ರಾಯಚೂರು: ಮಸ್ಕಿ ಉಪಚುನಾವಣೆಗೆ ಜೆಡಿಎಸ್ ಎಂಟ್ರಿ, ತ್ರಿಕೋನ ಸ್ಪರ್ಧೆ
ಇಷ್ಟು ದಿನಗಳ ಕಾಲ ತಟಸ್ಥ ಧೋರಣೆ ತಳೆದಿದ್ದ ಜೆಡಿಎಸ್| ಇದೀಗ ಉಪ ಚುನಾವಣೆ ಘೋಷಣೆಯಾದ ಎರಡು ದಿನದಲ್ಲೇ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಮಿನಿಕದನದ ಅಖಾಡಕ್ಕೆ ಎಂಟ್ರಿಕೊಟ್ಟ ಜೆಡಿಎಸ್| ಮಸ್ಕಿಯಲ್ಲಿ ಇಲ್ಲಿವರೆಗೂ ಖಾತೆ ತೆರೆಯದ ಜೆಡಿಎಸ್|
ರಾಮಕೃಷ್ಣ ದಾಸರಿ
ರಾಯಚೂರು(ಮಾ.19): ಮಸ್ಕಿ ಉಪಚುನಾವಣೆ ಘೋಷಣೆಯಾಗುತಿದ್ದಂತೆಯೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇಷ್ಟುದಿನ ಸುಮ್ಮನಿದ್ದ ಜೆಡಿಎಸ್ ಇದೀಗೆ ಎದ್ದು ಕೂತಿದ್ದು, ಉಪಕದನಕ್ಕೆ ಧುಮುಕಲು ನಿರ್ಧರಿಸಿದೆ.
ಕಳೆದ ಒಂದೂವರೆ ವರ್ಷದ ಹಿಂದೆಯೇ ಬಿಜೆಪಿ ಪ್ರತಾಪಗೌಡ ಪಾಟೀಲ್ ಅವರನ್ನು, ಐದು ತಿಂಗಳ ಹಿಂದೆಯೇ ಕಾಂಗ್ರೆಸ್ ಆರ್.ಬಸನಗೌಡ ತುರ್ವಿಹಾಳ ಅವರನ್ನು ಕಣಕ್ಕಿಳಿಸಲು ಉಭಯ ಪಕ್ಷಗಳು ತೀರ್ಮಾಸಿದ್ದವು. ಆದರೆ ಜೆಡಿಎಸ್ ಪಕ್ಷವು ಮಾತ್ರ ಇಷ್ಟು ದಿನಗಳ ಕಾಲ ತಟಸ್ಥ ಧೋರಣೆ ತಳೆದಿತ್ತು. ಇದೀಗ ಉಪ ಚುನಾವಣೆ ಘೋಷಣೆಯಾದ ಎರಡು ದಿನದಲ್ಲೇ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಮಿನಿಕದನದ ಅಖಾಡಕ್ಕೆ ಎಂಟ್ರಿಕೊಟ್ಟಿದೆ.
ಬೆಂಗಳೂರಿನಲ್ಲಿ ಸಭೆ:
ಬೆಂಗಳೂರಿನಲ್ಲಿರುವ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ. ಮಸ್ಕಿ ಉಪಚುನಾವಣೆಯಲ್ಲಿ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತಿದೆ. ರಾಘವೇಂದ್ರ ನಾಯಕ ಹಾಗೂ ಖಾಸಿಂ ನಾಯಕ ಅವರಿಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಅಂತಿಮಗೊಳ್ಳುವ ಸಾಧ್ಯತೆಗಳಿವೆ.
