Asianet Suvarna News Asianet Suvarna News

ಮಸೀದಿ ಸಂಘರ್ಷ: ಹಿಂದೂಗಳಿಂದ ಶ್ರೀರಂಗಪಟ್ಟಣದಲ್ಲಿ ಭಾರಿ ಪ್ರತಿಭಟನೆ

ಸಂಕೀರ್ತನಾ ಯಾತ್ರೆ ವೇಳೆ ಕಾನೂನು ಉಲ್ಲಂಘನೆ ಮಾಡಿದ್ದಾನೆ ಎಂಬ ಆರೋಪದಡಿ ಮಧ್ಯರಾತ್ರಿ 2 ಗಂಟೆಯ ವೇಳೆಯಲ್ಲಿ ಹಿಂದೂ ಯುವಕನನ್ನು ಬಂಧಿಸಿದ್ದಲ್ಲದೆ, ಆತನಿಗೆ ಪೊಲೀಸರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳು ಶನಿವಾರ ಪಟ್ಟಣದ ಜಾಮೀಯಾ ಮಸೀದಿಗೆ ಮುತ್ತಿಗೆ ಹಾಕಲು ಯತ್ನಿಸಿದರು. 

Huge protest in Jamia Masjid Srirangapatna by Hindus gvd
Author
First Published Dec 11, 2022, 9:44 AM IST

ಶ್ರೀರಂಗಪಟ್ಟಣ (ಡಿ.11): ಕಾನೂನು ಉಲ್ಲಂಘನೆ ಆರೋಪದಲ್ಲಿ ಹಿಂದೂ ಯುವಕನನ್ನು ಬಂಧಿಸಿರುವುದನ್ನು ಖಂಡಿಸಿ ಹಿಂದು ಪರ ಸಂಘಟನೆಗಳು ಪಟ್ಟಣದ ಜಾಮಿಯಾ ಮಸೀದಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಶನಿವಾರ ಸಂಜೆ ನಡೆಯಿತು. ಸಂಕೀರ್ತನಾ ಯಾತ್ರೆ ವೇಳೆ ಕಾನೂನು ಉಲ್ಲಂಘನೆ ಮಾಡಿದ್ದ ಆರೋಪದಡಿ ಹಿಂದು ಯುವಕನನ್ನು ಮಧ್ಯರಾತ್ರಿ 2 ಗಂಟೆ ವೇಳೆ ಪೊಲೀಸರು ಬಂಧಿಸಿ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಬೆದರಿಕೆ ಹಾಕಿದ ಪೊಲೀಸ್‌ ಸಿಬ್ಬಂದಿಯನ್ನು ಅಮಾನತ್ತು ಗೊಳಿಸುವಂತೆ ಕಾರ್ಯಕರ್ತರು ಒತ್ತಾಯಿಸಿದರು.

ಈ ಸಂಬಂಧ ಎಸ್ಪಿ ಜೊತೆ ಸಂಧಾನದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಟೌನ್‌ ಪೊಲೀಸ್‌ ಠಾಣೆಯಿಂದ ಹೊರ ನಡೆದ ಸಂಘಟನೆಗಳು ಕಾರ್ಯಕರ್ತರು ಪಟ್ಟಣದ ಮುಖ್ಯರಸ್ತೆ ಮೂಲಕ ಜಾಮಿಯಾ ಮಸೀದಿಗೆ ಮುತ್ತಿಗೆಹಾಕಲು ಯತ್ನಿಸಿದರು. ಮುಖ್ಯ ರಸ್ತೆಯ ಮೂಡಲ ಆಂಜನೇಯಸ್ವಾಮಿ ದೇವಾಲಯದ ಬಳಿ ಪೊಲೀಸರು ಇವರನ್ನು ಅಡ್ಡಗಟ್ಟಿತಡೆಯಲು ಯತ್ನಿಸಿದಾದರೂ ಪೊಲೀಸರನ್ನು ತಳ್ಳಿಕೊಂಡು ಮುಂದೆ ನುಗ್ಗಿ ಜಾಮಿಯಾ ಮಸೀದಿಗೆ ಮುತ್ತಿಗೆ ಹಾಕಲು ಮುಂದಾದರು. ಈ ವೇಳೆ ಪೊಲೀಸರು ಬ್ಯಾರಿಕೇಡ್‌ ಮೂಲಕ ಬೀಗಿ ಬಂದೋಬಸ್ತ್‌ ಮಾಡಿ ಮಸೀದಿಗೆ ಮುತ್ತಿಗೆ ಹಾಕದಂತೆ ತಡೆದರು. 

ಜಾಮಿಯಾ ಮಸೀದಿಗೆ ಬಿಗಿ ಭದ್ರತೆ: ಸಂಕೀರ್ತನ ಯಾತ್ರೆ ಹಿನ್ನೆಲೆಯಲ್ಲಿ ಕಟ್ಟೆಚ್ಚರ

ಈ ವೇಳೆ ಪೊಲೀಸರೊಂದಿಗೆ ಕೆಲ ಸಮಯ ಮಾತಿನ ಚಕಮಕಿ ನಡೆಯಿತು. ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಸ್ಪಿ ಯತೀಶ್‌, ಎರಡು ದಿನಗಳ ಕಾಲ ಕಾಲಾವಕಾಶ ನೀಡಿ ತಪ್ಪಿತಸ್ಥ ಪೊಲೀಸ್‌ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮನವಿ ಮಾಡಿದರು. ಇದಕ್ಕೂ ಸೊಪ್ಪು ಹಾಕದ ಪ್ರತಿಭಟನಾಕಾರರು ನೀವು ಕ್ರಮ ಕೈಗೊಳ್ಳುವವರೆವಿಗೂ ನಾವು ಈ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಅಹೋರಾತ್ರಿಯಲ್ಲೂ ಮಳೆಯನ್ನು ಲೆಕ್ಕಿಸದೇ ಪ್ರತಿಭಟನೆಯನ್ನು ಮುಂದುವರಿಸಿದರು.

