ಎಚ್ಡಿಕೆ ಮುಖ್ಯಮಂತ್ರಿಯಾಗುವುದು ಶತಸಿದ್ಧ: ರವೀಂದ್ರ ಶ್ರೀಕಂಠಯ್ಯ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಹೆಚ್ಚಿನ ಸ್ಥಾನ ಪಡೆದು ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಶತಸಿದ್ಧ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಿಶ್ವಾಸ ವ್ಯಕ್ತಪಡಿಸಿದರು.

HDK will become Chief Minister: Ravindra Srikanthaiah snr

 ಮಂಡ್ಯ:  ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಹೆಚ್ಚಿನ ಸ್ಥಾನ ಪಡೆದು ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಶತಸಿದ್ಧ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲೂಕಿನ ಭೂತನ ಹೊಸೂರಿನಲ್ಲಿ ಆಯೋಜಿಸಿದ್ದ ಕೊತ್ತತ್ತಿ ಹೋಬಳಿ 2ನೇ ವೃತ್ತದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಜೆಡಿಎಸ್‌ ಹಮ್ಮಿಕೊಂಡಿದ್ದ ಪಂಚರತ್ನ ರಥಯಾತ್ರೆಗೆ ರಾಜ್ಯದ ಜನಸಾಮಾನ್ಯರಲ್ಲಿ ಪಕ್ಷದ ಬಗ್ಗೆ ಒಲವು ಮೂಡಿದೆ. ಇದರಿಂದ ಪಕ್ಷ ಮುಂದಿನ ಚುನಾವಣೆಯಲ್ಲಿ 80 ರಿಂದ 90 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದರು.

ರೈತರು, ಬಡವರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಪಂಚರತ್ನ ಯೋಜನೆ ಜಾರಿಗೊಳಿಸಲು ಪಕ್ಷ ಬದ್ಧವಾಗಿದೆ. ಮಂಡ್ಯದ ರೈತಾಪಿ ಜನರು ಸ್ವಾಭಿಮಾನಿಗಳಾಗಿದ್ದು, ಎಚ್‌.ಡಿ.ದೇವೇಗೌಡರ ಗರಡಿಯಲ್ಲಿ ಪಳಗಿರುವ ನಮ್ಮನ್ನು ಜನ ಎಂದಿಗೂ ಕೈಬಿಡುವುದಿಲ್ಲ ಎಂಬ ಕುಮಾರಸ್ವಾಮಿ ಅವರ ಆಶಯವನ್ನು ಮನಗಾಣಬೇಕು ಎಂದರು.

ಕಾಂಗ್ರೆಸ್‌ ಪಕ್ಷ ಪ್ರತಿ ಮನೆಗೆ ಎರಡು ಸಾವಿರ ರು ಹಣ ನೀಡುವ ನಕಲಿ ಬಾಂಡ್‌ಗಳನ್ನು ವಿತರಿಸುತ್ತಿರುವುದು ಸರಿಯಲ್ಲ. ಒಂದು ವೇಳೆ ಕಾಂಗ್ರೆಸ್‌ ಅಧಿಕಾರಕ್ಕೆ ಬರದಿದ್ದರೆ ಕ್ಷೇತ್ರದ ಮಾಜಿ ಶಾಸಕರು ಪ್ರತಿ ಕುಟುಂಬಕ್ಕೆ 2 ಸಾವಿರ ರು ಹಣ ಕೊಡಲು ಮುಂದಾಗುತ್ತಾರೆಯೇ ಎಂದು ಪ್ರಶ್ನಿಸಿದರು.

ಬಿಜೆಪಿ ಆಡಳಿತದಲ್ಲಿ ಯಾವ ಸಮುದಾಯದ ಜನರು ನೆಮ್ಮದಿಯಾಗಿಲ್ಲ. ಹಿಜಾಬ್… ಸಂಘರ್ಷ, ಕೋಮುವಾದ, ಗಲಭೆ ಸೃಷ್ಟಿಸುವ ಪ್ರವೃತ್ತಿಯಿಂದ ಜನ ರೋಸಿ ಹೋಗಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಕ್ಷೇತ್ರದ ಅಭಿವೃದ್ಧಿಗೆ 1421 ಕೋಟಿ ರುಗಳ ಯೋಜನೆ ಮಂಜೂರು ಮಾಡಿಸಲಾಗಿತ್ತು. ಅದನ್ನು ಬಿಜೆಪಿ ಮುಖ್ಯಮಂತ್ರಿಗಳು ತಡೆಹಿಡಿದರು ಎಂದು ಆರೋಪಿಸಿದರು.

ಜೆಡಿಎಸ್‌ನಿಂದ ಸರ್ವಾಂಗೀಣ ಅಭಿವೃದ್ಧಿ

  ತಿಪಟೂರು :  ಮುಸ್ಲಿಂ ಬಂಧುಗಳೇ ಯಾವತ್ತೂ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷವನ್ನು ನಂಬಬೇಡಿ, ಅವರಿಂದ ನಿಮ್ಮ ಅಭಿವೃದ್ಧಿ ಸಾಧ್ಯವಿಲ್ಲ. ಮುಂಬರುವ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್‌ನ್ನು ಬೆಂಬಲಿಸಿ, ಅಧಿಕಾರಕ್ಕೆ ತರುವ ಮೂಲಕ ನಿಮ್ಮ ಸರ್ವಾಂಗೀಣ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ತಿಳಿಸಿದರು.

ನಗರದ ಗಾಂಧಿನಗರದಲ್ಲಿ ಜೆಡಿಎಸ್‌ ಪಕ್ಷದ ವತಿಯಿಂದ ಆಯೋಜಿಸಿದ್ದ ಅಲ್ಪಸಂಖ್ಯಾತ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.

ಜೆಡಿಎಸ್‌ ರಾಜ್ಯ ವಕ್ತಾರೆ ನಜ್ಮಾ ನಜೀರ್‌ ಮಾತನಾಡಿ, ಈ ಹಿಂದೆ ಜೆಡಿಎಸ್‌ ಅಧಿಕಾರ ಪಡೆದ ಸಂದರ್ಭದಲ್ಲಿ 4ರಷ್ಟುಮೀಸಲಾತಿಯನ್ನು ಅಲ್ಪಸಂಖ್ಯಾತರಿಗೆ ನೀಡಿದೆ. ಅಲ್ಪಸಂಖ್ಯಾತರ ಪರವಾಗಿ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಎಚ್‌.ಡಿ. ಕುಮಾರಸ್ವಾಮಿಯವರಿದ್ದು ನಿಮ್ಮ ಧ್ವನಿಯಾಗಿ ನಿಂತಿದ್ದಾರೆ. ಅವರನ್ನು ಮತ್ತೆ ಅಧಿಕಾರಕ್ಕೆ ತರಬೇಕಾದರೆ ತಿಪಟೂರಿನಲ್ಲಿ ಶಾಂತಕುಮಾರ್‌ನ್ನು ಬೆಂಬಲಿಸಬೇಕೆಂದರು.

ಜೆಡಿಎಸ್‌ ಅಭ್ಯರ್ಥಿ ಕೆ.ಟಿ. ಶಾಂತಕುಮಾರ್‌ ಮಾತನಾಡಿ, ಈಗಾಗಲೇ ಎಚ್‌.ಡಿ.ಕೆ ಅಬ್ಬರ ರಾಜ್ಯದಲ್ಲಿ ಶುರುವಾಗಿದ್ದು ಜನತೆಯೂ ಸಹ ಬದಲಾವಣೆ ಬಯಸುತ್ತಿದ್ದಾರೆ. ಈ ಬಾರಿಯ ಪಂಚರತ್ನ ಕಾರ್ಯಕ್ರಮಗಳ ಮೂಲಕ ಅನೇಕ ಯೋಜನೆಗಳನ್ನು ಜಾರಿಗೆ ತರಲು ಹೊರಟಿದ್ದಾರೆ. ಗಾಂಧಿನಗರದ ಮೂಲಭೂತ ಸಮಸ್ಯೆಗಳು ಶಾಶ್ವತವಾಗಿ ಪರಿಹಾರವಾಗಬೇಕಾದರೆ ನಿಮ್ಮೆಲ್ಲರ ಸಹಕಾರ ಜೆಡಿಎಸ್‌ಗೆ ಕೊಟ್ಟರೆ ಗಾಂಧಿನಗರದ ಚಿತ್ರಣವನ್ನೇ ಬದಲಾಯಿಸಿ ನೆಮ್ಮದಿಯಿಂದ ಜೀವನ ನಡಸುವ ವಾತಾವರಣವನ್ನು ನಾನು ಕಲ್ಪಿಸಿಕೊಡುತ್ತೇನೆಂದು ಮನವಿ ಮಾಡಿದರು.

