‘ಗೃಹ ಜ್ಯೋತಿ’ ಯೋಜನೆಯ ಲಾಭ ಆ.1ರಿಂದ ಗ್ರಾಹಕರಿಗೆ ತಲುಪಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, 200 ಯುನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಸುವ ಎಲ್ಲಾ ಬಾಡಿಗೆದಾರರಿಗೂ ಸಹ ಉಚಿತ ವಿದ್ಯುತ್‌ ಸೌಲಭ್ಯ ನೀಡುವಂತೆ ಆದೇಶ ನೀಡಿದ್ದಾರೆ. 

ಬೆಂಗಳೂರು (ಜೂ.09): ‘ಗೃಹ ಜ್ಯೋತಿ’ ಯೋಜನೆಯ ಲಾಭ ಆ.1ರಿಂದ ಗ್ರಾಹಕರಿಗೆ ತಲುಪಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, 200 ಯುನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಸುವ ಎಲ್ಲಾ ಬಾಡಿಗೆದಾರರಿಗೂ ಸಹ ಉಚಿತ ವಿದ್ಯುತ್‌ ಸೌಲಭ್ಯ ನೀಡುವಂತೆ ಆದೇಶ ನೀಡಿದ್ದಾರೆ. ಕೆಪಿಟಿಸಿಎಲ್‌ನ ಶಕ್ತಿ ಭವನದಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್‌ ಹಾಗೂ ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಸಿದ್ಧತೆಗಳ ಕುರಿತು ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಕಳೆದ 12 ತಿಂಗಳ ಸರಾಸರಿ ವಿದ್ಯುತ್‌ ಬಳಕೆ ಆಧರಿಸಿ ಶೇ.10ರಷ್ಟು ಹೆಚ್ಚುವರಿ ವಿದ್ಯುತ್‌ ಬಳಕೆಗೆ ಅವಕಾಶ ನೀಡಬೇಕು. 

ಆದರೆ ಮಾಸಿಕ ಗರಿಷ್ಠ ಮಿತಿ 200 ಯುನಿಟ್‌ ದಾಟಬಾರದು. ಒಂದೊಮ್ಮೆ 200 ಯುನಿಟ್‌ಗಿಂತ ಹೆಚ್ಚು ವಿದ್ಯುತ್‌ ಬಳಕೆ ಮಾಡಿದರೆ ಪೂರ್ಣ ಶುಲ್ಕ ವಸೂಲಿ ಮಾಡಬೇಕು ಎಂದು ಸೂಚಿಸಿದರು. ಗೃಹ ಜ್ಯೋತಿ ಸೇರಿದಂತೆ ಎಲ್ಲ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅತ್ಯಂತ ಸರಳಗೊಳಿಸಬೇಕು. ಅನಗತ್ಯ ಮಾಹಿತಿ, ದಾಖಲೆಗಳನ್ನು ಕೇಳಬಾರದು. ಜತೆಗೆ ಅರ್ಜಿಗಳನ್ನು ತಿರಸ್ಕರಿಸಿದಲ್ಲಿ, ಅದು ಸಕಾರಣವಾಗಿರಬೇಕು. ಕುಂಟು ನೆಪ ನೀಡಿ ತಿರಸ್ಕರಿಸುವಂತಿಲ್ಲ ಎಂದು ಸ್ಪಷ್ಟಎಚ್ಚರಿಕೆ ನೀಡಿದರು. ಎಲ್ಲ ಗ್ಯಾರಂಟಿ ಯೋಜನೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗಲಿವೆ. ಹೀಗಾಗಿ ಅಪಾರ ಪ್ರಮಾಣದ ದತ್ತಾಂಶ ಸಲ್ಲಿಕೆಗೆ ಅನುಗುಣವಾಗಿ ಸೇವಾ ಸಿಂಧು ಪೋರ್ಟಲ್‌ನ ಸಾಮರ್ಥ್ಯ ವೃದ್ಧಿಸಬೇಕು. 

