ಚುನಾವಣೆ ಹತ್ತಿರವಾಗುತ್ತಿದ್ದಂತೆ ನಾಯಕರ ನಡುವಿನ ವೈಮನಸ್ಯ ಬಹಿರಂಗವಾಗಲು ಆರಂಭಿಸಿದೆ. ಜೆಡಿಎಸ್‌ ಭದ್ರಕೋಟೆ ಅಂತಲೇ ಕರೆಸಿಕೊಳ್ಳುವ ಮಂಡ್ಯದಲ್ಲಿ ದಳಪತಿಗಳ ಒಗ್ಗಟ್ಟಿನ ಕೊರತೆ ಎದ್ದು ಕಾಣ್ತಿದೆ. 

ವರದಿ: ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ

ಮಂಡ್ಯ (ಡಿ.14): ಚುನಾವಣೆ ಹತ್ತಿರವಾಗುತ್ತಿದ್ದಂತೆ ನಾಯಕರ ನಡುವಿನ ವೈಮನಸ್ಯ ಬಹಿರಂಗವಾಗಲು ಆರಂಭಿಸಿದೆ. ಜೆಡಿಎಸ್‌ ಭದ್ರಕೋಟೆ ಅಂತಲೇ ಕರೆಸಿಕೊಳ್ಳುವ ಮಂಡ್ಯದಲ್ಲಿ ದಳಪತಿಗಳ ಒಗ್ಗಟ್ಟಿನ ಕೊರತೆ ಎದ್ದು ಕಾಣ್ತಿದೆ. ನಾಗಮಂಗಲದಲ್ಲಿ ಜೆಡಿಎಸ್ ಮಾಜಿ ವಿಧಾನಪರಿಷತ್ ಸದಸ್ಯ ಅಪ್ಪಾಜಿ ಗೌಡರ ಅಸಮಾಧಾನ ಸ್ಪೋಟಗೊಂಡಿದ್ದು, ಸ್ವಪಕ್ಷೀಯ ಶಾಸಕ ಸುರೇಶ್ ಗೌಡ ವಿರುದ್ಧ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದಾರೆ.

ಪಂಚರತ್ನ ಕಾರ್ಯಕ್ರಮ ಹಿನ್ನೆಲೆ ನಾಗಮಂಗಲದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಸಾವಿರಾರು ಕಾರ್ಯಕರ್ತರು ಸೇರಿದ್ದ ಕಾರ್ಯಕ್ರಮದಲ್ಲಿ ಮಾಜಿ ಎಂಎಲ್‌ಸಿ ಅಪ್ಪಾಜಿ ಗೌಡ ಅಸಮಾಧಾನ ವ್ಯಕ್ತಪಡಿಸಿದರು. ಸುರೇಶ್ ಗೌಡರ ಚುನಾವಣೆ ವೇಳೆ ಆರ್ಥಿಕವಾಗಿ ಸಹಾಯ ಮಾಡಿದ್ದ ನನಗೆ, ನನ್ನ ಚುನಾವಣೆಯಲ್ಲಿ ಯಾರೂ ಸಹಾಯ ಮಾಡಲಿಲ್ಲ ಎಂದು ಶಾಸಕ ಸುರೇಶ್ ಗೌಡ ಮುಂದೆಯೇ ಅಸಮಾಧಾನ ಹೊರಹಾಕಿದರು‌. ಸುರೇಶ್ ಗೌಡರ ಕೆಲವು ಶಿಷ್ಯರು ಅಪ್ಪಾಜಿಗೌಡ ಹಣ ಪಡೆದುಕೊಂಡಿದ್ದಾರೆ ಅಂತ ಹಬ್ಬಿಸುತ್ತಿದ್ದಾರೆ. ಯಾವುದೇ ಸಹಾಯವನ್ನ ಸುರೇಶ್ ಗೌಡರಿಂದ ನಾನು ಪಡೆದಿಲ್ಲ. 

ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ: 7 ಮಂದಿ ಪೊಲೀಸರ ವಿರುದ್ಧ ಕೇಸ್‌

ಇದು ತುಂಬಿದ ಸಭೆ, ಕಾರ್ಯಕರ್ತರಾದ ನೀವು ದೈವ ಸಮಾನರು. ಈ ಸಭೆಯಲ್ಲಿ ನಿಜ ಹೇಳಬೇಕಾದ ಅನಿವಾರ್ಯತೆ ನನಗೆ ಬಂದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಫೈಟರ್ ರವಿ ಬಳಿ ದುಡ್ಡು ಕೊಡಿಸಿದ್ದು ನಿಜ. ಸಾಕಷ್ಟು ಹಿರಿಯರಿದ್ದರು, ನಾನು ಬಾಯಿ ಮುಚ್ಚಿಕೊಂಡು ಇರ್ಬೇಕಿತ್ತು. ರಾಜಕೀಯ ಅನುಭವದ ಕೊರತೆಯಿಂದ ಮುಂದಾಳತ್ವ ತೆಗೆದುಕೊಂಡು ತೊಂದರೆಗೆ ಸಿಲುಕಿಕೊಂಡಿದ್ದೇನೆ. ಶಿವರಾಮೇಗೌಡರ ಎಂಪಿ ಉಪಚುನಾವಣೆಯಲ್ಲೂ ಹಣಕಾಸಿನ ಸಹಾಯ ಮಾಡಿಸಿದ್ದೇನೆ. ನನ್ನ ಆರ್ಥಿಕ ಸಮಸ್ಯೆ ಸಂಬಂಧ ಕೆಲವರನ್ನ ಭೇಟಿ ಮಾಡಬೇಕಾಗುತ್ತದೆ. ಆ ಭೇಟಿಯನ್ನ ಯಾರೂ ತಪ್ಪಾಗಿ ತಿಳಿದುಕೊಳ್ಳಬೇಡಿ ಎನ್ನುವ ಮೂಲಕ ಫೈಟರ್ ರವಿ ಹಾಗೂ ಶಿವರಾಮೇಗೌಡರನ್ನು ಭೇಟಿಯಾಗುವುದಾಗಿ ಪರೋಕ್ಷ ಸುಳಿವು ನೀಡಿದರು.

ಮಸೀದಿ ಸಂಘರ್ಷ: ಹಿಂದೂಗಳಿಂದ ಶ್ರೀರಂಗಪಟ್ಟಣದಲ್ಲಿ ಭಾರಿ ಪ್ರತಿಭಟನೆ

ದಳಪತಿಗಳಿಗೆ ತಲೆನೋವಾದ ನಾಯಕರ ಅಸಮಾಧಾನ: ಒಂದೆಡೆ ನಾಗಮಂಗಲ ಶಾಸಕ ಸುರೇಶ್ ಗೌಡ ವಿರುದ್ಧ ಅಪ್ಪಾಜಿ ಗೌಡ ಅಸಮಾಧಾನ ಹೊರಹಾಕಿದ್ರೆ, ಮತ್ತೊಂದೆಡೆ ಶಿವರಾಮೇಗೌಡ ಜೆಡಿಎಸ್‌ನಿಂದ ಉಚ್ಚಾಟನೆಗೊಂಡ ಬಳಿಕ ಪಕ್ಷೇತರ ಸ್ಪರ್ಧೆಗೆ ತಯಾರಾಗುತ್ತಿದ್ದಾರೆ. ಇಬ್ಬರು ನಾಯಕರ ಬಂಡಾಯ ಜೆಡಿಎಸ್‌‌ಗೆ ಮೊಗ್ಗಲ ಮುಳ್ಳಾಗಲಿದೆ. ಉಚ್ಚಾಟನೆ ಬಳಿಕ ಸ್ವತಂತ್ರ ಹಕ್ಕಿಯಂತೆ ನಾಗಮಂಗಲ ಕ್ಷೇತ್ರದಾದ್ಯಂತ ಸಂಚರಿಸಿ ಭರ್ಜರಿ ಪ್ರಚಾರ ನಡೆಸುತ್ತಿರುವ ಮಾಜಿಸಂಸದ ಶಿವರಾಮೇಗೌಡ ದಳಪತಿಗಳಿಗೆ ಟಕ್ಕರ್ ಕೊಡಲು ಅಣಿಯಾಗ್ತಿದ್ದಾರೆ. ಸದ್ಯ ಭಿನ್ನಮತ ಶಮನ ಮಾಡುವುದೇ ಜೆಡಿಎಸ್ ವರಿಷ್ಠರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.