Asianet Suvarna News Asianet Suvarna News

ಮಂಡ್ಯ: ಸುಮಲತಾ ವಿಚಾರದಲ್ಲಿ ಜೆಡಿಎಸ್‌ ಅಂತರ..?

ಇದು ಚುನಾವಣೆ ಕಾಲ. ಈ ಸಮಯದಲ್ಲಿ ಜಾಗೃತರಾಗಿರಬೇಕು. ಸುಮಲತಾ ವಿರುದ್ಧ ನೀಡುವ ಹೇಳಿಕೆಗಳು ಪಕ್ಷಕ್ಕೆ ತಿರುಗುಬಾಣವಾಗುವ ಸಾಧ್ಯತೆಗಳಿರುವುದರಿಂದ ದೇವೇಗೌಡರೇ ಶಾಸಕರ ಮಾತಿಗೆ ಕಡಿವಾಣ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

JDS Gap on Mandya MP Sumalatha Ambareesh Issue grg
Author
First Published Mar 27, 2023, 3:00 AM IST

ಮಂಡ್ಯ ಮಂಜುನಾಥ

ಮಂಡ್ಯ(ಮಾ.27): ಸಂಸದೆ ಸುಮಲತಾ ಅಂಬರೀಶ್‌ ವಿಚಾರದಲ್ಲಿ ಜೆಡಿಎಸ್‌ ಶಾಸಕರು ಅಂತರ ಕಾಯ್ದುಕೊಳ್ಳುತ್ತಿದ್ದಾರೆಯೇ ಎಂಬ ಗುಮಾನಿ ಮೂಡಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಶಾಸಕರೊಟ್ಟಿಗೆ ಇತ್ತೀಚೆಗೆ ನಡೆಸಿದ ಸಭೆಯ ಬಳಿಕ ಯಾರೊಬ್ಬರೂ ಸುಮಲತಾ ವಿಷಯವಾಗಿ ಮೌನ ಮುರಿಯುತ್ತಿಲ್ಲ. ಇದು ಚುನಾವಣೆ ಕಾಲ. ಈ ಸಮಯದಲ್ಲಿ ಜಾಗೃತರಾಗಿರಬೇಕು. ಸುಮಲತಾ ವಿರುದ್ಧ ನೀಡುವ ಹೇಳಿಕೆಗಳು ಪಕ್ಷಕ್ಕೆ ತಿರುಗುಬಾಣವಾಗುವ ಸಾಧ್ಯತೆಗಳಿರುವುದರಿಂದ ದೇವೇಗೌಡರೇ ಶಾಸಕರ ಮಾತಿಗೆ ಕಡಿವಾಣ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಸುಮಲತಾ ಅಂಬರೀಶ್‌ ಮೃದುಧೋರಣೆ:

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್‌ ಶಾಸಕರನ್ನು ತಮ್ಮ ವಾಕ್ಚಾತುರ‍್ಯದಿಂದ ಕಟ್ಟಿಹಾಕಿರುವ ಸಂಸದೆ ಸುಮಲತಾ, ಸಮಯೋಚಿತವಾಗಿ ಠಕ್ಕರ್‌ ನೀಡುತ್ತಲೇ ಬಂದಿದ್ದಾರೆ. ಅಂಬರೀಶ್‌ ರಾಜಕಾರಣದಲ್ಲಿದ್ದಷ್ಟುದಿನ ಜೆಡಿಎಸ್‌ ವಿರುದ್ಧ ಎಂದೂ ತಿರುಗಿಬಿದ್ದವರಲ್ಲ. ದೇವೇಗೌಡರ ಮೇಲಿನ ಅಭಿಮಾನದಿಂದಲೋ ಏನೋ ಮೃದು ಧೋರಣೆ ಅನುಸರಿಸಿಕೊಂಡು ಬಂದಿದ್ದರು. ಆ ಪಕ್ಷದೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಹೋಗುತ್ತಿದ್ದರು.

