Congress Poll Debacle ಕಾಂಗ್ರೆಸ್ ನಾಯಕತ್ವ ಬದಲಾವಣೆಯ ಚರ್ಚೆ ಹಾಸ್ಯಾಸ್ಪದ,ಎಚ್‌ಸಿ ಮಹದೇವಪ್ಪ!
- ಸಂಕಷ್ಟದಲ್ಲಿ ಧೃತಿಗೆಡದೇ ಹೋರಾಟ ಕಾಂಗ್ರೆಸ್ ಹುಟ್ಟು ಗುಣ
- ಸೋನಿಯಾ ಗಾಂಧಿಯವರು ಭಾರತದ ಗೌರವಯುತ ಪ್ರಜೆ
- ಕಾಂಗ್ರೆಸ್ ಮೈಕೊಡವಿ ನಿಲ್ಲಲಿದೆ ಎಂದ ಕಾಂಗ್ರೆಸ್ ನಾಯಕ
ಮೈಸೂರು(ಮಾ.20): ಪಂಚರಾಜ್ಯಗಳ ಚುನಾವಣೆಯ ನಂತರದಲ್ಲಿ(Five State Election) ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿಯ ಹಿರಿಯ ಸದಸ್ಯರು ಕಾಂಗ್ರೆಸ್ ನಾಯಕತ್ವವು(Congress Leadership) ಬದಲಾಗಬೇಕೆಂಬ ಕೂಗನ್ನು ಮುನ್ನೆಲೆ ತಂದಿರುವುದು ಹಾಸ್ಯಾಸ್ಪದವಾದ ಮತ್ತು ಬೇಸರದ ಸಂಗತಿಯಾಗಿದೆ. ಈ ನಡವಳಿಕೆಗಳು ಚುನಾವಣೆಗಳಿಗೂ ಮುನ್ನ ನಾವು ತೋರಬೇಕಾದ ಜವಾಬ್ದಾರಿಯನ್ನು ಮರೆತು ಚುನಾವಣೆಯ ನಂತರ ತೋರುವ ಬೇಜವಾಬ್ದಾರಿ ತನದ ಸಂಕೇತವಾಗಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ವಿಶ್ಲೇಷಿಸಿದ್ದಾರೆ.
ಸಂಕಷ್ಟದ ಸಂದರ್ಭದಲ್ಲಿ ಧೃತಿಗೆಡದೇ ಹೋರಾಟ ಮಾಡುವುದು ಕಾಂಗ್ರೆಸ್ ಪಕ್ಷದ ಹುಟ್ಟು ಗುಣ. ಭಾರತದ ಇತಿಹಾಸದಲ್ಲಿ ಸಾಮಾಜಿಕ ನ್ಯಾಯವನ್ನು ವಿಸ್ತಾರವಾದ ಮಟ್ಟದಲ್ಲಿ ಸಾಧಿಸಲು ಕಾರಣವೇ ಕಾಂಗ್ರೆಸ್ ಪಕ್ಷ ಎಂಬ ಕಾರಣಕ್ಕೇ ನಮ್ಮೊಳಗೆ ಫ್ಯೂಡಲ್ ಮತ್ತು ಜಾತಿ ಶ್ರೇಷ್ಠವಾದಿ ಹೀನ ಮನಸ್ಸುಗಳು ಕಾಂಗ್ರೆಸ್ ಪಕ್ಷವನ್ನು ಕುಗ್ಗಿಸುವುದಕ್ಕೆ ಹಗಲಿರುಳೂ ಶ್ರಮಿಸುತ್ತಿದೆ ಎಂಬ ಸಂಗತಿಯು ಕಾಂಗ್ರೆಸ್ ನಾಯಕತ್ವವನ್ನು ಟೀಕಿಸುತ್ತಿರುವ ಎಲ್ಲರೂ ಗಂಭೀರವಾಗಿ ಅರಿಯಬೇಕು.
ಕಾಂಗ್ರೆಸ್ ಸೋಲಿಗೆ ಕಾರಣ ಯಾರು?: ಹೊಸ ಬಾಂಬ್ ಸಿಡಿಸಿದ ವೀರಪ್ಪ ಮೋಯ್ಲಿ
ತನ್ನದಲ್ಲದ ದೇಶದ ಪ್ರಜೆಯನ್ನು ಮದುವೆಯಾಗಿ ಇಲ್ಲಿಗೆ ಬಂದ ನಂತರ ತನ್ನ ಕುಟುಂಬದ ಸದಸ್ಯರ ಅದರಲ್ಲೂ ತನ್ನ ಪತಿಯ ಹತ್ಯೆಯನ್ನು ಕಂಡ ಮೇಲೂ ಈ ದೇಶದ ಬಗ್ಗೆ ಕಿಂಚಿತ್ ಅಸಹ್ಯಪಟ್ಟುಕೊಳ್ಳದೇ ಭಾರತದ ಜನರ ಬದುಕಿಗಾಗಿ ಯೋಜನೆಗಳನ್ನು ರೂಪಿಸಲು ಇಂದಿಗೂ ಯೋಚಿಸುವಂತಹ ಸೋನಿಯಾ ಗಾಂಧಿಯವರು(Sonia Gandhi) ಭಾರತದ ಗೌರವಯುತ ಪ್ರಜೆ ಎಂಬುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಅವರು ಹೇಳಿದರು.
