Asianet Suvarna News Asianet Suvarna News

ರಾಹುಲ್ ಗಾಂಧಿ ಹೇಳಿರುವುದರಲ್ಲಿ ತಪ್ಪೇ ಇಲ್ಲ: ಬಿ.ಟಿ.ಲಲಿತಾನಾಯಕ್

- ಪ್ರಧಾನಿ ಮೋದಿಗೆ ಜೀವಾವಧಿ ಶಿಕ್ಷೆ ಆಗೋದು ಖಚಿತ
- ಪ್ರಜಾಪ್ರಭುತ್ವ ವ್ಯವಸ್ಥೆಯ ದೊಡ್ಡ ದುರಂತ
- ಸುಮಲತಾಗೆ ತತ್ವ-ಸಿದ್ಧಾಂತ ಇಲ್ಲ: ಅವರ ಬೆಂಬಲ ನಮಗೆ ಬೇಕಿಲ್ಲ

There is nothing wrong with Rahul Gandhi BT Lalithanayak sat
Author
First Published Mar 25, 2023, 8:20 PM IST

ಕನ್ನಡಪ್ರಭ ವಾರ್ತೆ ಮಂಡ್ಯ (ಮಾ.25):  ಮೋದಿ ಉಪನಾಮ ಇಟ್ಟುಕೊಂಡಿರುವವರೆಲ್ಲಾ ವಂಚಕರೇ ಎಂದು ರಾಹುಲ್ ಗಾಂಧಿ ಹೇಳಿರುವುದು ಮಹಾಪರಾಧವೇನಲ್ಲ. ಈ ಒಂದು ಸಣ್ಣ ಮಾತನ್ನು ಮುಂದಿಟ್ಟುಕೊಂಡು ಅವರಿಗೆ ೨ ವರ್ಷ ಜೈಲು ಶಿಕ್ಷೆ ವಿಧಿಸಿರುವುದು, ಲೋಕಸಭಾ ಸದಸ್ಯತ್ವ ರದ್ದುಪಡಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ದೊಡ್ಡ ದುರಂತ ಎಂದು ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್ ದೂರಿದರು.

ಇದು ಸಹಜವಾಗಿ ಬರುವಂತಹ ಮಾತು. ಹಾಗಾದರೆ ದೇಶದ ಜನರ ಹಣವನ್ನು ಲೂಟಿ ಮಾಡಿಕೊಂಡು ಹೋದ ಲಲಿತ್‌ಮೋದಿ, ನೀರವ್‌ಮೋದಿ ಇವರನ್ನೆಲ್ಲಾ ಏನೆಂದು ಕರೆಯಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಮೋದಿಯಿಂದ ದೇಶದ ಘನತೆ ಹಾಳು: ರಾಹುಲ್ ಆಡಿರುವ ಮಾತುಗಳೇ ತಪ್ಪು ಎಂದಾದರೆ ನೋಟ್‌ಬ್ಯಾನ್‌ನಿಂದ ಹಿಡಿದು ಇಲ್ಲಿಯವರೆಗೆ ಪ್ರಧಾನಿ ನರೇಂದ್ರಮೋದಿ ಎಷ್ಟು ತಪ್ಪನ್ನು ಮಾಡಿದ್ದಾರೆ. ನ್ಯಾಯಾಂಗ, ಮಾಧ್ಯಮಗಳು, ಸಿಬಿಐ, ಇಡಿ, ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗ ಮಾಡಿಕೊಂಡಿರುವುದು, ಆಮಿಷವೊಡ್ಡಿರುವುದು, ಬೆದರಿಕೆ ಹಾಕುವುದರೊಂದಿಗೆ ದೇಶದ ಘನತೆಯನ್ನೇ ನಾಶ ಮಾಡಿದ್ದಾರೆ. ಇವನ್ನೆಲ್ಲಾ ಪರಿಗಣಿಸಿದರೆ ಪ್ರಧಾನಿ ನರೇಂದ್ರಮೋದಿಗೆ ಜೀವಾವಧಿ ಶಿಕ್ಷೆಯಾಗಬೇಕಿದೆ. ಅವರು ಮಾಡಿರುವ ಅನ್ಯಾಯಗಳಿಗೆಲ್ಲಾ ತಕ್ಕ ಪ್ರತಿಫಲ ಕಾದಿದೆ ಎಂದು ಎಚ್ಚರಿಸಿದರು.

ಕೋಮುವಾದಿ ಬಿಜೆಪಿ ದೂರವಿಡಲು 8 ಪಕ್ಷದೊಂದಿಗೆ ಮೈತ್ರಿಕೂಟ: ಬಿ.ಟಿ. ಲಲಿತಾ ನಾಯಕ್‌

ಹಿಂದುತ್ವದಿಂದ ಜನರು ದೂರವಿರಬೇಕು: ದೇಶದ ಜನರು ಹಿಂದುತ್ವದಿಂದ ದೂರವಿರಬೇಕು. ಸರ್ವರಿಗೂ ಸಮಾನ ನ್ಯಾಯ, ಅವಕಾಶಗಳನ್ನು ದೊರಕಿಸುವಂತಹ ಮಾನವೀಯ ಸರ್ಕಾರ ರಚನೆಯಾಗಬೇಕು. ಕೇಂದ್ರ ಸರ್ಕಾರ ಎಲ್ಲ ಕ್ಷೇತ್ರಗಳನ್ನು ರಾಷ್ಟ್ರೀಕರಣದಿಂದ ಖಾಸಗೀಕರಣ ಮಾಡುತ್ತಿದೆ. ಇದರಿಂದ ದೇಶಕ್ಕೆ ದೊಡ್ಡ ಗಂಡಾಂತರವಿದೆ. ಖಾಸಗೀಕರಣದೊಂದಿಗೆ ಗುಲಾಮಗಿರಿಗೆ ದೇಶವನ್ನು ಕೊಂಡೊಯ್ಯುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ಪ್ರಸನ್ನ ಎನ್.ಗೌಡ, ಎಸ್.ಸಿ.ಮಧುಚಂದನ್, ಎ.ಎಲ್.ಕೆಂಪೂಗೌಡ, ಲತಾ, ವೆಂಕಟೇಶ್, ಮಹದೇವು ಇತರರಿದ್ದರು.

