Asianet Suvarna News Asianet Suvarna News

ನನ್ನ ಕಾರಿನ ಮೇಲೆ ಕಾಗೆ ಕುಳಿತದ್ದನ್ನು ಸುದ್ದಿ ಮಾಡ್ತೀರಿ? ಅದರಿಂದ ಸಮಾಜಕ್ಕೇನು ಲಾಭ: ಸಿಎಂ ಸಿದ್ದರಾಮಯ್ಯ

ಊಹಾಪೋಹ ಸುದ್ದಿ ಮಾಡುವುದೇ ವೃತ್ತಿಪರತೆಯಾ? ಕಲ್ಪಿಸಿಕೊಂಡು, ಊಹಿಸಿಕೊಂಡು ಸುದ್ದಿ ಮಾಡುವವರು ಹೆಚ್ಚಾಗಿರುವುದು ಕೆಟ್ಟ ಬೆಳವಣಿಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು. 

Is speculation news professionalism Says CM Siddaramaiah gvd
Author
First Published Dec 23, 2023, 6:23 AM IST

ಮೈಸೂರು (ಡಿ.23): ಊಹಾಪೋಹ ಸುದ್ದಿ ಮಾಡುವುದೇ ವೃತ್ತಿಪರತೆಯಾ? ಕಲ್ಪಿಸಿಕೊಂಡು, ಊಹಿಸಿಕೊಂಡು ಸುದ್ದಿ ಮಾಡುವವರು ಹೆಚ್ಚಾಗಿರುವುದು ಕೆಟ್ಟ ಬೆಳವಣಿಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು. ನಗರದ ಚಾಮುಂಡಿಬೆಟ್ಟದ ತಪ್ಪಲಿನ ಕೆಎನ್ಎಸ್ ಬಡಾವಣೆಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಪತ್ರಿಕಾ ಭವನ ಮತ್ತು ತರಬೇತಿ ಕೇಂದ್ರದ ಶಂಕುಸ್ಥಾಪನೆಯನ್ನು ಶುಕ್ರವಾರ ನೆರವೇರಿಸಿ ಮಾತನಾಡಿದ ಅವರು, ಸಮಾಜವನ್ನು ಜಾಗೃತಗೊಳಿಸಬೇಕಾದ ಮಾಧ್ಯಮಗಳೇ ಮೌಢ್ಯ, ಕಂದಾಚಾರಗಳನ್ನು ಬಿತ್ತರಿಸುವ ಮೂಲಕ ಯಾವ ಸಂದೇಶ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಸಂವಿಧಾನ ವಿರೋಧಿಗಳನ್ನೂ ಪ್ರಶ್ನಿಸದೇ ಹೋದರೆ, ಅವರನ್ನು ನೀವು ಗೌರವದಿಂದ ನಡೆಸಿಕೊಂಡರೇ ನಿಮ್ಮನ್ನು ಸಮಾಜದ 4ನೇ ಅಂಗ ಅಂತ ಕರೆಯೋಕೆ ಆಗುತ್ತದಾ? ವಸ್ತುನಿಷ್ಠ ಸುದ್ದಿ, ಸತ್ಯದ ವರದಿ ಮಾತ್ರ ಸಮಾಜಮುಖಿ ಆಗಿರುತ್ತದೆ ಎಂದು ಅವರು ಹೇಳಿದರು. ಅಸಮಾನತೆ ಯಾಕಿನ್ನೂ ಸಮಾಜದಲ್ಲಿದೆ, ಸಂವಿಧಾನದ ವಿರುದ್ಧ ಮಾತಾಡುವವರೂ ಇದ್ದಾರೆ. ಇಂಥವರಿಂದ ಸಮಾಜಕ್ಕೆ ಆಗುವ ಹಾನಿಯನ್ನು ಪತ್ರಕರ್ತರು ವಿಶ್ಲೇಷಿಸಬೇಕು. ಸಂವಿಧಾನ ವಿರುದ್ಧ ಮಾತನಾಡುವವರನ್ನು ಸಂವಿಧಾನ ವಿರೋಧಿಯಂತಲೇ ಕರೆಯಬೇಕು ಎಂದರು.

