ಮಣಿಪುರ ಸಮಸ್ಯೆ ಶೀಘ್ರ ಇತ್ಯರ್ಥವಾಗದಿದ್ದರೆ ದೇಶದ ಭದ್ರತೆಗೆ ಅಪಾಯ: ಇಂಡಿಯಾ ಕಳವಳ
ಳೆದ 3 ತಿಂಗಳಿನಿಂದ ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿರುವ ಮಣಿಪುರ ಸಮಸ್ಯೆಯನ್ನು ಶೀಘ್ರವೇ ಇತ್ಯರ್ಥ ಮಾಡದೇ ಇದ್ದರೆ ಅದು ದೇಶದ ಭದ್ರತೆಗೆ ಧಕ್ಕೆ ತರಬಹುದು ಎಂದು ಎರಡು ದಿನಗಳ ಮಣಿಪುರ ಭೇಟಿ ಕೈಗೊಂಡಿದ್ದ 21 ಸಂಸದರ ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ಕಳವಳ ವ್ಯಕ್ತಪಡಿಸಿದೆ.
ಇಂಫಾಲ್: ಕಳೆದ 3 ತಿಂಗಳಿನಿಂದ ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿರುವ ಮಣಿಪುರ ಸಮಸ್ಯೆಯನ್ನು ಶೀಘ್ರವೇ ಇತ್ಯರ್ಥ ಮಾಡದೇ ಇದ್ದರೆ ಅದು ದೇಶದ ಭದ್ರತೆಗೆ ಧಕ್ಕೆ ತರಬಹುದು ಎಂದು ಎರಡು ದಿನಗಳ ಮಣಿಪುರ ಭೇಟಿ ಕೈಗೊಂಡಿದ್ದ 21 ಸಂಸದರ ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ಕಳವಳ ವ್ಯಕ್ತಪಡಿಸಿದೆ. ಜೊತೆಗೆ ರಾಜ್ಯದ ಸಮಸ್ಯೆ ಇತ್ಯರ್ಥದಲ್ಲಿ ರಾಜ್ಯ ಮತ್ತು ಕೇಂದ್ರ ಎರಡೂ ಸರ್ಕಾರಗಳು ಪೂರ್ಣ ವಿಫಲವಾಗಿವೆ ಎಂದು ವಿಪಕ್ಷಗಳು ಆರೋಪಿಸಿವೆ.
ಎರಡು ದಿನಗಳ ಅವಧಿಯಲ್ಲಿ ಪುನರ್ವಸತಿ ಕೇಂದ್ರ, ಹಿಂಸಾಪೀಡಿತ ಪ್ರದೇಶ, ವಿವಿಧ ಸಮುದಾಯಗಳನ್ನು ಭೇಟಿ ಮಾಡಿದ್ದ ನಿಯೋಗ, ಭಾನುವಾರ ಮಧ್ಯಾಹ್ನ ರಾಜ್ಯಪಾಲೆ ಅನುಸೂಯಾ ಉಯ್ಕೆ (Governor Anusuya Uyke) ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿನ ಪರಿಸ್ಥಿತಿ ಸುಧಾರಣೆಗೆ ಏನೆಲ್ಲಾ ಕ್ರಮ ಕೈಗೊಳ್ಳಬೇಕೆಂಬ ಎಂಬ ಅಂಶಗಳ ಮನವಿ ಪತ್ರವನ್ನು ಅವರಿಗೆ ಸಲ್ಲಿಸಿತು. ಅಲ್ಲದೆ ಎರಡು ದಿನಗಳ ಭೇಟಿಯ ವೇಳೆ ತಮಗೆ ಕಂಡುಬಂದ ಅಂಶಗಳನ್ನು ಸಂಸತ್ತಿನ ಮುಂದಿಟ್ಟು, ಆದಷ್ಟುಬೇಗ ಬಿಕ್ಕಟ್ಟು ಇತ್ಯರ್ಥಕ್ಕೆ ಪರಿಹಾರ ಕಂಡುಕೊಳ್ಳುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ತಿಳಿಸಿತು.
