ವಿಪಕ್ಷಗಳ ಗಲಾಟೆಯ ಮಧ್ಯೆಯೇ 9 ಗಂಟೆಯಲ್ಲಿ 11 ಮಸೂದೆ ಅಂಗೀಕಾರ
ಈ ಬಾರಿ ಮುಂಗಾರು ಅಧಿವೇಶನ ಪ್ರಾರಂಭವಾದಾಗಿನಿಂದ ಈವರೆಗೆ ಕೇವಲ 9 ಗಂಟೆಯಲ್ಲಿ 11 ಮಸೂದೆಗಳನ್ನು ಅಂಗೀಕರಿಸಲಾಗಿದೆ. ಈ ವೇಳೆ ಸದನಗಳಲ್ಲಿ ಮಸೂದೆಯ ಬಗ್ಗೆ ಚರ್ಚಿಸಲು ಹೆಚ್ಚಿನ ಅವಕಾಶವನ್ನೇ ನೀಡದೆ ತರಾತುರಿಯಲ್ಲಿ ಅಂಗೀಕಾರ ಮಾಡಲಾಗಿದೆ ಎಂದು ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.
ನವದೆಹಲಿ: ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಸೋಮವಾರ ಕೂಡ ಮಣಿಪುರ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು ಎಂದು ಆಗ್ರಹಿಸಿ ವಿಪಕ್ಷಗಳು ಪಟ್ಟು ಹಿಡಿದ ಕಾರಣ ಕಲಾಪಕ್ಕೆ ಪದೇ ಪದೇ ಅಡ್ಡಿಯಾಗಿ ದಿನದ ಮಟ್ಟಿಗೆ ಸದವನ್ನು ಮುಂದೂಡಲಾಯಿತು. ಇದರ ನಡುವೆಯೇ, ಸಿನಿಮಾ ಪೈರಸಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ ಸಿನಿಮಾ ನಿರ್ಮಾಣ ಮೊತ್ತದ ಶೇ.5ರಷ್ಟು ದಂಡ ವಿಧಿಸುವ ಮಸೂದೆಯನ್ನು ಲೋಕಸಭೆ ಅಂಗೀಕರಿಸಿತು.
ಬೆಳಗ್ಗೆ ಸದನ ಆರಂಭವಾದಾಗ ಪ್ರಧಾನಿ ಉತ್ತರಕ್ಕೆ ವಿಪಕ್ಷಗಳು ಲೋಕಸಭೆಯಲ್ಲಿ ಪಟ್ಟು ಹಿಡಿದವು. ಆಗ ಮಧ್ಯಾಹ್ನ 2 ಗಂಟೆಗೆ ಸದನ ಮುಂದೂಡಲಾಯಿತು. 2 ಗಂಟೆಗೆ ಸದನ ಸಮಾವೇಶಗೊಂಡಾಗ ಕೋಲಾಹಲದ ನಡುವೆಯೇ ಸಿನಿಮಾಟೋಗ್ರಫಿ ಮಸೂದೆಯನ್ನು ಪಾಸು ಮಾಡಲಾಯಿತು. ಬಳಿಕ ದಿನದ ಮಟ್ಟಿಗೆ ಕಲಾಪ ಮುಂದೂಡಲಾಯಿತು. ಕಳೆದ ಗುರುವಾರ ಈ ಮಸೂದೆಗೆ ಲೋಕಸಭೆ ಕೂಡ ಒಪ್ಪಿಗೆ ನೀಡಿತ್ತು.
ದೆಹಲಿ ನಿಯಂತ್ರಣ ಮಸೂದೆ: ಕೇಂದ್ರಕ್ಕೆ ಜಗನ್ ಪಕ್ಷದ ಬೆಂಬಲ
ಇನ್ನು ರಾಜ್ಯಸಭೆಯಲ್ಲಿ ಪ್ರಧಾನಿ ಉತ್ತರಕ್ಕೆ ಆಗ್ರಹಿಸಿ ಹಾಗೂ ಸದನದಲ್ಲಿ ಅವರ ಅನುಪಸ್ಥಿತಿ ಪ್ರಶ್ನಿಸಿ ವಿಪಕ್ಷಗಳು ಕೋಲಾಹಲ ನಡೆಸಿದವು. ಅಲ್ಲದೆ, ಎಲ್ಲ ಇತರ ಕಲಾಪ ಬದಿಗೊತ್ತಿ ಒಂದೇ ವಿಷಯದ ಚರ್ಚೆಗೆ ಅವಕಾಶ ನೀಡುವ ರೂಲ್ 267ರ ಪ್ರಕಾರ ಮಣಿಪುರ ಹಿಂಸೆ ಚರ್ಚೆಗೆ ಅವಕಾಶ ನೀಡಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದವು. ಇದರಿಂದ ಕಲಾಪ ಸಾಧ್ಯ ಆಗಲಿಲ್ಲ.
