ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಬುಧವಾರ ರಾತ್ರಿ ಡಿನ್ನರ್‌ ಪಾರ್ಟಿ ಆಯೋಜನೆ ಮಾಡಿದ್ದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಮತ್ತು ಆಪ್ತ ಶಾಸಕರೇ ಹೆಚ್ಚಾಗಿ ಪಾಲ್ಗೊಂಡಿದ್ದರು ಎಂದು ಮೂಲಗಳು ಹೇಳಿವೆ.

ಬೆಳಗಾವಿ : ಇನ್ನೇನು ಅಧಿವೇಶನ ಮುಗಿಯುವ ಅವಧಿ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಮತ್ತೆ ಬಣ ರಾಜಕೀಯ, ಡಿನ್ನರ್‌ ಪಾರ್ಟಿಗಳು ಮತ್ತೆ ಚಿಗುರೊಡೆದಿವೆ. ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಬುಧವಾರ ರಾತ್ರಿ ಡಿನ್ನರ್‌ ಪಾರ್ಟಿ ಆಯೋಜನೆ ಮಾಡಿದ್ದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಮತ್ತು ಆಪ್ತ ಶಾಸಕರೇ ಹೆಚ್ಚಾಗಿ ಪಾಲ್ಗೊಂಡಿದ್ದರು ಎಂದು ಮೂಲಗಳು ಹೇಳಿವೆ.

ಅಧಿವೇಶನ ಸಂದರ್ಭದಲ್ಲಿಯೇ ಹೆಚ್ಚಾಗಿ ಡಿನ್ನರ್‌ ಪಾರ್ಟಿ

ಅಧಿವೇಶನ ಸಂದರ್ಭದಲ್ಲಿಯೇ ಹೆಚ್ಚಾಗಿ ಡಿನ್ನರ್‌ ಪಾರ್ಟಿಗಳು ಕಂಡುಬಂದಿರುವುದರಿಂದ ಸಹಜವಾಗಿ ಇದು ಕುತೂಹಲ ಮೂಡಿಸಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಬೆಳಗಾವಿ ಉದ್ಯಮಿಗಳೊಂದಿಗೆ ಡಿನ್ನರ್‌ ಪಾರ್ಟಿ ಆಯೋಜಿಸಿದ್ದ ಬಳಿಕ ಸಚಿವ ಸತೀಶ ಜಾರಕಿಹೊಳಿ ಅವರು ಕೂಡ ಮಂಗಳವಾರ ರಾತ್ರಿಯಷ್ಟೇ ದಲಿತ ಉದ್ಯಮಿಗಳಿಗೆ ರಾತ್ರಿ ಡಿನ್ನರ್‌ ಸಭೆ ನಡೆಸಿದ್ದರು. ಇದಾದ ಬಳಿಕ ಈಗ ಮತ್ತೆ ಕಾಂಗ್ರೆಸ್‌ ಶಾಸಕರಿಗೆ ಬುಧವಾರ ರಾತ್ರಿ ಡಿನ್ನರ್‌ ಪಾರ್ಟಿ ಆಯೋಜಿಸಿದ್ದರು.

ಸಿದ್ದರಾಮಯ್ಯ ಆಪ್ತರೆ ಹೆಚ್ಚಾಗಿ ಕಂಡುಬಂದಿರುವುದು ತೀವ್ರ ಕುತೂಹಲ

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಹಾಗೂ ವಿಧಾನ ಪರಿಷತ್‌ ಸದಸ್ಯ ಯತೀಂದ್ರ, ಶಾಸಕರಾದ ಗಣೇಶ ಹುಕ್ಕೇರಿ, ಕೆ.ಎನ್‌.ರಾಜಣ್ಣ, ಆಸೀಫ್‌ ಸೇಠ್‌, ಮಹಾಂತೇಶ ಕೌಜಲಗಿ, ಚಳ್ಳಕೆರೆ ರಾಮನಾಥ, ವಿಶ್ವಾಸ ವೈದ್ಯ, ಬಿ.ಆರ್‌.ಪಾಟೀಲ ಸೇರಿದಂತೆ ಸುಮಾರು 20ಕ್ಕೂ ಅಧಿಕ ಶಾಸಕರು ಪಾಲ್ಗೊಂಡಿದ್ದರು ಎನ್ನಲಾಗಿದೆ. ವಿಶೇಷವೆಂದರೆ ಈ ವೇಳೆ ಸಿಎಂ ಸಿದ್ದರಾಮಯ್ಯ ಅವರ ಆಪ್ತರೆ ಹೆಚ್ಚಾಗಿ ಕಂಡುಬಂದಿರುವುದು ತೀವ್ರ ಕುತೂಹಲ ಮೂಡಿಸಿದೆ.

ಅಧಿವೇಶನದ ಮುಕ್ತಾಯದ ನಂತರ ಸಿಎಂ ಮತ್ತು ಡಿಸಿಎಂ ಅವರು ದೆಹಲಿ ವರಿಷ್ಠರ ಭೇಟಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಡಿನ್ನರ್‌ ಪಾರ್ಟಿ ಕೂಡ ತೀವ್ರ ಕುತೂಹಲ ಮೂಡಿಸಿದೆ.