ಮಣಿಪುರ ಹಿಂಸೆಗೆ ಮತ್ತೆ ಕಲಾಪ ಭಂಗ: ಚರ್ಚೆಗೆ ಸಿದ್ಧ ಎಂಬ ಶಾ ಮನವಿಗೂ ಓಗೊಡದ ವಿಪಕ್ಷ
ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ (Adhir Ranjan Chaudhary), ‘ನಮ್ಮ ಅಭಿಪ್ರಾಯಗಳನ್ನು ರಾಜ್ಯಪಾಲರು ಆಲಿಸಿದ್ದಾರೆ ಮತ್ತು ಅದಕ್ಕೆ ಸಹಮತ ಕೂಡಾ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿನ ಹಿಂಸಾಚಾರದ ಬಗ್ಗೆ ಅವರು ನೋವು ವ್ಯಕ್ತಪಡಿಸಿದ್ದು, ಜನರ ಸಂಕಷ್ಟಗಳನ್ನು ನಮ್ಮ ಮುಂದಿಟ್ಟಿದ್ದಾರೆ. ಅಲ್ಲದೆ ಶೀಘ್ರವೇ ಸರ್ವಪಕ್ಷ ನಿಯೋಗವೊಂದು ರಾಜ್ಯಕ್ಕೆ ಭೇಟಿ ನೀಡಿ ಮೈತೇಯಿ ಮತ್ತು ಕುಕಿ ಸಮುದಾಯವನ್ನು ಭೇಟಿ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ನಾವು ಕೂಡ ಸಹಮತ ವ್ಯಕ್ತಪಡಿಸಿದೆವು’ ಎಂದು ಹೇಳಿದರು.
ಇದೇ ವೇಳೆ, ಮಣಿಪುರದಲ್ಲಿ ಪರಿಸ್ಥಿತಿ ದಿನೇದಿನೇ ಹದಗೆಡುತ್ತಿದೆ. ಮೈತೇಯಿಗಳು ಗುಡ್ಡಗಾಡು ಪ್ರದೇಶಕ್ಕೆ ಹೋಗದಂಥ, ಕುಕಿಗಳು ಕಣಿವೆಗೆ ಹೋಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಪಡಿತರ, ಆಹಾರ, ಹಾಲು, ಮಕ್ಕಳ ಆಹಾರ ಮತ್ತು ಇತರೆ ಅಗತ್ಯ ವಸ್ತುಗಳ ಕೊರತೆ ಕಾಣಿಸಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಧಕ್ಕೆ ಉಂಟಾಗಿದೆ ಎಂದು ಅಧೀರ್ ರಂಜನ್ ಹೇಳಿದರು.
ಮಣಿಪುರ ಕ್ರೌರ್ಯದ ಮತ್ತಷ್ಟು ಕತೆ ವ್ಯಥೆ: ಯುವ ಪೀಳಿಗೆಗೆ ಪಾರಾಗುವಂತೆ ಹೇಳಿ ಪ್ರಾಣ ಬಿಟ್ಟ ಯೋಧನ ಪತ್ನಿ
ರಾಜ್ಯಪಾಲರಿಗೆ ಮನವಿ:
ರಾಜ್ಯದಲ್ಲಿ ಕೆಲ ದಿನಗಳಿಂದ ನಿರಂತರವಾಗಿ ನಡೆದ ಗುಂಡಿನ ದಾಳಿ ಮತ್ತು ಸುಲಿಗೆ ಪ್ರಕರಣಗಳಿಂದಾಗಿ, ಆಡಳಿತದ ಮೇಲೆ ನಿಯಂತ್ರಣ ಸಾಧಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂಬುದು ಖಚಿತವಾಗಿದೆ. ಅಂತರ್ಜಾಲದ ಮೇಲಿನ ನಿಷೇಧವು, ನಾನಾ ಊಹಾಪೋಹ ಹರಡಲು ಕಾರಣವಾಗಿದೆ ಮತ್ತು ಸಮುದಾಯಗಳ ನಡುವೆ ಅನುಮಾನ ಮೂಡಿಸಲು ಕಾರಣವಾಗಿದೆ. ಗೌರವಾನ್ವಿತ ಪ್ರಧಾನಿಗಳ ಮೌನವು, ಮಣಿಪುರ ಹಿಂಸಾಚಾರ ವಿಷಯದಲ್ಲಿ ಅವರ ತಾರತಮ್ಯವನ್ನು ಎತ್ತಿತೋರಿಸಿದೆ. ಸದ್ಯ ಸ್ಥಳೀಯ ಸಮುದಾಯಗಳಲ್ಲಿ ಆಕ್ರೋಶ ಮತ್ತು ಒಂದು ರೀತಿಯ ಪರಕೀಯತೆ ಮೂಡಿದೆ. ಇದನ್ನು ಯಾವುದೇ ಕಾರಣಕ್ಕೂ ವಿಳಂಬವಿಲ್ಲದೇ ದೂರ ಮಾಡಬೇಕು. ನ್ಯಾಯವನ್ನು ಆಧಾರಸ್ತಂಭವಾಗಿಟ್ಟುಕೊಂಡು ಆದಷ್ಟುಶೀಘ್ರ ರಾಜ್ಯದಲ್ಲಿ ಪರಿಣಾಮಕಾರಿ ಕ್ರಮಗಳ ಮೂಲಕ ಶಾಂತಿ ಮತ್ತು ಸೌಹಾರ್ದತೆ ಮರುಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಇದನ್ನು ಸಾಧ್ಯವಾಗಿಸಲು ಹಿಂಸಾಚಾರದಿಂದ ಸ್ಥಾನಪಲ್ಲಟವಾಗಿರುವವರಿಗೆ ಕೂಡಲೇ ಪುನರ್ವಸತಿ ಕಲ್ಪಿಸಬೇಕು’ ಎಂದು ವಿಪಕ್ಷಗಳು ಮನವಿ ಮಾಡಿವೆ.