ಎಚ್ಡಿಕೆ ಮುಖ್ಯಮಂತ್ರಿಯಾಗುವುದು ಶತಸಿದ್ಧ: ರವೀಂದ್ರ ಶ್ರೀಕಂಠಯ್ಯ

ಅಭಿವೃದ್ಧಿಗಿಂತ ಮಾತುಗಾರಿಕೆ:

ಆದರೆ, ಸುಮಲತಾ ಈ ವಿಚಾರದಲ್ಲಿ ಸಂಪೂರ್ಣ ತದ್ವಿರುದ್ಧ. ಜೆಡಿಎಸ್‌ ಜೊತೆ ಹೊಂದಾಣಿಕೆ ಮಾತಿಗೆ ಅವಕಾಶವೇ ಇಲ್ಲದಂತೆ ಬಿರುನುಡಿಗಳನ್ನಾಡುತ್ತಿದ್ದಾರೆ. ಏಟಿಗೆ ಎದುರೇಟು ಕೊಡುತ್ತಾ ರಾಜಕಾರಣದಲ್ಲಿ ಮುನ್ನಡೆಯುತ್ತಿದ್ದಾರೆ. ಸಂಸದೆಯಾಗಿ ಸುಮಲತಾ ಅಭಿವೃದ್ಧಿಗಿಂತ ಹೆಚ್ಚಾಗಿ ಜೆಡಿಎಸ್‌ ಪಕ್ಷದವರನ್ನು ಎದುರಿಸುವುದರಲ್ಲೇ ಎಲ್ಲರ ಗಮನಸೆಳೆದರು.

ಇದನ್ನು ಸೂಕ್ಷ್ಮವಾಗಿ ಮನಗಂಡ ಎಚ್‌.ಡಿ.ದೇವೇಗೌಡರು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರೂ ಸೇರಿದಂತೆ ಜಿಲ್ಲೆಯ ಜೆಡಿಎಸ್‌ ಶಾಸಕರಿಗೆ ಸುಮಲತಾ ವಿರುದ್ಧ ಮಾತನಾಡದಂತೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಆವೇಶ. ಭಾವೋದ್ವೇಗಕ್ಕೆ ಒಳಗಾಗಿ ಆಡುವ ಮಾತುಗಳಿಂದ ಪಕ್ಷದ ಮೇಲೆ ಹಾಗೂ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಚುನಾವಣೆ ಘೋಷಣೆಗೆ ಕೆಲವೇ ದಿನಗಳಿರುವಾಗ ಪಕ್ಷಕ್ಕೆ ಹಾನಿ ಉಂಟಾಗುವ ಹೇಳಿಕೆ ನೀಡಿದರೆ ಅದನ್ನು ಸರಿಪಡಿಸಲು ತುಂಬಾ ಕಷ್ಟವಾಗಲಿದೆ. ಅದಕ್ಕಾಗಿ ಯಾರೊಬ್ಬರೂ ಸುಮಲತಾ ವಿಷಯ ಮಾತನಾಡದಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

ದೇವೇಗೌಡರ ಸೂಕ್ಷ್ಮತೆ

2014ರ ಲೋಕಸಭೆ ಉಪ ಚುನಾವಣೆ ಸಮಯದಲ್ಲಿ ನಟಿ ರಮ್ಯಾ ಅವರನ್ನು ಅಂದು ಮಾಜಿ ಶಾಸಕರಾಗಿದ್ದ ಎಂ.ಶ್ರೀನಿವಾಸ್‌ ಟೆಸ್ಟ್‌ ಟ್ಯೂಬ್‌ ಬೇಬಿ ಎಂದು ಕರೆದರೆ, ಮುಖಂಡ ಕೆ.ಟಿ.ಶ್ರೀಕಂಠೇಗೌಡರು ಪ್ರನಾಳ ಶಿಶು ಎಂದು ಹೇಳುವ ಮೂಲಕ ಪಕ್ಷಕ್ಕೆ ದೊಡ್ಡಮಟ್ಟದ ಹಾನಿ ಉಂಟುಮಾಡಿದ್ದರು. ಅದನ್ನು ಸರಿಪಡಿಸಲು ಜೆಡಿಎಸ್‌ನವರಿಗೆ ಕೊನೆಯವರೆಗೂ ಸಾಧ್ಯವಾಗಲೇ ಇಲ್ಲ.

2019ರ ಲೋಕಸಭೆ ಚುನಾವಣೆ ಹಾಗೂ ನಂತರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಆಡಿದ ಮಾತುಗಳು ಜೆಡಿಎಸ್‌ಗೆ ವರ್ಚಸ್ಸಿಗೆ ಹಾನಿ ಉಂಟುಮಾಡಿದ್ದವು. ಈ ಎಲ್ಲಾ ಬೆಳವಣಿಗೆಗಳನ್ನು ಅರಿತಿದ್ದ ದೇವೇಗೌಡರು ಚುನಾವಣಾ ಕಾಲಘಟ್ಟದಲ್ಲಿ ಎದುರಾಳಿಗಳ ಬಗ್ಗೆ ಅದರಲ್ಲೂ ಮಹಿಳೆಯರ ಬಗ್ಗೆ ಮಾತನಾಡುವಾಗ ಬಹಳ ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ಜಾಣ್ಮೆಯ ಉತ್ತರ

