ಪುರಸಭೆ ವ್ಯಾಪ್ತಿಯಲ್ಲಿ ಕುಡಿ​ಯುವ ನೀರು ಪೂರೈಕೆ, ಸ್ವಚ್ಛತೆ ಹಾಗೂ ಬೀದಿ ದೀಪ ನಿರ್ವಹಣೆಯನ್ನು ಸಮಪರ್ಕವಾಗಿ ನಿರ್ವಹಿಸುವು​ದರ ಜೊತೆಗೆ ಕಾನೂ​ನಾ​ತ್ಮ​ಕ​ವಾಗಿ ಸಾರ್ವ​ಜ​ನಿ​ಕರ ಕೆಲಸ ಕಾರ್ಯ ಮಾಡ​ಬೇಕು ಎಂದು ಶಾಸಕ ಎಚ್‌.ಸಿ.ಬಾಲಕೃಷ್ಣ ಅಧಿಕಾರಿಗಳಿಗೆ ತಾಕೀತು ಮಾಡಿದರು. 

ರಾಮ​ನ​ಗರ (ಮೇ.31): ಪುರಸಭೆ ವ್ಯಾಪ್ತಿಯಲ್ಲಿ ಕುಡಿ​ಯುವ ನೀರು ಪೂರೈಕೆ, ಸ್ವಚ್ಛತೆ ಹಾಗೂ ಬೀದಿ ದೀಪ ನಿರ್ವಹಣೆಯನ್ನು ಸಮಪರ್ಕವಾಗಿ ನಿರ್ವಹಿಸುವು​ದರ ಜೊತೆಗೆ ಕಾನೂ​ನಾ​ತ್ಮ​ಕ​ವಾಗಿ ಸಾರ್ವ​ಜ​ನಿ​ಕರ ಕೆಲಸ ಕಾರ್ಯ ಮಾಡ​ಬೇಕು ಎಂದು ಶಾಸಕ ಎಚ್‌.ಸಿ.ಬಾಲಕೃಷ್ಣ ಅಧಿಕಾರಿಗಳಿಗೆ ತಾಕೀತು ಮಾಡಿದರು. ಬಿಡದಿ ಪುರಸಭೆ ಸಭಾಂಗಣದಲ್ಲಿ ನಡೆದ ಅಧಿ​ಕಾ​ರಿ​ಗಳು ಹಾಗೂ ಜನಪ್ರತಿ​ನಿ​ಧಿ​ಗಳ ಸಭೆಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರು, ಯುಜಿಡಿ, ಸ್ವಚ್ಛತೆ ವಿದ್ಯುತ್‌ ನಿರ್ವಹಣೆ ಕುರಿತು ಸೇರಿದಂತೆ ವಿವಿಧ ಸಮಸ್ಯೆಗಳು ಅನಾವರಣಗೊಂಡ ವೇಳೆ ಅಧಿ​ಕಾ​ರಿ​ಗ​ಳನ್ನು ತರಾ​ಟೆಗೆ ತೆಗೆ​ದು​ಕೊಂಡ ಶಾಸಕರು, ಜನ​ರಿಗೆ ಮೂಲಕ ಸೌಕರ್ಯಗಳನ್ನು ಕಲ್ಪಿಸುವುದು ಚುನಾಯಿತ ಪ್ರತಿನಿಧಿಗಳ ಕರ್ತವ್ಯ. 

ಸಾರ್ವಜನಿಕರು ಸಮಸ್ಯೆ ಹೊತ್ತು ಕಚೇರಿಗೆ ಬಂದಾಗ ಅಧಿಕಾರಿಗಳು ಸಾರ್ವಜನಿಕರಿಗೆ ಲಭ್ಯವಾಗಬೇಕು. ಸಬೂಬು ಹೇಳಿ ವಿಳಂಬ ಮಾಡದೆ ಅವರ ಕೆಲಸ ಮಾಡಿಕೊಡಿ ಎಂದು ಸೂಚನೆ ನೀಡಿದರು. ಸಾರ್ವಜನಿಕರಿಂದ ಬಂದ ದೂರುಗಳನ್ನು ಕೂಡಲೇ ಪರಿಶೀಲಿಸಿ ಸಮಸ್ಯೆಗಳನ್ನು ಪರಿಹಾರ ಮಾಡಲು ಅಗತ್ಯ ಕ್ರಮ ವಹಿಸಬೇಕು. ಎಲ್ಲ ಇಲಾಖೆಯ ಅಧಿಕಾರಿಗಳು ನಿತ್ಯ ವಾರ್ಡ್‌ಗಳ ಪ್ರವಾಸದ ವಿವರಗಳನ್ನು ನಾಮಫಲಕದಲ್ಲಿ ಹಾಕಬೇಕು. ಕಾನೂನು ವ್ಯಾಪ್ತಿಗೆ ಬಾರದ ಕೆಲಸಗಳನ್ನು ಮಾಡು​ವಂತೆ ಯಾರಾದರು ಒತ್ತಡ ಹೇರಿ​ದರೆ ನನ್ನ ಗಮ​ನಕ್ಕೆ ತರ​ಬೇಕು. ಯಾವುದಕ್ಕೂ ಅಂಜದೆ ಕಾನೂನಾತ್ಮಕವಾಗಿ ಕೆಲಸ ನಿರ್ವಹಿಸುವಂತೆ ಸಲಹೆ ನೀಡಿ​ದರು.

ಚುನಾವಣೆ ಸಂದರ್ಭದ ದ್ವೇಷಕ್ಕೆ ಮಾರಣಾಂತಿಕ ಹಲ್ಲೆ: ಶಾಸಕ ಬಾಲಕೃಷ್ಣ ಬೆಂಬಲಿಗರ ವಿರುದ್ಧ ಗೂಂಡಾಗಿರಿ ಆರೋಪ

ಅರ್ಹರಿಗೆ ತಲುಪಲಿ: ಕೊಳಚೆ ನಿರ್ಮೂಲನಾ ಮಂಡಳಿ(ಸ್ಲಂಬೋರ್ಡ್‌)ವತಿಯಿಂದ ನಿರ್ಮಿಸಲು ಉದ್ದೇಶಿಸಿದ್ದ ಮನೆಗಳ ಕಾಮಗಾರಿ ವಿಳಂಬದ ಬಗ್ಗೆ ಶಾಸಕರು ಪ್ರಶ್ನಿಸಿದಾಗ, ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 37 ಜನ ಫಲಾನುಭವಿಗಳನ್ನು ಗುರುತಿಸಿದ್ದು, ಈ ಪೈಕಿ 18 ಜನರು ಮಾತ್ರ ಅಗತ್ಯ ದಾಖಲೆಗಳನ್ನು ಕೊಟ್ಟಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಶಾಸಕರು ಎಲ್ಲಾ ಫಲಾನುಭವಿಗಳ ಸಭೆ ಕರೆದು ಸಾಧಕ ಬಾಧಕಗಳನ್ನು ಚರ್ಚಿಸಿ ಮುಂದಿನ ಸಭೆಯಲ್ಲಿ ಸ್ಪಷ್ಟಚಿತ್ರಣ ನೀಡಬೇಕೆಂದರು. ಸರ್ಕಾರದ ಸವಲತ್ತುಗಳು ನಿಜವಾದ ಫಲಾನುಭವಿಗಳಿಗೆ ತಲುಪುವಂತಾಗಬೇಕು ಎಂದು ಸೂಚಿಸಿದರು.