ಹೆಚ್ಚಿನ ಚರ್ಚೆ ಇಲ್ಲದೇ ಮಸೂದೆ ಅಂಗೀಕಾರಕ್ಕೆ ವಿಪಕ್ಷಗಳ ಆಕ್ಷೇಪ
ಈ ಬಾರಿ ಮುಂಗಾರು ಅಧಿವೇಶನ ಪ್ರಾರಂಭವಾದಾಗಿನಿಂದ ಈವರೆಗೆ ಕೇವಲ 9 ಗಂಟೆಯಲ್ಲಿ 11 ಮಸೂದೆಗಳನ್ನು ಅಂಗೀಕರಿಸಲಾಗಿದೆ. ಈ ವೇಳೆ ಸದನಗಳಲ್ಲಿ ಮಸೂದೆಯ ಬಗ್ಗೆ ಚರ್ಚಿಸಲು ಹೆಚ್ಚಿನ ಅವಕಾಶವನ್ನೇ ನೀಡದೆ ತರಾತುರಿಯಲ್ಲಿ ಅಂಗೀಕಾರ ಮಾಡಲಾಗಿದೆ ಎಂದು ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಲೋಕಸಭೆಯಲ್ಲಿ 8, ರಾಜ್ಯಸಭೆಯಲ್ಲಿ 3 ಮಸೂದೆ ಅಂಗೀಕಾರಗೊಂಡಿವೆ.
ಕಳೆದ ವಾರ ಲೋಕಸಭೆಯಲ್ಲಿ ಕೇವಲ 191 ನಿಮಿಷಗಳಲ್ಲಿ ಒಟ್ಟು 8 ಮಸೂದೆಗಳು ಅಂಗೀಕಾರಗೊಂಡಿವೆ. ಈ ಮಸೂದೆಗಳ ಚರ್ಚೆಗೆ ಕೇವಲ 24 ಗಂಟೆಗಳ ಕಾಲ ಮಾತ್ರ ಅವಕಾಶ ನೀಡಲಾಗಿತ್ತು. ಇನ್ನು ರಾಜ್ಯಸಭೆಯಲ್ಲಿ 3 ಮಸೂದೆಗಳನ್ನು 6 ಗಂಟೆಗಳ ಚರ್ಚೆಯ ಅವಧಿ ಬಳಿಕ ಅಂಗೀಕರಿಸಲಾಗಿದೆ.
ಫಿಲಂ ಪೈರಸಿಗೆ ಇನ್ನು 3 ವರ್ಷ ಜೈಲು: ಸಿನಿಮಾ ಬಜೆಟ್‌ನ ಶೇ.5ರಷ್ಟು ದಂಡ ವಸೂಲಿ: ಮಸೂದೆ
ಅವಿಶ್ವಾಸ ನಿರ್ಣಯ ಮತ್ತು ಮಣಿಪುರ ಹಿಂಸಾಚಾರ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡಬೇಕು ಎಂಬ ವಿಪಕ್ಷಗಳ ಗದ್ದಲದ ನಡುವೆಯೇ ಈ ಮಸೂದೆಗಳು ಅಂಗೀಕಾರಗೊಂಡಿವೆ. ಇನ್ನು ಅವಿಶ್ವಾಸ ನಿರ್ಣಯ ಚರ್ಚೆಯಾಗುವವರೆಗೂ ಯಾವುದೇ ಮಸೂದೆಗಳನ್ನು ಅಂಗೀಕಾರಗೊಳಿಸಬಾರದು ಇದು ತಪ್ಪು ಎಂದು ಕಿಡಿಕಾರಿವೆ. ಆದರೆ ಅಂತಹ ಯಾವುದೇ ನಿಯಮವಿಲ್ಲ ಎಂದು ಸರ್ಕಾರ ಹೇಳಿದೆ.