ಜಿಲ್ಲೆಯೊಳಗೆ ಸುಮಲತಾ ಒಬ್ಬರೇ ಎಲ್ಲರನ್ನೂ ಎದುರಿಸಿಕೊಂಡು ಬರುತ್ತಿರುವುದು ಹಲವರಲ್ಲಿ ಆಶ್ಚರ‍್ಯವನ್ನೂ ಮೂಡಿಸಿದೆ. ಎಲ್ಲಿಯೂ ವಿವಾದಕ್ಕೆ, ಮಾತಿನ ಸುಳಿಗೂ ಸಿಲುಕದೆ ಜಾಣ್ಮೆಯ ಉತ್ತರಗಳನ್ನೇ ನೀಡುತ್ತಾ ಎದುರಾಳಿಗಳನ್ನು ಸಮರ್ಥವಾಗಿ ಎದುರಿಸಿಕೊಂಡು ಹೋಗುವ ಕಲೆಯನ್ನು ಸುಮಲತಾ ಸಿದ್ಧಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಮಾತಿನಲ್ಲಿ ಗೆಲ್ಲುವುದು ಕಷ್ಟಎನ್ನುವುದು ಬಹುತೇಕರಿಗೆ ಅರ್ಥವಾಗಿದೆ. ಆದರೂ, ಸುಖಾಸುಮ್ಮನೆ ಅವರನ್ನು ಕೆಣಕುವುದಕ್ಕೆ ಈಗ ಜೆಡಿಎಸ್‌ ಶಾಸಕರೂ ಹೋಗದೆ ಮೌನ ವಹಿಸಿದ್ದಾರೆ.

ರಾಹುಲ್ ಗಾಂಧಿ ಹೇಳಿರುವುದರಲ್ಲಿ ತಪ್ಪೇ ಇಲ್ಲ: ಬಿ.ಟಿ.ಲಲಿತಾನಾಯಕ್

ಕೆರಳಿಸುವ ಗೋಜಿಗೆ ಹೋಗುತ್ತಿಲ್ಲ

ಮಾಧ್ಯಮದವರೇ ಸುಮಲತಾ ಕುರಿತು ಪ್ರಶ್ನಿಸಿದರೂ ಕುಮಾರಸ್ವಾಮಿ, ನಿಖಿಲ್‌ ಕೂಡ ಮಾತನಾಡುತ್ತಿಲ್ಲ. ಅವರು ಬಹಳ ದೊಡ್ಡವರಿದ್ದಾರೆ. ಅವರ ಬಗ್ಗೆ ಮಾತನಾಡುವಷ್ಟುನಾವು ದೊಡ್ಡವರಲ್ಲ ಎಂದು ಹೇಳಿ ನುಣುಚಿಕೊಳ್ಳುತ್ತಿದ್ದಾರೆ. ಚುನಾವಣೆ ಮುಗಿಯುವವರೆಗೆ ಸುಮಲತಾ ಅವರನ್ನು ಕೆರಳಿಸುವ ಮಾತುಗಳನ್ನಾಡುವುದೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ ಯಾರೂ ಸುಮಲತಾ ವಿರುದ್ಧ ಮಾತನಾಡದೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.

ಜೆಡಿಎಸ್‌ನವರು ಮಾತ್ರವೇ ಅಲ್ಲ, ಬಿಜೆಪಿಗೆ ಬೆಂಬಲ ಘೋಷಿಸಿದ ಸುಮಲತಾ ನಿಲುವಿನ ಬಗ್ಗೆ ಕಾಂಗ್ರೆಸ್‌ನವರೂ ಟೀಕಿಸುವ ಗೋಜಿಗೆ ಹೋಗುತ್ತಿಲ್ಲ. ಅವರೂ ಕೂಡ ಮೌನ ವಹಿಸಿದ್ದಾರೆ. ಚುನಾವಣೆ ಮುಗಿದ ಬಳಿಕ ಸುಮಲತಾ ವಿಚಾರವಾಗಿ ಯೋಚಿಸೋಣ ಎಂದುಕೊಂಡು ಚುನಾವಣಾ ಪ್ರಚಾರದಲ್ಲಿ ಎಲ್ಲರೂ ಬ್ಯುಸಿಯಾಗಿದ್ದಾರೆ.

Follow Us:
Download App:
  • android
  • ios