Asianet Suvarna News Asianet Suvarna News

ಜೆಡಿಎಸ್‌ ಮೊದಲ ಪಟ್ಟಿ ಶಾಶ್ವತ ಅಲ್ಲ: ದೇವೇಗೌಡ

ಮನೆ ಮನೆ ತೆರಳಿ ಪಕ್ಷದ ಪರವಾಗಿ ಕೆಲಸ ಮಾಡಲು ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇನೆ ಎಂದ ಅವರು, ಜೆಡಿಎಸ್‌ ಮೊದಲ ಪಟ್ಟಿ ಶಾಶ್ವತ ಅಲ್ಲ. ಪ್ರತಿ ದಿನ ಪಟ್ಟಿ ಬದಲಾವಣೆ ಆಗುತ್ತೆ. ಪ್ರತಿ ದಿನ ಸರ್ವೆ ನಡೆಯುತ್ತಿದೆ ಎಂದ ದೇವೇಗೌಡ

JDS First List is Not Final Says HD Devegowda grg
Author
First Published Dec 2, 2022, 7:30 AM IST

ಮೈಸೂರು(ಡಿ.02): ಮುಂದಿನ ತಿಂಗಳಿನಿಂದ ನಾನು ಪ್ರಚಾರಕ್ಕೆ ಹೋಗುತ್ತೇನೆ ಎಂದು ಜೆಡಿಎಸ್‌ ವರಿಷ್ಠರಾದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ತಿಳಿಸಿದರು.

ಮೈಸೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ನಂಬಿಕೆ ಇದೆ. ನಾನು ಚುನಾವಣೆ ಪ್ರಚಾರಕ್ಕೆ ಹೋಗುತ್ತೇನೆ. ಕುಮಾರಸ್ವಾಮಿ ಸೇರಿದಂತೆ ಎಲ್ಲರೂ ಪಂಚ ರತ್ನಯಾತ್ರೆ ಮಾಡುತ್ತಿದ್ದಾರೆ. ಪ್ರತಿ ಹಳ್ಳಿಯಲ್ಲಿ ನಮ್ಮ ಪಕ್ಷದ ಶಾಸಕರು, ಮುಖಂಡರು, ಮಾಜಿ ಶಾಸಕರು ಒಬಬ್ಬೊರಿಗೂ ಒಂದೊಂದು ಜವಾಬ್ದಾರಿ ಕೊಟ್ಟಿದ್ದಾರೆ. ಮನೆ ಮನೆ ತೆರಳಿ ಪಕ್ಷದ ಪರವಾಗಿ ಕೆಲಸ ಮಾಡಲು ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇನೆ ಎಂದ ಅವರು, ಜೆಡಿಎಸ್‌ ಮೊದಲ ಪಟ್ಟಿ ಶಾಶ್ವತ ಅಲ್ಲ. ಪ್ರತಿ ದಿನ ಪಟ್ಟಿ ಬದಲಾವಣೆ ಆಗುತ್ತೆ. ಪ್ರತಿ ದಿನ ಸರ್ವೆ ನಡೆಯುತ್ತಿದೆ ಎಂದು ಹೇಳಿದರು.

ಕಾವೇರಿ: ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ಅನ್ಯಾಯ: ಎಚ್‌.ಡಿ.ದೇವೇಗೌಡ

ಶೀಘ್ರ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಕುಮಾರಸ್ವಾಮಿ 

ತುಮಕೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಸದ್ಯದಲ್ಲೇ ಘೋಷಣೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ನಗರದ ಸಿದ್ದಗಂಗಾ ಮಠಕ್ಕೆ ಪಂಚರತ್ನ ರಥಯಾತ್ರೆ ಆಗಮಿಸಿದ ಸಂದರ್ಭದಲ್ಲಿ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಪೂಜೆ ಸಲ್ಲಿಸಿ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಇದಕ್ಕೆ ಪೂರಕವಾಗಿ ರಥಯಾತ್ರೆ ಸಂಚರಿಸಿದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈಗಾಗಲೇ 10 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ.ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಅಸ್ಪಷ್ಟಬಹುಮತದ ಪ್ರಶ್ನೆಯೇ ಇರುವುದಿಲ್ಲ. ಜೆಡಿಎಸ್‌ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಕುಮಾರಸ್ವಾಮಿ

ರಾಜ್ಯದಲ್ಲಿ ಈಗಾಗಲೇ ರಾಜಕೀಯದ ಸುನಾಮಿ ಅಲೆ ಎದ್ದಿದ್ದು, ಜನತಾ ದಳದ ಪರವಾಗಿದೆ. ಜೆಡಿಎಸ್‌ನ ಈ ಸುನಾಮಿ ಅಲೆಯಲ್ಲಿ ಎಲ್ಲ ಪಕ್ಷಗಳು ಕೊಚ್ಚಿ ಹೋಗಲಿವೆ ಎಂದರು.

