ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಣಿಸಲು ಒಗ್ಗಟ್ಟಾಗಿರುವ ವಿಪಕ್ಷಗಳ ಒಕ್ಕೂಟ I-N-D-I-A ಇದೀಗ 3ನೇ ಸಭಗೆ ತಯಾರಿ ಮಾಡಿಕೊಳ್ಳುತ್ತಿದೆ. ಪಾಟ್ನಾ, ಬೆಂಗಳೂರಿನ ಬಳಿಕ ಮುಂಬೈನಲ್ಲಿ 3ನೇ ಸಭೆ ನಡೆಯುತ್ತಿದೆ. ಶಿವಸೇನೆ ಈ ಕಾರ್ಯಕ್ರಮದ ಆಯೋಜನೆ ಜವಾಬ್ದಾರಿ ಹೊತ್ತುಕೊಂಡಿದೆ.  

ಮುಂಬೈ(ಆ.05): ಲೋಕಸಭಾ ಚುನಾವಣಾ ತಯಾರಿ ಚುರುಕುಗೊಂಡಿದೆ. ಒಂದೆಡೆ ಎನ್‌ಡಿಎ ತನ್ನ ಶೈಲಿಯಲ್ಲಿ ಕಾರ್ಯಕ್ರಮ, ರಣತಂತ್ರಗಳನ್ನು ರೂಪಿಸುತ್ತಿದೆ. ಇತ್ತ ಬಿಜೆಪಿಯನ್ನು ಶತಾಯಗತಾಯ ಸೋಲಿಸಲು ಪಣತೊಟ್ಟಿರುವ ವಿಪಕ್ಷಗಳ ಒಕ್ಕೂಟ I-N-D-I-A ಇದೀಗ 3ನೇ ಸಭೆಗೆ ತಯಾರಾಗುತ್ತಿದೆ. ಪಾಟ್ನಾ ಹಾಗೂ ಬೆಂಗಳೂರು ಸಭೆ ಬಳಿಕ ಮೂರನೇ ಸಭೆ ಮುಂಬೈನಲ್ಲಿ ನಡೆಯಲಿದೆ. ಖಾಸಗಿ ಹೊಟೆಲ್‌ನಲ್ಲಿ ನಡೆಯಲಿರುವ ಈ ಸಭೆ ಭಾರಿ ಮಹತ್ವ ಪಡೆದುಕೊಂಡಿದೆ. ಈ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಮಹಾ ವಿಕಾಸ ಆಘಾಡಿ ಸರ್ಕಾರದ ಭಾಗವಾಗಿದ್ದ ಶಿವಸೇನೆ ಹೊತ್ತುಕೊಂಡಿದೆ. ಆಗಸ್ಟ್ 31 ಹಾಗೂ ಸೆಪ್ಟೆಂಬರ್ 1 ರಂದು ಮುಂಬೈನಲ್ಲಿ I-N-D-I-A ಸಭೆ ನಿಗದಿಯಾಗಿದೆ.

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಕಾಂದ್ರೆಸ್ ಅಧ್ಯಕ್ಷ ನಾನಾ ಪಟೋಲೆ ಕಾರ್ಯಕ್ರಮದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮಹಾ ವಿಕಾಸ್ ಆಘಾಡಿ ಒಕ್ಕೂಟದ ಪ್ರಮುಖ ನಾಯಕರು ಈ ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ. ಈ ಮೂರು ಪಕ್ಷಗಳಿಂದ ತಲಾ ಐದೈದು ನಾಯಕರಿಗೆ ಕಾರ್ಯಕ್ರಮದ ಹೊಣೆ ನೀಡಲಾಗಿದೆ.

ವಿಪಕ್ಷಗಳ ಗಲಾಟೆಯ ಮಧ್ಯೆಯೇ 9 ಗಂಟೆಯಲ್ಲಿ 11 ಮಸೂದೆ ಅಂಗೀಕಾರ

I-N-D-I-A ಒಕ್ಕೂಟದ ಮೂರನೇ ಸಭೆ ಅತ್ಯಂತ ಮಹತ್ವದ್ದಾಗಿದೆ. ಕಾರಣ ರಾಹುಲ್ ಗಾಂಧಿ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ತಡೆದ ನೀಡಿದ ಬಳಿಕ ನಡೆಯುತ್ತಿರುವ ಸಭೆ ಇದಾಗಿದೆ. ಬಿಜೆಪಿಯ ವಿರುದ್ಧ ಕಾಂಗ್ರೆಸ್ ಸತತ ಹೋರಾಟದ ಮೂಲಕ ಅಭಿಯಾನ ನಡೆಸುತ್ತಿದೆ.ಈ ಎಲ್ಲಾ ಕಾರಣಗಳಿಂದ ಮುಂಬೆ ಸಭೆ ಅತ್ಯಂತ ಪ್ರಮುಖವಾಗಿದೆ ಎಂದು ನಾನಾ ಪಟೋಲೆ ಹೇಳಿದ್ದಾರೆ.

