* ಜಿ23 ನಾಯಕರು ಕಾಂಗ್ರೆಸ್‌ನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ: ಖರ್ಗೆ* ಕಾಂಗ್ರೆಸ್‌ಗೆ ಗಾಂಧಿ ಕುಟುಂಬದ ಅಧ್ಯಕ್ಷತೆ ಅವಶ್ಯಕ: ಖುರ್ಷಿದ್‌* ಕಪಿಲ್‌ ಸಿಬಲ್‌ ಬೆಳೆದದ್ದೇ ಕಾಂಗ್ರೆಸ್‌ನಿಂದ: ಅಧೀರ್‌ ಚೌಧರಿ* ಕಪಿಲ್‌ ಸಿಬಲ್‌ ವಿರುದ್ಧ ಕಾಂಗ್ರೆಸ್‌ ನಾಯಕರ ವಾಗ್ದಾಳಿ

ನವದೆಹಲಿ(ಮಾ.17): ಕಾಂಗ್ರೆಸ್‌ ಪಕ್ಷದ ನಾಯಕತ್ವದ ಕುರಿತು ಹಿರಿಯ ನಾಯಕ ಕಪಿಲ್‌ ಸಿಬಲ್‌ ನೀಡಿರುವ ಹೇಳಿಕೆ ವಿರುದ್ಧ ಮಲ್ಲಿಕಾರ್ಜುನ ಖರ್ಗೆ, ಸಲ್ಮಾನ್‌ ಖುರ್ಷಿದ್‌, ಅಧೀರ್‌ ರಂಜನ್‌ ಚೌಧರಿ ಸೇರಿ ಹಲವು ಕಾಂಗ್ರೆಸ್‌ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಪಕ್ಷಕ್ಕೆ ಗಾಂಧಿ ಕುಟುಂಬದ ನಾಯಕತ್ವ ಅಗತ್ಯ ಎಂದು ಹೇಳಿದ್ದಾರೆ.

‘ಇತ್ತೀಚಿಗೆ ನಡೆಸಿದ ಕಾರ್ಯಕಾರಿಣಿ ಸಭೆಯಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಾಧನೆ ಕುರಿತು ಚರ್ಚಿಸಿದ ನಂತರವೂ, ಜಿ-23 ನಾಯಕರು ಸಭೆ ನಡೆಸುವ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ದುರ್ಬಲಗೊಳಿಸಲು ಯಾರಿದಂಲೂ ಸಾಧ್ಯವಿಲ್ಲ. ಏಕೆಂದರೆ ಬೀದಿಯಿಂದ ಹಿಡಿದು ರಾಜಧಾನಿಯವರೆಗೆ ಇಡೀ ಕಾಂಗ್ರೆಸ್‌ ಪಕ್ಷ ಅವರ ಜೊತೆಗಿದೆ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

‘ಗಾಂಧಿ ಕುಟುಂಬ ಕಾಂಗ್ರೆಸ್‌ ಕಾಂಗ್ರೆಸ್‌ ಪಕ್ಷದ ಸಮಗ್ರತೆಯ ಅಂಶವಾಗಿದೆ ಮತ್ತು ನಾಯಕತ್ವದ ಆಯ್ಕೆಗೆ ತಕ್ಕುದಾದುದಾಗಿದೆ. ರಾಹುಲ್‌ ಗಾಂಧಿ ಆಗಸ್ಟ್‌ನಲ್ಲಿ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ. ಆದರೆ ಕಪಿಲ್‌ ಸಿಬಲ್‌ ಮತ್ತು ಜಿ-23 ನಾಯಕರು ಗಾಂಧಿ ಕುಟುಂಬ ದೂರ ಸರಿಯಬೇಕು ಎಂದು ಬಯಸುತ್ತಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವ ಮೂಲಕ ಸಿಬಲ್‌ ಆ ಸ್ಥಾನಕ್ಕೆ ಬರಲಿ’ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಸಲ್ಮಾನ್‌ ಖುರ್ಷಿದ್‌ ಹೇಳಿದ್ದಾರೆ.

‘ಕಪಿಲ್‌ ಸಿಬಲ್‌ ಬೆಳೆದಿರುವುದು ಸಹ ಕಾಂಗ್ರೆಸ್‌ ಪಕ್ಷದಿಂದಲೇ, ಯುಪಿಎ ಸರ್ಕಾರದಲ್ಲಿ ಮಂತ್ರಿಯಾಗಿದ್ದಾಗ ಅವರಿಗೆ ಎಲ್ಲವೂ ಸರಿಯಿತ್ತು. ಈಗ ಎಲ್ಲವೂ ತಪ್ಪಾಗಿದೆ. ಕಾಂಗ್ರೆಸ್‌ನಿಂದ ಏನು ಸಾಧ್ಯ ಎನ್ನುವುದಕ್ಕೆ ಕಪಿಲ್‌ ಸಿಬಲ್‌ ಅವರೇ ಉತ್ತಮ ಉದಾಹರಣೆ’ ಎಂದು ಸಂಸದ ಅಧೀರ್‌ ರಂಜನ್‌ ಚೌಧರಿ ಸಿಬಲ್‌ ವಿರುದ್ಧ ಹರಿಹಾಯ್ದಿದ್ದಾರೆ.