ನಾನು ಬೋನ್‌ನಲ್ಲಿದ್ದರೂ ಹುಲಿನೇ, ಜೈಲ್‌ನಲ್ಲಿದ್ದರೂ ಹುಲಿನೇ: ಜನಾರ್ದನ ರೆಡ್ಡಿ
ನಾನು ಸಿಎಂ, ಡಿಸಿಎಂ ಆಗುತ್ತೇನೋ ಇಲ್ಲವೋ ಗೊತ್ತಿಲ್ಲ, ರಾಜ್ಯದ 15 ಜಿಲ್ಲೆಗಳಲ್ಲಿ 20 ರಿಂದ 25 ಸ್ಥಾನ ಪಕ್ಷ ಗೆಲ್ಲುತ್ತದೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಕನಕಗಿರಿ (ಮಾ.09): ನಾನು ಸಿಎಂ, ಡಿಸಿಎಂ ಆಗುತ್ತೇನೋ ಇಲ್ಲವೋ ಗೊತ್ತಿಲ್ಲ, ರಾಜ್ಯದ 15 ಜಿಲ್ಲೆಗಳಲ್ಲಿ 20 ರಿಂದ 25 ಸ್ಥಾನ ಪಕ್ಷ ಗೆಲ್ಲುತ್ತದೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು. ಅವರು ಪಟ್ಟಣದಲ್ಲಿ ನಡೆದ ಪಕ್ಷದ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿ, ಚುನಾವಣೆ ಹತ್ತಿರ ಬರುತ್ತಿದ್ದಂತೆ ನನ್ನ ಬಳ್ಳಾರಿಯಿಂದ ಹೊರ ಹಾಕಲು ಕೆಲವರು ಪಿತೂರಿ ನಡೆಸಿದ್ದರು ಎಂದ ಅವರು, 12 ವರ್ಷ ಮನೆಯಲ್ಲಿದ್ದೆ.
ಎಲ್ಲ ಮುಗಿದಿದೆ ಎಂದು ಕೆಲವರು ತಿಳಿದುಕೊಂಡಿದ್ದಾರೆ. ಆದರೆ ನಾನು ಬೇಟೆಯಾಡಲು ಆರಂಭಿಸಿದ್ದು, ಎದುರು ಬಂದವರು ಮನೆಗೆ ಹೋಗ್ತಾರೆ ಇಲ್ಲವೇ, ಬಲಿಯಾಗುತ್ತಾರೆ ಎಂದರು. ಹುಲಿ ಯಾವತ್ತೂ ಸಣ್ಣ-ಪುಟ್ಟ ಬೇಟೆಯಾಡುವುದಿಲ್ಲ. ಕಾದು ದೊಡ್ಡ ಬೇಟೆ ಹೊಡೆಯುತ್ತೇನೆ. ನಾನು ಬೋನ್‌ನಲ್ಲಿದ್ದರೂ ಹುಲಿನೇ ಜೈಲ್‌ನಲ್ಲಿದ್ದರೂ ಹುಲಿನೇ ಎಂದು ಜನಾರ್ದನರೆಡ್ಡಿ ಹೇಳಿದರು. ಇದಕ್ಕೂ ಮೊದಲು ಕ್ಷೇತ್ರದ ಅಭ್ಯರ್ಥಿ ಡಾ.ಚಾರುಲ್ ವೆಂಕಟರಮಣ ದಾಸರಿ ಮಾತನಾಡಿ, ಜನಾರ್ಧನರೆಡ್ಡಿ ಅವರ ಹೊಸ ಪಕ್ಷ ಸ್ಥಾಪಿಸಿದ್ದು, ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
ದಾವಣಗೆರೆ: ಶಾಮನೂರು ಶಿವಶಂಕರಪ್ಪ ಕೋಟೆ ಮೇಲೆ ಬಿಜೆಪಿ ಕಣ್ಣು
ಕ್ಷೇತ್ರದಿಂದ ಗೆದ್ದವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ನಾನು ಹಾಗೂ ನನ್ನ ಪತ್ನಿ ವೈದ್ಯ ವೃತ್ತಿಯಲ್ಲಿ ಜನರ ಸೇವೆ ಮಾಡಬೇಕೆನ್ನುವ ತುಡಿತದಿಂದ ಕನಕಗಿರಿಗೆ ಬಂದಿರುವೆ. ನನ್ನ ಗೆಲ್ಲಿಸಿ, ಜನಾರ್ದನರಡ್ಡಿ ಅವರ ಕೈ ಬಲಪಡಿಸುವಂತೆ ಕೋರಿದರು. ಪಕ್ಷದ ಜಿಲ್ಲಾಧ್ಯಕ್ಷ ಮನೋಹರಗೌಡ ಹೇರೂರು, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಹೇಮಲತಾ, ಜಿಪಂ ಮಾಜಿ ಉಪಾಧ್ಯಕ್ಷ ವಿರೂಪಾಕ್ಷಗೌಡ ಹೇರೂರು, ಗ್ರಾಪಂ ಮಾಜಿ ಅಧ್ಯಕ್ಷೆ ಕೃಷ್ಣವೇಣಿ ಬೊಂದಾಡೆ, ಯಮನೂರ ಚೌಡ್ಕಿ, ಚನ್ನಬಸವ ತೆಗ್ಗಿನಮನಿ ಇತರರು ಇದ್ದರು.