ನಿನ್ನೆ ತನಕ ಬಿಜೆಪಿಯಲ್ಲಿನ ಕೆಲವರಲ್ಲಿ ಅಸಮಾಧಾನ ಇತ್ತು, ಈಗ ಸರಿಯಾಗಿದೆ: ಈಶ್ವರಪ್ಪ

ಪತ್ರಿಕಾ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ ಇದ್ದರೆ ಮಾತ್ರ ಪ್ರಜಾಪ್ರಭುತ್ವ ಯಶಸ್ವಿ ಆಗಲು ಸಾಧ್ಯ. ಇವತ್ತು ಪತ್ರಿಕಾ ಕ್ಷೇತ್ರದಲ್ಲಿ ವೃತ್ತಿಪರತೆ ಇಲ್ಲವಾಗಿ ವ್ಯಾಪಾರ ಹೆಚ್ಚಾಗಿರುವುದು ಅನಾರೋಗ್ಯಕಾರಿ ಬೆಳವಣಿಗೆ. ಸಣ್ಣ ಪತ್ರಿಕೆಗಳ ತವರೂರು ಮೈಸೂರು ಪತ್ರಿಕಾ ವೃತ್ತಿ ಪರತೆಗೆ ಹೆಸರಾಗಿತ್ತು. ಓದುಗರು ಮಾಧ್ಯಮಗಳ ಬಗ್ಗೆ ಕುತೂಹಲ, ಆಸಕ್ತಿ ಕಳೆದುಕೊಂಡರೆ ಅದಕ್ಕೆ ವೃತ್ತಿಪರತೆ ಇಲ್ಲವಾಗಿದ್ದೇ ಕಾರಣ ಎಂದು ಅವರು ತಿಳಿಸಿದರು. ನಾನು ಶಂಕುಸ್ಥಾಪನೆ ಮಾಡಿದ ಪತ್ರಿಕಾ ಭವನ ಮತ್ತು ತರಬೇತಿ ಕೇಂದ್ರವನ್ನು ನಾನೇ ಉದ್ಘಾಟಿಸುತ್ತೇನೆ. ಹಾಗೆಯೇ, ಪತ್ರಕರ್ತರಿಗೆ ಅಗತ್ಯ ಸೌಲಭ್ಯ ಹಾಗೂ ಸಹಾಯವನ್ನು ಸರ್ಕಾರದಿಂದ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಶಾಸಕರಾದ ಜಿ.ಟಿ. ದೇವೇಗೌಡ, ತನ್ವೀರ್ ಸೇಠ್, ಕೆ. ಹರೀಶ್ ಗೌಡ, ಡಿ. ರವಿಶಂಕರ್, ಅನಿಲ್ ಚಿಕ್ಕಮಾದು, ಡಾ.ಡಿ. ತಿಮ್ಮಯ್ಯ, ಮರಿತಿಬ್ಬೇಗೌಡ, ವರುಣ ಕ್ಷೇತ್ರ ಆಶ್ರಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಂಸದ ಕಾಗಲವಾಡಿ ಎಂ. ಶಿವಣ್ಣ, 

ಎಂಡಿಎ ಮಾಜಿ ಅಧ್ಯಕ್ಷರಾದ ಎಚ್.ವಿ. ರಾಜೀವ್, ಯಶಸ್ವಿ ಸೋಮಶೇಖರ್, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಚ್.ಬಿ. ಮದನ್ ಗೌಡ, ಪತ್ರಕರ್ತರ ಸಂಘಗಳ ಒಕ್ಕೂಟದ ಮುಖಂಡ ಬಿ.ವಿ. ಮಲ್ಲಿಕಾರ್ಜುನಯ್ಯ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ. ಸುಬ್ರಹ್ಮಣ್ಯ, ಉಪಾಧ್ಯಕ್ಷರಾದ ಅನುರಾಗ್ ಬಸವರಾಜ್, ಧರ್ಮಾಪುರ ನಾರಾಯಣ್, ಕಾರ್ಯದರ್ಶಿ ರಂಗಸ್ವಾಮಿ, ಖಜಾಂಚಿ ನಾಗೇಶ್ ಪಾಣತ್ತಲೆ ಇದ್ದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಿ. ರಾಘವೇಂದ್ರ ನಿರೂಪಿಸಿದರು.

ಹಿಂದಿನ ಕೋವಿಡ್‌ ತಪ್ಪು ಮತ್ತೆ ಆಗಕೂಡದು: ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ನನ್ನ ಕಾರಿನ ಮೇಲೆ ಕಾಗೆ ಕುಳಿತದ್ದನ್ನು ಸುದ್ದಿ ಮಾಡ್ತೀರಿ, ಚರ್ಚೆ ಮಾಡ್ತೀರಿ. ಕಾಗೆ ಕುಳಿತರೆ ನಿಮಗೇನು ನಷ್ಟ? ಅದರಿಂದ ಸಮಾಜಕ್ಕೇನು ನಷ್ಟ, ಯಾರಿಗೇನು ಲಾಭ? ಅಧಿಕಾರ ಹೋಗುತ್ತೆ ಎಂದು ಚರ್ಚಿಸಿದಿರೀ, ನಾನು ಅಧಿಕಾರದಲ್ಲಿ ಇರಲಿಲ್ಲವಾ? ಗಂಡ ಹೆಂಡತಿ ಜಗಳ ಮಾಡಿದ್ದನ್ನೂ ಸುದ್ದಿ ಮಾಡ್ತೀರಲ್ಲಾ, ಅದರಿಂದ ಸಮಾಜಕ್ಕೆ ಏನು ಪ್ರಯೋಜನ? ಇಂಥದ್ದನ್ನೆಲ್ಲಾ ವರದಿ ಮಾಡಿದರೆ ಮಾಧ್ಯಮಗಳ ಬಗ್ಗೆ ಜನ ಕುತೂಹಲ ಕಳೆದುಕೊಳ್ಳದೆ ಇನ್ನೇನಾಗುತ್ತದೆ?
- ಸಿದ್ದರಾಮಯ್ಯ, ಮುಖ್ಯಮಂತ್ರಿ

Follow Us:
Download App:
  • android
  • ios