I-N-D-I-A ಒಕ್ಕೂಟದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹಲವು ಬಾರಿ ವಾಗ್ದಾಳಿ ನಡೆಸಿದ್ದಾರೆ. I-N-D-I-A ಒಕ್ಕೂಟದಿಂದ ಪ್ರಧಾನಿ ಮೋದಿ ವಿಚಲಿತರಾಗಿದ್ದಾರೆ. ಹೀಗಾಗಿ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ವಿಪಕ್ಷಗಳ ನಾಯಕರು ಆರೋಪಿಸಿದ್ದಾರೆ. ಈ ಎಲ್ಲಾ ಬೆಳವಣಿಗೆ ಬಳಿಕ ನಡೆಯುುತ್ತಿರುವ 3ನೇ ಸಭೆ ಇದಾಗಿದೆ. ಹೀಗಾಗಿ ಎನ್‌ಡಿಎ ವಿರೋಧಿ ದಳಗಳು ಈ ಸಭೆಗೆ ಉತ್ಸುಕವಾಗಿದೆ ಎಂದು ನಾನಾ ಪಟೋಲೇ ಹೇಳಿದ್ದಾರೆ.

ಇಷ್ಟೇ ಅಲ್ಲ, I-N-D-I-A ಹೆಸರಿನ ವಿರುದ್ದ ಚುನಾವಣಾ ಆಯೋಗಕ್ಕೂ ದೂರು ನೀಡಲಾಗಿದೆ. ಹೀಗಾಗಿ ವಿಪಕ್ಷಗಳಲ್ಲಿ ಒಗ್ಗಟ್ಟಿದೆ. ಮತ್ತಷ್ಟು ಪಕ್ಷಗಳು 3ನೇ ಸಭೆಯಲ್ಲಿ ಪಾಲ್ಗೊಳ್ಳಲಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಹೇಳಿದೆ. 

ಮಣಿಪುರ ಸಮಸ್ಯೆ ಶೀಘ್ರ ಇತ್ಯರ್ಥವಾಗದಿದ್ದರೆ ದೇಶದ ಭದ್ರತೆಗೆ ಅಪಾಯ: ಇಂಡಿಯಾ ಕಳವಳ

ವಿಪಕ್ಷಗಳ ಮೈತ್ರಿಕೂಟಕ್ಕೆ ‘ಇಂಡಿಯಾ’ ಎಂಬ ಹೆಸರು ಇಟ್ಟಿರುವುದನ್ನು ಪ್ರಶ್ನಿಸಿ ಅದನ್ನು ಬಳಸದಂತೆ ತಡೆ ನೀಡಲು ಕೋರಿ ಸಲ್ಲಿಸಿದ್ದ ಅರ್ಜಿ ಕುರಿತು ದೆಹಲಿ ಹೈಕೋರ್ಟ್ 26 ಪಕ್ಷಗಳು ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ಅಲ್ಲದೆ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಗೃಹ ಸಚಿವಾಲಯಕ್ಕೂ ನೋಟಿಸ್‌ ಜಾರಿ ಆಗಿದೆ. ಈ ವೇಳೆ ‘ಇಂಡಿಯಾ’ ಹೆಸರಿಗೆ ಯಾವುದೇ ಮಧ್ಯಂತರ ಆದೇಶ ನೀಡಲು ನಿರಾಕರಿಸಿದ ನ್ಯಾಯಾಲಯ, ಪ್ರತಿವಾದಿಗಳ ಪ್ರತಿಕ್ರಿಯೆ ಬಳಿಕ ಪರಿಶೀಲಿಸುವುದಾಗಿ ಹೇಳಿದೆ. ವಿಪಕ್ಷಗಳು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ತಮ್ಮ ಸಭೆಯಲ್ಲಿ ಮೈತ್ರಿಕೂಟವನ್ನು ‘ಇಂಡಿಯನ್‌ ನ್ಯಾಷನಲ್‌ ಡೆವಲಪ್‌ಮೆಂಟ್‌ ಇನ್‌ಕ್ಲೂಸಿವ್‌ ಅಲಯನ್ಸ್‌ (ಇಂಡಿಯಾ) ಎಂದು ನಾಮಕರಣಗೊಂಡಿದ್ದವು.