ಮುಂದಿನ ಚುನಾವಣೆಯಲ್ಲಿ ಮೈತ್ರಿ ಅನಿವಾರ್ಯ ಆಗಬಹುದು ಎಂಬ ಕಾರಣಕ್ಕೆ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಜೆಡಿಎಸ್‌ ಬಗ್ಗೆ ಮಾತನಾಡುತ್ತಿಲ್ಲ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಮೈಸೂರು (ಅ.21): ಮುಂದಿನ ಚುನಾವಣೆಯಲ್ಲಿ ಮೈತ್ರಿ ಅನಿವಾರ್ಯ ಆಗಬಹುದು ಎಂಬ ಕಾರಣಕ್ಕೆ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಜೆಡಿಎಸ್‌ ಬಗ್ಗೆ ಮಾತನಾಡುತ್ತಿಲ್ಲ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಮೈಸೂರಿನಲ್ಲಿ ನಡೆದ ಜೆಡಿಎಸ್‌ ನಾಯಕರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದವರು ಮಾತ್ರವಲ್ಲದೆ ಎಲ್ಲಾ ಪಕ್ಷದವರಲ್ಲಿಯೂ ಮೈತ್ರಿ ಸರ್ಕಾರ ಬರುತ್ತದೆ ಎಂಬ ನಿಲುವು ಹೊಂದಿದ್ದಾರೆ. ಉಭಯ ಪಕ್ಷದ ನಾಯಕರು ಮೈತ್ರಿಯಾದರೆ ಕಷ್ಟವಾಗುತ್ತದೆ ಎಂದು ಮಾತನಾಡುತ್ತಿಲ್ಲ. ಹೊಂದಾಣಿಕೆ ಅಥವಾ ಮೈತ್ರಿ ಸರ್ಕಾರ ರಚನೆಯಾದರೆ ಜನಪರ ಯೋಜನೆ ಅನುಷ್ಠಾನ ಆಗುವುದಿಲ್ಲ. ಆದ್ದರಿಂದ ಪಕ್ಷ ವಿಸರ್ಜಿಸುವುದಾಗಿ ಹೇಳಿದೆ. ಆದರೆ ಜೆಡಿಎಸ್‌ ಪೂರ್ಣ ಪ್ರಮಾಣದ ಸರ್ಕಾರ ರಚಿಸುವ ವಿಶ್ವಾಸ ನನಗಿದೆ ಎಂದು ಹೇಳಿದರು.

ನಿಖಿಲ್‌ ಹೆಸರು ಇರಬಹುದು: ಜನಪರ ಯೋಜನೆ ಜಾರಿಗೆ 123 ಸ್ಥಾನ ಗೆಲ್ಲುವುದು ನನ್ನ ಏಕೈಕ ಗುರಿ. ಈ ನಿಟ್ಟಿನಲ್ಲಿ ನಿಖಿಲ್‌ ಕುಮಾರಸ್ವಾಮಿ ಕೂಡ ರಾಜ್ಯಾದ್ಯಂತ ಪ್ರವಾಸ ಮಾಡುತ್ತಾರೆ. ಆದರೆ, 126 ಮಂದಿಯ ಪಟ್ಟಿಯಲ್ಲಿ ನಿಖಿಲ್‌ ಅವರ ಹೆಸರು ಇರಬಹುದು ಎಂದು ಪರೋಕ್ಷವಾಗಿ ನಿಖಿಲ್ ಸ್ಪರ್ಧೆ ಕುರಿತು ಅವರು ಸುಳಿವು ನೀಡಿದರು.