ಸಮಾವೇಶದಲ್ಲಿ ರಾಜ್ಯ ಉಪಾಧ್ಯಕ್ಷ ಗಂಗಣ್ಣ, ಜಿಲ್ಲಾಧ್ಯಕ್ಷ ಅಂಜನಪ್ಪ, ತಾಲೂಕು ಅಧ್ಯಕ್ಷ ಗುರುಮೂರ್ತಿ, ಅಲ್ಪಸಂಖ್ಯಾತ ಮುಖಂಡರಾದ ತನ್ವೀರ್‌ ರೆಹಮಾನ್‌, ತಾಹಿರಾ ಕುಲ್ಸಮ್‌, ನವೀದ್‌ ಜಕಾರಿಯ, ನಗರಸಭಾ ಮಾಜಿ ಸದಸ್ಯೆ ರೇಖಾ ಅನೂಪ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಸ್ವಾಮಿ, ಮುಖಂಡರಾದ ಗೋವಿಂದಸ್ವಾಮಿ, ಮಾದಿಹಳ್ಳಿ ತಿಮ್ಮೇಗೌಡ, ಜಗದೀಶ್‌, ಪ್ರಶಾಂತ್‌, ಎನ್‌ಸಿ ರಮೇಶ್‌, ಉದಯ್‌, ಜಗದೀಶ್‌, ಹೇಮೇಶ್‌, ಧನಂಜಯ್‌, ನಟರಾಜು, ಶಿವಶಂಕರ್‌, ವಸಂತ್‌ ಮತ್ತಿತರರಿದ್ದರು.

ನಮ್ಮ ಸರ್ಕಾರವಿದ್ದಿದ್ದರೆ 24 ಗಂಟೆಯೊಳಗೆ ಹೆಚ್ಚು ಬೆಂಬಲ ಬೆಲೆ ನೀಡಿ ಕೊಬ್ಬರಿ ಖರೀದಿ ಮಾಡುತ್ತಿದ್ದೇವು. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಪಂಚರತ್ನ ರಥಯಾತ್ರೆಯಲ್ಲಿರುವ ಎಲ್ಲಾ ಯೋಜನೆಗಳಲ್ಲದೆ ಯವಕರಿಗೆ, ನಿರುದ್ಯೋಗಿಗಳಿಗೆ ವಿಶೇಷ ಯೋಜನೆಗಳನ್ನು ಜಾರಿಗೊಳಿಸಿ ಸದೃಢ ರಾಜ್ಯವನ್ನಾಗಿ ಮಾಡಲಿದೆ. ಆದ್ದರಿಂದ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯನ್ನಾಗಿಸಲು ಇಲ್ಲಿನ ಅಭ್ಯರ್ಥಿ ಕೆ.ಟಿ. ಶಾಂತಕುಮಾರ್‌ನ್ನು ಅತಿ ಹೆಚ್ಚಿನ ಮತಗಳಿಂದ ಆಯ್ಕೆ ಮಾಡಿ ಶಾಸಕರನ್ನಾಗಿಸಿ.

Latest Videos
Follow Us:
Download App:
  • android
  • ios