ಜೆಡಿಎಸ್‌ನ ಪಂಚರತ್ನ ಯೋಜನೆಯನ್ನು ಜನರಿಗೆ ತಲುಪಿಸಬೇಕು, 123 ಸ್ಥಾನ ಗೆಲ್ಲಬೇಕು ಎಂಬ ಸವಾಲನ್ನು ಪ್ರತಿಯೊಬ್ಬರೂ ಸ್ವೀಕರಿಸಬೇಕು. ಜೆಡಿಎಸ್‌ಗೆ ಕೇವಲ 30 ರಿಂದ 40 ಸ್ಥಾನಗಳು ಬಂದರೆ ಮತ್ತೆ ನಾನು ಸಿಎಂ ಆಗಲ್ಲ. 

ಮೈಸೂರು (ಅ.20): ಜೆಡಿಎಸ್‌ನ ಪಂಚರತ್ನ ಯೋಜನೆಯನ್ನು ಜನರಿಗೆ ತಲುಪಿಸಬೇಕು, 123 ಸ್ಥಾನ ಗೆಲ್ಲಬೇಕು ಎಂಬ ಸವಾಲನ್ನು ಪ್ರತಿಯೊಬ್ಬರೂ ಸ್ವೀಕರಿಸಬೇಕು. ಜೆಡಿಎಸ್‌ಗೆ ಕೇವಲ 30 ರಿಂದ 40 ಸ್ಥಾನಗಳು ಬಂದರೆ ಮತ್ತೆ ನಾನು ಸಿಎಂ ಆಗಲ್ಲ. ನೀವೇ ನೋಡಿಕೊಳ್ಳಿ, ನಾನು ದೂರದಲ್ಲಿ ನಿಂತು ಸಲಹೆ ಕೊಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಜೆಡಿಎಸ್‌ನ ಶಾಸಕರು ಹಾಗೂ ಟಿಕೆಟ್‌ ಆಕಾಂಕ್ಷಿಗಳಿಗೆ ತಾಕೀತು ಮಾಡಿದ್ದಾರೆ. ನಗರದ ಹೊರವಲಯದ ರೆಸಾರ್ಚ್‌ನಲ್ಲಿ ಬುಧವಾರ ಆರಂಭವಾದ ಜೆಡಿಎಸ್‌ ಶಾಸಕರ, ಟಿಕೆಟ್‌ ಆಕಾಂಕ್ಷಿಗಳ ಚಿಂತನ- ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಕೆಲವು ಶಾಸಕರಷ್ಟೇ ತಮ್ಮ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಕೆಲಸ ಮಾಡಿದ್ದಾರೆ. ಮತ್ತೆ ಕೆಲವರ ಕಾರ್ಯವೈಖರಿ ಸಮಾಧಾನ ತಂದಿಲ್ಲ. ಯಾರ ಮೇಲೂ ದೋಷಾರೋಪ ಹೊರಿಸಲು ನಾನು ಹೋಗುವುದಿಲ್ಲ. ದೇವೇಗೌಡರು ಸ್ವಂತಕ್ಕಾಗಿ ಸ್ಥಾನಮಾನ ಬಳಸಿಕೊಂಡವರಲ್ಲ. ನಾವು 123 ಸ್ಥಾನದ ಗುರಿ ಮುಟ್ಟಲು ಸಾಧ್ಯವಿದೆ ಎಂದರು. ನಾಡಿನ ಜನತೆ ಜೆಡಿಎಸ್‌ಗೆ 123 ಸ್ಥಾನ ನೀಡಿದರೆ, ಭ್ರಷ್ಟಾಚಾರದ ಬಗ್ಗೆ ಅಂದು ಮಾತಾಡುತ್ತೇನೆ ಎಂದು ಅವರು, ಈ ಪಂಚರತ್ನ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರದಿದ್ದರೆ ನನ್ನ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ ಎಂಬುದು ನನ್ನ ಸವಾಲು ಎಂದರು.

ಜೆಡಿ​ಎಸ್‌ ಅಧಿ​ಕಾ​ರಕ್ಕೆ ಬರು​ವು​ದನ್ನು ತಪ್ಪಿ​ಸಲು ಯಾರಿಗೂ ಸಾಧ್ಯ​ವಿಲ್ಲ: ಹೆಚ್‌.ಡಿ.ಕುಮಾರಸ್ವಾಮಿ

ಸಿದ್ದು ವಿರುದ್ಧ ತನಿಖೆಯಾಗಲಿ: ಸಿದ್ದರಾಮಯ್ಯ ವಿರುದ್ಧದ ಭ್ರಷ್ಟಾಚಾರದ ದಾಖಲೆಗಳನ್ನು ರಾಹುಲ್‌ ಗಾಂಧಿಗೆ ಕಳುಹಿಸಿ ಕೊಡುತ್ತೇನೆ ಎಂದು ಸಿಎಂ ಹೇಳಿದ್ದಾರೆ. ರಾಹುಲ್‌ಗೆ ಕಳುಹಿಸುವ ಬದಲು ದಾಖಲೆಗಳನ್ನು ಸಚಿವ ಸಂಪುಟದಲ್ಲಿ ಇಟ್ಟು, ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲಿ. ನೀನು ಅತ್ತಂಗೆ ಮಾಡು, ನಾ ಸತ್ತಂಗೆ ಮಾಡ್ತೇನೆ ಎನ್ನುವಂತೆ ಆಗಬಾರದು ಎಂದರು.