ಅಭಿವೃದ್ಧಿಗಾಗಿ ಹೊಸ ಪಕ್ಷ ಸ್ಥಾಪನೆ: 12 ವರ್ಷದ ರಾಜಕೀಯ ವನವಾಸದಿಂದ ಹೊರಬಂದು ಕುತಂತ್ರಿಗಳು, ಮೋಸ, ದ್ವೇಷ ಕಾರುವ ಜನರಿಂದ ಆದ ನೋವನ್ನು ಸಹಿಸಿ ಮತ್ತೆ ಹೊಸ ಪಕ್ಷ ಕಟ್ಟಿದ್ದೇನೆ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಕನಸು ಹೊತ್ತು ನಿಮ್ಮ ಮುಂದೆ ಬಂದಿದ್ದೇನೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ಪಟ್ಟಣದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಬಿಜೆಪಿ ಸರ್ಕಾರ ಬರಲು ಗಾಲಿ ಜನಾರ್ದನ ರೆಡ್ಡಿಯೇ ಕಾರಣ ಎಂದು ಅಂದು ಬಿಜೆಪಿಯ ಮಹಾನ್ ನಾಯಕರೇ ಹೊಗಳಿದ್ದಾರೆ.
ನಾನು ಆ ಸರ್ಕಾರದಲ್ಲಿ ಮಂತ್ರಿಯಾಗಿ ಕರ್ನಾಟಕದಲ್ಲಿ 13 ನೂತನ ವಿಮಾನ ನಿಲ್ದಾಣಗಳ ಸ್ಥಾಪನೆಗೆ ಕಾರಣೀಕರ್ತನಾಗಿದ್ದೇನೆ. ರಾಜಕೀಯವಾಗಿ ನನ್ನ ಏಳಿಗೆ ಸಹಿಸದ ಕುತಂತ್ರಿಗಳಿಗೆ ಉತ್ತರ ನೀಡಿ ನನ್ನ ಉತ್ತರ ಕರ್ನಾಟಕದ ಜನತೆಗೆ ನ್ಯಾಯ ಒದಗಿಸಿಕೊಡಲು ನಿಮ್ಮ ಮುಂದೆ ಬಂದಿದ್ದೇನೆ ಎಂದರು. ರೈತರ ಹಿತವೇ ನನ್ನ ಹಿತವಾಗಿದೆ. ಬಸವೇಶ್ವರ ರೈತ ಭರವಸೆ ಯೋಜನೆಯಡಿ ನುಡಿದಂತೆ ನಡೆದು ರೈತರ ಪಂಪ್‌ಸೆಟ್‌ಗಳಿಗೆ ಕನಿಷ್ಠ 9 ಗಂಟೆ ಉಚಿತ ವಿದ್ಯುತ್, ರೈತರ ಮನೆ ಬಾಗಿಲಿಗೆ ರಸಗೊಬ್ಬರ, ಬಿತ್ತನೆಬೀಜ ನೀಡುವ ಸಂಕಲ್ಪ ನನ್ನದು. ಪ್ರತಿ ರೈತರಿಗೆ ಪ್ರತಿವರ್ಷ .15 ಸಾವಿರ ನಗದನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸುವ ಮಹತ್ತರ ಯೋಜನೆ ಇದೆ ಎಂದರು.
ಇಂದಿನ ಬಂದ್ ರದ್ದು, ಪಿಯು ಪರೀಕ್ಷೆ ಹಿನ್ನೆಲೆಯಲ್ಲಿ ವಾಪಸ್ ನಿರ್ಧಾರ: ಡಿಕೆಶಿ
ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಎಲ್‌ಕೆಜಿಯಿಂದ ಪಿಜಿ ಹಾಗೂ ಇನ್ನಿತರ ಎಲ್ಲ ಉನ್ನತ ಶಿಕ್ಷಣಕ್ಕೆ ಸಹಾಯಧನ ನೀಡುವ ಯೋಜನೆ ಇದೆ. ಪ್ರತಿ ತಾಲೂಕಿನಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವುದು, ಪ್ರತಿ ತಾಲೂಕಿನಲ್ಲಿ ತಲಾ .5 ಕೋಟಿ ವೆಚ್ಚದಲ್ಲಿ ಗಾರ್ಮೆಂಟ್ ಕಲಿಕಾ ಕೇಂದ್ರವನ್ನು ಸ್ಥಾಪಿಸುತ್ತೇನೆ ಎಂದರು.