ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತನ ಮನೆಗೆ ನುಗ್ಗಿ ಬಂಧಿಸಿ ಠಾಣೆಗೆ ಕರೆತಂದಿದ್ದಲ್ಲದೇ, ಅವಾಚ್ಯಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದರ ಜೊತೆಗೆ ಹಿಂದೂ ಸಂಘಟನೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಶ್ರೀರಂಗಪಟ್ಟಣ ಠಾಣೆಯ ಇನ್ಸ್‌ಪೆಕ್ಟರ್‌ ಸೇರಿ ಏಳಕ್ಕೂ ಹೆಚ್ಚು ಪೊಲೀಸರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. 

ಮಂಡ್ಯ (ಡಿ.12): ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತನ ಮನೆಗೆ ನುಗ್ಗಿ ಬಂಧಿಸಿ ಠಾಣೆಗೆ ಕರೆತಂದಿದ್ದಲ್ಲದೇ, ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದರ ಜೊತೆಗೆ ಹಿಂದೂ ಸಂಘಟನೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಶ್ರೀರಂಗಪಟ್ಟಣ ಠಾಣೆಯ ಇನ್ಸ್‌ಪೆಕ್ಟರ್‌ ಸೇರಿ ಏಳಕ್ಕೂ ಹೆಚ್ಚು ಪೊಲೀಸರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಠಾಣಾ ಇನ್ಸ್‌ಪೆಕ್ಟರ್‌ ಪ್ರಕಾಶ್‌, ಸಿಬ್ಬಂದಿಯಾದ ಮುಖ್ಯಪೇದೆ ವಿಜಯ್‌, ಹರೀಶ್‌, ಉಮೇಶ್‌, ಶರತ್‌, ರಾಘವೇಂದ್ರ, ಕೃಷ್ಣ, ಮಂಜುನಾಥ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. 

ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತನ ಮನೆಗೆ ಅತಿಕ್ರಮ ಪ್ರವೇಶ ಮಾಡಿ ಅವರ ಕುಟುಂಬವರ್ಗದವರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಪಾಂಡವಪುರ ತಾಲೂಕು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನೀಡಿದ ದೂರಿನನ್ವಯ ಎಫ್‌ಐಆರ್‌ ದಾಖಲಿಸಲಾಗಿದೆ. ಡಿ.10ರಂದು ಬೆಳಗಿನ ಜಾವ ಠಾಣಾ ಇನ್ಸ್‌ಪೆಕ್ಟರ್‌ ಪ್ರಕಾಶ್‌, ಸಿಬ್ಬಂದಿಯಾದ ಮುಖ್ಯಪೇದೆ ವಿಜಯ್‌, ಹರೀಶ್‌, ಉಮೇಶ್‌, ಶರತ್‌, ರಾಘವೇಂದ್ರ, ಕೃಷ್ಣ, ಮಂಜುನಾಥ ಅವರು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಶಶಾಂಕ್‌ ಮನೆಗೆ ಏಕಾಏಕಿ ನುಗ್ಗಿದ್ದಾರೆ. 

ಮಸೀದಿ ಸಂಘರ್ಷ: ಹಿಂದೂಗಳಿಂದ ಶ್ರೀರಂಗಪಟ್ಟಣದಲ್ಲಿ ಭಾರಿ ಪ್ರತಿಭಟನೆ

ಅವರ ತಂದೆ-ತಾಯಿ ಮನೆಯಲ್ಲಿ ಮಲಗಿರುವಾಗ ಏಳಕ್ಕೂ ಹೆಚ್ಚು ಪೊಲೀಸರು ಅತಿಕ್ರಮ ಪ್ರವೇಶ ಮಾಡಿ ಶಶಾಂಕ್‌ನನ್ನು ಹೊಡೆದು ಹೊರಗೆ ಎಳೆತಂದು ಮನೆಯ ಮುಂದೆ ಗಲಾಟ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನೀನು ಠಾಣೆಗೆ ಬಾರದೇ ಹೋದರೆ ನಿನ್ನ ತಂದೆ-ತಾಯಿ ಅವರನ್ನು ಹೊಡೆದು ಎಳೆದುಕೊಂಡು ಹೋಗುತ್ತೇನೆ ಎಂದು ಬೆದರಿಕೆ ಹಾಕಿ ಕುತ್ತಿಗೆ ಹಿಡಿದು ತಲೆಯ ಹಿಂಭಾಗಕ್ಕೆ ಹೊಡೆದು ಶ್ರೀರಂಗಪಟ್ಟಣ ಪೊಲೀಸ್‌ ಠಾಣೆಗೆ ಕರೆತಂದಿದ್ದಾರೆ ಎಂದು ದೂರಲಾಗಿದೆ.

