Election Result: ಕಾಂಗ್ರೆಸ್‌ ಸೋಲಿಗೆ ಕಾರಣ ಯಾರು?: ಹೊಸ ಬಾಂಬ್‌ ಸಿಡಿಸಿದ ವೀರಪ್ಪ ಮೋಯ್ಲಿ

*  ಸವಾಲುಗಳ ಅಧ್ಯಯನ ವರದಿ ನಿರ್ಲಕ್ಷಿಸಿದ್ದು ಕಾಂಗ್ರೆಸ್‌ ಸೋಲಿಗೆ ಕಾರಣ
*  ಹುಲಕೋಟಿ ಗ್ರಾಮದಲ್ಲಿ ಮಾಜಿ ಸಿಎಂ.ಎಂ. ವೀರಪ್ಪ ಮೊಯ್ಲಿ ಹೇಳಿಕೆ
*  ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲು 
 

Former CM Veerappa Moily React on Congree Defeat in Five States Election grg

ಗದಗ(ಮಾ.17):  ಕಾಂಗ್ರೆಸ್‌(Congress) ಮುಂದೆ ಎದುರಿಸಬಹುದಾದ ಸವಾಲುಗಳು, ಪಕ್ಷ ಸಂಘಟನೆ ಕುರಿತು 2006-07ರಲ್ಲಿ ನನ್ನ ಅಧ್ಯಕ್ಷತೆಯಲ್ಲಿ ಅಧ್ಯಯನ ನಡೆಸಿ ಎಐಸಿಸಿ ಅಧ್ಯಕ್ಷರಿಗೆ ವರದಿ ನೀಡಿದ್ದರೂ ಅದರ ಬಗ್ಗೆ ಇಂದಿಗೂ ಗಮನ ನೀಡದೇ ಇರುವುದೇ ಕಾಂಗ್ರೆಸ್‌ ಸೋಲಿಗೆ ಪ್ರಮುಖ ಕಾರಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ(Veerappa Moily) ಹೊಸ ಬಾಂಬ್‌ ಸಿಡಿಸಿದ್ದಾರೆ. ಬುಧವಾರ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ದಿ. ಕೆ.ಎಚ್‌. ಪಾಟೀಲ(KH Patil) ಅವರ 98ನೇ ಜಯಂತ್ಯುತ್ಸವದಲ್ಲಿ ಪಾಲ್ಗೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸೋನಿಯಾ ಗಾಂಧಿ(Sonia Gandhi) ಅವರೇ ಸಮಗ್ರ ಅಧ್ಯಯನ ಮಾಡಿ ವರದಿ ನೀಡುವಂತೆ ಆ ಸಮಿತಿಗೆ ನನ್ನನ್ನೇ ಅಧ್ಯಕ್ಷರನ್ನಾಗಿ ಮಾಡಿದ್ದರು. ನಾವು ಪ್ರಾಥಮಿಕ ವರದಿಯನ್ನು ಮಾತ್ರ ನೀಡಿದ್ದೇವೆ. ಇನ್ನೂ ಎರಡ್ಮೂರು ವರದಿಗಳು ಸೇರಿದಂತೆ ಅಂತಿಮ ವರದಿಗಳು ಸಲ್ಲಿಕೆಯಾಗಬೇಕಿದೆ. ಅಂದು ಅತ್ಯಂತ ಮುಂದಾಲೋಚನೆಯಿಂದ ಆ ನಡೆಯನ್ನು ತೆಗೆದುಕೊಂಡಿದ್ದ ನಮ್ಮ ನಾಯಕಿ ಸೋನಿಯಾ ಗಾಂಧಿ ಆನಂತರ ಅದನ್ನೇಕೆ ನಿರ್ಲಕ್ಷ್ಯ ಮಾಡಿದರು? ಎನ್ನುವುದು ಇದುವರೆಗೂ ಸ್ಪಷ್ಟವಾಗುತ್ತಿಲ್ಲ. ನಮ್ಮ ಸಮಿತಿ ನೀಡಿರುವ ವರದಿಯ ಬಗ್ಗೆ ತಾತ್ಸಾರ ಮಾಡಿರುವ ಬಗ್ಗೆ ಈಗಲೂ ನನಗೆ ಬೇಸರವಿದೆ. ಈ ವಿಷಯವಾಗಿಯೇ ಸದ್ಯದಲ್ಲಿಯೇ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸುವ ಇಚ್ಛೆ ಹೊಂದಿದ್ದೇನೆ ಎಂದರು.