ಸಿದ್ದು- ಡಿಕೆಶಿ ಜೋಡೋ: ಇದೇ ವೇಳೆ, ಭಾರತ ಐಕ್ಯತಾ ಯಾತ್ರೆ ಕುರಿತು ವ್ಯಂಗ್ಯವಾಡಿದ ಅವರು, ರಾಹುಲ್‌ ಹಮ್ಮಿಕೊಂಡಿರುವುದು ಭಾರತ್‌ ಜೋಡೋ ಅಲ್ಲ, ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್‌ ಜೋಡೋ ಮಾಡುವ ಯಾತ್ರೆ. ಇದು ಕೃತಕ ಯಾತ್ರೆ. ಈ ಯಾತ್ರೆ ಕರ್ನಾಟಕ ಪ್ರವೇಶಿಸಿದಾಗ ಗುಂಡ್ಲುಪೇಟೆಯಲ್ಲಿ ಇಬ್ಬರ ಕೈಗೂ ಕೋಲು ಕೊಟ್ಟು ರಾಹುಲ್‌ಗಾಂಧಿಯೇ ಇಬ್ಬರ ಕೈಹಿಡಿದು ನಗಾರಿ ಬಾರಿಸಿದರು ಎಂದು ಗೇಲಿ ಮಾಡಿದರು. ಕರ್ನಾಟಕದಲ್ಲಿ ಭಾರತ್‌ ಜೋಡೊ ಯಾತ್ರೆಯ ಒಂದು ದಿನದ ಕಾರ್ಯಕ್ರಮಕ್ಕೆ 2 ರಿಂದ 3 ಕೋಟಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದರು.

ನ.1ಕ್ಕೆ ಮುಳಬಾಗಿಲಿನಲ್ಲಿ 126 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ನವಂಬರ್‌ 1 ರಂದು ಕೋಲಾರ ಜಿಲ್ಲೆ ಮುಳಬಾಗಿಲಿನಿಂದ ಜೆಡಿಎಸ್‌ನ ‘ಪಂಚರತ್ನ ಯಾತ್ರೆ’ ಆರಂಭವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಮುಳಬಾಗಿಲಿನ ಅಂಜನೇಯ ಗಣಪತಿ ದೇವಾಲಯದಿಂದ ರಥಯಾತ್ರೆ ಹೊರಡಲಿದೆ. 1994ರಲ್ಲೂ ಮುಳಬಾಗಿಲಿನಿಂದಲೇ ದೇವೇಗೌಡರು ಪ್ರಚಾರ ಆರಂಭಿಸಿ ಯಶಸ್ವಿಯಾಗಿದ್ದರು. ಹಾಗಾಗಿ, ಮುಂಬರುವ ವಿಧಾನಸಭೆ ಚುನಾವಣೆಗೂ ಇಲ್ಲಿಂದಲೇ ಚುನಾವಣಾ ಪ್ರಚಾರ ಆರಂಭಿಸಲಾಗುವುದು. ಅಂದೇ 126 ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಬಿಡುಗಡೆ ಮಾಡಲಾಗುವುದು. 

ಅಡಿಕೆ ಬೆಳೆಗಾರರಿಗೆ ನೆರವಾಗಿ: ಸರ್ಕಾರಕ್ಕೆ ಎಚ್‌ಡಿಕೆ ಒತ್ತಾಯ

ಪ್ರತಿದಿನ 6 ಸಭೆ ಹಾಗೂ ಮೂರು ಸಾರ್ವಜನಿಕ ಸಭೆಗಳು ನಡೆಯಲಿವೆ. ಜೊತೆಗೆ, ಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಕೂಡ ನಡೆಯಲಿದೆ. ನಾಲ್ಕು ಹಂತಗಳಲ್ಲಿ ಮುಂದಿನ ಫೆಬ್ರವರಿಯವರೆಗೆ ರಥಯಾತ್ರೆ ನಡೆಯಲಿದೆ. ಮೊದಲ ಹಂತದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಯ 35 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಯಾತ್ರೆ ನಡೆಯಲಿದೆ. ನಂತರ, ಜನವರಿಯಲ್ಲಿ ಮೈಸೂರು ಭಾಗದಲ್ಲಿ ಎರಡನೇ ಹಂತದ ಯಾತ್ರೆ ಆರಂಭವಾಗಲಿದೆ. 3 ಹಾಗೂ 4ನೇ ಹಂತದಲ್ಲಿ ಉಳಿದ ಭಾಗಗಳಲ್ಲಿ ರಥಯಾತ್ರೆ ಸಾಗಲಿದೆ. 6 ಟ್ಯಾಬ್ಲೋ ವಾಹನಗಳು ರಥಯಾತ್ರೆ ಜೊತೆಯಲ್ಲಿರುತ್ತವೆ. ಒಂದು ವಾಹನದಲ್ಲಿ ಬಹಿರಂಗ ಸಭೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.