ಆ.1ರಿಂದ ಪ್ರತಿ ತಿಂಗಳು ಜಿಲ್ಲಾ ಮಟ್ಟದಲ್ಲಿ ಸಚಿವ ಜಮೀರ್‌ ಜನತಾ ದರ್ಶನ

ಸರ್ವರ್‌ಗೆ ಹೆಚ್ಚುವರಿ ವ್ಯವಸ್ಥೆ ಮಾಡಬೇಕು ಎಂದು ಇ-ಆಡಳಿತ ಅಧಿಕಾರಿಗಳಿಗೆ ಸೂಚನೆ ನೀಡಿದರು. ಗೃಹ ಜ್ಯೋತಿ ಯೋಜನೆಗೆ ಆಗಸ್ಟ್‌ ಮೊದಲ ವಾರದಲ್ಲಿ ಕಲಬುರಗಿಯಲ್ಲಿ ಚಾಲನೆ ನೀಡುವ ಕುರಿತು ಯೋಚಿಸುತ್ತಿದ್ದೇವೆ. ಈ ಯೋಜನೆಯ ಮಾರ್ಗಸೂಚಿಗಳ ಕುರಿತು ಇರುವ ಎಲ್ಲ ಗೊಂದಲಗಳನ್ನು ನಿವಾರಿಸಿ, ನಾಗರಿಕರಿಗೆ ಅರಿವು ಮೂಡಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಯೋಜನೆಗೆ ಚಾಲನೆ ನೀಡುವ ವೇಳೆಗೆ ಇರುವ ಎಲ್ಲಾ ಗೊಂದಲಗಳು ಬಗೆಹರಿದಿರಬೇಕು. ಈ ಬಗ್ಗೆ ಸ್ಪಷ್ಟಮಾರ್ಗಸೂಚಿ ರಚಿಸಲು ಸೂಚಿಸಿರುವುದಾಗಿ ತಿಳಿದುಬಂದಿದೆ.

ಜೂ.15ರಿಂದ ನೋಂದಣಿ ಪ್ರಕ್ರಿಯೆ: ಗೃಹ ಜ್ಯೋತಿ ಯೋಜನೆಗೆ ಜೂ.15 ರಿಂದ ಸೇವಾ ಸಿಂಧು ಪೋರ್ಟಲ್‌ ಮೂಲಕ ನೋಂದಾಯಿಸಲು ಅವಕಾಶವಿದೆ. ಆಧಾರ್‌ ಹಾಗೂ ಆರ್‌.ಆರ್‌.ಸಂಖ್ಯೆ, ಬಾಡಿಗೆದಾರರು ಕರಾರು ಪತ್ರ ಹಾಗೂ ಅದೇ ವಿಳಾಸದ ಮತದಾರರ ಗುರುತು ಚೀಟಿ ಮಾಹಿತಿ ಸಲ್ಲಿಸಿ ಸೌಲಭ್ಯ ಪಡೆಯಬಹುದು. ಇದಲ್ಲದೆ ಎಸ್ಕಾಂಗಳ ಎಲ್ಲ ಕಚೇರಿಗಳಲ್ಲಿ ಹೆಲ್ಪ್‌ ಡೆಸ್‌್ಕ ಸ್ಥಾಪಿಸಲಾಗುವುದು. ಬೆಂಗಳೂರು ಒನ್‌, ಕರ್ನಾಟಕ ಒನ್‌, ಗ್ರಾಮ ಒನ್‌ ಕೇಂದ್ರಗಳ ಮೂಲಕ ಹಾಗೂ ಮನೆಯಲ್ಲಿಯೇ ಕಂಪ್ಯೂಟರ್‌ ಮೂಲಕ ಅಥವಾ ಮೊಬೈಲ್‌ ಆಪ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿಗುವುದು.

ಬಾಕಿ ಬಿಲ್‌ ಪಾವತಿಗೆ ಸೆ.30ರ ಗಡುವು: ಬಾಕಿ ವಿದ್ಯುತ್‌ ಬಿಲ್‌ ಬಾಕಿ ಪಾವತಿಗೆ ಸೆಪ್ಟೆಂಬರ್‌ 30ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಬಾಕಿ ವಿದ್ಯುತ್ತನ್ನು ಸರ್ಕಾರ ಪಾವತಿಸುವುದಿಲ್ಲ. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಸೂಚನೆ ನೀಡಿದರು. ಸಭೆಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್‌, ಸಚಿವರಾದ ಲಕ್ಷ್ಮೇ ಹೆಬ್ಬಾಳ್ಕರ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್‌ ಗೋಯಲ್‌, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ ಸೇರಿ ಹಲವರು ಹಾಜರಿದ್ದರು.