Hubballi: ನಾಯಕರನ್ನೇ ಚಾಲೆಂಜ್‌ ಮಾಡಿದರೆ ಪಕ್ಷಕ್ಕಿಲ್ಲ ಉಳಿಗಾಲ: ವೀರಪ್ಪ ಮೊಯ್ಲಿ

ಪಂಚರಾಜ್ಯ ಚುನಾವಣೆ ಫಲಿತಾಂಶದ(Election Result) ಕುರಿತು ಈಗಾಗಲೇ ನಾನು ಮಾತನಾಡಿದ್ದು, ಇದು ಅತ್ಯಂತ ಬೇಸರದ ಸಂಗತಿಯಾಗಿದೆ. ಕಾಂಗ್ರೆಸ್ಸಿಗರಾದ ನಾವೆಲ್ಲ ಸಾಕಷ್ಟು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಿದೆ. ಬಿಜೆಪಿಯವರು(BJP) ಈಗ ಕೇವಲ 7 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾರೆ. ನಾವು ಹಲವಾರು ದಶಕಗಳ ಕಾಲ ಅಧಿಕಾರ ನಡೆಸಿದ್ದೇವೆ. ಈ ಸೋಲುಗಳ ಬಗ್ಗೆ ನಮ್ಮ ಕಾರ್ಯಕರ್ತರಾಗಲಿ, ನಾಯಕರಾಗಲಿ ಧೃತಿಗೆಡುವ ಅಗತ್ಯವಿಲ್ಲ. ಇದೆಲ್ಲಾ ತಾತ್ಕಾಲಿಕ, ನಮ್ಮದು ಬೇರುಮಟ್ಟದಲ್ಲಿ ಗಟ್ಟಿಯಾಗಿರುವ ಪಕ್ಷವಾಗಿದೆ. ಪ್ರಧಾನಿ ಮೋದಿ(Narendra Modi), ಬಿಜೆಪಿ ನಾಯಕರು ಜನರನ್ನು ಭ್ರಮೆಯಲ್ಲಿಟ್ಟು ಅಧಿಕಾರ ಪಡೆಯುತ್ತಿದ್ದಾರೆ, ಇದು ಶಾಶ್ವತವಲ್ಲ. ಇದಕ್ಕೆ ಕೊನೆ ಇದೆ. ಕಾರ್ಯಕರ್ತರು, ನಾಯಕರು ಗಮನಿಸಬೇಕು. ಆದರೆ ನಮ್ಮಲ್ಲಿಯೂ ಸಾಕಷ್ಟು ಬದಲಾವಣೆ ಆಗಬೇಕಿದೆ. ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಆನಂತರ ಅದನ್ನೆಲ್ಲಾ ನೀವು ನೋಡುತ್ತಿದ್ದೀರಿ. 5 ರಾಜ್ಯಗಳ ಪಕ್ಷದ ರಾಜ್ಯಾಧ್ಯಕ್ಷರನ್ನು ಕಿತ್ತು ಹಾಕಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ ನಿರಂತರ ಸೋಲಿಗೆ ಕುಟುಂಬ ರಾಜಕಾರಣ(Family Politics) ಕಾರಣ ಎನ್ನುವ ಬಿಜೆಪಿ ಟೀಕೆಗೆ ಉತ್ತರಿಸಿದ ಅವರು, ಇದೆಲ್ಲಾ ಸುಳ್ಳು, ಬಿಜೆಪಿಯಲ್ಲಿ ಕುಟುಂಬ ರಾಜಕೀಯವಿಲ್ಲವೇ? ಬಿಜೆಪಿಗೆ ಯಾವುದೇ ಸೈದ್ಧಾಂತಿಕ ಹಿನ್ನೆಲೆ ಇಲ್ಲ. ಆದರೆ, ಕಾಂಗ್ರೆಸ್‌ ಯಾವುದೇ ಸಂದರ್ಭದಲ್ಲಿಯೂ ತನ್ನ ಸೈದ್ಧಾಂತಿಕ ನಿಲುವು ಬಿಟ್ಟು ನಡೆದುಕೊಂಡಿಲ್ಲ. ಬದ್ಧತೆಯಿಂದಲೇ ಕೆಲಸ ಮಾಡಿದೆ ಎಂದರು.