ರಾಜ್ಯದಲ್ಲಿ ಈ ಬಾರಿ 123 ಸ್ಥಾನಗಳನ್ನು ಜೆಡಿಎಸ್‌ ಪಕ್ಷ ಗೆಲ್ಲುವ ಗುರಿ ಹೊಂದಲಾಗಿದೆ. ಈ ಗುರಿಯನ್ನು ಜನರ ಆಶೀರ್ವಾದದೊಂದಿಗೆ ಸಾಧಿಸುತ್ತೇವೆ ಎಂಬ ಆತ್ಮವಿಶ್ವಾಸ ತಮಗಿದೆ. ಈಗಾಗಲೇ ರಾಜ್ಯದ ಜನತೆ ಜೆಡಿಎಸ್‌ ಪಕ್ಷಕ್ಕೆ ಬಹುಮತ ನೀಡುವ ತೀರ್ಮಾನ ಮಾಡಿದ್ದಾರೆ. ರಾಜಕೀಯ ಗಾಳಿ ಗಂಧವೇ ಗೊತ್ತಿಲ್ಲದವರು ಸಹ ಕುಮಾರಣ್ಣ ಸಿಎಂ ಆಗಬೇಕು ಎನ್ನುವ ಮಾತುಗಳನ್ನಾಡುತ್ತಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತರಿಗೆ ಯಾವುದೇ ಸಂದರ್ಭದಲ್ಲೂ ತೊಂದರೆಯಾಗದಂತೆ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿ ಮಾಡುವುದರೊಂದಿಗೆ ಅವರಿಗೆ ಆರ್ಥಿಕ ಶಕ್ತಿ ತುಂಬಲಾಗುವುದು ಎಂದರು.

ರಾಜ್ಯದ 36 ವಿಧಾನಸಭಾ ಕ್ಷೇತ್ರದಲ್ಲಿ ಮೊದಲನೇ ಹಂತದ ಕಾರ್ಯಕ್ರಮ ನಿಗದಿ ಮಾಡಲಾಗಿದೆ. ಜನವರಿ 3 ರಿಂದ 2ನೇ ಹಂತದ ರಥಯಾತ್ರೆ ಕಲ್ಬುರ್ಗಿ, ಬೀದರ್‌, ರಾಯಚೂರು, ಬಿಜಾಪುರ ಸೇರಿದಂತೆ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಯಾತ್ರೆ ನಡೆಯಲಿದೆ. ಡಿ. 7ರಂದು ಕೆಜಿಎಫ್‌ನಲ್ಲಿ ರಥಯಾತ್ರೆ ನಡೆಯಲಿದ್ದು, ಆ ಸಂದರ್ಭದಲ್ಲಿ ಆ ಜಿಲ್ಲೆಯ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುತ್ತದೆ ಎಂದರು.

ಈಗಾಗಲೇ 3 ಜಿಲ್ಲೆಗಳಲ್ಲಿ ರಥಯಾತ್ರೆ ಕಾರ್ಯಕ್ರಮವನ್ನು ಮುಗಿಸಿ 4ನೇ ಜಿಲ್ಲೆ ತುಮಕೂರಿಗೆ ಯಾತ್ರೆ ಆಗಮಿಸಿದೆ. ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ರಥಯಾತ್ರೆ ಪ್ರಾರಂಭ ಮಾಡುವುದಕ್ಕಿಂತ ಮುನ್ನ ಶ್ರೀಗಳ ಗದ್ದುಗೆಗೆ ಪ್ರಣಾಮ ಸಲ್ಲಿಸಿ ಆಶೀರ್ವಾದ ಪಡೆದಿದ್ದೇನೆ ಎಂದರು.

Kolar : ದೇವೇಗೌಡರಿಗೆ ಆಹ್ವಾನಿಸದ್ದಕ್ಕೆ ಜೆಡಿಎಸ್‌ ಆಕ್ರೋಶ

ಈ ಸಂದರ್ಭದಲ್ಲಿ ಜೆಡಿಎಸ್‌ ನಾಯಕರಾದ ತಿಪ್ಪೇಸ್ವಾಮಿ, ಡಿ. ನಾಗರಾಜಯ್ಯ, ಎಂ.ಟಿ. ಕೃಷ್ಣಪ್ಪ, ಆರ್‌.ಸಿ. ಆಂಜಿನಪ್ಪ, ಗೋವಿಂದರಾಜು, ಸುರೇಶ್‌ಬಾಬು, ಉಪಮೇಯರ್‌ ಟಿ.ಕೆ. ನರಸಿಂಹಮೂರ್ತಿ, ಬೆಳ್ಳಿ ಲೋಕೇಶ್‌, ಶಶಿಕಲಾ ಗಂಗಹನುಮಯ್ಯ, ಟಿ.ಆರ್‌. ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.

ಗೋವಿಂದರಾಜು ಅಭ್ಯರ್ಥಿ:

ತುಮಕೂರು ನಗರ ಕ್ಷೇತ್ರದಲ್ಲಿ ಈಗಾಗಲೇ ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿ ಅತ್ಯಂತ ಕಡಿಮೆ ಅಂತರದಲ್ಲಿ ಪರಾಭವಗೊಂಡಿರುವ ಗೋವಿಂದರಾಜು ಅವರೇ ಈ ಬಾರಿಯು ಜೆಡಿಎಸ್‌ ಅಭ್ಯರ್ಥಿಯಾಗಲಿದ್ದಾರೆ. ಈಗಾಗಲೇ ಅವರಿಗೆ ಟಿಕೆಟ್‌ ಕೊಡುವ ಬಗ್ಗೆಯೂ ನಿರ್ಧಾರ ಮಾಡಲಾಗಿದೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಪ್ರಶ್ನೆಯೊಂದಕ್ಕೆ ಕುಮಾರಸ್ವಾಮಿ ಉತ್ತರಿಸಿದರು. ತುಮಕೂರು ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್‌ ಪಕ್ಷ ಗೆಲ್ಲಲು ಶ್ರಮ ಹಾಕುತ್ತೇವೆ. ಈ ಬಾರಿ 11 ಸ್ಥಾನಗಳಲ್ಲೂ ಪಕ್ಷದ ಅಭ್ಯರ್ಥಿಗಳ ಗೆಲುವು ಬಹುತೇಕ ಖಚಿತ ಎಂದ ಅವರು, 1994ರಲ್ಲಿ ದೇವೇಗೌಡರು ಮುಖ್ಯಮಂತ್ರಿಯಾಗಬೇಕಾದರೆ ತುಮಕೂರು ಜಿಲ್ಲೆಯಲ್ಲಿ 10 ಜೆಡಿಎಸ್‌ ಶಾಸಕರನ್ನು ಜನತೆ ಆಯ್ಕೆ ಮಾಡಿದ್ದರು. ಹಾಗೆಯೇ ಈ ಬಾರಿಯೂ 11 ಸ್ಥಾನಗಳಲ್ಲೂ ಜೆಡಿಎಸ್‌ ಗೆಲ್ಲಲು ಚುನಾವಣಾ ರಣತಂತ್ರ ರೂಪಿಸುವಲ್ಲಿ ನಾವು ಹಿಂದುಳಿದಿಲ್ಲ. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ನನ್ನದೇ ಆದಂತಹ ಆಂತರಿಕ ಸಮೀಕ್ಷೆಗಳಿವೆ. ಆ ಕ್ಷೇತ್ರದಲ್ಲಿ ಉಪಚುನಾವಣೆ ಫಲಿತಾಂಶವೇ ಬೇರೆ, ಸಾರ್ವಜನಿಕ ಚುನಾವಣೆಯ ಫಲಿತಾಂಶವೇ ಬೇರೆಯಾಗಲಿದೆ. ಹಾಗಾಗಿ ಈ ಬಾರಿ ಶಿರಾದಲ್ಲಿ ಜೆಡಿಎಸ್‌ ಗೆಲುವು ನಿಶ್ಚಿತ ಎಂದರು.
 

Follow Us:
Download App:
  • android
  • ios