ರಾಯಚೂರು: ಕೊರೋನಾ ಕರಿನೆರಳಿನಲ್ಲಿ ಮಸ್ಕಿ ಉಪಚುನಾವಣೆ

ಮತಗಟ್ಟೆ ಸಂಖ್ಯೆ ಹೆಚ್ಚಳ, ಪ್ರತಿ ಬೂತ್‌ನಲ್ಲಿ 1000 ಜನರಿಗೆ ಮಾತ್ರ ಮತದಾನಕ್ಕೆ ಅವಕಾಶ| ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳಡಿ ಚುನಾವಣಾ ಪ್ರಕ್ರಿಯೇ ನಡೆಸುವುದೇ ಸವಾಲು| ಈಗಾಗಲೇ ನೀತಿ ಸಂಹಿತೆ ಜಾರಿ| ಮಸ್ಕಿಯಲ್ಲಿ ನಡೆಯಲಿರುವ ಸಿಎಂ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆ| 
 

Maski Byelection Will Be Held During Corona Pandemic grg

ರಾಮಕೃಷ್ಣ ದಾಸರಿ

ರಾಯಚೂರು(ಮಾ.18): ಬಹುದಿನಗಳ ನಿರೀಕ್ಷೆಯಲ್ಲಿದ್ದ ಮಸ್ಕಿ ಉಪಚುನಾವಣೆ ಘೋಷಣೆಯಾಗಿದ್ದು, ಕೊರೋನಾ ಎರಡನೇ ಅಲೆ ಕರಿನೆರಳಿನಲ್ಲಿ ಇಡೀ ಚುನಾವಣಾ ಪ್ರಕ್ರಿಯೇ ನಡೆಸಲು ಚುನಾವಣಾ ಆಯೋಗವು ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಕೊರೋನಾ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗೃತೆ ಕ್ರಮಗಳನ್ನು ವಹಿಸಿಕೊಂಡು ಚುನಾವಣೆ ನಡೆಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮುನ್ನೆಚ್ಚರಿಕೆ ಪಾಲಿಸಿಯೇ ಪ್ರಚಾರದಲ್ಲಿ ತೊಡಬೇಕು ಎನ್ನುವ ನಿಯಮವನ್ನು ಆಯೋಗವು ವಿಧಿಸಿರುವುದರಿಂದ ರಾಜಕೀಯ ಪಕ್ಷಗಳಿಗೆ ಜನರನ್ನು ಸೇರಿಸಿ ಸಭೆ, ಸಮಾರಂಭಗಳನ್ನು ನಡೆಸುವುದೇ ಸಂಕಟವಾಗಿ ಪರಿಣಮಿಸಲಿದೆ ಎನ್ನುವ ತಲೆನೋವು ಶುರುವಾಗಿದೆ.

ಮತಗಟ್ಟೆಗಳ ಸಂಖ್ಯೆ ಹೆಚ್ಚಳ:

ಕಳೆದ ಚುನಾವಣೆಯಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ 231 ಮತಗಟ್ಟೆಗಳಲ್ಲಿ ಮತದಾನ ನಡೆಸಲಾಗಿತ್ತು. ಈ ಬಾರಿ ಕೊರೋನಾ ಹಾವಳಿ ಇರುವ ಹಿನ್ನೆಲೆಯಲ್ಲಿ ಮತಗಟ್ಟೆಗಳಲ್ಲಿ ಜನಸಂದಣಿ ಕಡಿಮೆ ಮಾಡುವ ಉದ್ದೇಶದಿಂದ ಮತಗಟ್ಟೆಗಳ ಸಂಖ್ಯೆ ಹೆಚ್ಚಿಸಲಾಗಿದೆ. ಮುಂಚೆ ಒಂದು ಮತಗಟ್ಟೆಯಲ್ಲಿ ಸಾವಿರಕ್ಕೂ ಹೆಚ್ಚು ಜನರು ಮತದಾನ ಮಾಡುತ್ತಿದ್ದರು. ಇದೀಗ ಕೊರೋನಾ ಕಾರಣಕ್ಕೆ ಒಂದು ಮತಗಟ್ಟೆಯಲ್ಲಿ ಸಾವಿರ ಮತದಾರರು ಮಾತ್ರ ಹಕ್ಕು ಚಲಾಯಿಸಬೇಕು ಎನ್ನುವ ನಿಯಮವನ್ನು ಆಯೋಗವು ಜಾರಿಮಾಡಿದೆ. ಇದರಿಂದಾಗಿ ಹೆಚ್ಚುವರಿಯಾಗಿ 71 ಸಹಾಯಕ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈ ಉಪಚುನಾವಣೆಯಲ್ಲಿ ಒಟ್ಟು 302 ಮತಗಟ್ಟೆಕೇಂದ್ರಗಳಲ್ಲಿ ಮತದಾನ ನಡೆಸಲು ಜಿಲ್ಲಾಡಳಿತ ಮುಂದಾಗಿದೆ.