ಕಾಂಗ್ರೆಸ್‌ ಹೇಗೆ ನಡೆಸಿಕೊಳ್ಳುತ್ತದೆ ನೋಡಬೇಕು: ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಯಾಗಿರುವುದು ಸಂತೋಷದ ಸಂಗತಿ. ಇದರಲ್ಲಿ ಅಸೂಯೆ ಪಡುವುದು ಏನಿದೆ? ಕರ್ನಾಟಕ ಮತ್ತೊಂದು ಶಕ್ತಿ ಕೇಂದ್ರವಾಗುತ್ತದೆ. ಆದರೆ ಕಾಂಗ್ರೆಸ್‌ ಖರ್ಗೆ ಅವರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದನ್ನು ನೋಡಬೇಕು. ಅವರಿಗೆ ಸ್ವತಂತ್ರ ಅಧಿಕಾರ ಚಲಾಯಿಸಿಲು ಬಿಡುತ್ತದೆಯೇ ಎಂಬ ಕುತೂಹಲ ಇದೆ ಎಂದು ಅವರು ಹೇಳಿದರು.

ಬೆಂಗಳೂರಿನ ಕುಖ್ಯಾತಿಗೆ ಪರ್ಸಂಟೇಜ್‌ ವ್ಯವಸ್ಥೆಯೇ ಕಾರಣ: ಎಚ್‌ಡಿಕೆ

ಚಾಮುಂಡಿ ಬೆಟ್ಟದಲ್ಲಿ ಎಚ್‌ಡಿಕೆ ವಿಶೇಷ ಪೂಜೆ: ಪಂಚರತ್ನ ಯೋಜನೆ ರೂಪುರೇಷೆ ಸಿದ್ಧಪಡಿಸಿ, ಶಾಸಕರು ಮತ್ತು ಸಂಭಾವ್ಯ ಅಭ್ಯರ್ಥಿಗಳ ಸಭೆ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಗುರುವಾರ ಬೆಳಗ್ಗೆ ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಯ ದರ್ಶನ ಪಡೆದರು. ನಗರದ ಹೊರವಲಯದಲ್ಲಿನ ರೆಸಾರ್ಚ್‌ನಲ್ಲಿ ನಡೆದ ಕಾರ್ಯಾಗಾರ ಆರಂಭಕ್ಕೂ ಮುನ್ನ ಮೂರು ಬಸ್‌ಗಳಲ್ಲಿ ರೆಸಾರ್ಚ್‌ನಿಂದ ಹೊರಟು ಚಾಮುಂಡಿಬೆಟ್ಟತಲುಪಿದರು. ನಂತರ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್‌ ಕುಮಾರಸ್ವಾಮಿ, ಶಾಸಕರು, ಮಾಜಿ ಶಾಸಕರು ಮತ್ತು ಸಂಭಾವ್ಯ ಅಭ್ಯರ್ಥಿಗಳ ಜೊತೆಗೂಡಿ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. 

ಜೆಡಿಎಸ್‌ 30-40 ಸ್ಥಾನ ಗೆದ್ರೆ ನಾನು ಸಿಎಂ ಆಗಲ್ಲ: ಹೆಚ್‌.ಡಿ.ಕುಮಾರಸ್ವಾಮಿ

ಅರ್ಚಕರು ಜೆಡಿಎಸ್‌ ಮತ್ತು ಎಚ್‌.ಡಿ. ದೇವೇಗೌಡರ ಹೆಸರಿನಲ್ಲಿ ಅರ್ಚನೆ ಮಾಡಿ ಪ್ರಸಾದ ನೀಡಿದರು. ಈ ವೇಳೆ ಮಾತನಾಡಿದ ಕುಮಾರಸ್ವಾಮಿ ಅವರು, ಮುಂದಿನ ಸಂಭವನೀಯ ಅಭ್ಯರ್ಥಿಗಳು, ಶಾಸಕರು, ಮಾಜಿ ಶಾಸಕರ ಜೊತೆ ನಾಡದೇವತೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದೇನೆ. ಪೂರ್ಣ ಪ್ರಮಾಣದ ಸರ್ಕಾರ ಅಸ್ತಿತ್ವಕ್ಕೆ ತರುವಂತೆ ತಾಯಿ ಚಾಮುಂಡೇಶ್ವರಿಯನ್ನು ಬೇಡಿದ್ದೇನೆ. ತಾಯಿಯ ಅನುಗ್ರಹ ಹಾಗೂ ಜನರ ಆಶೀರ್ವಾದದಿಂದ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಅವರು ಹೇಳಿದರು.