ಬರೀ ಟ್ವೀಟ್‌ ಮಾಡಿದ್ರೆ ಪಕ್ಷ ಉದ್ಧಾರವಾಗಲ್ಲ: ಕಾಂಗ್ರೆಸ್‌ನ ಹಿರಿಯ ನಾಯಕ ವೀರಪ್ಪ ಮೊಯ್ಲಿ

ಪಂಜಾಬ್‌ನಲ್ಲಿ ಆಪ್‌ ಗೆಲುವು ಸಾಧಿಸಿದೆ. ಅದಕ್ಕೆ ಅವರಿಗೆ ಅಭಿನಂದನೆ. ಆದರೆ, ಈ ಗೆಲುವು ತಾತ್ಕಾಲಿಕ ಅಷ್ಟೇ. ಈ ಬಗ್ಗೆ ಮುಂಬರುವ ದಿನಗಳಲ್ಲಿ ಪಂಜಾಬ್‌ ಜನರೇ ತಕ್ಕ ಉತ್ತರ ನೀಡುತ್ತಾರೆ. ಚುನಾವಣೆಗಳಲ್ಲಿ ಪಕ್ಷಗಳ ಬಲಾಬಲ ಮುಖ್ಯ. ಆದರೆ ಪಂಜಾಬ್‌ ವಿಷಯದಲ್ಲಿ ನಮ್ಮಿಂದಾದ ತಪ್ಪುಗಳಿಂದ ಅವರಿಗೆ ಅನುಕೂಲವಾಗಿದೆ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಅಂತ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ. 

ಹಿರಿಯ ಕಾಂಗ್ರೆಸ್‌ ನಾಯಕ ಎಚ್‌.ಕೆ. ಪಾಟೀಲ(HK Patil) ಮಾತನಾಡಿ, ಬಿಜೆಪಿಯವರು ಬೆಂಗಳೂರಿನಲ್ಲಿ ಅನಂತಕುಮಾರ ಪತ್ನಿಗೆ ಟಿಕೆಟ್‌ ನೀಡುವ ಸಂದರ್ಭದಲ್ಲಿ ಕುಟುಂಬ ರಾಜಕೀಯ ಎನ್ನುತ್ತಾರೆ. ಬೆಳಗಾವಿಯಲ್ಲಿ ಅಂಗಡಿ ಅವರ ಪತ್ನಿಗೆ ಟಿಕೆಟ್‌ ನೀಡುತ್ತಾರೆ. ಅವರೆಲ್ಲರ ಅವಕಾಶವಾದಿತನ ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಬಿ.ಆರ್‌. ಯಾವಗಲ್ಲ, ಎ.ಎಂ. ಹಿಂಡಸಗೇರಿ, ಜಿಪಂ ಮಾಜಿ ಅಧ್ಯಕ್ಷ ವಾಸಪ್ಪ ಕುರುಡಗಿ ಹಾಜರಿದ್ದರು.


 

Latest Videos
Follow Us:
Download App:
  • android
  • ios