ಮಸ್ಕಿಯ ರಾಘವೇಂದ್ರ ನಾಯಕ ಕಾಂಗ್ರೆಸ್‌ನಲ್ಲಿದ್ದು, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರೊಂದಿಗೆ ಗುರುತಿಸಿಕೊಂಡಿದ್ದರು. ಇನ್ನು ಖಾಸಿಂ ನಾಯಕ ರಾಯಚೂರು ತಾಲೂಕಿನ ಯರಗೇರಾ ಜಿಪಂ ಸದಸ್ಯರಾಗಿದ್ದಾರೆ. ಇಬರಿಬ್ಬರಲ್ಲಿ ರಾಘವೇಂದ್ರ ನಾಯಕ ಅವರನ್ನು ಕಣಕ್ಕಿಳಿಸುವುದು ಬಹುತೇಕ ಖಚಿತ ಎನ್ನುವ ಮಾತುಗಳು ಕೇಳಿಬರುತಿವೆ.
ರಾಯಚೂರು: ಕೊರೋನಾ ಕರಿನೆರಳಿನಲ್ಲಿ ಮಸ್ಕಿ ಉಪಚುನಾವಣೆ
ಎಚ್ಡಿಕೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಶಾಸಕರಾದ ವೆಂಕಟರಾವ್ ನಾಡಗೌಡ, ರಾಜಾ ವೆಂಕಟಪ್ಪ ನಾಯಕ, ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷ, ಮುಖಂಡರಾದ ಸಿದ್ದು ಬಂಡಿ, ಕೆ.ಕರಿಯಮ್ಮ, ಎನ್.ಶಿವಶಂಕರ ಮತ್ತಿತರರು ಸಮಾಲೋಚನೆ ನಡೆಸಿ ಉಪಚುನಾವಣೆಯಲ್ಲಿ ಪಕ್ಷದಿಂದ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸಲು ಕ್ರಮವಹಿಸಿದ್ದಾರೆ
ಇಷ್ಟು ದಿನಗಳ ಕಾಲ ಮಸ್ಕಿ ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸುವುದಿಲ್ಲವೆಂದು ಕಾಂಗ್ರೆಸ್, ಬಿಜೆಪಿ ಪಕ್ಷಗಳ ಮುಖಂಡರು, ನಾಯಕರು ನಿರಾಳರಾಗಿದ್ದರು ಆದರೆ ಇದೀಗ ಪಕ್ಷದ ವರಿಷ್ಠರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದು ಇಬ್ಬರಿಗೂ ಹೊಸ ತಳವಳವನ್ನುಂಟು ಮಾಡಿದೆ. ಮಸ್ಕಿಯಲ್ಲಿ ಇಲ್ಲಿವರೆಗೂ ಜೆಡಿಎಸ್ ಖಾತೆ ತೆರೆದಿಲ್ಲ ಆದರೆ ಇಬ್ಬರ ನಡುವಿನ ಜಗಳ ಮೂರನೇ ವ್ಯಕ್ತಿಗೆ ಲಾಭ ಎನ್ನುವ ಗಾದೆಯನ್ನು ಅನ್ವಯಿಸಿಕೊಳ್ಳುವವರು ಕ್ಷೇತ್ರದಲ್ಲಿದ್ದಾರೆ.
ರಾಜ್ಯದಲ್ಲಿ ಘೊಷಣೆಯಾಗಿರುವ ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸುವುದರ ಬಗ್ಗೆ ಪಕ್ಷದ ಮುಖಂಡರು ತೀರ್ಮಾನಿಸಿದ್ದಾರೆ. ಅದರಂತೆ ಮಸ್ಕಿ ಉಪಚುನಾವಣೆಗೆ ರಾಘವೇಂದ್ರ ನಾಯಕ ಸೇರಿ ಇಬ್ಬರ ಹೆಸರುಗಳನ್ನು ಪರಿಶೀಲಿಸಲಾಗಿದೆ. ಯಾರಿಗೆ ಟಿಕೆಟ್ ನೀಡಬೇಕು ಎನ್ನುವುದರ ಕುರಿತು ಪಕ್ಷದ ರಾಜ್ಯಾಧ್ಯಕ್ಷರು ಅಂತಿಮ ನಿರ್ಧಾರವನ್ನು ಕೈಗೊಂಡು ಘೊಷಣೆ ಮಾಡಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ತಿಳಿಸಿದ್ದಾರೆ.