ನಿನ್ನೆ ತನಕ ಬಿಜೆಪಿಯಲ್ಲಿನ ಕೆಲವರಲ್ಲಿ ಅಸಮಾಧಾನ ಇತ್ತು, ಈಗ ಸರಿಯಾಗಿದೆ: ಈಶ್ವರಪ್ಪ
ಮೂರ್ನಾಲ್ಕು ಜನರಲ್ಲಿ ಸ್ವಲ್ಪ ಅಸಮಾಧಾನ ಇರುವುದು ನಿಜ. ಆದರೆ, ಅವರು ಪಕ್ಷ ವಿರೋಧಿ ಹೇಳಿಕೆ ನೀಡಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಬಾಗಲಕೋಟೆ (ಡಿ.23): ಮೂರ್ನಾಲ್ಕು ಜನರಲ್ಲಿ ಸ್ವಲ್ಪ ಅಸಮಾಧಾನ ಇರುವುದು ನಿಜ. ಆದರೆ, ಅವರು ಪಕ್ಷ ವಿರೋಧಿ ಹೇಳಿಕೆ ನೀಡಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು. ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತಾಡಿದ ಅವರು, ಬಿಜೆಪಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ, ಮಾಜಿ ಸಚಿವ ವಿ.ಸೋಮಣ್ಣ, ಶಾಸಕ ಅರವಿಂದ ಬೆಲ್ಲದ ಅವರ ಅಸಮಾಧಾನ ವಿಚಾರಕ್ಕೆ ಈ ರೀತಿ ಪ್ರತಿಕ್ರಿಯಿಸಿದರು. ಅವರೆಲ್ಲ ಬಹಿರಂಗವಾಗಿಯೇ ಹೇಳಿದ್ದಾರೆ. ನಾನು ಕೂಡ ಅದರಲ್ಲಿ ಮುಚ್ಚು ಮರೆಯಿಲ್ಲದೆ ಹೇಳುವೆ. ಹೌದು, ನಿನ್ನೆ ತನಕ ಬಿಜೆಪಿಯಲ್ಲಿನ ಕೆಲವರಲ್ಲಿ ಅಸಮಾಧಾನ ಇತ್ತು.
ನಿನ್ನೆ ರಾಷ್ಟ್ರೀಯ ನಾಯಕರ ಭೇಟಿ ಬಳಿಕ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವೆ ಎಂದು ವಿಜಯೇಂದ್ರ ಹೇಳಿದ್ದಾರೆ. ಪಕ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಬಗ್ಗೆ ಯಾರಿಗೂ ಗೊಂದಲವಿಲ್ಲ. ನಮ್ಮಲ್ಲಿ ಮೂರ್ನಾಲ್ಕು ಜನಕ್ಕೆ ಅಸಮಾಧಾನ ಇತ್ತು, ಈಗ ಅದನ್ನ ಸರಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಇದು ರಾಜ್ಯ ಬಿಜೆಪಿಯಲ್ಲಿ ಶುಕ್ರದೆಶೆ ಅಂತಾ ಹೇಳಬಹುದು ಎಂದು ಹೇಳಿದರು.
ಹಿಂದು ರಾಷ್ಟ್ರ ನಿರ್ಮಾಣ ದೇಶದ ಜನರ ತೀರ್ಮಾನ: ಕೆ.ಎಸ್.ಈಶ್ವರಪ್ಪ
ಬಿ.ವೈ.ವಿಜಯೇಂದ್ರ ಅವರು ಪಕ್ಷದ ಎಲ್ಲ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವುದಾಗಿ ಹೇಳಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸುವ ನಿಟ್ಟಿನಲ್ಲಿ ಸಾಂಘಿಕ ಶ್ರಮ ವಹಿಸುತ್ತೇವೆ. ನಾನಾಗಲಿ, ನನ್ನ ಮಗನಾಗಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲ್ಲ. ಆದರೆ, ರಾಜ್ಯದ 28 ಕ್ಷೇತ್ರದಲ್ಲಿ ನಾನು ಓಡಾಟ ಮಾಡುತ್ತೇನೆ. ಅಲ್ಲದೇ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲು ನಾವು ಎಲ್ಲ ಪ್ರಯತ್ನ ಮಾಡುವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ವಿಜಯೇಂದ್ರ ಹಾಗೂ ಎಚ್‌ಡಿಕೆಯವರ ಈ ಹೇಳಿಕೆಗಳು ರಾಜ್ಯ ಬಿಜೆಪಿ - ಜೆಡಿಎಸ್ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಿಸಿದೆ ಎಂದು ತಿಳಿಸಿದರು.