ವಿದ್ಯುತ್ ಕಳ್ಳತನ ಪ್ರಕರಣ: ಕುಮಾರಸ್ವಾಮಿ-ಶಿವಕುಮಾರ್ ವಾಕ್ಸಮರ
ವಿದ್ಯುತ್ ಕಳ್ಳತನ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ವಾಕ್ಸಮರ ತಾರಕಕ್ಕೇರಿದೆ.
ಬೆಂಗಳೂರು (ನ.16): ವಿದ್ಯುತ್ ಕಳ್ಳತನ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ವಾಕ್ಸಮರ ತಾರಕಕ್ಕೇರಿದೆ. ‘ಅಚಾತುರ್ಯದಿಂದ ಆಗಿರುವ ಪ್ರಮಾದಕ್ಕೆ ವಿಷಾದಿಸಿ ದಂಡ ಕಟ್ಟುತ್ತೇನೆ. ನಾನೇನು ಬೇರೆಯವರಂತೆ ರಾಜ್ಯದ ಆಸ್ತಿ ಕಬಳಿಸಿಲ್ಲ. ಕಂಡವರ ಭೂಮಿಗೆ ಬೇಲಿ ಹಾಕಿಲ್ಲ. ಇನ್ನೊಬ್ಬರ ರಕ್ತ ಕುಡಿದು ಧನದಾಹ ತೀರಿಸಿಕೊಂಡಿಲ್ಲ’ ಎಂದು ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ದೀಪಾವಳಿ ಹಬ್ಬಕ್ಕೆ ನನ್ನ ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಲು ಖಾಸಗಿ ಡೆಕೋರೇಟರ್ ಒಬ್ಬರಿಗೆ ಹೇಳಲಾಗಿತ್ತು. ಅವರು ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಿದ ಮೇಲೆ ಪಕ್ಕದಲ್ಲಿಯೇ ಇದ್ದ ಕಂಬದಿಂದ ವಿದ್ಯುತ್ ಸಂಪರ್ಕ ಪಡೆದು ಪರೀಕ್ಷೆ ಮಾಡಿದ್ದಾರೆ. ನಾನು ಬಿಡದಿ ತೋಟದಿಂದ ರಾತ್ರಿ ಮನೆಗೆ ಬಂದಾಗ ವಿಷಯ ಗೊತ್ತಾಯಿತು. ತಕ್ಷಣ ತೆಗೆಸಿ ಮೀಟರ್ ಬೋರ್ಡಿನಿಂದಲೇ ಸಂಪರ್ಕ ಕಲ್ಪಿಸುವಂತೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಡಿ.ಕೆ.ಶಿವಕುಮಾರ್, ‘ಅಚಾತುರ್ಯವೋ, ಕಳ್ಳತನವೋ ಒಟ್ಟಿನಲ್ಲಿ ವಿದ್ಯುತ್ ಕಳ್ಳತನದ ಬಗ್ಗೆ ಕುಮಾರಸ್ವಾಮಿ ಅವರು ಒಪ್ಪಿಕೊಂಡು, ದಂಡ ಕಟ್ಟುತ್ತೇನೆ ಎಂದು ಹೇಳಿರುವುದು ಅಭಿನಂದನೀಯ’ ಎಂದು ತಿರುಗೇಟು ನೀಡಿದ್ದಾರೆ.
ವಿದ್ಯುತ್ ಕಳ್ಳತನ ವಿವಾದಕ್ಕೆ ಸಿಲುಕಿದ ಎಚ್‌ಡಿಕೆ: ಜೈಲು ಇಲ್ಲ ದಂಡಕ್ಕೆ ಸೀಮಿತ ಎಂದ ಬೆಸ್ಕಾಂ
‘ವಿದ್ಯುತ್ ಕಳ್ಳತನ ಮಾಡಬಾರದು, ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ನಮ್ಮಂತವವರೇ ಹೀಗೆ ಕಳವು ಮಾಡಿದರೆ ತಪ್ಪಲ್ಲವೇ? ಈ ವಿಚಾರವಾಗಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ, ನಮಗೆ ಅದರ ಅವಶ್ಯಕತೆಯೂ ಇಲ್ಲ ಮತ್ತು ಸಮಯವೂ ಇಲ್ಲ. ಬೆಸ್ಕಾಂನವರು ಕ್ರಮ ತೆಗೆದುಕೊಳ್ಳುತ್ತಾರೆ. ಕುಮಾರಸ್ವಾಮಿ ಅವರು ಸತ್ಯವನ್ನು ಒಪ್ಪಿಕೊಂಡಿರುವುದಕ್ಕೆ ಶುಭವಾಗಲಿ, ಸತ್ಯಮೇವ ಜಯತೇ ಎನ್ನುವ ಮಾತಿನಂತೆ ಸತ್ಯವನ್ನು ಎತ್ತಿ ಹಿಡಿದಿರುವುದಕ್ಕೆ ಸಂತೋಷ’ ಎಂದು ಲೇವಡಿ ಮಾಡಿದರು.
