ಮೈಸೂರು, (ಫೆ.23): ಉಳ್ಳಾಲದಲ್ಲಿ BJP ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ? ಯಾವ ಸಂಘಟನೆಯನ್ನು ಬ್ಯಾನ್ ಮಾಡಬೇಕು ಅಂತಿದ್ದಾರೋ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇವರು ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಮುಂದಿನ ದಿನದಲ್ಲಿ ಇಂಥ ವಿಷಯಗಳನ್ನು ಜನರ ಮುಂದೆ ಇಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

2023ಕ್ಕೆ ಜನರು JDS ಪಕ್ಷವನ್ನು ಗುರುತಿಸಬೇಕು. ಅದಕ್ಕೆ ನಿರ್ಧಾರ ಮಾಡಲಾಗಿದೆ. ನಾವು ಹಿಂದುತ್ವ, ಸೆಕ್ಯೂಲರಿಸಂ ಯಾವ ವಿಚಾರದ ಮೇಲೂ ಚುನಾವಣೆ ಎದುರಿಸುವುದಿಲ್ಲ. 224 ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿ ಇರುತ್ತಾರೆ. ಮುಂದಿನ ಜಿ.ಪಂ, ತಾ.ಪಂ ಚುನಾವಣೆಯಲ್ಲೂ ನಮ್ಮದೆ ಅಭ್ಯರ್ಥಿ ಇರುತ್ತಾರೆ. ಚುನಾವಣೆಯಲ್ಲಿ ಸೀಟು ಹಂಚಿಕೆ ಹೊಂದಾಣಿಕೆ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಾಮನ ಹೆಸರಲ್ಲಿ ಪುಂಡ-ಪೋಕರಿಗಳಿಂದ ಹಣ ಸಂಗ್ರಹ: ಮತ್ತೆ ಸಿಡಿದ ಕುಮಾರಸ್ವಾಮಿ

ಮೈಸೂರಿನಲ್ಲಿ ಇಂದು (ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಎಲ್ಲಿದೆ ಸೆಕ್ಯೂಲರಿಸಂ ? ಎಲ್ಲಿದೆ ಹಿಂದುತ್ವ? ಈಗ ಅಹಿಂದ ಅಂತಿದ್ದಾರಲ್ಲ ಅದರಲ್ಲಿ‌ ಇದ್ಯಾ ಸೆಕ್ಯೂಲರಿಸಂ? ಅಥವಾ ಹಿಂದುತ್ವದ ಬಗ್ಗೆ ಮಾತನಾಡುವವರ ಹೃದಯದಲ್ಲಿ ಹಿಂದುತ್ವ ಇದ್ಯಾ? ಎಂದು ಮಾಜಿ‌ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಪ್ರಶ್ನಿಸಿದರು.

 ಹಿಂದುತ್ವವನ್ನು ಕಾಪಾಡೋರು ಅದನ್ನ ಆಚರಣೆ ಮಾಡ್ತಿದ್ದಾರಾ? ಸೆಕ್ಯೂಲರಿಸಂ ಬಗ್ಗೆ ಮಾತನಾಡೋರು ಅದನ್ನ ಪಾಲಿಸುತ್ತಿದ್ದಾರಾ? ಎಲ್ಲರು ಸುಮ್ಮನೆ ತಮ್ಮ ರಾಜಕೀಯ ಲಾಭಕ್ಕಾಗಿ ಇದನ್ನ ಮಾತನಾಡುತ್ತಾರೆ. ಆದರೆ ಯಾರೊಬ್ಬರು ಈ ಬಗ್ಗೆ ಪ್ರಾಮಾಣಿಕತೆ ಇಟ್ಟುಕೊಂಡಿಲ್ಲ ಎಂದರು.

ಸಿದ್ದರಾಮಯ್ಯ ಮುಂದಿನ ಸಿಎಂ ಅಂತಾ ಕನಸು ಕಾಣುತ್ತಿದ್ದಾರೆ. ಹೋದಲ್ಲಿ ಬಂದಲ್ಲಿ ನಾನೇ ಸಿಎಂ ಅಂತಾ ಘೋಷಣೆ ಮಾಡಿಕೊಂಡಿದ್ದಾರೆ. ಇವರು ಹೋದ ಮೇಲೆ ಕಾಂಗ್ರೆಸ್ ಸಂಸ್ಕೃತಿಯೇ ಬದಲಾಗಿದೆ. ಸಿದ್ದರಾಮಯ್ಯ ಹೋದ ಮೇಲೆ ಅವರದ್ದೇ ವೇದ ವಾಕ್ಯವಾಗಿದೆ. ನಮ್ಮ ಪಕ್ಷವನ್ನ ತುಚ್ಛವಾಗಿ ಕಾಣುವ ಇವರ ಜೊತೆ ಏನು ಹೊಂದಾಣಿಕೆ ಮಾಡಿಕೊಳ್ಳೋದು? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಎಚ್‌ಡಿಕೆ ವಾಗ್ದಾಳಿ ನಡೆಸಿದರು.

ಇನ್ನು ಇದೇ ವೇಳೆ ಮೀಸಲಾತಿ ಬಗ್ಗೆ ಪ್ರತಿಕ್ರಿಯಿಸಿದ ಎಚ್‌ಡಿಕೆ, ಈ ಮೀಸಲಾತಿ ವಿಚಾರ ಕವಲುದಾರಿ ಹಿಡಿದಿದೆ. ಮಿಸಲಾತಿ ಎಂಬ ವಿಷಯದಲ್ಲಿ ದೊಡ್ಡ ಮೀನು ಸಣ್ಣ ಮೀನನ್ನ ನುಂಗಿ ಹಾಕಿದೆ. ಇದರ ಹಿಂದೆ ರಾಜಕಾರಣಿಗಳು ಇದ್ದಾರೆ. ಆದರೆ ಸ್ವಾಮೀಜಿಗಳನ್ನು ಮುಂದೆ ಬಿಟ್ಟಿದ್ದಾರೆ. ಸರ್ಕಾರ ವಾಸ್ತವಾಂಶ ನೋಡಿ ತೀರ್ಮಾನ ಕೈಗೊಳ್ಳಬೇಕು. ಒಕ್ಕಲಿಗ ಸಮುದಾಯಕ್ಕೆ ಯಾವ ರೀತಿ ಮಿಸಲಾತಿ ಬೇಕು ಈಗ?ಈ ವಿಚಾರವಾಗಿ ನನ್ನನ್ನ ಯಾರು ಸಂಪರ್ಕ ಮಾಡಿಲ್ಲ. ನನ್ನ ಅಭಿಪ್ರಾಯವನ್ನು ಕೇಳಿಲ್ಲ ಎಂದು ತಿಳಿಸಿದರು.