ರಾಜ್ಯ ರಾಜಕಾರಣದ ಅಜಾತ ಶತ್ರುವೆಂದೇ ಗುರುತಿಸಲ್ಪಡುವ ಡಾ.ಶಾಮನೂರು ಶಿವಶಂಕರಪ್ಪ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದ ಹ್ಯಾಟ್ರಿಕ್‌ ಗೆಲುವು ಸಾಧಿಸಿ, ಕಾಂಗ್ರೆಸ್ಸಿನ ಭದ್ರಕೋಟೆ ಕಾಪಾಡಿಕೊಂಡು ಬಂದಿದ್ದರೆ, ಬಿಜೆಪಿ ಮೂರೂ ಸಲ ಕೆಲವೇ ಸಾವಿರ ಮತಗಳ ಅಂತರದಲ್ಲಿ ಹಿನ್ನಡೆ ಕಂಡಿದೆ. 

ನಾಗರಾಜ ಎಸ್‌.ಬಡದಾಳ್‌

ದಾವಣಗೆರೆ (ಮಾ.09): ರಾಜ್ಯ ರಾಜಕಾರಣದ ಅಜಾತ ಶತ್ರುವೆಂದೇ ಗುರುತಿಸಲ್ಪಡುವ ಡಾ.ಶಾಮನೂರು ಶಿವಶಂಕರಪ್ಪ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದ ಹ್ಯಾಟ್ರಿಕ್‌ ಗೆಲುವು ಸಾಧಿಸಿ, ಕಾಂಗ್ರೆಸ್ಸಿನ ಭದ್ರಕೋಟೆ ಕಾಪಾಡಿಕೊಂಡು ಬಂದಿದ್ದರೆ, ಬಿಜೆಪಿ ಮೂರೂ ಸಲ ಕೆಲವೇ ಸಾವಿರ ಮತಗಳ ಅಂತರದಲ್ಲಿ ಹಿನ್ನಡೆ ಕಂಡಿದೆ. ಈ ಮಧ್ಯೆ 2023ರ ಚುನಾವಣೆಗೆ ಸಾಂಪ್ರದಾ​ಯಿಕ ಎದುರಾಳಿ ಬಿಜೆಪಿ ಜೊತೆ ಜೆಡಿಎಸ್‌, ಆಪ್‌, ಎಸ್‌ಡಿಪಿಐ ಪೈಪೋಟಿಯನ್ನೂ ಎದುರಿಸಬೇಕಾದ ಸ್ಥಿತಿ ಕಾಂಗ್ರೆಸ್ಸಿಗೆ ಇಲ್ಲಿದೆ.

ದಕ್ಷಿಣ ಕ್ಷೇತ್ರ 2008, 2013 ಹಾಗೂ 2018ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಭದ್ರಕೋಟೆ ಎಂದೇ ಸಾಬೀತಾಗಿದೆ. ಸೋಲಿಲ್ಲದ ಸರದಾರ ಡಾ.ಶಾಮನೂರು ಶಿವಶಂಕರಪ್ಪ ತಮ್ಮ ರಾಜಕೀಯ ಜೀವನದ ಮುಸ್ಸಂಜೆಯಲ್ಲೂ ಯುವಕರೂ ನಾಚುವಂತೆ ದಕ್ಷಿಣದಲ್ಲಿ ಸುಧೀರ್ಘ ರಾಜಕೀಯ ಜೀವನದ ಅನುಭವದ ಪಟ್ಟು ಹಾಕಲು ಸಜ್ಜಾಗಿದ್ದಾರೆ. ಈ ಮಧ್ಯೆ ಕಾಂಗ್ರೆಸ್ಸಲ್ಲೇ ಟಿಕೆಟ್‌ಗೆ ಕೆಲವರು ಧ್ವನಿ ಎತ್ತಿದ್ದಾರೆ. ಸೈಯದ್‌ ಖಾಲಿದ್‌, ಸಾದಿಕ್‌ ಪೈಲ್ವಾನ್‌ ಟಿಕೆಟ್‌ ಕೇಳುವ ಪ್ರಯತ್ನದಲ್ಲಿದ್ದಾರೆ. ಮುಸ್ಲಿಮರಿಗೆ ಟಿಕೆಟ್‌ ನೀಡಬೇಕೆಂಬ ಕೂಗಿದ್ದರೂ ವರಿಷ್ಠರು ಡಾ.ಶಾಮನೂರು ಶಿವಶಂಕರಪ್ಪ ಸ್ಪರ್ಧೆಯೇ ಅಂತಿಮವೆಂದು ಪರೋಕ್ಷವಾಗಿ ಸಾರಿದ್ದಾರೆ.