ಹೊಸ ಮನೆ, ಬಾಡಿಗೆದಾರರಿಗೆ ಏನು ನಿಯಮ?: ಕಳೆದ 12 ತಿಂಗಳ ಅವಧಿಯ ಸರಾಸರಿ ಬಳಕೆಯ ಮಾಹಿತಿ ಇಲ್ಲದ ಕಾರಣಕ್ಕೆ ಹೊಸ ಮನೆ ಅಥವಾ ಹೊಸ ವಿದ್ಯುತ್‌ ಸಂಪರ್ಕ ಪಡೆದವರಿಗೆ ಹೇಗೆ ಈ ಯೋಜನೆಯ ಲಾಭ ನೀಡಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲ ಮಹತ್ವದ ಸಲಹೆಯನ್ನು ನೀಡಿ, ಅದರಂತೆ ಪರಿಹಾರ ಕಂಡುಕೊಳ್ಳಬಹುದೇ ಪ್ರಯತ್ನಿಸಿ ಎಂದು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೂಲಗಳ ಪ್ರಕಾರ, ಹೊಸದಾಗಿ ಮನೆ ಬಾಡಿಗೆಗೆ ಬಂದವರಿಗೆ ಆ ಬಾಡಿಗೆ ಮನೆಯ ಮೀಟರ್‌ನಲ್ಲಿರುವ ಹಿಂದಿನ 12 ತಿಂಗಳ ವಿದ್ಯುತ್‌ ಬಳಕೆ ಸರಾಸರಿ ಪರಿಗಣಿಸಬಹುದು. ಹಿಂದೆ ಬಾಡಿಗೆಗೆ ಇದ್ದ ಕುಟುಂಬವು ಸರಾಸರಿ ಎಷ್ಟುವಿದ್ಯುತ್‌ ಬಳಸುತ್ತಿತ್ತೋ ಅದರಲ್ಲಿ ಶೇ.10ರಷ್ಟುಹೆಚ್ಚಳ ಮಾಡಿ ಉಚಿತ ವಿದ್ಯುತ್‌ ಬಳಕೆಗೆ ಅವಕಾಶ ಮಾಡಿಕೊಡಬಹುದು.

ಇನ್ನು ಹೊಸ ಮನೆಗಳಿಗೆ 12 ತಿಂಗಳ ಸರಾಸರಿ ಬಳಕೆಯ ಮಾಹಿತಿ ಇರುವುದಿಲ್ಲ. ಹೀಗಾಗಿ ರಾಜ್ಯದ ಶೇ.86ರಷ್ಟು ಸಾರ್ವಜನಿಕರು ಬಳಕೆ ಮಾಡುವ ಸರಾಸರಿ ವಿದ್ಯುತ್‌ ಬಳಕೆಗಿಂತ ಶೇ.10ರಷ್ಟು ಹೆಚ್ಚು ಯುನಿಟ್‌ ಉಚಿತವಾಗಿ ನೀಡಲು ಚರ್ಚೆ ಮಾಡಲಾಗಿದೆ. ರಾಜ್ಯದಲ್ಲಿ ಶೇ.86ರಷ್ಟುಮಂದಿ ಸರಾಸರಿ 63 ಯುನಿಟ್‌ ವಿದ್ಯುತ್‌ ಬಳಕೆ ಮಾಡುತ್ತಾರೆ. ಅದಕ್ಕೂ ಶೇ.10ರಷ್ಟು ಹೆಚ್ಚು ಯುನಿಟ್‌ ಉಚಿತವಾಗಿ ನೀಡಬಹುದು. 12 ತಿಂಗಳ ಬಳಿಕ ಸರಾಸರಿ ಬಳಕೆ ಆಧರಿಸಿ ಯೋಜನೆಯ ಲಾಭ ನೀಡಬಹುದು ಎಂದು ಮುಖ್ಯಮಂತ್ರಿಯವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಜತೆಗೆ ಈ ಬಗ್ಗೆ ವರದಿ ನೀಡಲು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆ.17/18ಕ್ಕೆ ಬೆಳಗಾವಿಯಲ್ಲಿ ‘ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ: ಸಿಎಂ ಸಿದ್ದರಾಮಯ್ಯ

ಹೊಸ ಮನೆ ಸಂಪರ್ಕ, ಹೊಸ ಬಾಡಿಗೆದಾರರಿಗೆ ಗೃಹ ಜ್ಯೋತಿ ನೀಡುವ ಬಗ್ಗೆ ಚರ್ಚಿಸಲಾಗಿದೆ. ಯಾವ ಮಾಹಿತಿ ಆಧರಿಸಿ ನೀಡಬೇಕು ಎಂಬ ಬಗ್ಗೆ ಈವರೆಗೆ ಅಂತಿಮ ನಿರ್ಧಾರ ಮಾಡಿಲ್ಲ. ಅಂತಿಮ ನಿರ್ಧಾರ ಆದ ಬಳಿಕ ಅಧಿಕೃತವಾಗಿ ಪ್ರಕಟಿಸಲಾಗುವುದು.
- ಗೌರವ್‌ ಗುಪ್ತಾ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