Karnataka Politics: 'ಹೊರಟ್ಟಿ ಬಿಜೆಪಿಗೆ, ಹೊಂದಾಣಿಕೆ ರಾಜಕಾರಣದ ಅಂತ್ಯ'
* ಹೊರಟ್ಟಿ ಸೋಲಿಲ್ಲದ ಸರದಾರ ಅಲ್ಲ, ಸುಳ್ಳಿನ ಸರದಾರ
* ಜೆಡಿಎಸ್ ಜಿಲ್ಲಾಧ್ಯಕ್ಷ ಗುರುರಾಜ ಹುಣಸೀಮರದ
* ಹೊರಟ್ಟಿಯಿಂದ ಜೆಡಿಎಸ್ ಹಾಳು
ಧಾರವಾಡ(ಮೇ.29): ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಬಿಜೆಪಿ ಸೇರುವ ಮೂಲಕ ಹೊಂದಾಣಿಕೆ ರಾಜಕಾರಣ ಅಂತ್ಯ ಕಂಡಿದೆ. ಇದರಿಂದ ಬಸವರಾಜ ಹೊರಟ್ಟಿಅವರಿಗೆ ಸೋಲಿನ ಭಯ ಶುರುವಾಗಿದೆ ಎಂದು ಜೆಡಿಎಸ್ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 42 ವರ್ಷಗಳ ಕಾಲ ಬರೀ ಎಲ್ಲ ಪಕ್ಷಗಳೊಂದಿಗೆ ಹೊಂದಾಣಿಕೆ ರಾಜಕಾರಣ ಹಾಗೂ ಶಿಕ್ಷಣ ಕ್ಷೇತ್ರದ ಜ್ವಲಂತ ಸಮಸ್ಯೆಗಳನ್ನು ಜೀವಂತವಾಗಿರಿಸಿಯೇ ಹೊರಟ್ಟಿಅವರು ಏಳು ಬಾರಿ ಶಿಕ್ಷಕರ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ. ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಬಸವರಾಜ ಹೊರಟ್ಟಿ, ಜಗದೀಶ ಶೆಟ್ಟರ್, ಪ್ರಹ್ಲಾದ್ ಜೋಶಿ, ಎಚ್.ಕೆ.ಪಾಟೀಲ ಅವರ ಹೊಂದಾಣಿಕೆ ರಾಜಕೀಯದಿಂದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
MLC Election: 'ಬಿಜೆಪಿ ಸೇರಿ ವ್ಯಕ್ತಿತ್ವ, ಮೌಲ್ಯ ಕಳೆದುಕೊಂಡ ಹೊರಟ್ಟಿ'
ಹೊರಟ್ಟಿಯಿಂದ ಜೆಡಿಎಸ್ ಹಾಳು:
ಹೊರಟ್ಟಿ ಅವರ ಕಿರುಕುಳಕ್ಕೆ ಈ ಹಿಂದೆ ನಾನೂ ಸೇರಿದಂತೆ ಅನೇಕರು ಜೆಡಿಎಸ್ ಪಕ್ಷ ತೊರೆದಿದೆವು. ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ಬೇರೆ ಅಭ್ಯರ್ಥಿಗಳು ಗೆಲ್ಲದಂತೆ ಹುನ್ನಾರ ಮಾಡುವುದು ಹೊರಟ್ಟಿಕೆಲಸ. ಇನ್ಮುಂದೆ ಅವರ ಆಟ ನಡೆಯಲ್ಲ ಎಂದರು.
ಸಭಾಪತಿ ಹುದ್ದೆಗೆ ಜೆಡಿಎಸ್ ಪಕ್ಷ ಅರ್ಹತೆ ಹೊಂದಿರದಿದ್ದರೂ, ದೇವೆಗೌಡರು ಹೊರಟ್ಟಿಗೆ ಸಭಾಪತಿ ಮಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಮಾಡದ ಹೊರಟ್ಟಿನಂಬಿಕೆ, ವಿಶ್ವಾಸ ದ್ರೋಹ ಮಾಡಿದ್ದಾರೆ. ಇವರಿಂದಲೇ ಜೆಡಿಎಸ್ ಪಕ್ಷ ಹಾಳಾಗಿದೆ ಎಂದು ಆಪಾದಿಸಿದರು. ಹತ್ತಾರು ವರ್ಷಗಳ ಕಾಲ ಪಕ್ಷದಲ್ಲಿದ್ದ ಎನ್.ಎಚ್. ಕೋನರಡ್ಡಿ ಹಾಗೂ ಬಸವರಾಜ ಹೊರಟ್ಟಿಪಕ್ಷದಿಂದ ಅಧಿಕಾರ ಉಂಡು ಮತ್ತೊಂದು ಪಕ್ಷ ಸೇರುವ ಮೂಲಕ ಕೊಂಡು ಹೋದರು ಎಂದ ಅವರು, ಜೆಡಿಎಸ್‌ನಿಂದ ಸ್ಪರ್ಧಿಸಿರುವ ಶ್ರೀಶೈಲ ಗಡಗಿನ್ನಿ ಅವರನ್ನು ಈ ಬಾರಿ ಬೆಂಬಲಿಸಲು ಹುಣಸೀಮರದ ಮನವಿ ಮಾಡಿದರು.
