ಪಕ್ಷ ಭೇದ ಮರೆತು ಎಲ್ಲರೊಂದಿಗೆ ಡಿ.ಕೆ.ಶಿವಕುಮಾರ್ ಉಭಯಕುಶಲೋಪರಿ
ಹದಿನಾರನೇ ವಿಧಾನಸಭೆಯ ಮೊದಲ ಅಧಿವೇಶನದ ಮೊದಲ ದಿನ ಪೂರ್ತಿ ಕ್ರಿಯಾಶೀಲವಾಗಿ ಓಡಾಡುತ್ತಿದ್ದ ಡಿಕೆಶಿ ಅವರು ಪ್ರಮಾಣವಚನ ಸ್ವೀಕರಿಸಿದ ಬಳಿಕ ಪಕ್ಷಭೇಧ ಮರೆತು ಪ್ರತಿಯೊಬ್ಬ ಪ್ರತಿಪಕ್ಷದ ಸದಸ್ಯರನ್ನೂ ಖುದ್ದು ಭೇಟಿಯಾಗಿ ಕೈಕುಲುಕಿದರು.
ಬೆಂಗಳೂರು (ಮೇ.23): ಹದಿನಾರನೇ ವಿಧಾನಸಭೆಯ ಮೊದಲ ಅಧಿವೇಶನದ ಮೊದಲ ದಿನ ಪೂರ್ತಿ ಕ್ರಿಯಾಶೀಲವಾಗಿ ಓಡಾಡುತ್ತಿದ್ದ ಡಿಕೆಶಿ ಅವರು ಪ್ರಮಾಣವಚನ ಸ್ವೀಕರಿಸಿದ ಬಳಿಕ ಪಕ್ಷಭೇಧ ಮರೆತು ಪ್ರತಿಯೊಬ್ಬ ಪ್ರತಿಪಕ್ಷದ ಸದಸ್ಯರನ್ನೂ ಖುದ್ದು ಭೇಟಿಯಾಗಿ ಕೈಕುಲುಕಿದರು. ಜತೆಗೆ ಬಿಜೆಪಿಯ ಹಿರಿಯ ನಾಯಕ ಎಸ್ಸೆಂ ಕೃಷ್ಣ, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರ ನಿವಾಸಕ್ಕೂ ಭೇಟಿ ನೀಡಿ ಆಶೀರ್ವಾದ ಪಡೆದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉಪ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಸೋಮವಾರ ಅಧಿವೇಶನಕ್ಕೆ ಆಗಮಿಸಿದ್ದು, ವಿಧಾನಸಭೆ ಪ್ರವೇಶ ದ್ವಾರದಲ್ಲಿರುವ ಮೆಟ್ಟಿಲಿಗೆ ತಲೆ ಬಾಗಿ ಸಾಷ್ಟಾಂಗ ನಮಸ್ಕಾರ ಮಾಡಿದರು.
ಈ ವೇಳೆ ರಮೇಶ್ ಜಾರಕಿಹೊಳಿ ಅವರಿಗೂ ಕೈ ಕುಲುಕಿ ವಿಶೇಷ ನಗೆ ಬೀರಿದರು. ಬಳಿಕ ಮೊಗಸಾಲೆಯಲ್ಲಿ ಕನಕಪುರದಲ್ಲಿ ತಮ್ಮ ವಿರುದ್ಧ ಸ್ಪರ್ಧಿಸಿ ಠೇವಣಿ ಕಳೆದುಕೊಂಡ ಮಾಜಿ ಸಚಿವ ಆರ್. ಅಶೋಕ್ ಅವರನ್ನು ಕರೆದು ಹೆಗಲ ಮೇಲೆ ಕೈ ಹಾಕಿ ಫೋಟೋ ಶೂಟ್ ನಡೆಸಿಕೊಂಡರು. ಮೊದಲಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಬಿಜೆಪಿಯ ಸದಸ್ಯರೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಿದ್ದರು.
ಸಚಿವ ಸಂಪುಟ ವಿಸ್ತರಣೆ: ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಜಟಾಪಟಿ!
ಈ ವೇಳೆ ಹೋಗುತ್ತಿದ್ದ ಆರ್. ಅಶೋಕ್ ಅವರನ್ನು ಕರೆದು ಪಕ್ಕದಲ್ಲಿ ನಿಲ್ಲುವಂತೆ ಡಿ.ಕೆ. ಶಿವಕುಮಾರ್ ಹೇಳಿದಾಗ ಒಪ್ಪದ ಆರ್. ಅಶೋಕ್, ‘ನಾನ್ಯಾಕಪ್ಪ ಬೇಡ, ಬೇಡ’ ಎಂದರು. ಬಲವಂತವಾಗಿ ಕೈ ಹಿಡಿದು ಎಳೆದುಕೊಂಡ ಶಿವಕುಮಾರ್, ‘ಸುಮ್ಮನೆ ಫೋಟೋ ತೆಗೆಸಿಕೊಳ್ಳೋಕೆ’ ಎಂದು ಹೆಗಲ ಮೆಲೆ ಕೈ ಹಾಕಿ ಫೋಟೋ ತೆಗಿರಿ ಎಂದು ತೆಗೆಸಿಕೊಂಡರು. ನಂತರ ವಿಧಾನಸಭೆ ಮುಂಭಾಗದಲ್ಲಿದ್ದ ಹಾಪ್‌ಕಾಮ್ಸ್ ಮಳಿಗೆಗೆ ತೆರಳಿದ ಅವರು ಅಲ್ಲಿದ್ದ ಹಣ್ಣು ಹಾಗೂ ಜ್ಯೂಸ್ ಸೇವಿಸಿದರು. ಇದೇ ವೇಳೆ ಹಾಪ್‌ಕಾಮ್ಸ್ ಸಿಬ್ಬಂದಿ ಜತೆ ಹಾಪ್‌ಕಾಮ್ಸ್ ಬಗ್ಗೆ ವಿಚಾರಿಸಿದರು.
ಎಸ್ಸೆಂಕೆ, ದೇವೇಗೌಡ ಮನೆಗೂ ಭೇಟಿ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೋಮವಾರ ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಈ ವೇಳೆ ಕೃಷ್ಣ ಅವರು ಡಿ.ಕೆಶಿ ಅವರನ್ನು ಗೌರವಿಸಿ ಬೆಂಗಳೂರು ಇತಿಹಾಸ ಪುಸ್ತಕ ನೀಡಿದರು. ಹಾಗೆಯೇ ಮಂಗಳವಾರ ಸಂಜೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮನೆಗೆ ಶಿವಕುಮಾರ್ ಅವರು ಭೇಟಿ ನೀಡಿ ಉಭಯಕುಶಲೋಪರಿ ಚರ್ಚಿಸಿದರು.
ಅಧಿವೇಶನದ ನಂತರ ಸಂಪುಟ ವಿಸ್ತರಣೆ: ಸೋಮವಾರದಿಂದ ಮೂರು ದಿನಗಳ ಕಾಲ ನಡೆಯುವ ತುರ್ತು ವಿಧಾನಸಭಾ ಅಧಿವೇಶನದ ನಂತರ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಆಗೇ ಆಗುತ್ತದೆ. ತುರ್ತು ಅಧಿವೇಶನದಲ್ಲಿ ಎಲ್ಲ ಹೊಸ ಶಾಸಕರು ಪ್ರತಿಜ್ಞಾ ವಿಧಿ ಸ್ವೀಕರಿಸಲಿದ್ದಾರೆ. ಇದಾದ ಬಳಿಕ ಮುಖ್ಯಮಂತ್ರಿಗಳು ದೆಹಲಿಗೆ ಹೋಗಿ ವರಿಷ್ಠರೊಂದಿಗೆ ಚರ್ಚಿಸಿ ಸಂಪುಟ ವಿಸ್ತರಣೆಯ ಬಗ್ಗೆ ಹಾಗೂ ಸಚಿವರಿಗೆ ಖಾತೆಗಳ ಹಂಚಿಕೆಯ ಬಗ್ಗೆಯೂ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಪ್ರಕೃತಿ ಯಾರ ಕೈಯಲ್ಲೂ ಇಲ್ಲ, ಎಚ್ಚರಿಕೆ ಇರಬೇಕು: ಡಿ.ಕೆ.ಶಿವಕುಮಾರ್
ಅದಕ್ಕೆ ಮೊದಲು ಹೊಸದಾಗಿ ಆಯ್ಕೆಯಾಗಿರುವ ಎಲ್ಲ ಶಾಸಕರ ಪ್ರತಿಜ್ಞಾ ವಿಧಿ ಸ್ವೀಕಾರ ಆಗಬೇಕು. ಕಾನೂನು ಪ್ರಕಾರ ಮೇ 24ರೊಳಗೆ ಹಳೆಯ ಸರ್ಕಾರ ವಿಸರ್ಜನೆ ಆಗಬೇಕು. ಹಾಗಾಗಿ ಮೇ 22ರಿಂದ 24ರವರೆಗೆ ನಡೆಯುವ ತುರ್ತು ವಿಧಾನಸಭಾ ಅಧಿವೇಶನದಲ್ಲಿ ಈ ಕಾರ್ಯ ಆಗಲಿದೆ. ರಾಜ್ಯಪಾಲರು ಮೇ 25ಕ್ಕೆ ತಾವು ರಾಜ್ಯದಲ್ಲಿ ಇರುವುದಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಸೋಮವಾರದಿಂದಲೇ ತುರ್ತು ಅಧಿವೇಶನ ನಡೆಸಲಾಗುತ್ತಿದೆ ಎಂದು ತಿಳಿಸಿದರು.