ಸುಮತಲಾ ನಮಗೆ ಬೆಂಬಲ ಕೊಡುವುದು ಬೇಡ: ಸಂಸದೆ ಸುಮಲತಾ ಅವರಿಗೆ ಯಾವುದೇ ತತ್ವ-ಸಿದ್ಧಾಂತ ಇಲ್ಲ. ಅಂದ ಮೇಲೆ ಅವರ ಬೆಂಬಲ ನಮಗೆ ಬೇಕಿಲ್ಲ. ಅದರ ಅನಿವಾರ್ಯತೆಯೂ ಇಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವ ವ್ಯಕ್ತಿ ಚಾರಿತ್ರ್ಯ ಮುಖ್ಯ. ರಾಜಕಾರಣದಲ್ಲಿ ಯಾರೂ ಯಾರಿಗೂ ಅನಿವಾರ್ಯವೇನಲ್ಲ. ಯಾರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವ್ಯತ್ಯಾಸ ಗೊತ್ತಿರುವುದಿಲ್ಲವೋ ಅವರ ಅವಶ್ಯಕತೆ ನಮಗಿಲ್ಲ. ಅವರು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಅಲ್ಲಿಗೇ ಹೋಗಲಿ. ಸುಮಲತಾ ನಮಗೆ ಬೇಡ. ಅವರೇ ಬೆಂಬಲ ಕೊಡುತ್ತೇವೆಂದು ಬಂದರೂ ನಮಗೆ ಬೇಡ ಎಂದು ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್‌ ಹೇಳಿದರು.

ಬಿಜೆಪಿಗೆ ಬೆಂಬಲ ಘೋಷಣೆ ನಂತರ ಭೇಟಿ ಮಾಡಿಲ್ಲ: ಸುಮಲತಾ ಬೆಂಬಲ ಕುರಿತು ಮೇಲುಕೋಟೆ ಕ್ಷೇತ್ರದ ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಈ ಮೊದಲು ಚುನಾವಣೆಯಲ್ಲಿ ನನಗೆ ಬೆಂಬಲ ನೀಡುವುದಾಗಿ ಹೇಳಿದ್ದು ಸತ್ಯ. ಆಗ ಸುಮಲತಾ ಅವರು ಬಿಜೆಪಿಗೆ ಬೆಂಬಲ ಸೂಚಿಸುವ ಯಾವುದೇ ನಿರ್ಧಾರ ಮಾಡಿರಲಿಲ್ಲ. ಈಗ ಅವರು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಈ ಬೆಳವಣಿಗೆ ನಂತರ ಸುಮಲತಾರವರನ್ನು ನಾನು ಭೇಟಿಯೂ ಆಗಿಲ್ಲ. ಚುನಾವಣೆ ವಿಚಾರವಾಗಿ ಯಾವುದೇ ಚರ್ಚೆಯನ್ನೂ ನಡೆಸಿಲ್ಲ. ಚಿತ್ರನಟ ದರ್ಶನ್ ಅವರು ನನ್ನ ಪರವಾಗಿ ಚುನಾವಣಾ ಪ್ರಚಾರಕ್ಕೆ ಬರುತ್ತಾರೆ. ಕಳೆದ ಲೋಕಸಭಾ ಚುನಾವಣೆ ಸಮಯದಲ್ಲೇ ಅವರು ಘೋಷಿಸಿದ್ದರು. ಅದರಂತೆ ಚುನಾವಣಾ ಪ್ರಚಾರಕ್ಕೆ ಬರುವುದಾಗಿ ಹೇಳಿದ್ದಾರೆ ಎಂದರು.

ಮಂದಿರಗಳಲ್ಲಿ ಕೊಡುವ ತೀರ್ಥವನ್ನು ಕುಡಿಯಬಾರದು: ಮಾಜಿ ಸಚಿವೆ ಬಿ ಟಿ ಲಲಿತಾ ನಾಯಕ್

ಕಾಂಗ್ರೆಸ್ ಅಭ್ಯರ್ಥಿ ಹಾಕುವ ಬಗ್ಗೆ ಸ್ಪಷ್ಟಪಡಿಸಿಲ್ಲ: ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಚುನಾವಣೆಗೆ ಅಭ್ಯರ್ಥಿ ಹಾಕುವುದಿಲ್ಲವೆಂದು ನನಗೆ ಸ್ಪಷ್ಟಪಡಿಸಿಲ್ಲ. ನಾನು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿದ್ದು ನಿಜ. ಆದರೆ, ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಮತ್ತು ನಿಮ್ಮನ್ನೇ ಬೆಂಬಲಿಸುವುದಾಗಿ ನಿಖರವಾಗಿ ಏನನ್ನೂ ಹೇಳಿಲ್ಲ. ಕ್ಷೇತ್ರದೊಳಗಿನ ಬೆಳವಣಿಗೆಗಳ ಕುರಿತು ಮಾಹಿತಿ ಪಡೆದುಕೊಂಡರು ಎಂದು ದರ್ಶನ್‌ ಪುಟ್ಟಣ್ಣಯ್ಯ ಹೇಳಿದರು.

Follow Us:
Download App:
  • android
  • ios