ರಿಷಬ್‌ ಮುಂದಿಟ್ಟ ಅರಣ್ಯ ಸಮಸ್ಯೆಗೆ ಶೀಘ್ರ ಪರಿಹಾರ: ಸಿಎಂ ಬೊಮ್ಮಾಯಿ

ಕಳೆದ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಪೈಕಿ ಶೇ.52.45 ಮತ ಪಡೆದಿದ್ದು ಶಾಮನೂರು ಜನಪ್ರಿಯತೆಗೆ ಸಾಕ್ಷಿ. ಕಾಂಗ್ರೆಸ್ಸಿಗೆ ಬದ್ಧ ಎದುರಾಳಿ ಬಿಜೆಪಿ ಅಭ್ಯರ್ಥಿ ಯಶವಂತರಾವ್‌ ಶೇ.40.78 ಮತ ಪಡೆದಿದ್ದರು. ಕಳೆದ ಕೆಲ ಚುನಾವಣೆಗಳಲ್ಲಿ ಬಿಜೆಪಿ ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲಿ ಗೆದ್ದ ಸಾಧನೆ ಇದ್ದರೂ, ದಕ್ಷಿಣ ಮಾತ್ರ ಇಂದಿಗೂ ಶಾಮನೂರು ಹಿಡಿತದಲ್ಲಿದೆ.

ಎಸ್‌ಡಿಪಿಐ, ಆಪ್‌ ಕಬ್ಬಿಣದ ಕಡಲೆ: ಸಾಂಪ್ರದಾಯಿಕ ವೈರಿ ಕಾಂಗ್ರೆಸ್‌-ಬಿಜೆಪಿ ಮಧ್ಯೆ ನೇರ ಸ್ಪರ್ಧೆ ದಕ್ಷಿಣದಲ್ಲಿದೆ. ಈಗ ಜೆಡಿಎಸ್‌ ಮುಸ್ಲಿಂ ಮತ ನೆಚ್ಚಿಕೊಂಡು ಅಖಾಡಕ್ಕಿಳಿಯಲು ಸಜ್ಜಾಗಿದೆ. ಇದ​ರ ಬೆನ್ನಲ್ಲೇ ಎಸ್‌ಡಿಪಿಐ ಹಾಗೂ ಆಮ್‌ ಆದ್ಮಿ ಪಕ್ಷ ಕೂಡ ಸ್ಪರ್ಧಿಸುವುದು ಖಚಿತವಾಗಿವೆ. ಬಿಜೆಪಿಯಿಂದ ಅಭ್ಯರ್ಥಿ ಯಾರೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಳೆದ ಚುನಾವಣೆಯಲ್ಲಿ ಶಾಮನೂರು ವಿರುದ್ಧ ಪೈಪೋಟಿಯೊಡ್ಡಿ ಸೋಲನುಭವಿಸಿದ್ದ ಯಶವಂತರಾವ್‌ ಜಾಧವ್‌ ಅವರು ಟಿಕೆಟ್‌ಗಾಗಿ ಸರ್ವ ಪ್ರಯತ್ನ ನಡೆಸಿದ್ದಾರೆ. ಇವರಲ್ಲದೆ ಯುವ ಮುಖಂಡರಾದ ಟಿ.ಶ್ರೀನಿವಾಸ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ್‌, ಬಿ.ಜಿ.ಅಜಯಕುಮಾರ್‌, ಬಿ.ಎಂ.ಸತೀಶ್‌, ಆನಂದಪ್ಪ ಇತರರು ಸಹ ಟಿಕೆಟ್‌ಗೆ ತಮ್ಮದೇ ಮಾರ್ಗದಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಜೆಡಿಎಸ್‌ನಿಂದ ಜೆ.ಅಮಾನುಲ್ಲಾ ಖಾನ್‌ ಸ್ಪರ್ಧಿಸುವರು.