ಜೊತೆಗೆ, ‘ಕಳೆದ 89 ದಿನಗಳಿಂದ ನಡೆಯುತ್ತಿರುವ ಹಿಂಸಾಚಾರವನ್ನು (violence) ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂಬ ವಿಷಯವನ್ನು ನೀವು ಕೇಂದ್ರ ಸರ್ಕಾರದ ಗಮನಕ್ಕೆ ತಂದು, ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಸಲಹೆ ನೀಡಬೇಕು. ಈ ಮೂಲಕ ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಲು ನೆರವಾಗಬೇಕು’ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅಲ್ಲದೆ, ‘160 ಜನರ ಸಾವು, 500ಕ್ಕೂ ಹೆಚ್ಚು ಜನರಿಗೆ ಗಾಯ, 5000ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣ ಮತ್ತು 60000ಕ್ಕೂ ಹೆಚ್ಚು ಜನರು ಸ್ಥಾನಪಲ್ಲಟಗೊಂಡಿರುವುದು ಇಡೀ ಪ್ರಕರಣದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ವಿಫಲವಾಗಿದೆ ಎಂಬುದನ್ನು ತೋರಿಸುತ್ತದೆ’ ಎಂದು ಮನವಿ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.
ಭೇಟಿ ಮುಕ್ತಾಯ:
16 ಪಕ್ಷಗಳ 21 ಸದಸ್ಯರು ಶನಿವಾರ ಮೈತೇಯಿ ಮತ್ತು ಕುಕಿ ಸಂತ್ರಸ್ತರಿಗೆ ನಿರ್ಮಿಸಲಾಗಿರುವ ನಿರಾಶ್ರಿತರ ಶಿಬಿರಗಳಿಗೆ ಭೇಟಿ ನೀಡಿದ್ದರು. ಜೊತೆಗೆ ನಗ್ನಪರೇಡ್‌ಗೆ (Naked parade) ಒಳಗಾದ ಸಂತ್ರಸ್ತ ಮಹಿಳೆಯನ್ನು ಭೇಟಿಯಾಗಿದ್ದರು. ಅಲ್ಲದೆ ವಿವಿಧ ಸಮುದಾಯಗಳು ಮತ್ತು ಸಂಘಟನೆಗಳ ಜೊತೆಗೆ ಮಾತುಕತೆ ನಡೆಸುವ ಮೂಲಕ ವಸ್ತುಸ್ಥಿತಿ ಅಧ್ಯಯನ ಮಾಡುವ ಪ್ರಯತ್ನ ಮಾಡಿದ್ದವು. ಕೊನೆಗೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ತಮ್ಮ 2 ದಿನದ ಪ್ರವಾಸವನ್ನು ವಿಪಕ್ಷಗಳು ಮುಗಿಸಿದವು.
ಮೀಜೋರಂನಲ್ಲೂ ಮಣಿಪುರದಂತೆ ದಂಗೆ ಭೀತಿ: ಅಸ್ಸಾಂನತ್ತ ಹೊರಟ ಮೈತೇಯಿ ಸಮುದಾಯ