿದ್ದು ಹೀಗೆ...!
* ಜೆಡಿಎಸ್ ಶಾಸಕ ಕಾಂಗ್ರೆಸ್ ಸೇರುವ ಸುದ್ದಿ
* ಈ ಬಗ್ಗೆ ಸ್ಪಷ್ಟನೆ ಕೊಟ್ಟ ಜಿಡಿ ದೇವೇಗೌಡ
* ತಮ್ಮ ಮುಂದಿನ ರಾಜಕೀಯ ನಡೆಯ ಗುಟ್ಟು ಬಿಟ್ಟುಕೊಡದ ಜಿಟಿಡಿ
ಬೆಂಗಳೂರು, (ಜೂನ್.30): ಪಕ್ಷದಿಂದ ಈಗಾಗಲೇ ಅಂತರ ಕಾಯ್ದುಕೊಂಡಿರುವ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಈ ಹಿಂದೆ ಬಿಜೆಪಿ ಸೇರುವ ಬಗ್ಗೆ ಮಾತುಗಳು ಕೇಳಿಬಂದಿದ್ದವು. ಆದ್ರೆ, ಇದೀಗ ಅವರು ಕಾಂಗ್ರೆಸ್‌ನತ್ತ ಮುಖ ಮಾಡಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.
ಇನ್ನು ಈ ಬಗ್ಗೆ ಸ್ವತಃ ಜಿಡಿ ದೇವೇಗೌಡ್ರೆ ಇಂದು (ಬುಧವಾರ) ಪ್ರತಿಕ್ರಿಯಿಸಿದ್ದು, ಕೊರೋನಾ ಹಿನ್ನೆಲೆಯಲ್ಲಿ ಅಭಿವೃದ್ಧಿಯತ್ತ ಗಮನ ಹರಿಸಿದ್ದೇನೆ. ರಾಜಕೀಯದಲ್ಲಿ ಎಲ್ಲವೂ ಅನಿಶ್ಚಿತ. ಭವಿಷ್ಯ ನುಡಿಯಲಾಗದು ಎಂದು ಹೇಳುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದರು.
ಪಕ್ಷ ತೊರೆಯಲು ಮುಂದಾದ ಶಾಸಕರಿಗೆ ದೇವೇಗೌಡ ಫೋನ್
ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿಯಿದೆ. ಇಡೀ ದೇಶ ಕೊರೋನಾದಿಂದ ತತ್ತರಿಸುತ್ತಿದೆ. ಹಳ್ಳಿಯಿಂದ ದಿಲ್ಲಿಯವರೆಗೆ ಕೊರೋನಾಇದೆ. ಇದರ ಬಗ್ಗೆ ನಾವೆಲ್ಲರೂ ಗಮನ ಹರಿಸಿದ್ದೇವೆ. ಕೊರೋನಾದಿಂದ ಅನುದಾನ ಇಲ್ಲದೇ ಅಭಿವೃದ್ಧಿ ನಿಂತು ಹೋಗಿದೆ. ರಾಜಕಾರಣಿಗಳು ಬಹಳ ಕಷ್ಟದಲ್ಲಿದ್ದೇವೆ ಎಂದರು.
ಶಿಕ್ಷಣದ ಗತಿ ಅಧೋಗತಿಯತ್ತ ಹೋಗುತ್ತಿದೆ. ಆರೋಗ್ಯವೂ ಅಯೋಮಯವಾಗ್ತಿದೆ. ಹೀಗಾಗಿ ನಾನು ಶಾಸಕನಾಗಿ ಕೆಲಸ ಮಾಡ್ತಿದ್ದೇನೆ. ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಎಂಎಲ್ಎ ಅಂತಲ್ಲ. ಅಭಿವೃದ್ಧಿ ಕಡೆಗೆ ಹೆಚ್ಚು ಗಮನ ಹರಿಸಿದ್ದೇನೆ ಎಂದು ಸ್ಪಷ್ಟಪಸಿಡಿಸಿದರು.
ರಾಜಕೀಯದಲ್ಲಿ ಎಲ್ಲವೂ ಅನಿಶ್ಚಿತ. ಈಗಲೇ ಏನನ್ನೂ ಹೇಳಲಾಗದು. ಯಾರೂ ಊಹಿಸದ ರೀತಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಸಿಎಂ ಆದರು. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನವಾಗಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂತು. ನಿರೀಕ್ಷೆಗೂ ಮೀರಿ ಸರ್ಕಾರ ಭದ್ರಪಡಿಸಿಕೊಂಡಿದ್ದಾರೆ. ಮುಂದೇನು ಎಂದು ಭವಿಷ್ಯ ನುಡಿಯಲಾಗದು ಎಂದು ಹೇಳುವ ಮೂಲಕ ತಮ್ಮ ರಾಜಕೀಯ ನಡೆಯ ಗುಟ್ಟು ಬಿಟ್ಟುಕೊಡಲಿಲ್ಲ.