ಎಸ್‌ಡಿಪಿಐ, ಪಿಎಫ್‌ಐ ಕಾಂಗ್ರೆಸ್‌ನ ಕೂಸು: ಕೇಂದ್ರ ಸಚಿವ ಜೋಶಿ
ಜೆಡಿಎಸ್ ಅಭ್ಯರ್ಥಿ ಗಡದಿನ್ನಿ ಮಾತನಾಡಿ, 32 ವರ್ಷಗಳಿಂದ ಶಿಕ್ಷಕರ ಸಂಘಟನೆಯಲ್ಲಿ ತೊಡಗಿದ್ದೇನೆ. ಶಿಕ್ಷಣ ಕ್ಷೇತ್ರದ ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಹೊರಟ್ಟಿಅವರ ಏಳರ ಪೈಕಿ ಐದು ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ. ಕಾಲ್ಪನಿಕ ವೇತನ ಸಮಸ್ಯೆ, ಸೇವಾ ಭದ್ರತೆ, ಖಾಸಗಿ ಶಾಲೆಗಳಿಗೆ ಅನುದಾನ, ಖಾಲಿ ಹುದ್ದೆಗಳ ನೇಮಕ ಮಾಡಿಲ್ಲ. 30 ವರ್ಷಗಳಿಂದ ಜ್ವಲಂತ ಸಮಸ್ಯೆಗಳಿಗೆ ಮುಕ್ತಿ ನೀಡಿಲ್ಲ. ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಶಿಕ್ಷಕರ ಮೇಲೆ ಹೊರಟ್ಟಿಅವರ ದರ್ಪ, ದೌರ್ಜನ್ಯ ಹೆಚ್ಚಿದೆ. ಇದರಿಂದ ಶಿಕ್ಷಕರು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಅಭ್ಯರ್ಥಿ ಶ್ರಿಶೈಲ್ ಗುಡದಿನ್ನಿ, ಶಾಂತವೀರ ಬೆಟಗೇರಿ, ಎಂ.ಎಫ್.ಹಿರೇಮಠ, ದೇವರಾಜ ಕಂಬಳಿ ಇದ್ದರು.
ಸುಳ್ಳಿನ ಸರದಾರ
ಬಸವರಾಜ ಹೊರಟ್ಟಿ ಸೋಲಿಲ್ಲದ ಸರದಾರ ಅಲ್ಲ, ಸುಳ್ಳಿನ ಸರದಾರ. 42 ವರ್ಷ ಭ್ರಷ್ಟ ಅಧಿಕಾರಿಗಳ ರಕ್ಷಣೆಯಲ್ಲಿ ಕಾಲಹರಣ ಮಾಡಿದ್ದಾರೆ. ಶಿಕ್ಷಕರ ಜ್ವಲಂತ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಬದಲಿಗೆ ಅಧಿಕಾರ ದುರ್ಬಳಸಿ, ಸಂಘ- ಸಂಸ್ಥೆಗಳ ಸ್ವಾಧೀನಕ್ಕೆ ಯತ್ನಿಸಿದ್ದಾರೆ ಎಂದು ದೂರಿದ ಹುಣಸೀಮರದ, ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಶ್ರೀಶೈಲ್ ಗಡದಿನ್ನಿ ಸ್ಪರ್ಧಿಸಿದ್ದಾರೆ. ಅವರಿಗೆ ಅಮೂಲ್ಯ ಮತ ನೀಡಿ ಆಯ್ಕೆ ಮಾಡಲು ಮನವಿ ಗುರುರಾಜ ಹುಣಸೀಮರದ ಮಾಡಿದರು.