ಬಲವಂತದಿಂದ ಹಸಿರು ಬಾವುಟ ತೆರವು: ಶ್ರೀರಂಗಪಟ್ಟಣದಲ್ಲಿ ನ.4ರಂದು ಹನುಮ ಜಯಂತಿ ಅಂಗವಾಗಿ ನಡೆದ ಸಂಕೀರ್ತನಾ ಯಾತ್ರೆ ವೇಳೆ ಗಂಜಾಂ-ಕರಿಘಟ್ಟಮುಖ್ಯರಸ್ತೆಯಲ್ಲಿ ಮೆರವಣಿಗೆ ಸಾಗುವಾಗ ಕೆಲ ಕಿಡಿಗೇಡಿಗಳು ಅಶಾಂತಿ ಮಾಡುವ ಉದ್ದೇಶದಿಂದ ತರಕಾರಿ ಮಾರುವ ಮುಸ್ಲಿಂ ಸಮುದಾಯಕ್ಕೆ ಸೇರಿದ ಬಡ ಕುಟುಂಬದ ಮನೆಯ ಮೇಲೆ ಅಕ್ರಮವಾಗಿ ಹತ್ತಿ ದಾಂಧಲೆ ನಡೆಸಿದ್ದಾರೆ ಎಂದು ಮುಸ್ಲಿಂ ಒಕ್ಕೂಟದ ನದೀಂ ಅಹ್ಮದ್‌ ಆರೋಪಿಸಿದರು. ಮನೆಯ ಮೇಲೆ ಹಾರಾಡುತ್ತಿದ್ದ ಹಸಿರು ಬಾವುಟವನ್ನು ತೆರವುಗೊಳಿಸಿ, ಆ ಜಾಗದಲ್ಲಿ ಕೇಸರಿ ಬಾವುಟ ಅಕ್ರಮವಾಗಿ ಹಾಕಿದ್ದಾರೆ. 

ಮನೆಯ ಮೇಲೆ ಹತ್ತುತ್ತಿದ್ದ ವೇಳೆ ಹೆಂಗಸರು ವಿರೋಧಿಸಿದಾಗ ನಿಮಗೆ ಗುಜರಾತಿನಲ್ಲಿ ಮಾಡಿದಂತಹ ಸ್ಥಿತಿಯನ್ನು ನಾವು ಮಾಡಿ ತೋರಿಸುತ್ತೇವೆ, ಹೆಂಗಸರ ಮೇಲೆ ನಡೆಸಿದಂತಹ ಅತ್ಯಾಚಾರಗಳನ್ನು ನೀವು ಎದುರಿಸಬೇಕಾಗುತ್ತದೆ ಎಂದು ಹೆದರಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು. ಪೊಲೀಸರು ಪರಿಸ್ಥಿತಿಯನ್ನು ತಹಬದಿಗೆ ತಂದು ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಿದರು. ಆದರೆ, ಅವರನ್ನು ತಕ್ಷಣ ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಇಂತಹುದೇ ಘಟನೆ ಶ್ರೀರಂಗಪಟ್ಟಣದ ಬಂದೀಗೌಡ ಸರ್ಕಲ್‌ನಲ್ಲಿ ಜಾಮಿಯಾ ಮಸೀದಿಯ ಹತ್ತಿರ ಹನುಮ ಮಾಲಾಧಾರಿಗಳ ವೇಷದಲ್ಲಿದ್ದ ದುಷ್ಕರ್ಮಿಗಳು ಮಸೀದಿಯ ಮೇಲೆ ಬಿಲ್ಲು-ಬಾಣಗಳಿಂದ ದಾಳಿ ಮಾಡಿದ್ದು, ಕಲ್ಲುಗಳನ್ನು ಮಸೀದಿಯ ಮೇಲೆ ಎಸೆದಿದ್ದಾರೆ. 

Jamia Masjid Srirangapatna: ಶ್ರೀರಂಗಪಟ್ಟಣ ದೇಗುಲ ಕೆಡವಿ ಮಸೀದಿ: ಪಿಐಎಲ್‌

ಐದು ಜನರ ತಂಡ ಮಸೀದಿಗೆ ನುಗ್ಗಲು ಪ್ರಯತ್ನಿಸಿದರು ಮತ್ತು ಟಿಪ್ಪುವಿನ ಬಗ್ಗೆ ಅಸಹನೀಯ ಮಾತುಗಳಿಂದ ನಿಂದಿಸಿದರು. ಇದು ಪೊಲೀಸರ ಮತ್ತು ಜಿಲ್ಲಾಡಳಿತದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಆರೋಪಿಸಿದರು. ಇದುವರೆಗೂ ದುಷ್ಕರ್ಮಿಗಳು ಮತ್ತು ಈ ಕಾರ್ಯಕ್ರಮ ಆಯೋಜಿಸಿದ್ದ ಭಜರಂಗದಳ ಹಾಗೂ ಹಿಂದು ಜಾಗರಣಾ ವೇದಿಕೆಯವರ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವುದು ವಿಷಾದನೀಯ. ಕೂಡಲೇ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆ ದುಷ್ಕರ್ಮಿಗಳನ್ನು ಬಂಧಿಸಬೇಕು ಹಾಗೂ ಮನೆಗೆ ಆಗಿರುವ ಹಾನಿಯನ್ನು ಭರಿಸಿಕೊಡಬೇಕೆಂದು ಒತ್ತಾಯಿಸಿದರು.

Follow Us:
Download App:
  • android
  • ios