ಪುರಸಭೆ ವ್ಯಾಪ್ತಿಯ ಕೆಲವು ವಸತಿ ಬಡಾವಣೆಗಳಲ್ಲಿ 2017ರ ಪೂರ್ವದಲ್ಲಿ ಖರೀದಿ ಮಾಡಿರುವ ಸ್ವತ್ತುಗಳು ಹಿಂದೆ ಪಂಚಾಯಿತಿ ಇದ್ದಾಗ ಖಾತೆಗಳಾಗಿವೆ. ಅಲ್ಲದೆ ಜಿಲ್ಲಾಧಿಕಾರಿಗಳ ಭೂಪರಿವರ್ತನೆ ಆಗಿರುವ ಸ್ವತ್ತುಗಳು ಇದೀಗ ಆಸ್ತಿ ತಂತ್ರಾಂಶಗಳಲ್ಲಿ ಪರಿಗಣಿಸುತ್ತಿಲ್ಲ. ಬಿಎಂಆರ್‌ ಡಿ ಸಕ್ಷಮ ಪ್ರಾಧಿಕಾರದಲ್ಲಿಯೂ ನೊಂದಣಿಯಾಗುತ್ತಿಲ್ಲ. ಇದರಿಂದ ಸಾರ್ವಜನಿಕರು ಬ್ಯಾಂಕ್‌ ಸಾಲ ಪಡೆಯಲು ಮನೆ ನಿರ್ಮಿಸಿಕೊಳ್ಳಲು ತೊಡಕಾಗುತ್ತಿದೆ ಎಂಬ ಚರ್ಚೆಗಳು ನಡೆದವು. ಶೀಘ್ರವೇ ಕಂದಾಯ ಸಚಿವರ ಗಮನ ಸೆಳೆದು ಇದಕ್ಕೆ ಸೂಕ್ತ ಪರಿಹಾರ ದೊರಕಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವೆ: ಮಾಗಡಿ ಶಾಸಕ ಬಾಲ​ಕೃಷ್ಣ

ಕನಿಷ್ಠ ವೇತನ ನಿಗದಿ: ನೆಲ್ಲಿಗುಡ್ಡೆ ಕೆರೆಗೆ ನೀರು ತರುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಮುಖ್ಯ ಎಂಜಿನಿಯರ್‌ ಜೊತೆ ಸಮಾಲೋಚನೆ ಮಾಡುತ್ತೇನೆ. ಬೈರಮಂಗಲ, ಗೋಪಳ್ಳಿ, ಕಂಚುಗಾರನಹಳ್ಳಿ ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಕಾವೇರಿ ನೀರು ಕೊಡಲು ಯೋಜನೆ ತಯಾರಿಸಲು ಸೂಚಿಸಿದರು. ಹಿಂದೆ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನೀರು ಗಂಟಿಗಳು ಹಾಗೂ ಕಚೇರಿ ಸಹಾಯಕರು ಪುರಸಭೆಯಾದ ನಂತರವೂ ಸೇವೆಯಲ್ಲಿ ಮುಂದುವರೆದಿದ್ದಾರೆ. ಆದರೆ ಅವರಿಗೆ ಹಲವಾರು ವರ್ಷಗಳಿಂದ ಕನಿಷ್ಠ ವೇತನವನ್ನೂ ನೀಡುತ್ತಿಲ್ಲ ಎಂದು ಸಭೆಯಲ್ಲಿ ನೀರುಗಂಟಿಗಳು ಶಾಸಕರಲ್ಲಿ ಅಲವತ್ತುಗೊಂಡರು. ಈ ವೇಳೆ ಮುಂದಿನ ತಿಂಗಳು ಕನಿಷ್ಠ ವೇತನ ನಿಗದಿ ಮಾಡಲು ಕ್ರಮ ವಹಿಸಲಾಗುವುದು ಎಂದು ಶಾಸಕ ಬಾಲಕೃಷ್ಣ ಅಭಯ ನೀಡಿದರು. ಸಭೆಯಲ್ಲಿ ಪುರಸಭೆ ಸದಸ್ಯರಾದ ಸಿ.ಉಮೇಶ್‌, ಎನ್‌.ಕುಮಾರ್‌, ರಾಮಚಂದ್ರಯ್ಯ, ಹೊಂಬಯ್ಯ, ಹರೀಶ್‌ ಕುಮಾರ್‌, ಶ್ರೀನಿವಾಸ್‌, ಬಿಂದ್ಯಾ, ಮಹಿಮಾ ಕುಮಾರ್‌, ಎಚ್‌.ನಾಗರಾಜು, ನವೀನ್‌, ಮುಖ್ಯಾಧಿಕಾರಿ ಕೆ.ಜಿ.ರಮೇಶ್‌ ​ಮ​ತ್ತಿ​ತ​ರರು ಹಾಜರಿದ್ದರು.