ದೇಶದ ಜನರು ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದುರಾಡಳಿತದಿಂದ ಬೇಸತ್ತಿರುವ ಸಂದರ್ಭದಲ್ಲಿ ಆಂತರಿಕ ಭಿನ್ನಮತವನ್ನು ದೇಶದ ಮಟ್ಟದಲ್ಲಿ ತಿಳಿಯುವಂತೆ ವರ್ತಿಸುವುದು ತಪ್ಪು. ದೇಶದ ಜನರಿಗೆ ಸಹಾಯ ಮಾಡಬೇಕಿದ್ದ ಬಿಜೆಪಿಗರು ಪ್ರಚಾರ ಮತ್ತು ಅಪಪ್ರಚಾರದಲ್ಲಿಯೇ ತಮ್ಮ ಜೀವನವನ್ನು ಕಳೆಯುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕಪಿಲ್ ಸಿಬಲ್ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ!
ರಾಹುಲ್ ಗಾಂಧಿಯವರ ಘನತೆ ಮತ್ತು ಅವರ ಜ್ಞಾನದ ಮಟ್ಟವನ್ನು ಮರೆ ಮಾಚಲು ಬಿಜೆಪಿಗರು ನಿತ್ಯವೂ ಖರ್ಚು ಮಾಡುವ ಹಣ ಅದೆಷ್ಟೋ ಕೋಟಿಗಳನ್ನೇ ದಾಟಿದೆ. ಬಹುಶಃ ವ್ಯಕ್ತಿಯ ಚಾರಿತ್ರ್ಯ ಹರಣ ಮಾಡಲು ರಾಜಕೀಯ ಪಕ್ಷವೊಂದು ಮೂರೂ ಬಿಟ್ಟು ನಿಂತಿದ್ದು ಇದೇ ಮೊದಲು ಎನಿಸುತ್ತದೆ. ಸೈದ್ದಾಂತಿಕವಾಗಿ ರಾಜಿ ಮಾಡಿಕೊಂಡು ಸಾರ್ವಜನಿಕ ಜೀವನದಲ್ಲಿ ಇರುವುದು ಸರಿಯಲ್ಲ. ಹಾಗಿರುವುದಕ್ಕಿಂತ ಯಾರಿಗೂ ತೊಂದರೆ ಕೊಡದೇ ಸುಮ್ಮನಿರುವುದೇ ಮೇಲು ಎಂಬ ರಾಹುಲ್ ಗಾಂಧಿಯವರ ಗಟ್ಟಿಯಾದ ನಿಲುವೇ ನಮಗೆ ಇಲ್ಲವಾದರೆ, ಅಲ್ಲಿ ನಾಯಕತ್ವ ಬದಲಾವಣೆ ಆದರೇನು, ಏನಾದರೇನು? ಅದರ ಫಲಿತಾಂಶ ಮಾತ್ರ ಒಂದೇ ಆಗಿರುತ್ತದೆ ಎಂದು ಅವರು ಹೇಳಿದ್ದಾರೆ.
ಪಂಚರಾಜ್ಯಗಳಲ್ಲಿ ಹಿನ್ನಡೆಯಾದಾಕ್ಷಣ ಸೋನಿಯಾ ಗಾಂಧಿಯವರ ಕಡೆಗೆ ಬೊಟ್ಟು ಮಾಡುವ ವೇಳೆ ಪಕ್ಷವನ್ನು ಸಂಘಟನಾತ್ಮಕವಾಗಿ, ಸೈದ್ಧಾಂತಿಕವಾಗಿ ದೃಢಗೊಳಿಸದೇ ಪಕ್ಷದ ವೈಫಲ್ಯಕ್ಕೆ ಕಾರಣವಾದ ನಮ್ಮೆಡೆಗೂ ಉಳಿದ ನಾಲ್ಕು ಬೆರಳುಗಳು ಇರುತ್ತವೆ ಎಂಬ ಸಂಗತಿಯೂ ಹಿರಿಯ ನಾಯಕರ ಗಮನದಲ್ಲಿರಲಿ ಎಂದು ಅವರು ಹೇಳಿದ್ದಾರೆ.
ಜಿ-23 ನಾಯಕರು ತಣ್ಣಗೆ: ನಾಯಕತ್ವ ಪಟ್ಟು ಸಡಿಲ?
ಪಂಚರಾಜ್ಯ ಚುನಾವಣೆಯ ಹೀನಾಯ ಸೋಲಿನ ಬಳಿಕ ಭಿನ್ನಮತೀಯ ಕಾಂಗ್ರೆಸ್ ನಾಯಕರು (ಜಿ-23) ಪಕ್ಷದಲ್ಲಿ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿರುವ ಬೆನ್ನಲ್ಲೇ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಶನಿವಾರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಸಭೆಯ ಬಳಿಕ ಅವರು ತಣ್ಣಗಾದಂತಿದ್ದು, ‘ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ’ ಎಂದು ಹೇಳಿದ್ದಾರೆ. ಭೇಟಿಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಆಜಾದ್, ‘ಇತ್ತೀಚಿನ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನ ತ್ಯಜಿಸುವಂತೆ ಸೋನಿಯಾ ಗಾಂಧಿ ಅವರನ್ನು ಕೇಳಿಲ್ಲ. ಪಕ್ಷದಲ್ಲಿ ನಾಯಕತ್ವದ ಬಗ್ಗೆ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.