ಠಾಣೆಯಲ್ಲಿ ಠಾಣಾಧಿಕಾರಿ ಶಶಾಂಕ್‌ನ ಕಪಾಲಕ್ಕೆ ಹೊಡೆದು ನಿನಗೇಕೆ ಬೇಕು ಹನುಮ ಮಾಲೆ. ಸುಮ್ಮನೆ ಮನೆಯಲ್ಲಿರೋದು ಬಿಟ್ಟು ನಿನಗೇಕೆ ಬೇಕೋ ಹಿಂದುತ್ವ. ಮುಸಲ್ಮಾನರಿಗೆ 53 ರಾಷ್ಟ್ರಗಳಿವೆ. ಇಲ್ಲಿ ಪಿಎಫ್‌ಐ ಸಂಘಟನೆ ತುಂಬಾ ಗಟ್ಟಿಯಾಗಿದೆ. ಅವರಿಗೆ ನಿನ್ನ ವಿಚಾರ ತಿಳಿಸಿ ಕೊಲೆ ಮಾಡಿಸುವುದಾಗಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಪ್ರಕಾಶ್‌ ಕೊಲೆ ಬೆದರಿಕೆ ಹಾಕಿದ್ದಾರೆ. ಪಿಎಫ್‌ಐ ಸಂಘಟನೆ ಇಂತಹ ವಿಚಾರಗಳನ್ನು ನೋಡಿಕೊಳ್ಳುವುದಕ್ಕೆ ಇರುವ ಸಂಘಟನೆ. ನಿನಗೆ ಗೊತ್ತಾ. ನಿಮ್ಮ ಹಿಂದೂ ಸಂಘಟನೆ ಯಾವ ಪುಟಗೋಸಿ ಎಂದು ಹಿಂದೂ ಧರ್ಮದ ಬಗ್ಗೆ ಕೇವಲವಾಗಿ ಮಾತನಾಡಿ ಅಖಂಡ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಜಾಮಿಯಾ ಮಸೀದಿಗೆ ಬಿಗಿ ಭದ್ರತೆ: ಸಂಕೀರ್ತನ ಯಾತ್ರೆ ಹಿನ್ನೆಲೆಯಲ್ಲಿ ಕಟ್ಟೆಚ್ಚರ

ನಿನ್ನ ಮನೆಯ ಹತ್ತಿರ ಎಸ್‌ಡಿಪಿಐ ಸಂಘಟನೆಯವರು ಸುತ್ತುತ್ತಾ ಇದ್ದಾರೆ. ನಾವುಗಳು ಒಂದು ಮಾತು ಹೇಳಿದರೆ ನಿಮ್ಮ ಮನೆಯನ್ನು ಸುಟ್ಟುಹಾಕಿ ನಿಮ್ಮಮ ತಂದೆ-ತಾಯಿಯನ್ನು ಕೊಚ್ಚಿ ಕೊಲೆ ಮಾಡಿಸುತ್ತೇವೆ ಎಂದು ಬೆದರಿಸಿದ್ದು, ಆದ ಕಾರಣ ಠಾಣಾಧಿಕಾರಿ ಪ್ರಕಾಶ್‌ ಹಾಗೂ 7ಕ್ಕೂ ಹೆಚ್ಚು ಜನ ಪೊಲೀಸರನ್ನು ಈ ಕೂಡಲೇ ಕರ್ತವ್ಯದಿಂದ ವಜಾಗೊಳಿಸಿ ಕಾನೂನು ಕ್ರಮ ಜರುಗಿಸುವಂತೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.