Asianet Suvarna News Asianet Suvarna News

ಇಂದಿನ ಬಂದ್‌ ರದ್ದು, ಪಿಯು ಪರೀಕ್ಷೆ ಹಿನ್ನೆಲೆಯಲ್ಲಿ ವಾಪಸ್ ನಿರ್ಧಾರ: ಡಿಕೆಶಿ

ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಚಾರ ವಿರೋಧಿಸಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆಗೆ ಆಗ್ರಹಿಸಿ ಮಾ.9 ರಂದು ರಾಜ್ಯಾದ್ಯಂತ ಎರಡು ಗಂಟೆಗಳ ಕಾಲ ಸಾಂಕೇತಿಕ ಬಂದ್‌ಗೆ ಕರೆ ನೀಡಿದ್ದ ರಾಜ್ಯ ಕಾಂಗ್ರೆಸ್‌ ಪಕ್ಷವು ಬಂದ್‌ ನಿರ್ಧಾರವನ್ನು ಹಿಂಪಡೆದಿದೆ. 

congress decision to withdraw karnataka bandh gvd
Author
First Published Mar 9, 2023, 8:02 AM IST

ಬೆಂಗಳೂರು (ಮಾ.09): ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಚಾರ ವಿರೋಧಿಸಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆಗೆ ಆಗ್ರಹಿಸಿ ಮಾ.9 ರಂದು ರಾಜ್ಯಾದ್ಯಂತ ಎರಡು ಗಂಟೆಗಳ ಕಾಲ ಸಾಂಕೇತಿಕ ಬಂದ್‌ಗೆ ಕರೆ ನೀಡಿದ್ದ ರಾಜ್ಯ ಕಾಂಗ್ರೆಸ್‌ ಪಕ್ಷವು ಬಂದ್‌ ನಿರ್ಧಾರವನ್ನು ಹಿಂಪಡೆದಿದೆ. ಮಾ.9 ರಂದು ಗುರುವಾರ ಬೆಳಗ್ಗೆ 9 ಗಂಟೆಯಿಂದ 11 ಗಂಟೆವರೆಗೆ ರಾಜ್ಯಾದ್ಯಂತ ಸಾಂಕೇತಿಕ ಬಂದ್‌ ನಡೆಸಲಾಗುವುದು. ಈ ವೇಳೆ ಶಿಕ್ಷಣ ಸಂಸ್ಥೆ, ಸಾರಿಗೆ ಹಾಗೂ ಅಗತ್ಯ ಸೇವೆಗಳಿಗೆ ಅಡಚಣೆ ಮಾಡುವುದಿಲ್ಲ. ಉಳಿದ ವ್ಯಾಪಾರಿಗಳು ಬಂದ್‌ಗೆ ಬೆಂಬಲ ನೀಡಬೇಕು ಎಂದು ಕಾಂಗ್ರೆಸ್‌ ಹೇಳಿತ್ತು.

ಈ ಬಗ್ಗೆ ಬುಧವಾರ ಸ್ಪಷ್ಟನೆ ನೀಡಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ದ್ವಿತೀಯ ಪಿಯುಸಿ ಪರೀಕ್ಷೆ ಸೇರಿದಂತೆ ರಾಜ್ಯಾದ್ಯಂತ ಶಾಲಾ- ಕಾಲೇಜುಗಳ ಪರೀಕ್ಷೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಒತ್ತಡದ ಮೇರೆಗೆ ಗುರುವಾರ ನಡೆಸಬೇಕಿದ್ದ ಸಾಂಕೇತಿಕ ಕರ್ನಾಟಕ ಬಂದ್‌ನ್ನು ವಾಪಸು ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರ ಹಿತ ಹಾಗೂ ಅಭಿಪ್ರಾಯಕ್ಕೆ ಗೌರವ ನೀಡಲು ಬಂದ್‌ ಹಿಂಪಡೆಯಲಾಗಿದೆ ಎಂದು ಹೇಳಿದ್ದಾರೆ.

ಇಂದು ಶಾಸಕ ಮಾಡಾಳು ವಿಚಾರಣೆ: ಕೋರ್ಟ್‌ ಸೂಚನೆ ಮೇರೆಗೆ ವಿಚಾರಣೆಗೆ ಹಾಜರು

ಮುಂದಿನ ಹೋರಾಟ: ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಬಂದ್‌ನಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಶಿವಕುಮಾರ್‌, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಪರಮೇಶ್ವರ್‌, ಎಂ.ಬಿ ಪಾಟೀಲ ಸೇರಿದಂತೆ ಪ್ರಮುಖ ನಾಯಕರೆಲ್ಲರೂ ಚರ್ಚಿಸಿ ಬಂದ್‌ ಹಿಂಪಡೆಯಲು ತೀರ್ಮಾನಿಸಿದ್ದಾರೆ ಎಂದರು. ಮುಂದಿನ ಸ್ಕ್ರೀನಿಂಗ್‌ ಕಮಿಟಿ ಸಭೆ ನಂತರ ಯಾವ ರೀತಿ ಹೋರಾಟ ಮುಂದುವರೆಸಬೇಕು ಎಂಬ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಚುನಾವಣೆ ಮುಂದೂಡಲು ಬಿಜೆಪಿ ಯತ್ನ: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು 50 ದಿನ ಮಾತ್ರ ಬಾಕಿ ಉಳಿದಿದೆ. ಆದರೆ, ತರಾತುರಿಯಲ್ಲಿ ಅಲ್ಪಾವಧಿ ಟೆಂಡರ್‌ ಮೂಲಕ ಅಕ್ರಮವಾಗಿ ಹಣ ಲೂಟಿ ಹೊಡೆಯಲು ಉದ್ದೇಶಪೂರ್ವಕವಾಗಿ ಚುನಾವಣೆ ದಿನಾಂಕ ಮುಂದೂಡುತ್ತಿದ್ದಾರೆ. ಹೀಗಾಗಿ ಚುನಾವಣಾ ಆಯೋಗ ಕೂಡಲೇ ದಿನಾಂಕ ನಿಗದಿ ಮಾಡಿ ರಾಜ್ಯ ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರ ತಡೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಒತ್ತಾಯಿಸಿದ್ದಾರೆ.

ರಿಷಬ್‌ ಮುಂದಿಟ್ಟ ಅರಣ್ಯ ಸಮಸ್ಯೆಗೆ ಶೀಘ್ರ ಪರಿಹಾರ: ಸಿಎಂ ಬೊಮ್ಮಾಯಿ

ಕೆಪಿಸಿಸಿ ಕಚೇರಿಯಲ್ಲಿ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಮಾ.28 ಕೊನೆಯ ಕೆಲಸದ ದಿನ ಎಂದು ಅಧಿಕಾರಿಗಳಿಗೆ ಮಾಹಿತಿ ಬಂದಿತ್ತು. ಗುಜರಾತ್‌ ಚುನಾವಣೆ ನಂತರ ರಾಜ್ಯದಲ್ಲಿ ಬಹಳ ತರಾತುರಿಯಲ್ಲಿ ಚುನಾವಣೆ ನಡೆಸಲು ಸಭೆ ನಡೆಸಿ ದಿನಾಂಕ ನಿಗದಿ ಮಾಡಿದ್ದರು. ಈಗ ಎಷ್ಟುಅವಕಾಶ ಸಿಗುತ್ತೋ ಅಷ್ಟೂಲೂಟಿ ಹೊಡೆಯಲು ದಿನಾಂಕ ಮುಂದಕ್ಕೆ ಹಾಕುತ್ತಿದ್ದಾರೆ. ಬಿಜೆಪಿ ಎಷ್ಟೇ ಅಕ್ರಮ ದಾರಿ ಹಿಡಿದರೂ ಈ ಬಾರಿ ಸೋಲಿಸಲು ಜನರು ನಿರ್ಧರಿಸಿದ್ದಾರೆ. ಈವರೆಗೆ ಕಾಂಗ್ರೆಸ್‌ 136 ಸ್ಥಾನ ಗಳಿಸುವುದಾಗಿ ಇದ್ದ ಸಮೀಕ್ಷೆ ಇದೀಗ 140 ಸ್ಥಾನಕ್ಕೆ ಹೋಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Follow Us:
Download App:
  • android
  • ios