ಜೆಡಿಎಸ್ ಕಚೇರಿ ಕಾಂಪೌಂಡ್‌ಗೆ ಅವಹೇಳನಕಾರಿ ಪೋಸ್ಟ್: ಡಿಎಸ್ ಕೇಂದ್ರ ಕಚೇರಿ ಜೆ.ಪಿ.ಭವನದ ತಡೆಗೋಡೆಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕುರಿತು ಅವಹೇಳನಕಾರಿ ಪೋಸ್ಟ್ ಅಂಟಿಸಿ, ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆಗೈದು ಬೆದರಿಕೆ ಹಾಕಿದ ಆರೋಪದಡಿ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಗೌಡ ನೀಡಿದ ದೂರಿನ ಮೇರೆಗೆ ಬಿಂದು, ನವೀನ್‌ಗೌಡ ಸೇರಿದಂತೆ ನಾಲ್ವರು ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದೂರಿನಲ್ಲಿ ಏನಿದೆ?: ದೂರುದಾರ ರಮೇಶ್‌ಗೌಡ ನೀಡಿರುವ ದೂರಿನಲ್ಲಿ ‘ನ.14ರ ರಾತ್ರಿ 10 ಗಂಟೆ ಸುಮಾರಿಗೆ ನಾಲ್ವರು ಅಪರಿಚಿತರು ಆಟೋದಲ್ಲಿ ಶೇಷಾದ್ರಿಪುರದ ಜೆ.ಪಿ.ಭವನದ ಬಳಿ ಬಂದಿದ್ದಾರೆ. ಈ ವೇಳೆ ಕಚೇರಿಯನ್ನು ಅತಿಕ್ರಮ ಪ್ರವೇಶ ಮಾಡಿ ತಡೆಗೋಡೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಅಂಟಿಸಿದ್ದಾರೆ. ಜೆಡಿಎಸ್ ಪಕ್ಷ ಹಾಗೂ ನಾಯಕರ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ವೇಳೆ ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸುತ್ತಿದ್ದ ಭದ್ರತಾ ಸಿಬ್ಬಂದಿ ಮಹಾದೇವ ರುವಾನಿ ಅವರು ತಡೆಗೋಡೆ ಬಳಿ ತೆರಳಿದಾಗ ದುಷ್ಕರ್ಮಿಗಳು ಕೀ ಬಂಚ್‌ನಿಂದ ಹಲ್ಲೆಗೈದು, ನಾಳೆಯಿಂದ ಇಲ್ಲಿ ಕೆಲಸ ಮಾಡಬೇಡ ಎಂದು ಪ್ರಾಣ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ’ ಎಂದು ಆರೋಪಿಸಿದ್ದಾರೆ.
ಬಿಜೆಪಿ- ಜೆಡಿಎಸ್‌ನಿಂದ ಶೀಘ್ರವೇ ಬಹಳಷ್ಟು ಮಂದಿ ಕಾಂಗ್ರೆಸ್‌ಗೆ: ಸಚಿವ ಚಲುವರಾಯಸ್ವಾಮಿ
‘ಬಿಂದು ಮತ್ತು ನವೀನ್‌ಗೌಡ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಕೆರಳಿಸುವ ಹಾಗೂ ಅವಹೇಳನ ಮಾಡುವ ರೀತಿಯಲ್ಲಿ ಪೋಸ್ಟ್ ಹಾಕಿದ್ದಾರೆ. ಈಗ ತಡೆಗೋಡೆಗೆ ಅವಹೇಳನಕಾರಿ ಪೋಸ್ಟ್ ಅಂಟಿಸಿದ ಕೃತ್ಯದಲ್ಲಿ ಇವರ ಮೇಲೆಯೇ ತಮಗೆ ಅನುಮಾನವಿದೆ. ಈ ಸಂಬಂಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ’ ದೂರಿನಲ್ಲಿ ಕೋರಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಶೋಧಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.