ಕ್ಷೇತ್ರದ ಹಿನ್ನೆಲೆ: ಕ್ಷೇತ್ರ ಪುನರ್ವಿಂಗಡಣೆಯಿಂದಾಗಿ ಮಾಯಕೊಂಡ, ದಾವಣಗೆರೆ ಕ್ಷೇತ್ರದ ದಾವಣಗೆರೆ ನಗರದ ಹಳೇಭಾಗ, ಮಾಯಕೊಂಡ ಕ್ಷೇತ್ರದ ಗ್ರಾಮೀಣ ಭಾಗ ಒಳಗೊಂಡಂತೆ 2008ರಲ್ಲಿ ದಾವಣಗೆರೆ ದಕ್ಷಿಣ ರೂಪುಗೊಂಡಿದೆ. ದಕ್ಷಿಣ ಕ್ಷೇತ್ರದ ಅಸ್ತಿತ್ವಕ್ಕೆ ಬಂದಾಗಿನಿಂದ 2008, 2013 ಹಾಗೂ 2018ರಲ್ಲಿ ನಡೆದ ಚುನಾವಣೆಯಲ್ಲಿ 2 ಸಲ ಬಿಜೆಪಿಯ ಯಶವಂತರಾವ್‌ ವಿರುದ್ಧ, ಒಮ್ಮೆ ಬಿಜೆಪಿಯ ಬಿ.ಲೋಕೇಶ್‌ ವಿರುದ್ಧ ಶಾಮನೂರು ಗೆದ್ದಿದ್ದಾರೆ.

ಸೋಮಣ್ಣ ಬಿಜೆಪಿ ಬಿಡಲ್ಲ, ಅವರ ಜತೆ ಮಾತಾಡುವೆ: ಯಡಿಯೂರಪ್ಪ

ಜಾತಿ ಲೆಕ್ಕಾಚಾರ: ಕ್ಷೇತ್ರದಲ್ಲಿ 2 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಮುಸ್ಲಿಮರು ಮತ್ತು ವೀರಶೈವ ಲಿಂಗಾಯತರೇ ಇಲ್ಲಿ ನಿರ್ಣಾಯಕರು. ಕ್ಷೇತ್ರದಲ್ಲಿ ಸುಮಾರು 75 ಸಾವಿರ ಮುಸ್ಲಿಮರು, 45 ಸಾವಿರ ವೀರಶೈವ ಲಿಂಗಾಯತ, 25-30 ಸಾವಿರ ಕುರುಬರು, 20-25 ಸಾವಿರ ಎಸ್ಸಿ, ಇಷ್ಟೇ ಸಂಖ್ಯೆಯ ಎಸ್ಟಿ, 8 ಸಾವಿರ ಮರಾಠರು ಹಾಗೂ ಇತರರು ಇದ್ದಾರೆ. ಕಾಂಗ್ರೆಸ್‌ಗೆ ಹೇಗೆ ಸಾಂಪ್ರದಾಯಿಕ ಜಾತಿ ಮತಗಳಿವೆಯೋ ಬಿಜೆಪಿಗೂ ಹಾಗೇ ಕಾಯಂ ಮತಗಳು ಇಲ್ಲಿವೆ. ಮುಸ್ಲಿಮರ ಮತದಾನ ಪ್ರಮಾಣ ಹೆಚ್ಚಾದಷ್ಟು ಬಿಜೆಪಿಗೆ ಇಲ್ಲಿ ನಷ್ಟ.