ಕರ್ನಾಟಕದ 3 ಕ್ಷೇತ್ರಗಳ ಉಪಚುನಾವಣೆಗಳಿಗೆ ದಿನಾಂಕ ಘೋಷಣೆ

ಜಿಲ್ಲಾಡಳಿತಕ್ಕೆ ಸವಾಲು:

ಕೋವಿಡ್‌ ನಿಯಮಾನುಸಾರ ಚುನಾವಣೆ ಪ್ರಕ್ರಿಯೇ ನಡೆಸುವುದು ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚಾಗಿವೆ. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕಾಗಿ ನಡೆಸುವ ಸಭೆ, ಸಮಾರಂಭಗಳು, ಬೃಹತ್‌ ಮಟ್ಟದ ರಾರ‍ಯಲಿಗಳಲ್ಲಿ ನಿಗದಿಪಡಿಸಿದ ಜನರು ಪಾಲ್ಗೊಳ್ಳುವಂತೆ ನೋಡಿಕೊಳ್ಳುವುದು ಅಸಾಧ್ಯತೆ ಮಾತಾಗಿದೆ.

ಮಾ.20ರಂದು ಸಿಎಂ ಯಡಿಯೂರಪ್ಪ ಮಸ್ಕಿಗೆ ಆಗಮಿಸುತ್ತಿದ್ದಾರೆ. ಉಪಕದನ ಘೋಷಣೆ ಪೂರ್ವದಲ್ಲಿ ಸಿದ್ಧತೆ ಮಾಡಿಕೊಂಡಿದ್ದ ಸರ್ಕಾರಿ ಕಾರ್ಯಕ್ರಮವು ಇದೀಗಿ ಮಾದರಿ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಪಕ್ಷದ ಸಮಾರಂಭವಾಗಿ ಮಾರ್ಪಟ್ಟಿದೆ. ಮಸ್ಕಿಯಲ್ಲಿ ನಡೆಯಲಿರುವ ಸಿಎಂ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆಯಿದ್ದು, ಇಲ್ಲಿ ಯಾವ ರೀತಿಯಲ್ಲಿ ಕೋವಿಡ್‌ ಮುನ್ನೆಚ್ಚರಿಕಾ ಕ್ರಮಗಳು ಪಾಲನೆಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಮಸ್ಕಿ ಉಪಚುನಾವಣೆ ಘೋಷಣೆಯಾಗಿದ್ದು, ಈಗಾಗಲೇ ನೀತಿ ಸಂಹಿತೆ ಜಾರಿಯಾಗಿದೆ. ಕೋವಿಡ್‌ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿ ಚುನಾವಣೆ ನಡೆಸಲು ಆಯೋಗ ಸೂಚಿಸಿದೆ. ಆಯೋಗದ ನಿರ್ದೇಶನದಂತೆ 1000ಕ್ಕೂ ಮೇಲ್ಪಟ್ಟಮತದಾರರ ವ್ಯಾಪ್ತಿಯಲ್ಲಿ ಹೆಚ್ಚುವರಿ ಮತಗಟ್ಟೆಗಳನ್ನು ನಿರ್ಮಾಣ ಮಾಡಲು ಸೂಚಿಸಿದೆ. ಅದರಂತೆ 71 ಸಹಾಯಕ ಮತಗಟ್ಟೆಗಳನ್ನು ಹೆಚ್ಚುವರಿಯಾಗಿ ಸ್ಥಾಪಿಸಿ ಎಲ್ಲ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ರಾಯಚೂರು ಡಿಸಿ ಆರ್‌.ವೆಂಕಟೇಶ ಕುಮಾರ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios